ಶುಕ್ರವಾರ, ಸೆಪ್ಟೆಂಬರ್ 20, 2019
25 °C

ಖಾಸಗಿ ಪಾಲಾಗಲಿರುವ ಹೆದ್ದಾರಿ ನಿರ್ವಹಣೆ

Published:
Updated:

ನವದೆಹಲಿ: ರಾಷ್ಟ್ರೀಯ ಹೆದ್ದಾರಿ ನಿರ್ವಹಣೆಯನ್ನು ಖಾಸಗಿ ಗುತ್ತಿಗೆದಾರರಿಗೆ ನೀಡಲು ಕೇಂದ್ರವು ಚಿಂತನೆ ನಡೆಸಿದ್ದು, ಇನ್ನು ಮುಂದೆ ಇದಕ್ಕೂ ಟೋಲ್ ಶುಲ್ಕ ಕೊಡಬೇಕಾಗಿ ಬರಬಹುದು.ರಾಷ್ಟ್ರೀಯ ಹೆದ್ದಾರಿಗಳ ನಿರ್ವಹಣೆಗೆ ನಿಧಿ ಸಂಗ್ರಹಿಸುವ ಉದ್ದೇಶದಿಂದ ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯ ಈ ನಿರ್ಧಾರಕ್ಕೆ ಬಂದಿದೆ.ಪ್ರಸ್ತುತ ಸುವರ್ಣ ಚತುಷ್ಪಥ ರಸ್ತೆಗಳಿಗೆ ಮಾತ್ರವೇ ಟೋಲ್ ಶುಲ್ಕ ವಿಧಿಸಲಾಗುತ್ತಿದೆ. ಆದರೆ ಸರ್ಕಾರದ ನೇರ ಧನಸಹಾಯದಿಂದ ನಿರ್ಮಿಸಿರುವ ರಾಷ್ಟ್ರೀಯ ಹೆದ್ದಾರಿಗಳಿಗೆ ಟೋಲ್ ಶುಲ್ಕವನ್ನು ಸಂಗ್ರಹಿಸುತ್ತಿಲ್ಲ.

ಸರಿಯಾಗಿ ನಿರ್ವಹಣೆ ಮಾಡದ ಕಾರಣ ಹೆದ್ದಾರಿಗಳು ಹದಗೆಟ್ಟಿವೆ ಎಂದು ಅನೇಕ ರಾಜ್ಯಗಳು ದೂರಿವೆ.ಮಧ್ಯಪ್ರದೇಶದ ಮುಖ್ಯಮಂತ್ರಿ ಇತ್ತೀಚೆಗೆ ಕೇಂದ್ರ ರಸ್ತೆ ಸಾರಿಗೆ ಸಚಿವರಿಗೆ ಪತ್ರ ಬರೆದು, ಹೆದ್ದಾರಿಗಳನ್ನು ಸರಿಯಾಗಿ ನಿರ್ವಹಿಸಲು ಆಗದಿದ್ದಲ್ಲಿ ಅದರ ಹೊಣೆಯನ್ನು ರಾಜ್ಯ ಸರ್ಕಾರಕ್ಕೆ ವಹಿಸಿ ಎಂದು ಕೋರಿದ್ದರು.ಅಲ್ಲದೆ ಪತ್ರದ ಜತೆ, ಶೋಚನೀಯ ಸ್ಥಿತಿಯಲ್ಲಿರುವ ಹೆದ್ದಾರಿಗಳ ಭಾವಚಿತ್ರವನ್ನೂ ಲಗತ್ತಿಸಿದ್ದರು. ಇದರಿಂದ ತೀವ್ರ ಮುಜುಗರಕ್ಕೀಡಾದ ಸಚಿವಾಲಯವು ಅನಿವಾರ್ಯವಾಗಿ ಹೆದ್ದಾರಿಗಳ ನಿರ್ವಹಣೆಯನ್ನು ಖಾಸಗಿ ಗುತ್ತಿಗೆದಾರರಿಗೆ ವಹಿಸಲು ಚಿಂತನೆ ನಡೆಸುತ್ತಿದೆ.

Post Comments (+)