ಶುಕ್ರವಾರ, ನವೆಂಬರ್ 22, 2019
27 °C

ಖಾಸಗಿ ಟ್ಯಾಂಕರ್‌ಗಳ ನೀರಿಗೆ ಕಡಿವಾಣ

Published:
Updated:

ಬೆಂಗಳೂರು: ಬೇಸಿಗೆಯಲ್ಲಿ ನಗರದಲ್ಲಿ ನೀರಿನ ಸಮಸ್ಯೆ ಬಿಗಡಾಯಿಸಿದ್ದು ಕುಡಿಯುವ ನೀರು ಪೂರೈಕೆದಾರರು ನೀರಿನ ಬೆಲೆಯನ್ನು ಬೇಕಾಬಿಟ್ಟಿ ಏರಿಸಿರುವ ಹಿನ್ನೆಲೆಯಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ ನೀರು ಸರಬರಾಜು ಮಾಡುವ ಖಾಸಗಿ ಟ್ಯಾಂಕರ್‌ಗಳು ಹಾಗೂ ಟ್ರಾಕ್ಟರ್‌ಗಳಿಗೆ ಜಲಮಂಡಳಿ ಮೂಗುದಾರ ತೊಡಿಸಲು ಮುಂದಾಗಿದೆ.ಸಾರ್ವಜನಿಕರಿಗೆ ಕೈಗೆಟಕುವ ದರದಲ್ಲಿ ಕುಡಿವ ನೀರು ದೊರಕಬೇಕೆಂಬ ಉದ್ದೇಶದಿಂದ ಮಂಡಳಿ, ಈ ವಾಹನ ಉದ್ದಿಮೆ ಪರವಾನಗಿ ಸೇರಿದಂತೆ ಕೆಲವು ದಾಖಲೆಗಳನ್ನು ಕಡ್ಡಾಯವಾಗಿ ಹೊಂದಿರಬೇಕು ಎಂದು ಮಾರ್ಗಸೂಚಿ ಹೊರಡಿಸಿದೆ.ಟ್ಯಾಂಕರ್‌ಗಳು/ಟ್ರಾಕ್ಟರ್‌ಗಳು ಸಾರಿಗೆ ಇಲಾಖೆಯಿಂದ ನೋಂದಣಿ ಹಾಗೂ ಪರವಾನಗಿ ಹೊಂದಿರಬೇಕು. ವಾಣಿಜ್ಯ ಪರವಾನಗಿಯಲ್ಲಿ ಯಾವ ಮೂಲದಿಂದ ನೀರು ಪೂರೈಸಲಾಗುತ್ತದೆ ಎಂಬುದನ್ನು ನಮೂದಿಸಿರಬೇಕು. ಟ್ಯಾಂಕರ್ ಮೇಲೆ ಒಂದು ಲೋಡ್ ನೀರಿಗೆ ಪಡೆಯುವ ದರ ಪ್ರದರ್ಶಿಸಿರಬೇಕು. ಪೂರೈಕೆ ಮಾಡುವ ಪ್ರತಿ ಲೋಡ್ ನೀರಿಗೆ ಸಂಖ್ಯೆ ಹಾಗೂ ದಿನಾಂಕವುಳ್ಳ ರಶೀದಿ ಹೊಂದಿರಬೇಕು.ಪೂರೈಕೆ ಮಾಡುವ ನೀರು ಐಎಸ್‌ಐ ಮಾನದಂಡಕ್ಕೆ ಪೂರಕವಾಗಿರುವ ಬಗ್ಗೆ ಬಿಬಿಎಂಪಿಯಲ್ಲಿ ನೋಂದಣಿ ಆಗಿರುವ ಪ್ರಯೋಗಾಲಯದಲ್ಲಿ ಪರಿಶೀಲಿಸಿ ನೀಡಿದ ಪ್ರಮಾಣಪತ್ರ ಹೊಂದಿರಬೇಕು ಎಂದು ಮಾರ್ಗಸೂಚಿಯಲ್ಲಿ ಸೂಚಿಸಲಾಗಿದೆ. ನೀರು ಸರಬರಾಜು ಮಾಡುವ ಖಾಸಗಿ ಸಂಸ್ಥೆಗಳು ಪ್ರತಿ ತಿಂಗಳು ತಾವು ಪೂರೈಸುವ ನೀರಿನ ಟ್ಯಾಂಕರ್ ಸಂಖ್ಯೆ, ಯಾವ ದರಕ್ಕೆ ಮಾರಾಟ ಮಾಡಲಾಗಿದೆ ಹಾಗೂ ನೀರಿನ ಗುಣಮಟ್ಟ ಇತ್ಯಾದಿ ಅಂಕಿಅಂಶಗಳನ್ನು ಜಲಮಂಡಲಿಯ ಸಂಬಂಧಿಸಿದ ಕಾರ್ಯನಿರ್ವಾಹಕ ಎಂಜಿನಿಯರ್‌ಗಳಿಗೆ ಒದಗಿಸಬೇಕು ಎಂದು ತಿಳಿಸಲಾಗಿದೆ.ಕರ್ನಾಟಕ ಅಂತರ್ಜಲ ನಿರ್ವಹಣಾ ಕಾಯ್ದೆ 1999 ಹಾಗೂ 2011ರ ಪ್ರಕಾರ ಅಂತರ್ಜಲದ ಅತಿ ಬಳಕೆ ಮಾಡುವ ಮೂಲಕ ಸಾರ್ವಜನಿಕರಿಗೆ ಕುಡಿಯುವ ನೀರಿಗೆ ಸಮಸ್ಯೆ ಆಗುತ್ತಿರುವ ಬಗ್ಗೆ ದೂರು ಬಂದಲ್ಲಿ ಅಂತಹ ಕೊಳವೆಬಾವಿಗಳನ್ನು ಸ್ಥಗಿತಗೊಳಿಸುವ ಅವಕಾಶವೂ ಇದೆ ಎಂದು ಜಲಮಂಡಳಿ ಎಚ್ಚರಿಸಿದೆ.`ನಗರದಲ್ಲಿ 25,000 ಕ್ಕೂ ಅಧಿಕ ಖಾಸಗಿ ನೀರಿನ ಟ್ಯಾಂಕರ್‌ಗಳು ಇವೆ ಎಂದು ಅಂದಾಜಿಸಲಾಗಿದೆ. ಈ ಪೈಕಿ ಬಿಬಿಎಂಪಿಯಲ್ಲಿ ನೋಂದಣಿ ಮಾಡಿಕೊಂಡ ಟ್ಯಾಂಕರ್‌ಗಳು 1,000ಕ್ಕೂ ಕಡಿಮೆ. ನೀರಿನ ಸಮಸ್ಯೆ ಗಂಭೀರ ಸ್ವರೂಪ ತಾಳುತ್ತಿದ್ದಂತೆ ನೀರಿನ ಬೆಲೆಯೂ ಗಗನಕ್ಕೆ ಏರುತ್ತದೆ. ಮನಸ್ಸಿಗೆ ಬಂದ ಬೆಲೆಗೆ ನೀರನ್ನು ಮಾರಾಟ ಮಾಡಲಾಗುತ್ತಿದೆ. ಇಂತಹ ಪ್ರವೃತ್ತಿಗೆ ಕಡಿವಾಣ ಹಾಕಲು ಕಳೆದ ತಿಂಗಳು ನಡೆದ ಅಧಿಕಾರಿಗಳ ಸಭೆಯಲ್ಲಿ ಜಲಮಂಡಳಿ ಸಚಿವರು ಸೂಚನೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಈಗ ಮಾರ್ಗಸೂಚಿ ಹೊರಡಿಸಲಾಗಿದೆ' ಎಂದು ಜಲಮಂಡಳಿ ಅಧಿಕಾರಿಯೊಬ್ಬರು ತಿಳಿಸಿದರು.

ಅಕ್ರಮ ಸಂಪರ್ಕ: ದಂಡ

ಬೆಂಗಳೂರು:
ಅಕ್ರಮ ನೀರು, ಒಳಚರಂಡಿ ಸಂಪರ್ಕ ಪತ್ತೆಗೆ ಜಲಮಂಡಳಿ ನಡೆಸಿದ ಕಾರ್ಯಾಚರಣೆಯಲ್ಲಿ 71 ಸಂಪರ್ಕ ಕಡಿತ ಮಾಡಲಾಗಿದೆ. 81 ಕುಟುಂಬ ಗಳಿಗೆ ನೋಟಿಸ್ ನೀಡಿ ್ಙ 2.17 ಲಕ್ಷ ದಂಡ ವಸೂಲು ಮಾಡಲಾಗಿದೆ.ಹೊಸ ಗುಡ್ಡದಹಳ್ಳಿ, ಬಾಪೂಜಿನಗರ, ರಾಜಾಜಿನಗರ, ಮಹಾಲಕ್ಷ್ಮಿ ಲೇಔಟ್, ಚಾಮರಾಜ ಪೇಟೆ, ಜಗಜೀವನ್‌ರಾಮ್‌ನಗರ, ವಿ.ವಿ. ಪುರಂ, ಕುಮಾರಸ್ವಾಮಿ,  ಶ್ರೀನಿಧಿ ಹಾಗೂ ವಿಜಯಾ ಬ್ಯಾಂಕ್ ಬಡಾವಣೆ, ದೇವಗಿರಿಯಲ್ಲಿ ಕಾರ್ಯಾಚರಣೆ ನಡೆಸಲಾಗಿದೆ

ಪ್ರತಿಕ್ರಿಯಿಸಿ (+)