ಶನಿವಾರ, ಮೇ 15, 2021
24 °C

ಖಾಸಗಿ ಬಸ್ ಸಂಚಾರಕ್ಕೆ ತಡೆಯೊಡ್ಡಲು ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಗಲಕೋಟೆ: ಜಿಲ್ಲೆಯಲ್ಲಿ ಅನಧಿಕೃತವಾಗಿ ಸಂಚರಿಸುತ್ತಿರುವ ಖಾಸಗಿ ವಾಹನಗಳ ಸಂಚಾರಕ್ಕೆ ತಡೆಯೊಡ್ಡಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನೌಕರರ ಸಂಘದ ಜಿಲ್ಲಾ ಘಟಕದ ಪದಾಧಿಕಾರಿಗಳು ಬುಧವಾರ ಪ್ರತಿಭಟನೆ ನಡೆಸಿದರು.ನವನಗರದ ಕೆಎಸ್‌ಆರ್‌ಟಿಸಿ ವಿಭಾಗೀಯ ಕಚೇರಿಯಿಂದ ಜಿಲ್ಲಾಡಳಿತ ಭವನದವರೆಗೆ ಪ್ರತಿಭಟನಾ ಜಾಥಾ ನಡೆಸಿದ ಸಾರಿಗೆ ನೌಕರರು, ಸಾರಿಗೆ ಪ್ರಾಧಿಕಾರದ ಷರತ್ತು ಉಲ್ಲಂಘಿಸಿ ಜಿಲ್ಲೆಯಲ್ಲಿ ಖಾಸಗಿ ವಾಹನಗಳು ಸಂಚಾರಿಸುತ್ತಿರುವುದರಿಂದ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ ಕೋಟ್ಯಾಂತರ ರೂಪಾಯಿ ನಷ್ಟ ಸಂಭವಿಸುವಂತಾಗಿದೆ ಎಂದು ದೂರಿದರು.ಬಾಗಲಕೋಟೆಯಿಂದ ಹುಬ್ಬಳ್ಳಿ, ವಿಜಾಪುರ ಹಾಗೂ ಬಾದಾಮಿ, ಇಳಕಲ್, ಗುಳೇದಗುಡ್ಡ ಮತ್ತು ಜಮಖಂಡಿಯಿಂದ ಹುಬ್ಬಳ್ಳಿಗೆ ನಿತ್ಯ ಖಾಸಗಿ ಬಸ್‌ಗಳು ಅನಧಿಕೃತವಾಗಿ ಸಂಚರಿಸುತ್ತಿರುವುದರಿಂದ ವಾಯವ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್‌ಗಳಿಗೆ ನಷ್ಟವಾಗುತ್ತಿದೆ ಎಂದರು.ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ 500 ಮೀಟರ್ ಸುತ್ತಳತೆಯಲ್ಲಿ ಖಾಸಗಿ ಬಸ್ ಮತ್ತು ಇತರೆ ವಾಹನಗಳನ್ನು ನಿಲ್ಲಿಸಲು ಅವಕಾಶವಿಲ್ಲದಿದ್ದರೂ ಎಸ್‌ಆರ್‌ಎಸ್, ರಾಣಿ ಚೆನ್ನಮ್ಮ ಬಸ್ ಮತ್ತು ಖಾಸಗಿ ಮಿನಿಬಸ್, ಟೆಂಪೊ, ಮ್ಯಾಕ್ಸಿಕ್ಯಾಬ್, ಟಂಟಂಗಳನ್ನು  ರಾಜಾರೋಷವಾಗಿ ನಿಲ್ಲಿಸಿ ಪ್ರಯಾಣಿಕರನ್ನು ಹತ್ತಿಸಿಕೊಂಡು ಹೋಗುತ್ತಿದ್ದರೂ ಸಾರಿಗೆ ಅಧಿಕಾರಿಗಳು ಇತ್ತಕಡೆ ಗಮನಹರಿಸುತ್ತಿಲ್ಲ ಎಂದು ದೂರಿದರು.`ಖಾಸಗಿ ವಾಹನಗಳ ಅನಧಿಕೃತ ಸಂಚಾರದಿಂದಾಗಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ ನಷ್ಟವಾಗುತ್ತಿದೆ. ಹೀಗಾಗಿ ಸಂಸ್ಥೆಯ ನೌಕರರಿಗೆ ಮಾಸಿಕ ಸಂಬಳ ನೀಡಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ. ಸಂಸ್ಥೆಯ ನಿವೃತ್ತ ನೌಕರರಿಗೆ ಪಿಂಚಣಿ ಮತ್ತಿತರರ ಸೌಲಭ್ಯ ಸರಿಯಾಗಿ ನೀಡಲಾಗುತ್ತಿಲ್ಲ. ತಕ್ಷಣ ಸಂಬಂಧಪಟ್ಟ ಅಧಿಕಾರಿಗಳು ರಾಷ್ಟ್ರೀಕೃತ ವಲಯದಲ್ಲಿ ಅನಧಿಕೃತವಾಗಿ ಸಂಚರಿಸುತ್ತಿರುವ ಖಾಸಗಿ ಬಸ್ ಮತ್ತು ವಾಹನಗಳು ಪ್ರಯಾಣಿಕರನ್ನು ಹತ್ತಿಸಿಕೊಂಡು ಹೋಗುವುದಕ್ಕೆ ತಡೆಯೊಡ್ಡಬೇಕು' ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಎಸ್. ಕೊಡಬಾಗಿ, ಪ್ರಧಾನ ಕಾರ್ಯದರ್ಶಿ ಬಿ.ವಿ. ಕುಲಕರ್ಣಿ, ಖಜಾಂಚಿ ಕೆ.ಎಂ. ಗೊಲಂದಾಜ, ಎಸ್. ಜಿ. ಬೋವಿ, ವಿನೋದ ಜಹಾಗೀರದಾರ, ಶ್ರೀಕಾಂತ್, ಯಾಶೀನ್ ಮುಲ್ಲಾ, ಪುಷ್ಪಾ ಕಳಸ, ಬಿ.ಬಿ. ಬಂಗಾರಿ, ಅತಾಲಟ್ಟಿ ಹಾಗೂ ಇಳಕಲ್, ಬಾದಾಮಿ, ಗುಳೇದಗುಡ್ಡ, ಬೀಳಗಿ, ಜಮಖಂಡಿ, ಮುಧೋಳ, ಬಾಗಲಕೋಟೆ ಡಿಪೋದ ನೂರಾರು ಸಿಬ್ಬಂದಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.