ಬುಧವಾರ, ಮಾರ್ಚ್ 3, 2021
22 °C
ಬಹುಜನ ವಿದ್ಯಾರ್ಥಿ ಸಂಘದ ಕಾರ್ಯಕರ್ತರಿಂದ ಜಿಲ್ಲಾಧಿಕಾರಿಗೆ ಮನವಿ

ಖಾಸಗಿ ವಲಯದಲ್ಲಿ ಮೀಸಲಾತಿಗೆ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಖಾಸಗಿ ವಲಯದಲ್ಲಿ ಮೀಸಲಾತಿಗೆ ಒತ್ತಾಯ

ಬೆಳಗಾವಿ: ಖಾಸಗಿ ವಲಯದಲ್ಲಿ ಮೀಸಲಾತಿ ಕಲ್ಪಿಸುವಂತೆ ಒತ್ತಾಯಿಸಿ ಬಹುಜನ ವಿದ್ಯಾರ್ಥಿ ಸಂಘದ (ಬಿ.ವಿ.ಎಸ್) ಕಾರ್ಯಕರ್ತರು ನಗರ ದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು. ಚನ್ನಮ್ಮ ವೃತ್ತದಿಂದ ಮೆರವಣಿಗೆಯಲ್ಲಿ ಬಂದ ಬಿ.ವಿ.ಎಸ್ ಕಾರ್ಯಕರ್ತರು, ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿದರು. ಕೇಂದ್ರ ಹಾಗೂ ರಾಜ್ಯ ಸರ್ಕಾರ ದಲಿತ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಘೋಷಣೆಗಳನ್ನು ಕೂಗಿದರು.ಜಿಲ್ಲಾಧಿಕಾರಿ ಎನ್‌. ಜಯರಾಮ್‌ ಅವರಿಗೆ ಮನವಿ ಸಲ್ಲಿಸಿದ ಬಿ.ವಿ.ಎಸ್‌ ಜಿಲ್ಲಾ ಘಟಕದ ಅಧ್ಯಕ್ಷ ವಿಕ್ರಮ ಕರ್ನಿಂಗ್‌, ‘ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ ಚಿನ್ನಪ್ಪರೆಡ್ಡಿ ಅವರು ‘ಮೀಸಲಾತಿ ಭಿಕ್ಷೆ ಅಲ್ಲ; ಅದು ಸಮಾನತೆಯ ಸಾಧನ’ ಎಂದು ತೀರ್ಪು ನೀಡಿದ್ದರು. ಸಾವಿರಾರು ವರ್ಷಗಳಿಂದ ಸಾರ್ವಜನಿಕ ವಲಯಗಳಲ್ಲಿ ಪ್ರಾತಿನಿ ಧ್ಯವೇ ಇಲ್ಲದ ಸಾಮಾಜಿಕವಾಗಿ– ಶೈಕ್ಷಣಿಕವಾಗಿ ಹಿಂದುಳಿದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಇತರ ಹಿಂದುಳಿದ ವರ್ಗಗಳ ಜನರಿಗೆ ಸಮಾನ ಪ್ರಾತಿನಿಧ್ಯ ಒದಗಿಸಿಕೊಡುವ ಸಂವಿಧಾನ ಬದ್ಧವಾದ ನಿಯಮವೇ ಮೀಸಲಾತಿ ಯಾಗಿದೆ’ ಎಂದು ತಿಳಿಸಿದರು.‘1992ರಿಂದ ಖಾಸಗೀಕರಣ, ಉದಾರೀಕರಣ ಮತ್ತು ಜಾಗತೀಕರಣ ಎಂಬ ಹೊಸ ಆರ್ಥಿಕ ನೀತಿಯನ್ನು ಜಾರಿಗೆ ತಂದಿದ್ದರಿಂದ ಇದರ ನೇರ ಪರಿಣಾಮ ಸರ್ಕಾರಿ ವಲಯದ ಮೇಲೆ ಉಂಟಾಗಿ ಉದ್ಯೋಗಾವಕಾಶಗಳು ಕಡಿಮೆಯಾದವು. ಖಾಸಗಿ ವಲಯದಲ್ಲಿ ಉದ್ಯೋಗಗಳು ಹೆಚ್ಚು ಸೃಷ್ಟಿಯಾದವು. ಇದರಿಂದ ಹಿಂದುಳಿದ ಜನರು ಉದ್ಯೋಗದಿಂದ ವಂಚಿತರಾಗುತ್ತಿ ದ್ದಾರೆ. ಹೀಗಾಗಿ ಖಾಸಗಿ ವಲಯದಲ್ಲೂ ಎಸ್‌ಸಿ, ಎಸ್‌ಟಿ, ಹಾಗೂ ಓಬಿಸಿ ವರ್ಗದವರಿಗೆ ಮೀಸಲಾತಿ ಕಲ್ಪಿಸಬೇಕು’ ಎಂದು ಅವರು ಒತ್ತಾಯಿಸಿದರು.‘ಖಾಸಗಿ ವಲಯದಲ್ಲಿ ಮೀಸಲಾತಿ ಕಲ್ಪಿಸುವುದು ಹಾಗೂ ಬ್ಯಾಕ್‌ಲಾಗ್‌ ಹುದ್ದೆಗಳನ್ನು ಸರ್ಕಾರ ಭರ್ತಿ ಮಾಡು ವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಫೆಬ್ರುವರಿ 3ರಿಂದ 5ರವರೆಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿರುವ ಬಂಡವಾಳ ಹೂಡಿಕೆ ಸಮಾವೇಶದ ಸಂದರ್ಭದಲ್ಲಿ ಬೃಹತ್‌ ಪ್ರತಿಭಟನೆ ನಡೆಸಲಾಗುವುದು’ ಎಂದು ತಿಳಿಸಿದರು.ಇರಾನಿ ಪದಚ್ಯುತಿಗೆ ಒತ್ತಾಯ: ‘ಹೈದರಾ ಬಾದ್‌ ವಿಶ್ವವಿದ್ಯಾಲಯದ ದಲಿತ ಸಂಶೋಧನಾ ವಿದ್ಯಾರ್ಥಿ ವೇಮುಲ ರೋಹಿತ್‌ ಸಾವಿಗೆ ಕಾರಣರಾದವರನ್ನು ತಕ್ಷಣವೇ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಕರ್ನಿಂಗ್‌ ಅವರು ಜಿಲ್ಲಾಧಿಕಾರಿಗಳಿಗೆ ಪ್ರತ್ಯೇಕ ಮನವಿ ಸಲ್ಲಿಸಿದರು.‘ರೋಹಿತ್‌ ಅವರಿಗೆ ಮಾನಸಿಕ ಕಿರುಕುಳ ನೀಡಿರುವುದು ಹಾಗೂ ವಿಶ್ವ ವಿದ್ಯಾಲಯದ ವಸತಿನಿಲಯ ಮತ್ತು ಕ್ಯಾಂಪಸ್‌ ನಿಷೇಧಿಸಿರುವುದರಿಂದ ಆತ್ಮಹತ್ಯೆಗೆ ಮುಂದಾಗಿದ್ದಾನೆ. ಹೀಗಾಗಿ ಆತನಿಗೆ ಹಾಗೂ ಆತನ ಸ್ನೇಹಿತರಿಗೆ ತೊಂದರೆ ನೀಡಿದ ಕೇಂದ್ರದ ಕಾರ್ಮಿಕ ಸಚಿವ ಬಂಡಾರು ದತ್ತಾತ್ರೇಯ, ವಿಶ್ವ ವಿದ್ಯಾಲಯದ ಕುಲಪತಿ ಪಿ. ಅಪ್ಪಾ ರಾವ್‌,ಬಿಜೆಪಿ ಎಂಎಲ್‌ಸಿ ರಾಮಚಂದ್ರ ರಾವ್‌ ಹಾಗೂ ಎಬಿವಿಪಿಯ ಇಬ್ಬರು ನಾಯಕರನ್ನು ಕೂಡಲೇ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು. ಘಟನೆ ಹಿನ್ನೆಲೆಯಲ್ಲಿ ಕೇಂದ್ರ ಮಾನವ ಸಂಪ ನ್ಮೂಲ ಸಚಿವೆ ಸ್ಮೃತಿ ಇರಾನಿ ಅವರನ್ನು ಸಚಿವ ಸ್ಥಾನದಿಂದ ಪದಚ್ಯುತಗೊಳಿಸ ಬೇಕು’ ಎಂದು ಅವರು ಒತ್ತಾಯಿಸಿದರು. ಬಿ.ವಿ.ಎಸ್‌ ರಾಜ್ಯ ಸಂಯೋಜಕ ಶಿವಾನಂದ ಭೋಸಲೆ, ಜಿಲ್ಲಾ ಸಂಯೋಜಕ ವಿವೇಕ ಕರ್ಪೆ ಇತರರು ಹಾಜರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.