ಖಾಸಗಿ ಬಸ್‌ನಿಲ್ದಾಣ ಜಂಜಡಗಳ ಜುನಾಗಡ

7

ಖಾಸಗಿ ಬಸ್‌ನಿಲ್ದಾಣ ಜಂಜಡಗಳ ಜುನಾಗಡ

Published:
Updated:
ಖಾಸಗಿ ಬಸ್‌ನಿಲ್ದಾಣ ಜಂಜಡಗಳ ಜುನಾಗಡ

ಸರ್ವ ಸಮಸ್ಯೆಗಳ ತಾಣ ಎಂಬುದಕ್ಕೆ ಅನ್ವರ್ಥದಂತಿದೆ ಮೈಸೂರಿನ ಖಾಸಗಿ ಬಸ್‌ನಿಲ್ದಾಣ. ಬಂಬೂಬಜಾರಿನ ಎಪಿಎಂಸಿ ಬಳಿ ಇರುವ ಮೂಲಸೌಕರ್ಯ ವಂಚಿತ ಈ ಬಸ್‌ಸ್ಟ್ಯಾಂಡ್ ದುಃಸ್ಥಿತಿಯನ್ನು ಅಲ್ಲಿನ ಪ್ರವೇಶದ್ವಾರ ದಲ್ಲೇ  ಪೊಲೀಸ್ ಇಲಾಖೆಯವರು ಹಾಕಿರುವ `ಪಂಚರಂಗಿ~ ಚಿತ್ರದ ಸಂಭಾಷಣೆ ಶೈಲಿಯಲ್ಲಿರುವ ನೀವುಗಳು ಬಸ್ಸುಗಳು... ಎಂಬ ಸೂಚನಾಫಲಕವೇ ಸಾರುತ್ತಿದೆ.ಬಸ್ಸುಗಳ ವೇಳಾಪಟ್ಟಿ ನಾಪತ್ತೆ, ಉಪಹಾರ ಗೃಹ ನಾಕಾಣೆ, ಗಂಡಸರಿಗೂ - ಹೆಂಗಸರಿಗೂ ಇರುವುದೊಂದೇ ಶೌಚಾಲಯ, ಎಲ್ಲೆಲ್ಲೂ ಕಸದ ಆಡಂಬರ, ಬೆಳಕು ಚೆಲ್ಲದ ವ್ಯರ್ಥ ದೀಪಗಳು, ಅಲ್ಲಲ್ಲಿ ಗುಂಡಿಗೊಟರುಗಳು, ಮಳೆ ಬಂದರೆ ಸೋರುವ ಮೇಲ್ಚಾವಣಿ, ಚರಂಡಿ ಅವ್ಯವಸ್ಥೆ, ಕಾಂಪೌಂಡ್ ಮಾಯ, ಪ್ರವೇಶದ್ವಾರದ್ಲ್ಲಲೇ ಇರುವ ಗುಂಡಿಗಳು, ಗಂಡಾಂತರದ ಸುತ್ತವೇ ಬಸ್ ಗಿರಕಿ, ಚರಂಡಿ ಅವ್ಯವಸ್ಥೆ, ಬಾಯಿ ತೆರೆದುಕೊಂಡಿರುವ ಎಲೆಕ್ಟ್ರಿಕ್ ಜಂಕ್ಷನ್ ಬಾಕ್ಸ್, ಎಲ್ಲೆಲ್ಲೂ ಗೂಡಂಗಡಿಗಳ ದರ್ಬಾರು... ಇತ್ಯಾದಿ ಇಲ್ಲಿನ ಸಮಸ್ಯೆಗಳ ಸಾಕ್ಷಾತ್‌ದರ್ಶನ.