ಗುರುವಾರ , ನವೆಂಬರ್ 21, 2019
26 °C
ಶಿಕ್ಷಣ ಸಾಲ ನೀಡಲು ಹಿಂದೇಟು

ಖಾಸಗಿ ಬ್ಯಾಂಕ್‌ಗೆ ಆರ್‌ಬಿಐ ತರಾಟೆ

Published:
Updated:

ಮುಂಬೈ(ಪಿಟಿಐ): ಶಿಕ್ಷಣ ಸಾಲ ನೀಡಲು ಆಸಕ್ತಿ ತೋರದ ಖಾಸಗಿ ಬ್ಯಾಂಕ್‌ಗಳು ತಮ್ಮ ನಡವಳಿಕೆಯನ್ನು ಸಮಾಜದ ಹಿತದೃಷ್ಟಿಯಿಂದ ಬದಲಿಸಿಕೊಳ್ಳಬೇಕು ಎಂದು ಭಾರತೀಯ ರಿಸರ್ವ್ ಬ್ಯಾಂಕ್(ಆರ್‌ಬಿಐ) ಡೆಪ್ಯುಟಿ ಗವರ್ನರ್ ಕೆ.ಸಿ.ಚಕ್ರವರ್ತಿ ಹೇಳಿದರು.ಇಲ್ಲಿ ಮಂಗಳವಾರ `ಸಾಮಾಜಿಕ-ಪರಿಸರ ಸುಸ್ಥಿರತೆ' ಕುರಿತ ವಿಚಾರಸಂಕಿರಣದಲ್ಲಿ ಮಾತನಾಡಿದ ಅವರು, ಈವರೆಗೆ ವಿತರಣೆ ಆಗಿರುವ ಶಿಕ್ಷಣ ಸಾಲದಲ್ಲಿ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳ ಪಾಲೇ ಶೇ 96ರಷ್ಟಿದೆ.  ವಿದ್ಯಾರ್ಥಿಗಳಿಗೆ ವ್ಯಾಸಂಗಕ್ಕಾಗಿ ಆರ್ಥಿಕ ನೆರವು ನೀಡುವಲ್ಲಿ ಖಾಸಗಿ ಬ್ಯಾಂಕ್‌ಗಳು ನಿರಾಸಕ್ತಿ ತೋರಿಸುತ್ತಿವೆ ಎಂಬುದನ್ನು ಈ ಅಂಕಿ-ಅಂಶವೇ ಎತ್ತಿ ತೋರಿಸುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು.ವಿದ್ಯಾರ್ಥಿಗಳು ಶಿಕ್ಷಣ ಸಾಲ ಕೋರಿದರೆ ಬಹುತೇಕ ಖಾಸಗಿ ಬ್ಯಾಂಕ್‌ಗಳೆಲ್ಲವೂ `ಇಲ್ಲ' ಎಂದೇ ವಾಪಸ್ ಕಳುಹಿಸುತ್ತಿವೆ. ಇದು ತಂತ್ರಜ್ಞಾನ ಅಥವಾ ಸಾಲ ವಿತರಣೆ   ಕೌಶಲದ  ಕೊರತೆಯ ವಿಚಾರವಲ್ಲ. ಖಾಸಗಿ ಬ್ಯಾಂಕ್‌ಗಳ ನಡವಳಿಕೆಯಲ್ಲಿಯೇ ದೊಡ್ಡ ಸಮಸ್ಯೆ ಇದೆ ಎಂಬುದಕ್ಕೆ ಸಾಕ್ಷಿ ಎಂದು ಅಭಿಪ್ರಾಯಪಟ್ಟರು.ತಾಂತ್ರಿಕ, ವೈದ್ಯಕೀಯ ಮತ್ತು ಉನ್ನತ ಶಿಕ್ಷಣ ಬಯಸುವ ವಿದ್ಯಾರ್ಥಿಗಳಿಗೆ ಸಾಲ ನೀಡುವುದಿಲ್ಲ ಎನ್ನುವುದಾದರೆ ಅಂತಹ ಸಮಾಜದಲ್ಲಿ ಯಾವ ಬಗೆಯ ಸಾಮಾಜಿಕ ಸ್ವಾಸ್ಥ್ಯ ಮತ್ತು ಪರಿಸರ ಸ್ಥಿರತೆ ಇರುತ್ತದೆ. ಬರಿಯದೇ ಮಾತನಾಡುವುದರಲ್ಲಿ ಅರ್ಥವೇನಿದೆ ಎಂದು ಚಕ್ರವರ್ತಿ ಕಿಡಿಕಾರಿದರು.ಈ ವಿಚಾರದಲ್ಲಿ `ಆರ್‌ಬಿಐ' ಬಹಳ ಗಂಭೀರವಾಗಿದೆ. ಅದರ ಮಾರ್ಗಸೂಚಿಯಂತೆ ಆದ್ಯತಾ ವಲಯಗಳಿಗೆ ಖಾಸಗಿ ಬ್ಯಾಂಕ್‌ಗಳೂ ಸಾಲ ವಿತರಿಸಬೇಕಿದೆ ಎಂದು ಹೇಳಿದರು.

ಪ್ರತಿಕ್ರಿಯಿಸಿ (+)