ಖಾಸಗಿತನದ ಸಂರಕ್ಷಣೆ

7

ಖಾಸಗಿತನದ ಸಂರಕ್ಷಣೆ

Published:
Updated:

ನವದೆಹಲಿ (ಪಿಟಿಐ): ದೂರವಾಣಿ ಕದ್ದಾಲಿಕೆ, ವಿಡಿಯೊ ಮತ್ತು ಇನ್ನಿತರ ವಿದ್ಯುನ್ಮಾನ ಸಾಧನಗಳ ಮೂಲಕ ಸಂಗ್ರಹಿಸುವ ವೈಯಕ್ತಿಕ ಮಾಹಿತಿ ದುರ್ಬಳಕೆ ಮಾಡಿಕೊಳ್ಳುವುದನ್ನು ತಡೆಯಲು ಮಾರ್ಗೋಪಾಯಗಳನ್ನು ಸೂಚಿಸಲು ರಚಿಸಲಾಗಿದ್ದ ತಜ್ಞರ ತಂಡವು, ವ್ಯಕ್ತಿಯ ಖಾಸಗಿತನ ಕಾಪಾಡಲು ಅಗತ್ಯವಾದ ಕಾನೂನು ರಚಿಸಲು ಶಿಫಾರಸು ಮಾಡಿದೆ.ಕೇಂದ್ರದಲ್ಲಿ ಖಾಸಗಿ ಆಯೋಗ ಮತ್ತು ಪ್ರಾದೇಶಿಕ ಮಟ್ಟದಲ್ಲಿ ಈ ಆಯೋಗದ ಕಚೇರಿಗಳನ್ನು ಸ್ಥಾಪಿಸಿ ವೈಯಕ್ತಿಕ ಸ್ವಾತಂತ್ರ್ಯಕ್ಕೆ ಧಕ್ಕೆ ತರುವ ಪ್ರಕರಣಗಳ ಮೇಲ್ವಿಚಾರಣೆ ನಡೆಸಲು ಅವಕಾಶ ಕಲ್ಪಿಸಬೇಕು ಎಂದು ದೆಹಲಿ ಹೈಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎ.ಪಿ. ಷಾ ನೇತೃತ್ವದ ತಜ್ಞರ ತಂಡವು ಸಲಹೆ ಮಾಡಿದೆ.ದೂರವಾಣಿ ಕದ್ದಾಲಿಕೆ ವಿಶೇಷವಾಗಿ ಪ್ರಸ್ತಾಪಿಸಿರುವ ತಂಡವು, ಯಾರದೇ ದೂರವಾಣಿಯನ್ನು ಧ್ವನಿಮುದ್ರಿಸಿಕೊಳ್ಳಬೇಕಾದರೆ ಸಂಬಂಧಪಟ್ಟ ಪ್ರಾಧಿಕಾರದಿಂದ ಅನುಮತಿ ಪಡೆದು 60 ದಿನಗಳ ನಂತರ ಅದನ್ನು ನವೀಕರಿಸಿಕೊಳ್ಳಬೇಕು. ಈ ನವೀಕೃತ ಆದೇಶದ ಅವಧಿ 180 ದಿನಗಳಿಗಿಂತ ಹೆಚ್ಚು ಇರಬಾರದು ಎಂದು ತಂಡ ಹೇಳಿದೆ.ಈ ರೀತಿ ಧ್ವನಿಮುದ್ರಿಸಿಕೊಂಡ ಮಾಹಿತಿ ಇಲ್ಲವೇ ದಾಖಲೆಗಳನ್ನು ಭದ್ರತಾ ಸಿಬ್ಬಂದಿ ಹಾಗೂ ದೂರವಾಣಿ ಸೇವಾ ವಿಭಾಗದವರು ನಿರ್ದಿಷ್ಟ ಅವಧಿಯೊಳಗೆ ನಾಶಗೊಳಿಸಬೇಕು ಎಂಬ ಸಲಹೆಯನ್ನು ಯೋಜನಾ ಸಚಿವಾಲಯದ ರಾಜ್ಯ ಸಚಿವ ಅಶ್ವನಿ ಕುಮಾರ್ ಅವರಿಂದ ನೇಮಕಗೊಂಡಿದ್ದ ತಂಡ ಹೇಳಿದೆ. ಈ ತಂಡವನ್ನು 2011ರ ಸೆಪ್ಟೆಂಬರ್‌ನಲ್ಲಿ ರಚಿಸಲಾಗಿತ್ತು.ಧ್ವನಿಮುದ್ರಿಕೆಗಳನ್ನು ಭದ್ರತಾ ಸಿಬ್ಬಂದಿಯು ಆರು ತಿಂಗಳ ಇಲ್ಲವೇ ಒಂಬತ್ತು ತಿಂಗಳ ನಂತರ ಕಡ್ಡಾಯವಾಗಿ ನಾಶಗೊಳಿಸಬೇಕು, ದೂರವಾಣಿ ಸೇವಾ ವಿಭಾಗದವರು ಇಂತಹ ಧ್ವನಿಮುದ್ರಿಕೆಗಳನ್ನು ಎರಡರಿಂದ ಆರು ತಿಂಗಳ ಒಳಗೆ ನಾಶಗೊಳಿಸಬೇಕು ಎಂದು ತಿಳಿಸಲಾಗಿದೆ.ಸಾರ್ವಜನಿಕ ಇಲ್ಲವೇ ಖಾಸಗಿ ವಲಯದ ಎಲೆಕ್ಟ್ರಾನಿಕ್ ಮಾಧ್ಯಮಗಳಿಂದ ಸಂಗ್ರಹಿಸಲಾದ ಮಾಹಿತಿಯ ದುರ್ಬಳಕೆಯಾಗದಂತೆ ಉದ್ದೇಶಿತ ಕಾನೂನು ತಡೆಯುತ್ತದೆ. ಯಾವ ಉದ್ದೇಶಕ್ಕೆ ಮಾಹಿತಿ ಸಂಗ್ರಹಿಸಲಾಗಿರುತ್ತದೆಯೋ ಅದೇ ಉದ್ದೇಶಕ್ಕೆ ಅದನ್ನು ಕಡ್ಡಾಯವಾಗಿ ಬಳಸಬೇಕು ಎಂದು ವರದಿ ಹೇಳಿದೆ.ಸರ್ಕಾರದ ವಿವಿಧ ಯೋಜನೆಗಳ ಅನುಷ್ಠಾನಕ್ಕೆ ಪೂರಕವಾಗಿ ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳು ವ್ಯಕ್ತಿ ಇಲ್ಲವೇ ಕುಟುಂಬಗಳಿಂದ ಮಾಹಿತಿ ಸಂಗ್ರಹಿಸುತ್ತಿರುವ ಹಿನ್ನೆಲೆಯಲ್ಲಿ,  ಮಾಹಿತಿ ದುರ್ಬಳಕೆಯಾಗದಂತೆ ಇಂತಹ ಕಾನೂನು ಅಗತ್ಯ ರಕ್ಷಣೆ ನೀಡುತ್ತದೆ ಎಂದು ಪ್ರತಿಪಾದಿಸಲಾಗಿದೆ. ಆಧಾರ್ ಯೋಜನೆ, ವಿವಿಧ ಅಡುಗೆ ಅನಿಲ ವಿತರಕ ಕಂಪೆನಿಗಳು `ನಿಮ್ಮ ಗ್ರಾಹಕರನ್ನು ತಿಳಿಯಿರಿ~ ಯೋಜನೆಯಡಿ ಮಾಹಿತಿ ಸಂಗ್ರಹಿಸುತ್ತಿದ್ದು  ವೈಯಕ್ತಿಕ ವಿವರಗಳನ್ನು ನೀಡುವುದು ಕಡ್ಡಾಯವಾಗಿದೆ.ರಾಷ್ಟ್ರೀಯ ಸುರಕ್ಷತೆ ಹಾಗೂ ವ್ಯಕ್ತಿಗಳ ವೈಯಕ್ತಿಕ ಸ್ವಾತಂತ್ರ್ಯದ ಹಕ್ಕನ್ನು ಯಾವ ರೀತಿಯಲ್ಲಿ ಸಮನ್ವಯಕ್ಕೆ ಒಳಪಡಿಸಬೇಕು ಎಂಬುದು ಈಗ ಪ್ರಮುಖವಾಗಿದೆ~ ಎಂದು ತಂಡ ಅಭಿಪ್ರಾಯಪಟ್ಟಿದೆ.ದೂರವಾಣಿ ಕದ್ದಾಲಿಕೆಗೆ ಕೋರ್ಟ್ ಅನುಮತಿ ಪಡೆಯುವುದನ್ನು ಕಡ್ಡಾಯಗೊಳಿಸಬಹುದಾಗಿದ್ದು ತುರ್ತು ಸಂದರ್ಭಗಳಲ್ಲಿ ಮೊದಲ 15 ಇಲ್ಲವೇ 30 ದಿನಗಳವರೆಗೆ ಈ ಪ್ರಕ್ರಿಯೆ ಕೈಗೊಳ್ಳಬಹುದು. ಆದರೆ ಇದಕ್ಕೆಲ್ಲ ಅಧಿಕಾರಿಗಳ ಅನುಮತಿ ಪಡೆಯುವುದು ಕಡ್ಡಾಯ. ಅವಧಿಯ ನಂತರ ಭದ್ರತಾ ಸಂಸ್ಥೆ ಕೋರ್ಟ್ ಅನ್ನು ಸಂಪರ್ಕಿಸಬೇಕಾಗುತ್ತದೆ ಎಂದು ಷಾ ತಿಳಿಸಿದರು.ಪ್ರಸಕ್ತ ಸನ್ನಿವೇಶದಲ್ಲಿ ದೇಶದಲ್ಲಿ ಫೋನ್ ಕದ್ದಾಲಿಕೆಗೆ ಅಧಿಕಾರಿಗಳ ಅನುಮತಿ ಪಡೆದರೆ ಸಾಕು.  ಇತರ ಬಹುತೇಕ ದೇಶಗಳಲ್ಲಿ ಹೀಗೆ ಮಾಡಲು ಕೋರ್ಟ್ ಅನುಮತಿ ಪಡೆಯಬೇಕಾಗುತ್ತದೆ.ನಿರ್ದಿಷ್ಟ ಉದ್ದೇಶಗಳಿಗಾಗಿ ವ್ಯಕ್ತಿ ಇಲ್ಲವೇ ಕುಟುಂಬಗಳಿಂದ ಮಾಹಿತಿ ಸಂಗ್ರಹಿಸುವ ಸಂಸ್ಥೆಗಳು ಮಾಹಿತಿಯನ್ನು ದುರುದ್ದೇಶಕ್ಕೆ ಬಳಕೆ ಮಾಡಿಕೊಂಡಲ್ಲಿ  ಅದನ್ನು ಅಪರಾಧ ಎಂದು ಪರಿಗಣಿಸಬೇಕಾಗುತ್ತದೆ, ಇಂತಹ ಅಪರಾಧಕ್ಕೆ ರೂ 30 ಲಕ್ಷಗಳ ತನಕ ದಂಡವನ್ನೂ ವಿಧಿಸಬೇಕಾಗುತ್ತದೆ.ಆದರೆ ರಾಷ್ಟ್ರೀಯ ಹಿತಾಸಕ್ತಿ, ಸಾರ್ವಜನಿಕ ಹಿತಾಸಕ್ತಿ, ಪತ್ರಕರ್ತರಿಗೆ ಇರುವ ಸೌಲಭ್ಯ ಮತ್ತಿತರ ಸಂದರ್ಭಗಳಲ್ಲಿ ಇಂತಹ ಗೋಪ್ಯತೆ ಕಾನೂನು ಅನ್ವಯಿಸುವುದಿಲ್ಲ ಎಂದೂ ಷಾ ಅವರು ಸ್ಪಷ್ಟಪಡಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry