ಖಾಸಗಿ ಮಿಲ್‌ಗೆ ಪಂಜಾಬ್‌ನಿಂದ ಬಂದ ಅಕ್ಕಿ ರವಾನೆ!

7
ಹಾಸನದ ಗುರು ನ್ಯೂಟೆಕ್ ಮಿಲ್‌ನಿಂದ 15 ದಿನಗಳ ಹಿಂದೆ 305 ಕ್ವಿಂಟಾಲ್ ಅಕ್ಕಿ ವಶ: ರಾಜಕೀಯ ಒತ್ತಡ ಆರಂಭ

ಖಾಸಗಿ ಮಿಲ್‌ಗೆ ಪಂಜಾಬ್‌ನಿಂದ ಬಂದ ಅಕ್ಕಿ ರವಾನೆ!

Published:
Updated:

ಹಾಸನ: ನಗರದ ಗುರು ನ್ಯೂಟೆಕ್ ರೈಸ್ ಮಿಲ್‌ನಿಂದ ಪೊಲೀಸರು ಕಳೆದ ಆಗಸ್ಟ್ 15ರಂದು ವಶಪಡಿಸಿಕೊಂಡಿದ್ದ 305 ಕ್ವಿಂಟಲ್ ಅಕ್ಕಿ ಪಂಜಾಬ್‌ನಿಂದ ಫುಡ್ ಕಾರ್ಪೊರೇಷನ್ ಗೋದಾಮಿಗೆ ಬಂದು, ಅಲ್ಲಿಂದ ಮಿಲ್‌ಗೆ ರವಾನೆಯಾಗಿದೆ ಎಂಬುದು ಅಧಿಕಾರಿಗಳು ನಡೆಸಿದ ತನಿಖೆಯಿಂದ ತಿಳಿದುಬಂದಿದೆ ಎಂದುವಿಶ್ವಸನೀಯ ಮೂಲಗಳು ತಿಳಿಸಿವೆ.ತನಿಖೆಯ ಭಾಗವಾಗಿದ್ದು, ಹೆಸರು ತಿಳಿಸಲು ಇಚ್ಛಿಸದ ಅಧಿಕಾರಿಯೊಬ್ಬರು ಪತ್ರಿಕೆಗೆ ಈ ಮಾಹಿತಿ ನೀಡಿದ್ದಾರೆ. ಪಂಜಾಬ್ ಸರ್ಕಾರ ರಾಜ್ಯದ ಅಕ್ಕಿ ಮಿಲ್‌ಗಳಿಂದ ಲೆವಿ ರೂಪದಲ್ಲಿ ಸಂಗ್ರಹಿಸಿದ್ದ ಅಕ್ಕಿಯನ್ನು ಪಡಿತರ ವ್ಯವಸ್ಥೆ ಮೂಲಕ ಹಂಚುವ ಉದ್ದೇಶದಿಂದ ಫುಡ್ ಕಾರ್ಪೊರೇಶನ್ ಆಫ್ ಇಂಡಿಯಾದ ಹಾಸನ ಗೋದಾಮಿಗೆ ಕಳುಹಿಸಲಾಗಿತ್ತು. ಅಲ್ಲಿಂದ ಅಕ್ಕಿ ಖಾಸಗಿ ಗೋದಾಮಿಗೆ ಬಂದಿದೆ. ಅಕ್ಕಿಯ ಚೀಲಗಳಲ್ಲಿ ಪಂಜಾಬ್ ಸರ್ಕಾರದ ಲೇಬಲ್‌ಗಳು ಸಿಕ್ಕಿದ್ದು, ಅಕ್ಕಿ ಅಲ್ಲಿಂದ ಬಂದಿರುವುದು ಖಚಿತ ಎಂದು ಅಧಿಕಾರಿ ತಿಳಿಸಿದ್ದಾರೆ.ಮಾಲೀಕರಿಂದ ನಿರಾಕರಣೆ

ಆಗಸ್ಟ್ 15ರಂದು ಮಿಲ್ ಮೇಲೆ ದಾಳಿ ನಡೆಸಿದ ಆಹಾರ ಇಲಾಖೆ ಅಧಿಕಾರಿಗಳು ಅಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ 305 ಕ್ವಿಂಟಲ್ ಹಾಗೂ 40 ಕಿಲೋ ಅಕ್ಕಿಯನ್ನು ವಶಪಡಿಸಿಕೊಂಡು ಮಾಲೀಕ ಕೃಷ್ಣ ಎಂಬುವವರನ್ನು ಬಂಧಿಸಿದ್ದರು.  ಪ್ರಕರಣದ ಬಗ್ಗೆ ಆಹಾರ ಇಲಾಖೆ, ಪೊಲೀಸ್ ಇಲಾಖೆ ಹಾಗೂ ಜಿಲ್ಲಾಡಳಿತ ಹೀಗೆ ಮೂರೂ ಕಡೆಗಳಿಂದ ತನಿಖೆ ನಡೆಯುತ್ತಿದ್ದು, ಪ್ರಕರಣದ ಆಳ-ಅಗಲ ತಿಳಿಯಲು ಒಬ್ಬರು ಇನ್ನೊಬ್ಬರನ್ನು ಅವಲಂಬಿಸುವಂತಾಗಿದೆ.ಪೊಲೀಸರು ಮಾಲೀಕರ ವಿಚಾರಣೆ ನಡೆಸುತ್ತಿದ್ದು, ಅವರು `ಅಕ್ಕಿ ನನಗೆ ಸೇರಿದ್ದಲ್ಲ' ಎಂದು ವಾದಿಸುತ್ತಿದ್ದಾರೆ. ಇಲಾಖೆಯಿಂದ ಸರಿಯಾದ ವರದಿ ಬರುವವರೆಗೆ ಪೊಲೀಸರೂ ಮುಂದೆ ಹೆಜ್ಜೆ ಇಡಲು ಸಾಧ್ಯವಾಗದಂತಾಗಿದೆ.ಇತ್ತ ಜಿಲ್ಲಾಡಳಿತ ಅಕ್ಕಿಯ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಿದ್ದು, ವರದಿ ಬಂದ ಬಳಿಕ ಕ್ರಮ ಕೈಗೊಳ್ಳಲಾಗುವುದು ಎಂದಿದೆ. ಈಚೆಗೆ ಪತ್ರಕರ್ತರೊಡನೆ ಮಾತನಾಡುತ್ತ ಜಿಲ್ಲಾಧಿಕಾರಿ ಈ ಹೇಳಿಕೆ ನೀಡಿದ್ದರು. ಅದರೆ ತನಿಖಾಧಿಕಾರಿಗಳು ಮಾತ್ರ `ಪ್ರಯೋಗಾಲಯದ ವರದಿ ತನಿಖೆ ಮೇಲೆ ಯಾವುದೇ ಪರಿಣಾಮ ಉಂಟು ಮಾಡಲಾರದು' ಎಂದು ವಾದಿಸುತ್ತಿದ್ದಾರೆ. `ಪ್ರಯೋಗಾಲಯದಲ್ಲಿ ಅಕ್ಕಿಯ ಗುಣಮಟ್ಟ ತಿಳಿಯಬಹುದೇ ವಿನಾ ಎಲ್ಲಿಂದ ಬಂದಿದೆ, ಪಡಿತರ ಅಕ್ಕಿಯೇ  ಅಥವಾ ಅಲ್ಲವೇ ಎಂದು ತಿಳಿಯಲು ಸಾಧ್ಯವಿಲ್ಲ' ಎಂದು ಅವರು ನುಡಿಯುತ್ತಾರೆ.ಪ್ರಕರಣ ಗಮನಿಸಿದರೆ, `ಇಲಾಖೆಯ ಸಿಬ್ಬಂದಿಯ ಕೈವಾಡ ಇಲ್ಲದೆ ಅಕ್ಕಿ ಖಾಸಗಿ ಗೋದಾಮಿಗೆ ಹೋಗಲು ಸಾಧ್ಯವೇ ಇಲ್ಲ' ಎಂದು ಅಧಿಕಾರಿ ನುಡಿಯುತ್ತಾರೆ.ಪರವಾನಿಗೆ ಇಲ್ಲ

ಗುರು ನ್ಯೂಟೆಕ್ ರೈಸ್ ಮಿಲ್ ರೈತರಿಂದ ಬತ್ತ ಖರೀದಿಸಿ, ಅಕ್ಕಿ ಮಾಡಿ ಮಾರಾಟ ಮಾಡಬೇಕು. ನೇರವಾಗಿ ಅಕ್ಕಿಯನ್ನು ಖರೀದಿಸಿ ಮಾರಾಟ ಮಾಡಲು ಈ ಸಂಸ್ಥೆಗೆ ಪರವಾನಿಗೆ ಇಲ್ಲ. ಹೀಗಿದ್ದರೂ ಅಕ್ಕಿ ಅವರ ಗೋದಾಮಿಗೆ ಹೋಗಬೇಕಾದರೆ ಇಲಾಖೆಯ ಕೈವಾಡ ಇರಲೇ ಬೇಕು. ಇಲ್ಲಿ ಕಡಿಮೆ ದರದ ಅಕ್ಕಿಯನ್ನು ಪಾಲಿಶ್ ಮಾಡಿ ದುಪ್ಪಟ್ಟು ಬೆಲೆಗೆ ಮಾರಾಟ ಮಾಡುವ ಉದ್ದೇಶ ಮಾಲೀಕರಿಗೆ ಇದ್ದಂತೆ ಮೇಲ್ನೋಟಕ್ಕೆ ಗೋಚರಿಸುತ್ತಿದೆ ಎಂದು ಅಧಿಕಾರಿಗಳು ವಾದಿಸುತ್ತಾರೆ.ರಾಜಕೀಯ ಒತ್ತಡ

ಒಂದೆಡೆ ಅಧಿಕಾರಿಗಳು ಇಷ್ಟೆಲ್ಲ ಮಾಹಿತಿ ಸಂಗ್ರಹಿಸುತ್ತಿದ್ದರೆ ಆರೋಪಿಯನ್ನು ಪಾರು ಮಾಡಲು ರಾಜಕೀಯ ಒತ್ತಡಗಳೂ ಬರಲು ಆರಂಭವಾಗಿದೆ. ಈ ಬಗ್ಗೆ ತನಿಖಾಧಿಕಾರಿಗಳು ಬೇಸರ ವ್ಯಕ್ತಪಡಿಸುತ್ತಿದ್ದಾರೆ.ಪ್ರಕರಣದಲ್ಲಿ ಆರೋಪಿಗೆ ಶಿಕ್ಷೆಯಾಗುವುದು ಬಿಡುವುದು ಬೇರೆ ವಿಚಾರವಾಗಿದ್ದರೂ ಜಿಲ್ಲೆಯ ಇಡೀ ಪಡಿತರ ವ್ಯವಸ್ಥೆ ಬಗ್ಗೆ ಹಲವು ಪ್ರಶ್ನೆಗಳು ಏಳುವಂತಾಗಿದೆ. ಅನ್ನಭಾಗ್ಯ ಯೋಜನೆ ಜಿಲ್ಲೆಯಲ್ಲಿ ಸಮರ್ಪಕವಾಗಿ ಜಾರಿಯಾಗಿದೆ, ಅಕ್ಕಿ ಲಭ್ಯವಾಗಿಲ್ಲ ಎಂದು ಒಂದೇ ಒಂದು ದೂರೂ ಬಂದಿಲ್ಲ ಎಂದು ಜಿಲ್ಲಾಡಳಿತ ಎಲ್ಲ ಕಡೆಗೂ ಹೇಳಿಕೊಂಡಿದೆ.305 ಕ್ವಿಂಟಲ್ ಪಡಿತರ ಅಕ್ಕಿ ಖಾಸಗಿ ಗೋದಾಮಿಗೆ ಹೋಗಿದ್ದರೂ ಎಲ್ಲ ಕಾರ್ಡುದಾರರಿಗೆ ಅಕ್ಕಿ ನೀಡಲು ಸಾಧ್ಯವಾದದ್ದು ಹೇಗೆ? ಸರ್ಕಾರಕ್ಕೆ ಜಿಲ್ಲಾಡಳಿತ ಸುಳ್ಳು ಮಾಹಿತಿ ನೀಡಿ ಹೆಚ್ಚು ಅಕ್ಕಿ ಪಡೆದುಕೊಂಡಿತ್ತೇ? ಅಥವಾ ಜಿಲ್ಲೆಯಲ್ಲಿ ಅಷ್ಟು ದೊಡ್ಡ ಪ್ರಮಾಣದಲ್ಲಿ ಬೋಗಸ್ ಬಿಪಿಎಲ್ ಕಾರ್ಡುಗಳು ವಿತರಣೆಯಾಗಿವೆಯೇ? ಲೆಕ್ಕಾಚಾರವನ್ನು ತಾಳೆ ಮಾಡುವ ಹೊಣೆ ಈಗ ಜಿಲ್ಲಾಡಳಿತದ ಮೇಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry