ಖಾಸಗಿಯವರಿಗೆ ರಸ್ತೆ ನಿರ್ವಹಣೆ: ಜಾರ್ಜ್

7

ಖಾಸಗಿಯವರಿಗೆ ರಸ್ತೆ ನಿರ್ವಹಣೆ: ಜಾರ್ಜ್

Published:
Updated:

ಬೆಂಗಳೂರು: ನಗರದ ವಿಠಲ ಮಲ್ಯ ರಸ್ತೆ ಮಾದರಿಯಲ್ಲಿ ಇತರ ಪ್ರಮುಖ ರಸ್ತೆಗಳನ್ನು ಅಭಿವೃದ್ಧಿಪಡಿಸಿ, 15 ವರ್ಷಗಳವರೆಗೆ ನಿರ್ವಹಣೆ ಮಾಡಲು ಖಾಸಗಿಯವರು ಮುಂದೆ ಬಂದಲ್ಲಿ ಅದಕ್ಕೆ ಅವಕಾಶ ಮಾಡಿಕೊಡುವುದಾಗಿ ಗೃಹ ಸಚಿವ ಕೆ.ಜೆ.ಜಾರ್ಜ್ ಶುಕ್ರವಾರ ಇಲ್ಲಿ ಹೇಳಿದರು. ನಗರದಲ್ಲಿನ ಸಂಚಾರ ದಟ್ಟಣೆ ಮತ್ತು ಅದಕ್ಕೊಂದು ಪರಿಹಾರ ಕಲ್ಪಿಸುವ ಸಂಬಂಧ ಬಿಬಿಎಂಪಿ, ಬಿಡಿಎ, ಜಲಮಂಡಳಿ, ಬಿಎಂಆರ್‌ಡಿಎ, ನಮ್ಮ ಮೆಟ್ರೊ ಅಧಿಕಾರಿಗಳ ಜತೆ ಜಾರ್ಜ್ ಚರ್ಚೆ ನಡೆಸಿದರು.ಸಭೆ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು ಸಂಚಾರ ದಟ್ಟಣೆ ಹೆಚ್ಚಾಗಲು ರಸ್ತೆ ಹಾಳಾಗಿರುವುದು ಕೂಡ ಒಂದು ಕಾರಣ. ಹೀಗಾಗಿ ಪ್ರಮುಖ ರಸ್ತೆಗಳ ನಿರ್ವಹಣೆಯ ಜವಾಬ್ದಾರಿ­ಯನ್ನು ಖಾಸಗಿಯವರಿಗೆ ನೀಡುವ ಬಗ್ಗೆ ಮುಖ್ಯಮಂತ್ರಿ ಕೂಡ ಆಸಕ್ತಿ ತೋರಿದ್ದಾರೆ. ವಿಠಲ್‌ ಮಲ್ಯ ರಸ್ತೆಯನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಅಭಿವೃದ್ಧಿಪಡಿಸಿದ್ದು, ಅದೇ ರೀತಿ ಇತರ ರಸ್ತೆಗಳ ನಿರ್ಮಾಣ ಆಗಬೇಕು ಎಂದು ಹೇಳಿದರು.ಎರಡು ದ್ವಾರ: ಅರಮನೆ ಮೈದಾನದಲ್ಲಿ ಆಯೋಜಿಸುವ ಕಾರ್ಯಕ್ರಮಗಳಿಂದ ಬಳ್ಳಾರಿ ರಸ್ತೆ ಸೇರಿದಂತೆ ಸುತ್ತಮುತ್ತಲಿನ ಹಲವು ರಸ್ತೆಗಳಲ್ಲಿ ಪ್ರತಿನಿತ್ಯ ಸಂಚಾರ ದಟ್ಟಣೆಯಿಂದ ಜನ ಪರದಾಡುವಂತಾಗಿದೆ. ಹೀಗಾಗಿ ಅದಕ್ಕೊಂದು ಪರಿಹಾರ ಹುಡುಕಲಾಗಿದೆ. ಬಳ್ಳಾರಿ ರಸ್ತೆಯಿಂದ ವಾಹನಗಳ ಪ್ರವೇಶಕ್ಕೆ ಅವಕಾಶ ನೀಡುವುದು. ರಾಜಮಹಲ್‌ ಕಡೆಯಿಂದ ವಾಹನಗಳನ್ನು ಹೊರ ಬಿಡಲು ಸೂಚಿಸಲಾಗಿದೆ. ಈ ನಿಯಮ ಪಾಲಿಸದೇ ಇದ್ದಲ್ಲಿ ಅರಮನೆ ಮೈದಾನದಲ್ಲಿ ಕಾರ್ಯಕ್ರಮ ಗಳನ್ನು ಆಯೋಜಿಸಲು ಸರ್ಕಾರದ ಮುಖ್ಯ ಕಾರ್ಯದರ್ಶಿ ಅನುಮತಿ ನೀಡಬಾರದು ಎಂದು ಸೂಚಿಸಲಾಗಿದೆ ಎಂದರು.ಅರಮನೆ ಮೈದಾನಕ್ಕೆ ಹೊಂದಿಕೊಂಡಿರುವ ಬಳ್ಳಾರಿ ರಸ್ತೆಯನ್ನು ಅಗಲ ಮಾಡುವುದಕ್ಕೆ ನ್ಯಾಯಾಲಯದ ತಡೆಯಾಜ್ಞೆ ಇದೆ. ಈ ಕಾರಣಕ್ಕೆ ಆ ಕಾಮಗಾರಿ ವಿಳಂಬ ಆಗುತ್ತಿದೆ. ರಸ್ತೆ ಅಗಲ ಮಾಡುವುದರಿಂದ ಸುಮಾರು 650 ಮರಗಳನ್ನು ಕಡಿಯಬೇಕಾಗುತ್ತದೆ ಎಂದೂ ಅಧಿಕಾರಿಗಳು ಹೇಳಿದ್ದಾರೆ ಎಂದರು.ಮಾನೊ ರೈಲಿಗೆ ಆದ್ಯತೆ: ಸಂಚಾರ ದಟ್ಟಣೆ ತಪ್ಪಿಸುವುದಕ್ಕೆ ಮಾನೊ ರೈಲು ಯೋಜನೆ ಕೂಡ ಮುಖ್ಯ. ಮೆಟ್ರೊ ರೈಲಿಗೆ ಫೀಡರ್‌ ರೀತಿಯಲ್ಲಿ ಮಾನೊ ರೈಲು ಕೆಲಸ ಮಾಡಬೇಕು. ಹೀಗೆ ಮಾಡುವುದರಿಂದ ವಾಹನ ದಟ್ಟಣೆಯನ್ನು ಕಡಿಮೆ ಮಾಡಬಹುದು. ಈ ಕುರಿತು ಮುಖ್ಯಮಂತ್ರಿ ಜತೆ ಚರ್ಚಿಸಲಾಗುವುದು ಎಂದು ಹೇಳಿದರು.ಲೂಪ್‌ ನಿರ್ಮಾಣ: ಕೆ.ಆರ್‌.ಪುರ ಸಮೀಪ ವರ್ತುಲ ರಸ್ತೆಯಿಂದ ಬೈಯ್ಯಪ್ಪನಹಳ್ಳಿ ಕಡೆಗೆ ಬಲ ತಿರುವು ತೆಗೆದುಕೊಳ್ಳಲು ಅವಕಾಶ ಇಲ್ಲ. ಇದರಿಂದಲೂ ಸಂಚಾರ ದಟ್ಟಣೆ ಹೆಚ್ಚಾಗಿದೆ. ಈ ಕಾರಣಕ್ಕೆ ವರ್ತುಲ ರಸ್ತೆಯಿಂದ ಬಲಗಡೆ ತಿರುಗಲು ರಸ್ತೆ ಮೇಲ್ಸೇತುವೆ (ಲೂಪ್‌) ನಿರ್ಮಿಸಲಾಗುವುದು. ಬಿಡಿಎ ಈ ಯೋಜನೆಯನ್ನು ಕೈಗೆತ್ತಿಕೊಳ್ಳಲಿದೆ ಎಂದು ವಿವರಿಸಿದರು.ಹಡ್ಸನ್‌ ವೃತ್ತದಲ್ಲಿಯೂ ಗ್ರೇಡ್‌ ಸಪರೇಟರ್‌ ನಿರ್ಮಿಸಲಾಗುವುದು. ಮಡಿವಾಳದ ಕೇಂದ್ರ ರೇಷ್ಮೆ ಮಂಡಳಿಯಿಂದ ಜಯದೇವ ಹೃದ್ರೋಗ ಆಸ್ಪತ್ರೆವರೆಗೆ ರಸ್ತೆ ಮೇಲ್ಸೇತುವೆ ನಿರ್ಮಿಸಲಾ ಗುವುದು ಎಂದು ಅವರು ಹೇಳಿದರು.ಡಾಂಬರು ಭಾಗ್ಯ: ಮಳೆ ನಿಂತ ನಂತರ ನಗರದ ರಸ್ತೆಗಳಿಗೆ ಡಾಂಬರು ಹಾಕಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಮೈಸೂರು ರಸ್ತೆ ಕೂಡ ಹಾಳಾಗಿದ್ದು, ಅದನ್ನು ಸರಿಪಡಿಸಲು ಮುಖ್ಯಮಂತ್ರಿ ಸೂಚಿಸಿದ್ದಾರೆ. ಮಳೆ ನೀರು ಚರಂಡಿಗಳಲ್ಲಿನ ಹೂಳೆತ್ತುವುದಕ್ಕೂ ಆದ್ಯತೆ ನೀಡಲಾಗುವುದು ಎಂದರು.45 ದಿನಗಳ ಗಡುವು: ಸಂಚಾರ ದಟ್ಟಣೆ ನಿವಾರಿಸುವುದಕ್ಕೆ ಅಲ್ಪಾವಧಿ ಮತ್ತು ದೀರ್ಘಾವಧಿಯ ಯೋಜನೆಗಳನ್ನು ಹಮ್ಮಿಕೊಳ್ಳ­ಲಾಗಿದೆ. ಅಲ್ಪಾವಧಿ ಕಾರ್ಯಕ್ರಮಗಳನ್ನು 45 ದಿನಗಳಲ್ಲಿ ಅನುಷ್ಠಾನಗೊಳಿಸಿ, ಆ ಕುರಿತು ಸರ್ಕಾರಕ್ಕೆ ವರದಿ ನೀಡಲು ಸಚಿವರು ಸೂಚಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry