ಖಾಸಗಿ ಕೊಳವೆ ಬಾವಿಯಿಂದ ನೀರು

7

ಖಾಸಗಿ ಕೊಳವೆ ಬಾವಿಯಿಂದ ನೀರು

Published:
Updated:
ಖಾಸಗಿ ಕೊಳವೆ ಬಾವಿಯಿಂದ ನೀರು

ಕೋಲಾರ: ತಾಲ್ಲೂಕಿನ ಶಾಪೂರು ಗ್ರಾಮ ಪಂಚಾಯಿತಿಗೆ ಸೇರಿದ ಅಗ್ರಹಾರ ಸೋಮರಸನಹಳ್ಳಿಯಲ್ಲಿ ಸುಮಾರು ಎರಡು ವರ್ಷದಿಂದ ನೀರಿನ ಸಮಸ್ಯೆ ತೀವ್ರವಾಗಿದೆ.ಗ್ರಾಮದ ಎರಡು ಕಡೆ ಅಳವಡಿಸಿರುವ ಕಿರು ನೀರು ಸರಬರಾಜು ತೊಟ್ಟಿಗಳಿಗೆ ನೀರು ಬಂದು ಸುಮಾರು ಒಂದೂವರೆ ವರ್ಷವಾಗಿದೆ. ಹೇಗಾದರೂ ಸರಿ ನೀರು ಕೊಡಿ ಎಂದು ಆಗ್ರಹಿಸಿ ಶಾಪೂರು ಗ್ರಾಮ ಪಂಚಾಯಿತಿ ಮುಂದೆ ಇಲ್ಲಿನ ಜನ ಎರಡು ಬಾರಿ ಪ್ರತಿಭಟನೆ ನಡೆಸಿದ್ದಾರೆ. ಆ ಹಿನ್ನೆಲೆಯಲ್ಲಿ ಕೆಲವೇ ತಿಂಗಳ ಹಿಂದೆ ಹಳ್ಳಿಯ ಕೆರೆಯಲ್ಲಿ ಎರಡು ಕೊಳವೆ ಬಾವಿ ಕೊರೆದರೂ ನೀರು ಸಿಗದ ಪರಿಣಾಮ ಸಮಸ್ಯೆ ಬಿಗಡಾಯಿಸಿದೆ. ಈಗ ಹತ್ತಿರದ ಖಾಸಗಿ ಕೊಳವೆ ಬಾವಿಯಿಂದ ಸಂಪರ್ಕ ಪಡೆದು, ಗ್ರಾಮದ ಹೊರ ಭಾಗದಲ್ಲಿರುವ ಕಿರು ನೀರು ಸರಬರಾಜು ತೊಟ್ಟಿಗೆ ನೀರು ಹರಿಸಿ ಜನರಿಗೆ ಪೂರೈಸಲಾಗುತ್ತಿದೆ. ಆದರೂ ಸಮಸ್ಯೆ ಬಗೆಹರಿದಿಲ್ಲ.ಸದ್ಯಕ್ಕೆ ಇದೊಂದೇ ನೀರಿನ ಮೂಲ. ಹೀಗಾಗಿ ಹಳ್ಳಿಯ ಎಲ್ಲ ದಿಕ್ಕಿನಿಂದಲೂ ಇಲ್ಲಿಗೇ ಗ್ರಾಮಸ್ಥರು, ಅದರಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ನಡೆದು ಬಂದು ನೀರನ್ನು ತಲೆ, ಸೊಂಟದ ಮೇಲೆ, ಸೈಕಲ್ಲುಗಳಲ್ಲಿ ಹೊತ್ತೊಯ್ಯುವ ಅನಿವಾರ್ಯ ಸನ್ನಿವೇಶ ಸೃಷ್ಟಿಯಾಗಿದೆ. ವಿದ್ಯುತ್ ಕಣ್ಣಾಮುಚ್ಚಾಲೆ ಸಮಸ್ಯೆಯ ಭಾರವನ್ನು ಇನ್ನಷ್ಟು ಹೆಚ್ಚಿಸಿದೆ. ಮಧ್ಯಾಹ್ನದ ವೇಳೆ ಮತ್ತು ಮಧ್ಯರಾತ್ರಿ ವೇಳೆ ವಿದ್ಯುತ್ ಪೂರೈಕೆಯಾಗುವುದರಿಂದ ಬಿರು ಬಿಸಿಲು ಮತ್ತು ಕತ್ತಲಿನಲ್ಲೆ ನೀರನ್ನು ಸಂಗ್ರಹಿಸುವಂತಾಗಿದೆ. ನೀರು ಸಾಕಾಗದೆ ಇತರೆ ತೋಟಗಳ ಬಳಿ ಹೋದರೆ ಮಾಲೀಕರ ಬೈಗುಳ ಎದುರಿಸಬೇಕಾಗುತ್ತದೆ ಎಂಬುದು ಅವರ ಇನ್ನೊಂದು ಸಂಕಟ.ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಾಸವಾದರೆ ನೀರಿಗಾಗಿ ಇಲ್ಲಿನ ಜನ ಒಂದೆರಡು ಕಿ.ಮೀ. ದೂರದಲ್ಲಿರುವ ಸುತ್ತಮುತ್ತಲಿನ ನೀಲಕಂಠಪುರ, ನಂದಂಬಳ್ಳಿ, ಪಟ್ನಕ್ಕೆ ಹೋಗಿ ನೀರು ತರಬೇಕಾಗುತ್ತದೆ. ಸೈಕಲ್‌ಗಳಲ್ಲಿ ಬಿಂದಿಗೆಗಳನ್ನು ತೂಗುಹಾಕಿಕೊಂಡು ತಳ್ಳುವುದು ಅನಿವಾರ್ಯ.ನಮ್ಮ ಹಳ್ಳಿಗೆ 2 ವರ್ಷದಿಂದ ನೀರಿಲ್ಲ. ಸತತವಾಗಿ ಮನವಿ ನೀಡಿದ್ದು, ಪ್ರತಿಭಟನೆ ನಡೆಸಿದ ಪರಿಣಾಮ ಕಳೆದ ನವೆಂಬರ್‌ನಲ್ಲಿ ಮತ್ತು ನಂತರದಲ್ಲಿ ಎರಡು ಕೊಳವೆಬಾವಿಗಳನ್ನು ಗ್ರಾಮ ಪಂಚಾಯಿತಿ ವತಿಯಿಂದ ಕೊರೆಸಿದರೂ ನೀರು ಬರಲಿಲ್ಲ. ಈಗ ಖಾಸಗಿ ಕೊಳವೆಬಾವಿಗಳಿಂದ ನೀರು ಕೊಡುತ್ತಿದ್ದಾರೆ. ಆದರೆ ಅದು ಸಾಕಾಗುತ್ತಿಲ್ಲ ಎಂದು ರಮೇಶ್ ಸೋಮವಾರ `ಪ್ರಜಾವಾಣಿ~ಗೆ ತಿಳಿಸಿದರು. ಇತ್ತೀಚೆಗಷ್ಟೆ ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ, ಜಿಲ್ಲಾಧಿಕಾರಿ ಕೂಡ ಗ್ರಾಮಕ್ಕೆ ಭೇಟಿ ನೀಡಿದ್ದರು ಎಂದು ಅವರು ಮಾಹಿತಿ ನೀಡಿದರು.ರಾತ್ರಿ 11ರಿಂದ ಬೆಳಗಿನ ಜಾವ 1ರವರೆಗೆ, ಮಧ್ಯಾಹ್ನ 2ರಿಂದ 4ರವರೆಗೆ ಟ್ಯಾಂಕ್‌ನಲ್ಲಿ ನೀರು ಬರುತ್ತದೆ. ಆ ಅವೇಳೆಯಲ್ಲಿ ನೀರು ಸಂಗ್ರಹಿಸುವುದು ಕಷ್ಟ. ಬಿರುಬಿಸಿಲು ಮತ್ತು ರಾತ್ರಿ ವೇಳೆ ದೀಪವಿಲ್ಲದ ದಾರಿಯಲ್ಲಿ ಅಪಾಯಗಳ ಅಂಚಿನಲ್ಲೆ ನೀರು ಸಂಗ್ರಹಿಸುತ್ತಿದ್ದೇವೆ ಎಂಬುದು ಗ್ರಾಮದ ಪಾರ್ವತಮ್ಮ, ಸರೋಜಮ್ಮ, ಪದ್ಮಮ್ಮ ಅವರ ಅಸಹಾಯಕ ನುಡಿಗಳು.ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ಕಟ್ಟಿದ ಟ್ಯಾಂಕ್‌ಗಳು ಒಣಗಿವೆ. ಮನೆಗಳಿಗೆ ಅಳವಡಿಸಿದ ನಲ್ಲಿಗಳಲ್ಲಿ ನೀರು ಬರುವುದೆಂಬ ನಿರೀಕ್ಷೆಯಲ್ಲಿ ಬಹಳಷ್ಟು ರಸ್ತೆಗಳಲ್ಲಿ ನೆಲಮಟ್ಟದಲ್ಲಿ ಹಳ್ಳಗಳನ್ನು ಮಾಡಿದರೂ ಪೈಪ್‌ನಲ್ಲಿ ನೀರಿಲ್ಲದಂತಾಗಿದೆ ಎಂದು ಅಚ್ಚಪ್ಪ, ರಮೇಶ್ ವಿಷಾದಿಸುತ್ತಾರೆ.ಕೊಳವೆಬಾವಿಗಳಲ್ಲಿ ನೀರು ಬತ್ತಿದೆ. ಹೊಸ ಕೊಳವೆಬಾವಿಗಳಲ್ಲೂ ನೀರು ದೊರೆತಿಲ್ಲ. ಟ್ಯಾಂಕರ್ ಮೂಲಕ ನೀರು ಹರಿಸಿ ಹಲವು ತಿಂಗಳಾಗಿವೆ. ಒಟ್ಟಾರೆ ನಮ್ಮ ಹಳ್ಳಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿದೇ ಇಲ್ಲ ಎಂಬುದು ಗ್ರಾಮಸ್ಥರ ಬೇಸರ.  ನಮ್ಮ ಸಮಸ್ಯೆಯನ್ನು ಪಂಚಾಯಿತಿ ಮತ್ತು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿ ಕ್ರಮ ಕೈಗೊಳ್ಳಬೇಕು ಎಂಬುದು ಅವರ ಮನವಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry