ಖಾಲಿಯಾದ ಶತಮಾನ ಹಳೆಯ ಉರ್ದು ಶಾಲೆ

ಶನಿವಾರ, ಜೂಲೈ 20, 2019
22 °C

ಖಾಲಿಯಾದ ಶತಮಾನ ಹಳೆಯ ಉರ್ದು ಶಾಲೆ

Published:
Updated:

ಮದ್ದೇಬಿಹಾಳ ಪಟ್ಟಣದ ಹೃದಯ ಭಾಗದಲ್ಲಿರುವ (ದ್ಯಾಮವ್ವನ ಗುಡಿಯ ಮುಂದೆ) ಈ ಉರ್ದು ಶಾಲೆ ಆರಂಭವಾಗಿ ಸರಿಯಾಗಿ 107 ವರ್ಷಗಳು ಕಳೆದಿವೆ. ಬ್ರಿಟೀಷರ ಕಾಲದಲ್ಲಿ ಕಟ್ಟಿರುವ ಈ ಕಟ್ಟಡ ಇಂದಿಗೂ ಸುಸ್ಥಿತಿಯಲ್ಲಿದೆ. ಮುಸ್ಲಿಮ ಸಮುದಾಯದ ಬಹುತೇಕ ಹಿರಿಯರು ಇಲ್ಲಿಯೇ ಕಲಿತು ತಮ್ಮ ಜೀವನ ರೂಪಿಸಿಕೊಂಡಿದ್ದಾರೆ. ಇಲ್ಲಿ ಕಲಿತವರು ಇವತ್ತಿಗೂ ಈ ಶಾಲೆಯ ಬಗ್ಗೆ ಒಂದು ಅವಿನಾಭಾವ ಸಂಬಂಧ  ಇಟ್ಟುಕೊಂಡಿದ್ದಾರೆ.ಆದರೆ ಕಳೆದ ಎರಡು ವರ್ಷಗಳಿಂದ ಇಲ್ಲಿ ಯಾವುದೇ ಶಾಲೆಯ ವರ್ಗಗಳು ನಡೆಯುತ್ತಿಲ್ಲ. ಇಲ್ಲಿ ನಡೆಯುತ್ತಿದ್ದ ವರ್ಗಗಳನ್ನು ಪಟ್ಟಣದ ನಾಲತವಾಡ ರಸ್ತೆಯ ಮಹಿಬೂಬ ನಗರದಲ್ಲಿರುವ ನೂತನ ಕಟ್ಟಡಕ್ಕೆ ವರ್ಗಾಯಿಸಲಾಗಿದೆ. ಹೀಗಾಗಿ ಇಲ್ಲಿರುವ ಬಾಲಕರು ಕಲಿಯುತ್ತಿದ್ದ ನಾಲ್ಕು ಕೋಣೆ ಹಾಗೂ ಬಾಲಕಿಯರು ಕಲಿಯುತ್ತಿದ್ದ ಎರಡು ಕೋಣೆಗಳು ಖಾಲಿ ಬಿದ್ದಿವೆ.`ನೆರೆಮನೆ ಬಿದ್ದರೆ ಎಮ್ಮೆ ಕಟ್ಟಲು ಅನುಕೂಲವಾಯಿತು' ಎನ್ನುವಂತೆ ಶಾಲಾ ಕಟ್ಟಡ ಖಾಲಿ ಬಿದ್ದಿದೆ. ಖಾಸಗಿಯವರು ಶಾಲೆಯಲ್ಲಿ ತಮ್ಮ ಸಾಮಾನು ಸರಂಜಾಮುಗಳನ್ನು ಅನಧಿಕೃತವಾಗಿ ಇಟ್ಟು ಬಳಕೆ ಮಾಡುತ್ತಿದ್ದಾರೆ.  ಆದರೆ ಉರ್ದು ಪ್ರಾಥಮಿಕ ಶಾಲೆ ಮಹಿಬೂಬ ನಗರಕ್ಕೆ ವರ್ಗಾವಣೆಯಾಗಿರುವುದರಿಂದ ಹೊರಪೇಟಿ ಓಣಿ ಸೇರಿದಂತೆ ಪಿಲೇಕಮ್ಮ ನಗರ, ಹುಡ್ಕೋ, ಮಹಾಂತೇಶ ನಗರದಲ್ಲಿರುವ ಉರ್ದು ಕಲಿಯಬೇಕೆನ್ನುವ ಎಲ್ಲ ಮಕ್ಕಳಿಗೆ ತೀವ್ರ ತೊಂದರೆಯಾಗಿದೆ. ದೂರದಲ್ಲಿರುವ ಶಾಲೆಗೆ ಕಳಿಸಲು ಪಾಲಕರು ಹಿಂದೇಟು ಹಾಕುವಂತಾಗಿದೆ.`ಅಲ್ಲಿಯ ಕಟ್ಟಡ ಹಳೆಯದಾಗಿದೆ, ಕೆಲವು ಕಡೆ ಸೋರುತ್ತಿದೆ. ಅದನ್ನು ಸಂಪೂರ್ಣ ಕೆಡವಿ ಹೊಸ ಕಟ್ಟಡ ಕಟ್ಟುವ ವಿಚಾರ ಇದೆ. ಅದರ ಉತಾರೆ ಪಡೆದು ಅದರ ಪುನರ್‌ನಿರ್ಮಾಣ ಮಾಡಲಾಗುತ್ತದೆ. ಶಾಲೆಯನ್ನು ಖಾಸಗಿಯವರು ಬಳಸುತ್ತಿರುವ ವಿಚಾರ ನನಗೆ ಗೊತ್ತಿಲ್ಲ. ಅದನ್ನು ವಿಚಾರಿಸಿ ಕ್ರಮ ತೆಗೆದುಕೊಳ್ಳುತ್ತೇನೆ' ಎನ್ನುತ್ತಾರೆ ಬಿಇಒ ಎನ್.ವಿ.ಹೊಸೂರ.`ಈ ಶಾಲೆಗೆ ಸ್ವಲ್ಪ ರಿಪೇರಿ ಮಾಡಿದರೆ ಸಾಕು, ಅದು ಇವತ್ತಿಗೂ ಗಟ್ಟಿಯಾಗಿಯೇ ಇದೆ. ಮಹಿಬೂಬ ನಗರದಲ್ಲಿರುವ ದೂರದ ಶಾಲೆಗೆ ಉರ್ದು ಕಲಿಯಲು ಸಣ್ಣ ಮಕ್ಕಳು ಹೋಗುವುದು ಪಾಲಕರಿಗೆ ತುಂಬಾ ತೊಂದರೆಯಾಗುತ್ತದೆ. ಇದೇ ಶಾಲೆಯಲ್ಲಿ ಒಂದರಿಂದ ನಾಲ್ಕನೇ ತರಗತಿವರೆಗೆ ವರ್ಗಗಳನ್ನು ಆರಂಭಿಸಬೇಕು. ಅಂದರೆ ಎಲ್ಲರಿಗೂ ಅನುಕೂಲವಾಗುತ್ತದೆ' ಎನ್ನುತ್ತಾರೆ ಎಸ್‌ಡಿಎಂಸಿ  ಮಾಜಿ ಅಧ್ಯಕ್ಷ ಎಸ್.ಡಿ.ಮೋಮೀನ.ಖಾಲಿ ಬಿದ್ದಿರುವ ಶತಮಾನದ ಕಟ್ಟಡಕ್ಕೆ ಮತ್ತೆ ಹೊಸ ರೂಪ ಕೊಡಬೇಕು ಎನ್ನುವ ಮಹದಾಶೆ ಮುಸ್ಲಿಂ ಬಾಂಧವರ ಇಚ್ಛೆಯಾಗಿದೆ. ಸರ್ಕಾರದ ಪ್ರತಿನಿಧಿಗಳು ಮತ್ತಷ್ಟು ವರ್ಷ ಅದನ್ನು ಪಾಳು ಬಿಡದೆ ಐತಿಹಾಸಿಕ ಕಟ್ಟಡವನ್ನು ಕಾಪಾಡಬೇಕು ಎಂಬುದು ಮುಸ್ಲಿಮರ ಆಗ್ರಹವಾಗಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry