ಬುಧವಾರ, ಆಗಸ್ಟ್ 21, 2019
28 °C
ಅನುಚ್ಛೇದ 371 (ಜೆ): ಉಪ ಸಮಿತಿ ವರದಿಗೆ ಸ್ವಾಗತ

ಖಾಲಿ ಹುದ್ದೆಗಳ ಭರ್ತಿಗೆ ಆಗ್ರಹ

Published:
Updated:

ಗುಲ್ಬರ್ಗ: `ಸಂವಿಧಾನದ ತಿದ್ದುಪಡಿ 371 (ಜೆ)ಕ್ಕೆ ಸಂಬಂಧಿಸಿದಂತೆ ಸಂಪುಟ ಉಪ ಸಮಿತಿ ನೀಡಿರುವ ವರದಿ ಸ್ವಾಗತಾರ್ಹ. ಅದನ್ನು ಅನುಷ್ಠಾನಗೊಳಿಸುವ ಕೆಲಸವೂ ಆದಷ್ಟು ಬೇಗ ಆಗಬೇಕು' ಎಂದು ಹೈದರಾಬಾದ್-ಕರ್ನಾಟಕ ಹೋರಾಟ ಸಮಿತಿ ಅಧ್ಯಕ್ಷ ವೈಜನಾಥ್ ಪಾಟೀಲ ಆಗ್ರಹಿಸಿದರು.`371 (ಜೆ) ತಿದ್ದುಪಡಿ ಬಳಿಕ ಕಾನೂನುಗಳ ರಚನೆ ಬೇಗ ಆಗಿದೆ. ಉಪಸಮಿತಿಯ ವರದಿಯನ್ನು ಕೇಂದ್ರಕ್ಕೆ ಕಳುಹಿಸಲಾಗಿದ್ದು, ರಾಷ್ಟ್ರಪತಿ ಅಂಕಿತದ ಬಳಿಕ ಮುಂದಿನ ರೂಪುರೇಷೆಗಳ ಬಗ್ಗೆ ಚರ್ಚಿಸಲಾಗುತ್ತದೆ.ವರದಿಯಿಂದ ಸಂಪೂರ್ಣ ಸಮಾಧಾನವಾಗಿಲ್ಲ. ಆದಾಗ್ಯೂ, ಸಂತಸ ತಂದಿದೆ. ಹೈದರಾಬಾದ್ ಕರ್ನಾಟಕ ಭಾಗದ ವಿವಿಧ ಇಲಾಖೆಗಳಲ್ಲಿ ಸುಮಾರು 25 ಸಾವಿರ ಹುದ್ದೆಗಳು ಖಾಲಿ ಉಳಿದಿವೆ. ಇದರಿಂದಾಗಿ ಈ ಭಾಗದ ಅಭಿವೃದ್ಧಿಗೆ ತೊಡಕಾಗಿದೆ. ಆದ್ದರಿಂದ, ಎಲ್ಲ ಖಾಲಿ ಹುದ್ದೆಗಳನ್ನೂ ಶೀಘ್ರವೇ ಭರ್ತಿ ಮಾಡಬೇಕು' ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು.`ಅನುಚ್ಛೇದ 371 (ಜೆ) (2) (ಬಿ) ಅನ್ವಯ ಹೈದರಾಬಾದ್-ಕರ್ನಾಟಕ ಪ್ರದೇಶದಲ್ಲಿನ ರಾಜ್ಯ ಸರ್ಕಾರದ ಅಧೀನದಲ್ಲಿರುವ ರಾಜ್ಯ ಸರ್ಕಾರದ ಹಾಗೂ ಯಾವುದೇ ನಿಗಮ, ಮಂಡಳಿ ಹಾಗೂ ಸಂಸ್ಥೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಗುರುತಿಸಿ ನೇರ ನೇಮಕಾತಿ ಮಾಡಿಕೊಳ್ಳಲು ಅವಕಾಶವಿದೆ. ಅದರಂತೆ `ಎ' ಮತ್ತು `ಬಿ' ವರ್ಗದಲ್ಲಿ ಶೇ 75, `ಸಿ' ವರ್ಗದಲ್ಲಿ ಶೇ 80 ಹಾಗೂ `ಡಿ' ವರ್ಗದಲ್ಲಿ ಶೇ 85ರಷ್ಟು ಮೀಸಲಾತಿ ಹಾಗೂ ರಾಜ್ಯದ ಇತರೆ ಸಂಸ್ಥೆ, ಮಂಡಳಿಗಳಿಗಳು, ವಿಶ್ವವಿದ್ಯಾನಿಲಯಗಳಲ್ಲಿ ಶೇ 8ರಷ್ಟು ಮೀಸಲಾತಿ ಲಭ್ಯವಾಗಲಿದೆ. ಇದರಿಂದ ಸ್ಥಳೀಯರಿಗೆ ಹೆಚ್ಚಿನ ಉದ್ಯೋಗಾವಕಾಶಗಳು ಲಭಿಸುತ್ತವೆ. ಆದ್ದರಿಂದ ಖಾಲಿ ಹುದ್ದೆಗಳ ಭರ್ತಿಗೆ ಶೀಘ್ರವೇ ಕ್ರಮ ಕೈಗೊಳ್ಳಬೇಕು' ಎಂದು ಹೇಳಿದರು.`ಉಪಸಮಿತಿ ನೀಡಿರುವ ವರದಿಯಲ್ಲಿ ಲೋಪದೋಷಗಳು ಇಲ್ಲವೆಂದಲ್ಲ. ಅಲ್ಲದೇ, 371 (ಜೆ) ತಿದ್ದುಪಡಿಯಿಂದ ಎಲ್ಲವೂ ಸರಿಹೋಗುತ್ತದೆ ಎಂದು ಹೇಳಲಾಗದು. ಮುಂಬರುವ ದಿನಗಳಲ್ಲಿ ಈ ಬಗ್ಗೆ ಮತ್ತೆ ಹೋರಾಟ ರೂಪಿಸಲಾಗುವುದು. ನಂಜುಂಡಪ್ಪ ವರದಿಯಲ್ಲಿ ಹಿಂದುಳಿದ ತಾಲ್ಲೂಕುಗಳಿಗೆ ಪ್ರತಿ ವರ್ಷ ಇಂತಿಷ್ಟು ಅನುದಾನ ನೀಡಬೇಕು ಎಂದು ಹೇಳಲಾಗಿತ್ತು. ಅದೇ ರೀತಿ ಹೈದರಾಬಾದ್-ಕರ್ನಾಟಕ ಅಭಿವೃದ್ಧಿಗೂ ಪ್ರತಿ ವರ್ಷ ಅನುದಾನ ಮೀಸಲು ಇಡಲಾಗುತ್ತದೆ. ಆದರೆ, ಅನುದಾನದ ಪ್ರಮಾಣ ಎಷ್ಟು, ಯಾರು ಉಸ್ತುವಾರಿ ವಹಿಸಿಕೊಳ್ಳಲಿದ್ದಾರೆ ಎಂಬುದು ಇನ್ನಷ್ಟೇ ಬಹಿರಂಗವಾಗಬೇಕಿದೆ' ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಈಶಾನ್ಯ ವಲಯ ಶಿಕ್ಷಕರ ವೇದಿಕೆ ಅಧ್ಯಕ್ಷ ಪ್ರೊ.ಎಂ.ಬಿ. ಅಂಬಲಗಿ ಇದ್ದರು.

Post Comments (+)