ಮಹಾನಗರ ವ್ಯಾಪ್ತಿಗೊಳಪಡುವ ಈ ನಿಲ್ದಾಣದಲ್ಲಿ ಸೌಲಭ್ಯಗಳ ಕೊರತೆಯಿಂದಾಗಿ ಪ್ರಯಾಣಿಕರು ನರಕಯಾತನೆ ಅನುಭವಿಸುವಂತಾಗಿದೆ. ಎಂಟು ವರ್ಷಗಳ ಹಿಂದೆ ನಿರ್ಮಾಣವಾದ ಈ ನಿಲ್ದಾಣದಿಂದ ಮೈಸೂರಿನ ಸುತ್ತಲಿನ ವಿವಿಧ ಸ್ಥಳಗಳಿಗೆ ನಿತ್ಯ 100 ಕ್ಕೂ ಹೆಚ್ಚು ಬಸ್ಸುಗಳು ಸಂಚರಿಸುತ್ತವೆ. ಆದರೆ ಇಲ್ಲಿನ ಜಂಜಡಗಳನ್ನು ಮಾತ್ರ ಕೇಳುವವರೇ ಇಲ್ಲದಂತಾಗಿದೆ. ಇಡೀ ನಿಲ್ದಾಣದಲ್ಲಿ ಒಂದು ಕಡೆಯೂ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿಲ್ಲ. ಅಷ್ಟೇ ಏಕೆ ಇಲ್ಲಿ ಪುರುಷರಿಗೂ ಮಹಿಳೆಯರಿಗೂ ಒಂದೇ ಶೌಚಾಲಯ, ಅದಕ್ಕೂ ನಾಮಫಲಕ ಇಲ್ಲ, ಇಲ್ಲಿಯೂ ನೀರಿನ ಸಮಸ್ಯೆ ತಾಂಡವವಾಡುತ್ತಿದೆ. ಇನ್ನು ನಿಲ್ದಾಣದ ಆವರಣದ ನಾಲ್ಕೂ ಮೂಲೆಗಳಲ್ಲಿ ಕೊಳಕು ನೀರಿನದ್ದೇ ಕಾರುಬಾರು, ಚರಂಡಿ ರಾಡಿ ಹೇಳತೀರದು. ಕುಳಿತುಕೊಳ್ಳಲು ಇರುವ ಆಸನಗಳಲ್ಲಿ ಪವಡಿಸಿರುವ `ವೇಸ್ಟ್‌ಬಾಡಿಗಳು~ ಎಬ್ಬಿಸಿದರೆ ಗುರ್ ಎನ್ನುತ್ತಾರೆ. ಅಭದ್ರತೆ     ಇಲ್ಲಿನ ಕಾವಲುಗಾರ. ಇನ್ನು ಗಂಟಲು ಹರಿದುಕೊಳ್ಳುವಷ್ಟರಮಟ್ಟಿನ  ನಿರ್ವಾಹಕರ ಚೀರಾಟ, ಚಾಲಕರ ಹಾರ್ನ್ ಕಿರಿ ಕಿರಿ, ಇಷ್ಟ್ಲ್ಲೆಲ ತೊಡರು ದಾಟಿ  ಬಸ್ ಏರಿದಾಗ ಪ್ರಯಾಣಿಕರ ಕಿವಿಗೆ `ಏನಾಗಲಿ... ಮುಂದೆ       ಸಾಗು ನೀ ಬಯಸಿದ್ದೆಲ್ಲಾ ಸಿಗದು ಬಾಳಲಿ... ಎಂಬ `ಎಫ್‌ಎಂ~ ಗುನುಗು.  ರಾತ್ರಿ ವೇಳೆ ಇಲ್ಲಿಗೆ ಬರುವ ವೃದ್ಧರು, ಮಹಿಳಾ ಪ್ರಯಾಣಿಕರನ್ನು ಆ ದೇವರೇ ಕಾಪಾ ಡಬೇಕು ಎಂಬಂತಿದೆ ಇಲ್ಲಿನ ರಕ್ಷಣೆ ಸ್ಥಿತಿ.ಏಕೆಂದರೆ ಈ ನಿಲ್ದಾಣದಲ್ಲಿ ಅಳವಡಿಸಿರುವ ದೀಪಗಳು ಬೆಳಕು ಬೀರುವುದಿಲ್ಲ. ಇನ್ನು ನಿನಗೆ ನೀನೇ ರಕ್ಷಕ ಎನ್ನುವ ಹಾಗಿದೆ ಇಲ್ಲಿನ ಭದ್ರತಾ ವ್ಯವಸ್ಥೆ. ಪ್ರಯಾಣಿಕರಿಗೆ ಕುಳಿತುಕೊಳ್ಳಲು ಸೂಕ್ತ ವ್ಯವಸ್ಥೆ ಇಲ್ಲ.  ಪ್ರಯಾಣಿಕರು ಹಸಿವು ತೀರಿಸಿಕೊಳ್ಳಲು ಇಡೀ ನಿಲ್ದಾಣದಲ್ಲಿ ಒಂದೇ ಒಂದು ಉಪಹಾರಗೃಹ ಇಲ್ಲ. ಕಾಫಿ., ಚಹಾ, ತಿಂಡಿಗೆ ಗಾಡಿ, ಗೂಡಂಡಿಗಳೇ ಎಲ್ಲ. ಅಲ್ಲಿಯೂ ಸ್ವಚ್ಛತೆ ಇಲ್ಲ. ಇನ್ನು ನಿಲ್ದಾಣದಲ್ಲಿರುವ ಮಳಿಗೆಗಳು ವ್ಯರ್ಥ ಮಹಾಮನೆಗಳಾಗಿವೆ. ನಿಲ್ದಾಣದಲ್ಲಿನ ಎಲೆಕ್ಟ್ರಿಕ್ ಜಂಕ್ಷನ್ ಬಾಕ್ಸ್ ಬಾಯಿ ತೆರೆದುಕೊಂಡಿದ್ದು ಅಪಾಯ ಆಹ್ವಾನಿಸುವಂತಿದೆ. ಹೀಗೆ ಪಟ್ಟಿ ಮಾಡುತ್ತಾ ಹೋದರೆ ಸಮಸ್ಯೆಗಳ ಸರಮಾಲೆ ಬೆಳೆಯುತ್ತಲೇ ಹೋಗುತ್ತದೆ.ಏನೀ ಸಮಸ್ಯೆಗಳ ಹಿಂದಿನ ಸತ್ಯ ಎಂದು ತಿಳಿಯಲು ಮೇಯರ್‌ಗೆ ಫೋನಾಯಿಸಿದರೆ ಅವರು ಸದಾ ಬ್ಯುಸಿ...ನಾಡಹಬ್ಬ ದಸರಾಕ್ಕೆ ದಿನಗಣನೆ ಶುರುವಾಗಿದ್ದು, ಪಾರಂಪರಿಕ ನಗರಿಯಲ್ಲಿ ಇದೀಗ ಎಲ್ಲೆಲ್ಲೂ ಪ್ಯಾಚ್‌ವರ್ಕ್ ಬಿಸಿ, ಸಿದ್ಧತೆಗಳ ಭರಾಟೆ, ನಗರಶೃಂಗಾರ ಕಾರ್ಯಗಳು ಭರದಿಂದ ಸಾಗಿವೆ. ಇದೇ ಬಿಸಿಯಲ್ಲಿ ಪಾಲಿಕೆಯವರು ಇತ್ತ ಗಮನ ಹರಿಸಿ ಸಾಂಸ್ಕೃತಿಕ ನಗರಿಗೆ ಪ್ರವಾಸಿಗರು, ಪ್ರಯಾಣಿಕರನ್ನು ಹೊತ್ತುತರುವ ಖಾಸಗಿ ಬಸ್ಸುಗಳ ಸಂಗಮಕೇಂದ್ರಕ್ಕೆ ಕಾಯಕಲ್ಪ ಕಲ್ಪಿಸಲು ಕ್ರಮಕೈಗೊಳ್ಳಲಿ ಎಂಬುದು ಎಲ್ಲರ ಆಶಯ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry