ಸೋಮವಾರ, ಆಗಸ್ಟ್ 19, 2019
23 °C
ಕಾರ್ಮಿಕ ಮುಖಂಡ ಅನಂತಸುಬ್ಬರಾವ್ ಆರೋಪ

ಖಾಸಗಿ ವಾಹನಗಳಿಂದ ರೂ 730 ಕೋಟಿ ನಷ್ಟ

Published:
Updated:

ಗುಲ್ಬರ್ಗ: `ಖಾಸಗಿ ವಾಹನಗಳ ಹಾವಳಿಯಿಂದ ಕೆಎಸ್‌ಆರ್‌ಟಿಸಿಗೆ ವಾರ್ಷಿಕ ರೂ 730 ಕೋಟಿ ನಷ್ಟವಾಗುತ್ತಿದೆ. ಆದಾಗ್ಯೂ, ಎಚ್ಚೆತ್ತುಕೊಳ್ಳದ ಸರ್ಕಾರ ಖಾಸಗಿ ಬಸ್‌ಗಳ ಮಾಲೀಕರಿಗೆ ಮಣೆ ಹಾಕುತ್ತಿದೆ' ಎಂದು ಎಐಟಿಯುಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎಚ್.ವಿ. ಅನಂತಸುಬ್ಬರಾವ್ ಆರೋಪಿಸಿದರು.`ಸಾರಿಗೆ ನಿಗಮಗಳ ಬಸ್ ನಿಲ್ದಾಣದಿಂದ ಖಾಸಗಿ ವಾಹನಗಳು 500 ಮೀಟರ್ ದೂರದಲ್ಲಿರಬೇಕು ಎಂಬ ನಿಯಮವಿದ್ದರೂ ಅದನ್ನು ಉಲ್ಲಂಘಿಸಲಾ ಗುತ್ತಿದೆ. ಇದರಿಂದಾಗಿ ಕೆಎಸ್‌ಆರ್‌ಟಿಸಿಯ ನಾಲ್ಕು ನಿಗಮಗಳಿಗೆ ಪ್ರತಿ ನಿತ್ಯ ರೂ 2 ಕೋಟಿ ನಷ್ಟವಾಗುತ್ತಿದೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕಾದ ಸಂಬಂಧಿಸಿದ ಅಧಿಕಾರಿಗಳು 50 ರೂಪಾಯಿ ಟಿಕೆಟ್ ಕೊಡದ ಬಸ್ ನಿರ್ವಾಹಕನನ್ನು ಅಮಾನತು ಗೊಳಿಸುವ ಅಮಾನವೀಯ ಕೆಲಸ ಮಾಡುತ್ತಿದ್ದಾರೆ' ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.`ಸರ್ಕಾರಿ ಬಸ್ಸುಗಳಿಗೆ ಬಳಸುವ ಪ್ರತಿ ಲೀಟರ್ ಡೀಸೆಲ್‌ಗೆ 12 ರೂಪಾಯಿ ಹೆಚ್ಚುವರಿ ಬೆಲೆ ತೆರಬೇಕಾ ಗಿದೆ. ಇದರಿಂದಾಗಿ ಬಸ್ ಪ್ರಯಾಣ ದರವನ್ನು ಹೆಚ್ಚಿಸಲಾಗುತ್ತದೆ. ಪರಿಣಾಮ, ಜನಸಾಮಾನ್ಯರು ಬವಣೆ ಪಡುವಂತಾಗುತ್ತದೆ. ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಕೆ ನಿಯಂತ್ರಿಸುವಲ್ಲಿ ಕೇಂದ್ರ ಸರ್ಕಾರ ಅಸಹಾಯಕವಾಗಿದೆ. ಇದರಿಂದಾಗಿ ಖಾಸಗಿ ವಾಹನಗಳು ಎಗ್ಗಿಲ್ಲದೇ ಸಂಚರಿಸುವಂತಾಗಿದೆ. 1 ಕೋಟಿ ರೂಪಾಯಿ ಕೊಟ್ಟು  ಒಂದು ವೋಲ್ವೊ ಬಸ್ ಖರೀದಿಸುವ ಬದಲು, ನಾಲ್ಕು ಸಾಮಾನ್ಯ ಬಸ್ಸುಗಳನ್ನು ಖರೀದಿಸಿ ಗ್ರಾಮೀಣ ಪ್ರದೇಶದಲ್ಲಿ ಓಡಿಸುವಂತಾಗಬೇಕು' ಎಂದರು.ಒಂದು ರೂಪಾಯಿಗೆ ಊಟ!

`ಕೇಂದ್ರ ಸರ್ಕಾರದ ಬೆಲೆ ಏರಿಕೆ ನೀತಿಯಿಂದಾಗಿ ಜನಸಾಮಾನ್ಯರ ಬದುಕು ಬೀದಿಗೆ ಬಂದಿದೆ. ಆದರೆ, ಪ್ರಧಾನಿ ಮನಮೋಹನ್‌ಸಿಂಗ್ ಅವರು ದೇಶದಲ್ಲಿ ಬಡವರ ಸಂಖ್ಯೆ ಕಡಿಮೆ ಆಗುತ್ತಿದೆ. ಅಲ್ಲದೇ, ಒಂದು ರೂಪಾಯಿಯಲ್ಲಿ ಊಟ ಮಾಡಬಹುದು ಎಂಬ ಹೇಳಿಕೆ ನೀಡಿದ್ದಾರೆ. ಇದು ಹೇಗೆ ಸಾಧ್ಯ ಎಂಬುದನ್ನು ಅವರೇ ಹೇಳಬೇಕು. ಬ್ಯಾಂಕಿಂಗ್ ಮತ್ತು ವಿಮಾ ಕ್ಷೇತ್ರಗಳಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಗೆ (ಎಫ್‌ಡಿಐ) ಅವಕಾಶ ಕಲ್ಪಿಸುವ ಮೂಲಕ ಡಾಲರ್ ಬೆಲೆ ಹೆಚ್ಚಳಕ್ಕೆ ಕೇಂದ್ರ ಸರ್ಕಾರವೇ ಕಾರಣವಾಗಿದೆ. ಮುಂದಿನ ಕೆಲವೇ ವರ್ಷಗಳಲ್ಲಿ ಡಾಲರ್ ಬೆಲೆ 100 ರೂಪಾಯಿ ಆದರೂ ಆಶ್ಚರ್ಯವಿಲ್ಲ' ಎಂದು ಅಭಿಪ್ರಾಯಪಟ್ಟರು.`ಸರ್ಕಾರಿ ಬಸ್ ನಿಲ್ದಾಣಗಳ ಮುಂಭಾಗದಲ್ಲಿ ಖಾಸಗಿ ಬಸ್ಸುಗಳು, ದಲ್ಲಾಳಿಗಳ ಪ್ರವೇಶ ನಿಷೇಧಿಸ ಬೇಕು. ಖಾಸಗಿ ಬಸ್‌ಗಳ ರಹದಾರಿ ತಪಾಸಣೆ ಮಾಡಬೇಕು. ರಹದಾರಿ ಇಲ್ಲದ ಅಥವಾ ನಕಲಿ ರಹದಾರಿ ಇರುವ ವಾಹನಗಳನ್ನು ರದ್ದುಮಾಡಿ ಕಾನೂನು ಕ್ರಮ ಜರುಗಿಸಬೇಕು. ಖಾಸಗಿ ವಾಹನಗಳಿಗೆ ರಹದಾರಿ ಇದ್ದಲ್ಲಿ ಈ ವಾಹನಗಳು ರಹದಾರಿ ಕೊಟ್ಟಿರುವ ಮಾರ್ಗದಲ್ಲಿ ಸಂಚರಿಸುತ್ತಿರುವ ಬಗ್ಗೆ ಖಚಿತಪಡಿಸಿಕೊಳ್ಳಬೇಕು' ಎಂದು ಆಗ್ರಹಿಸಿದರು.`108 ಆಂಬುಲೆನ್ಸ್ ಸೇವೆ ಸ್ಥಗಿತಗೊಂಡು ವಾರ ಕಳೆದರೂ ಸರ್ಕಾರ ಇದುವರೆಗೂ ಪರಿಹಾರ ಕಲ್ಪಿಸಲು ಮುಂದಾಗಿಲ್ಲ. ಆರೋಗ್ಯ ಸಚಿವ ಯು.ಟಿ. ಖಾದರ್ ಅವರು ಸಮಸ್ಯೆಗಳನ್ನು ಬರೆದು ಕೊಡಿ, ನೋಡೋಣ ಎಂಬ ಮಾತು ಹೇಳಿದ್ದಾರೆ. ಬರೆದು ಕೊಡುವಂತಹ ಸಮಸ್ಯೆ ಏನಿದೆ ಎಂಬುದು ಎಲ್ಲರಿಗೂ ಗೊತ್ತು. ಹೀಗಿರುವಾಗ 108 ಆಂಬುಲೆನ್ಸ್ ಗುತ್ತಿಗೆ ಪಡೆದಿರುವ ಜಿ.ವಿ.ಕೆ ಕಂಪೆನಿ ಕಿವಿ ಹಿಂಡುವ ಬದಲು ಸಿಬ್ಬಂದಿ ಬಗ್ಗೆ ಹಗುರವಾಗಿ ಮಾತನಾಡುವುದು ಸಲ್ಲದು' ಎಂದರು.`ಜೆ.ಪಿ. ಶಹಾಬಾದ ಸಿಮೆಂಟ್ ಕಂಪೆನಿ ಕಾರ್ಮಿಕರಿಗೆ ರೂ 31 ಕೋಟಿ ಪರಿಹಾರ ಕೊಡಬೇಕು ಎಂದು ಕಾರ್ಮಿಕ ನ್ಯಾಯಾಲಯ ಆದೇಶ ನೀಡಿದ್ದರೂ ಕಂಪೆನಿ ಯಾವುದೇ ಪರಿಹಾರ ಕೊಟ್ಟಿಲ್ಲ. ಈ ಬಗ್ಗೆ ಕಾರ್ಮಿಕ ಇಲಾಖೆ ಅಧಿಕಾರಿಗಳು ಗಮನ ಹರಿಸಬೇಕು. ಇಲ್ಲವಾದಲ್ಲಿ ಉಗ್ರ ಪ್ರತಿಭಟನೆ ಮಾಡ ಲಾಗುವುದು' ಎಂದು ಎಚ್ಚರಿಕೆ ನೀಡಿದರು.ಕೆಎಸ್‌ಆರ್‌ಟಿಸಿ ಸ್ಟಾಫ್ ಅಂಡ್ ವರ್ಕರ್ಸ್‌ ಫೆಡರೇಷನ್ ಅಧ್ಯಕ್ಷ ಸಿದ್ದಪ್ಪ ಕಣ್ಣೂರು, ಉಪಾಧ್ಯಕ್ಷ ಸಿದ್ದಪ್ಪ ಪಾಲ್ಕಿ, ಎಐಟಿಯುಸಿ ಜಿಲ್ಲಾ ಘಟಕದ ಅಧ್ಯಕ್ಷ ಪ್ರಭುದೇವ ಯಳಸಂಗಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಚ್.ಎಸ್.ಪತಕಿ, ಜಂಟಿ ಕಾರ್ಯದರ್ಶಿ ನಾರಾಯಣ ರೆಡ್ಡಿ ಉಪಸ್ಥಿತರಿದ್ದರು.

Post Comments (+)