ಖಾಸಗಿ ಕ್ಷೇತ್ರದಲ್ಲಿ ಮೀಸಲಾತಿಗೆ ಬಿವಿಎಸ್ ಆಗ್ರಹ

ಬೆಂಗಳೂರು: ದಲಿತ ಮತ್ತು ಹಿಂದುಳಿದ ವರ್ಗಗಳಿಗೆ ಖಾಸಗಿ ಕ್ಷೇತ್ರದಲ್ಲೂ ಮೀಸಲಾತಿ ನೀಡಬೇಕು ಹಾಗೂ ಹೈದರಾಬಾದ್ ಸಂಶೋಧನಾ ವಿ.ವಿ ವಿದ್ಯಾರ್ಥಿಆತ್ಮಹತ್ಯೆಗೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ, ಬಹುಜನ ವಿದ್ಯಾರ್ಥಿ ಸಂಘದ (ಬಿವಿಎಸ್) ಸದಸ್ಯರು ನಗರದ ಪುರಭವನದ ಎದುರು ಗುರುವಾರ ಪ್ರತಿಭಟನೆ ನಡೆಸಿದರು.
ಈ ವೇಳೆ ಮಾತಾಡಿದ ಸಂಘದ ಸಂಚಾಲಕ ಹರಿರಾಮ್, ‘ದೇಶದಲ್ಲಿ ಉದಾರೀಕರಣ, ಖಾಸಗೀಕರಣ ಹಾಗೂ ಜಾಗತೀಕರಣ ಜಾರಿಯಾದಾಗಿನಿಂದ ಸರ್ಕಾರಿ ವಲಯದಲ್ಲಿ ಉದ್ಯೋಗಗಳ ಸಂಖ್ಯೆ ಗಣನೀಯ ಕುಸಿತ ಕಂಡಿದೆ. ಅಲ್ಲದೆ, ಖಾಸಗಿ ಕ್ಷೇತ್ರದಲ್ಲಿ ಉದ್ಯೋಗಗಳು ಹೆಚ್ಚಾಗಿವೆ’ ಎಂದು ಹೇಳಿದರು.
‘1994ರಲ್ಲಿ ಶೇ1.53ರಷ್ಟಿದ್ದ ಸರ್ಕಾರಿ ಉದ್ಯೋಗ ಬೆಳವಣಿಗೆಯ ದರ, 2010ರಲ್ಲಿ ಶೇ –0.5ಕ್ಕೆ ಇಳಿದಿದೆ. ಅಂತೆಯೇ 1994ರಲ್ಲಿ ಖಾಸಗಿ ಕ್ಷೇತ್ರದಲ್ಲಿ ಶೇ 0.44ರಷ್ಟಿದ್ದ ಉದ್ಯೋಗ ಬೆಳವಣಿಗೆ ದರ 2010ರಲ್ಲಿ ಶೇ 1.75ರಷ್ಟು ಏರಿಕೆ ಕಂಡಿದೆ. ಈ ನಿಟ್ಟಿನಲ್ಲಿ ಸಾಮಾಜಿಕ ನ್ಯಾಯಕ್ಕೆ ಅನುಗುಣವಾಗಿ ದಲಿತ ಮತ್ತು ಹಿಂದುಳಿದವರಿಗೆ ಖಾಸಗಿ ಕ್ಷೇತ್ರದಲ್ಲೂ ಮೀಸಲಾತಿ ನೀಡಬೇಕು’ ಎಂದು ಒತ್ತಾಯಿಸಿದರು.
‘ಸಂಶೋಧನಾ ವಿದ್ಯಾರ್ಥಿ ರೋಹಿತ್ ಆತ್ಮಹತ್ಯೆಗೆ, ಹೈದರಾಬಾದ್ ವಿ.ವಿ.ಯ ದಲಿತ ವಿರೋಧಿ ನೀತಿ ಹಾಗೂ ಬಿಜೆಪಿ ಅಂಗಸಂಸ್ಥೆಯಾದ ಎಬಿವಿಪಿಯೇ ಕಾರಣ. ಈ ಸಂಬಂಧ ಕುಲಪತಿ ಮತ್ತು ಎಬಿವಿಪಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.