ಶನಿವಾರ, ಮೇ 15, 2021
25 °C

ಖಾಸಗಿ ಕಾಲೇಜುಗಳ ವಿರುದ್ಧ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಖಾಸಗಿ ಕಾಲೇಜುಗಳ ವಿರುದ್ಧ ಪ್ರತಿಭಟನೆ

ಬಳ್ಳಾರಿ:  ನಗರದಲ್ಲಿರುವ ಪ್ರಮುಖ ಖಾಸಗಿ ಕಾಲೇಜುಗಳು ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿವೆ ಎಂದು ಆರೋಪಿಸಿ ವಿದ್ಯಾರ್ಥಿ ಘಟಕ ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕದ ವತಿಯಿಂದ ನಗರದ ಚೈತನ್ಯ ಪದವಿ ಪೂರ್ವ ಕಾಲೇಜಿನ ಎದುರು ಬುಧವಾರ ಪ್ರತಿಭಟನೆ ನಡೆಯಿತು.ನಗರದಲ್ಲಿರುವ ವಿವಿಧ ಖಾಸಗಿ ಕಾಲೇಜುಗಳು ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸದೆ, ಸರ್ಕಾರದ ಆದೇಶವನ್ನು ಉಲ್ಲಂಘಿಸಿ ನಡೆಯುತ್ತಿವೆ ಎಂದು ಪ್ರತಿಭಟನಕಾರರು ಆರೋಪಿಸಿದರು.ಕಾಲೇಜಿಗೆ ಸ್ವಂತ ಕಟ್ಟಡ ಇರಬೇಕು, ಒಂದು ಕಾಲೇಜಿನಿಂದ ಇನ್ನೊಂದು ಕಾಲೇಜಿಗೆ ಕನಿಷ್ಠ 2 ಕಿ.ಮೀ ದೂರವಿರಬೇಕು. ಆದರೆ, ನಗರದಲ್ಲಿ ನಾಲ್ಕು ಶಾಖೆಗಳನ್ನು ಹೊಂದಿರುವ ಪ್ರಮುಖ ಕಾಲೇಜಿನ ಎರಡು ಶಾಖೆಗಳಿಗೆ ಮಾತ್ರ ಸರ್ಕಾರ ಅನುಮತಿ ನೀಡಿದೆ. ಸ್ವಂತ ಕಟ್ಟಡವಿಲ್ಲದ ಇನ್ನೊಂದು ಖಾಸಗಿ ಕಾಲೇಜು ಪ್ರತಿ ವರ್ಷವೂ ಕಟ್ಟಡವನ್ನು ಸ್ಥಳಾಂತರಿಸುತ್ತಿರುವುದರಿಂದ ವಿದ್ಯಾರ್ಥಿಗಳು ಹಾಗೂ ಪಾಲಕರು ತೀವ್ರ ತೊಂದರೆ ಅನುಭವಿಸುವಂತಾಗಿದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಿಗೆ ಸಲ್ಲಿಸಿದ ಮನವಿಯಲ್ಲಿ ತಿಳಿಸಲಾಗಿದೆ.ಕೇಂದ್ರ ಸರ್ಕಾರದ ಮೀಸಲಾತಿ ನಿಯಮದ ಪ್ರಕಾರ ಎಲ್ಲ ವರ್ಗದ ವಿದ್ಯಾರ್ಥಿಗಳಿಗೂ ಪ್ರವೇಶ ಕಲ್ಪಿಸಬೇಕು.  ತರಬೇತಿ ಹೊಂದಿದ ಹಾಗೂ ನುರಿತ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಬೇಕು ಎಂಬ  ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಲಾಗಿದೆ.ಸರ್ಕಾರದ ನಿಯಮಗಳ ಪ್ರಕಾರ ನಿಗದಿಪಡಿಸಿರುವ ಶುಲ್ಕಕ್ಕಿಂತ ಪಾಲಕರಿಂದ ಹೆಚ್ಚಿನ ಶುಲ್ಕ ಪಡೆಯಲಾಗುತ್ತಿದೆ ಎಂದು ಆರೋಪಿಸಿದ ಪ್ರತಿಭಟನಕಾರರು, ಈ ಕುರಿತು ಹಲವಾರು ಬಾರಿ ಮನವಿ ಸಲ್ಲಿಸಿದ್ದರೂ, ಜಿಲ್ಲಾಡಳಿತವಾಗಲೀ, ಪದವಿಪೂರ್ವ ಶಿಕ್ಷಣ ಇಲಾಖೆಯಾಗಲೀ ಯಾವುದೇ ಸೂಕ್ತ ಕ್ರಮ ತೆಗೆದುಕೊಂಡಿಲ್ಲ ಎಂದು ಪ್ರತಿಭಟನಾಕಾರರು ಎಂದು ಬೇಸರ ವ್ಯಕ್ತಪಡಿಸಿದರು.ವಿದ್ಯಾರ್ಥಿ ಘಟಕದ ಹುಸೇನ್, ನೂರ್ ಮಹಮ್ಮದ್, ಕರವೇ ಜಿಲ್ಲಾಘಟಕದ ಉಪಾಧ್ಯಕ್ಷರಾದ ಕೆ.ಎನ್.ಶಿವಕುಮಾರ್ ಮತ್ತಿತರರು ಪಾಲ್ಗೊಂಡಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.