ಖಾಲಿ ಜಾಗ ಹಿಂತಿರುಗಿಸಲು ಸುಪ್ರೀಂ ಸೂಚನೆ

7

ಖಾಲಿ ಜಾಗ ಹಿಂತಿರುಗಿಸಲು ಸುಪ್ರೀಂ ಸೂಚನೆ

Published:
Updated:

ನವದೆಹಲಿ: `ಬೆಂಗಳೂರು ನಗರ ಸಹಕಾರಿ ಗೃಹ ನಿರ್ಮಾಣ ಸಹಕಾರಿ ಸಂಘ~ಕ್ಕಾಗಿ ಭೂಮಿ ಸ್ವಾಧೀನ ಮಾಡಿಕೊಂಡ ಸರ್ಕಾರದ ಕ್ರಮ ಅಕ್ರಮ ಎಂದು ಪ್ರಕಟಿಸಿರುವ ಸುಪ್ರೀಂ ಕೋರ್ಟ್ ಖಾಲಿ ಜಾಗವನ್ನು ಅವುಗಳ ಮಾಲೀಕರಿಗೆ ಹಿಂತಿರುಗಿಸುವಂತೆ ಈ ಸಂಘಕ್ಕೆ ಸೂಚನೆ ನೀಡಿದೆ.ರಾಜ್ಯ ಹೈಕೋರ್ಟ್ ತೀರ್ಪು ಪ್ರಶ್ನಿಸಿ ಬೆಂಗಳೂರು ನಗರ ಸಹಕಾರಿ ಗೃಹ ನಿರ್ಮಾಣ ಸಂಘ ಸಲ್ಲಿಸಿದ ಮೇಲ್ಮನವಿಯನ್ನು ವಜಾ ಮಾಡಿದ ನ್ಯಾಯಮೂರ್ತಿಗಳಾದ ಜಿ.ಎಸ್. ಸಿಂಘ್ವಿ ಮತ್ತು ಎ.ಕೆ. ಗಂಗೂಲಿ ಅವರನ್ನು ಒಳಗೊಂಡ ಪೀಠವು, ಹೈಕೋರ್ಟ್ ತೀರ್ಪನ್ನು ಊರ್ಜಿತಗೊಳಿಸಿತು. ಖಾಲಿ ಜಾಗ ವಾಪಸ್ ಮಾಡುವಂತೆ ಆದೇಶಿಸಿತು.ಖಾಲಿ ನಿವೇಶನದಲ್ಲಿ ಈಗಾಗಲೇ ಮನೆಗಳನ್ನು ಕಟ್ಟಿಕೊಂಡವರು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಮತ್ತಿತರ ಸಂಸ್ಥೆಗಳ ಜತೆ ಸಮಾಲೋಚನೆ ನಡೆಸಿ ಭೂಮಿಯ ಮಾಲೀಕರಿಗೆ ಮಾರುಕಟ್ಟೆ ದರ ಪಾವತಿ ಮಾಡಬೇಕೆಂದು ನ್ಯಾಯಾಲಯ ಹೇಳಿದೆ. ಕೆಲವೊಂದು ಅಡ್ಡ ದಾರಿ ಬಳಸಿ ತನ್ನ ರಿಯಲ್ ಎಸ್ಟೇಟ್ ಏಜೆಂಟರ ಮುಖಾಂತರ ಭೂಮಿ ಸ್ವಾಧೀನ ಮಾಡಿಕೊಂಡ ಕ್ರಮ ಅನೂರ್ಜಿತಗೊಳಿಸಿ ಹೈಕೋರ್ಟ್ 1998ರಿಂದ 2004ರ ನಡುವೆ ನೀಡಿದ್ದ ತೀರ್ಪನ್ನು ಗೃಹ ನಿರ್ಮಾಣ ಸಂಘವು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿತ್ತು.ಬೆಂಗಳೂರು ವಿಶೇಷ ಜಿಲ್ಲಾಧಿಕಾರಿ 1988ರ ಆಗಸ್ಟ್ 23ರಂದು 201 ಎಕರೆ 17 ಗುಂಟೆ ಜಮೀನು ಸ್ವಾಧೀನಕ್ಕೆ ಅಧಿಸೂಚನೆ ಹೊರಡಿಸಿದ್ದರು. ಈ ಭೂಮಿ ಗೀತಾದೇವಿ ಷಾ ಮತ್ತು ಪಿ. ರಾಮಯ್ಯ, ಮುನಿಕೃಷ್ಣ, ಕೇಶವಮೂರ್ತಿ, ನಾಗವೇಣಿ ಮತ್ತು ಚಿಕ್ಕತಾಯಮ್ಮ ಅವರ ಉತ್ತರಾಧಿಕಾರಿಗಳಿಗೆ ಸೇರಿದ್ದು.ಬಡಾವಣೆ ಅಭಿವೃದ್ಧಿಗೆ 18.73ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ. 1791 ನಿವೇಶನಗಳನ್ನು ಹಂಚಿಕೆ ಮಾಡಿದ್ದು, 200 ಸದಸ್ಯರು ಈಗಾಗಲೇ ಮನೆಗಳನ್ನು ಕಟ್ಟಿಕೊಂಡಿದ್ದಾರೆ.

 ನಾಗರಿಕ ಸೌಲಭ್ಯಗಳನ್ನು ಕಲ್ಪಿಸಲು ಬಿಡಿಎಗೆ ಶೇ. 50ರಷ್ಟು ಭೂಮಿ ಹಸ್ತಾಂತರಿಸಲಾಗಿದೆ. ಕೆಪಿಟಿಸಿಎಲ್‌ಗೆ 16154 ಚದರ ಅಡಿ ಭೂಮಿ ಬಿಟ್ಟುಕೊಡಲಾಗಿದೆ ಎಂದು ಸಂಘ ವಾದಿಸಿತ್ತು.ಸಂಘದ ವಾದವನ್ನು ಸುಪ್ರೀಂ ಕೋರ್ಟ್ ಪರಿಗಣನೆಗೆ ತೆಗೆದುಕೊಳ್ಳಲಿಲ್ಲ. ಭೂಮಿ ಸ್ವಾಧೀನ ಪ್ರಕ್ರಿಯೆಯಲ್ಲಿ ಹಣ ತನ್ನ ಪ್ರಭಾವ ಬೀರಿದೆ ಎಂದು ಕೋರ್ಟ್ ತಿಳಿಸಿದೆ. 1988 ರಲ್ಲಿ `ರಾಜೇಂದ್ರ ಎಂಟರ್‌ಪ್ರೈಸಸ್~ ಜತೆ ಭೂಮಿ ಸ್ವಾಧೀನ ಪ್ರಕ್ರಿಯೆಗೆ ಸಂಬಂಧಿಸಿದಂತೆ ಒಪ್ಪಂದ ಮಾಡಿಕೊಂಡ ಸಂಘ ಇದಕ್ಕಾಗಿ ಭಾರಿ ಹಣ ವ್ಯಯ ಮಾಡಿದೆ ಎಂದು ಹೇಳಿದೆ.ಎಸ್ಟೇಟ್ ಏಜೆಂಟ್ ಭೂಮಿ ಸ್ವಾಧೀನಕ್ಕೆ ಸಂಬಂಧಪಟ್ಟಂತೆ ಅರ್ಜಿದಾರರಿಂದ ಭಾರಿ ಹಣ ಪಡೆದಿದ್ದಾರೆ. ಈ ಸಂಬಂಧ ಆಗಿರುವ ಒಪ್ಪಂದ ನೋಡಿದ ಯಾರಿಗಾದರೂ ಅನುಮಾನ ಬರಲಿದೆ. ಹಣ ತನ್ನ ಪಾತ್ರ ನಿರ್ವಹಿಸಿದೆ ಎಂಬ ಸಂಶಯ ಮೂಡುತ್ತದೆ ಎಂದು ಸುಪ್ರೀಂ ಕೋರ್ಟ್ ಈಚೆಗೆ ನೀಡಿರುವ ತೀರ್ಪಿನಲ್ಲಿ ಅಭಿಪ್ರಾಯಪಟ್ಟಿದೆ.

ಉತ್ತರಹಳ್ಳಿ ತಾಲೂಕಿನ ವಜರಹಳ್ಳಿಗೆ ಸಂಬಂಧಿಸಿದ ವಿವಾದ ಇದಾಗಿದ್ದು, ಮೂರು ತಿಂಗಳ ಒಳಗಾಗಿ ಖಾಲಿ ನಿವೇಶನವನ್ನು ಅವುಗಳ ಮಾಲೀಕರಿಗೆ ಬಿಟ್ಟುಕೊಡಬೇಕು ಎಂದು ನ್ಯಾಯಾಲಯ ತೀರ್ಪಿನಲ್ಲಿ ತಿಳಿಸಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry