ಖಾಸಗಿ ವಿವಿ ಮಾರ್ಗಸೂಚಿ ರೂಪಿಸಿ

7
ಎಬಿವಿಪಿ ನೇತೃತ್ವದಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ

ಖಾಸಗಿ ವಿವಿ ಮಾರ್ಗಸೂಚಿ ರೂಪಿಸಿ

Published:
Updated:
ಖಾಸಗಿ ವಿವಿ ಮಾರ್ಗಸೂಚಿ ರೂಪಿಸಿ

ಶಿವಮೊಗ್ಗ: ಖಾಸಗಿ ವಿಶ್ವವಿದ್ಯಾಲಯಗಳ ಸ್ಥಾಪನೆಗೆ ಅನುಮತಿ ನೀಡುವ ಮುನ್ನ ಸ್ಪಷ್ಟ ಮಾರ್ಗಸೂಚಿಗಳನ್ನು ರೂಪಿಸುವಂತೆ ಆಗ್ರಹಿಸಿ ಎಬಿವಿಪಿ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.ಖಾಸಗಿ ವಿಶ್ವವಿದ್ಯಾಲಯಗಳು ರಾಜ್ಯದಲ್ಲಿ ಆರಂಭವಾಗುವ ಲಕ್ಷಣಗಳಿದ್ದು, ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಪೂರ್ವಾನುಮತಿ ಇಲ್ಲದೇ ಹಾಗೂ ಯುಜಿಸಿ ಮಾನ್ಯತೆಯಿಲ್ಲದೇ ಅಸ್ಥಿತ್ವಕ್ಕೆ ಬರಲು ಕೆಲವು ವಿಶ್ವವಿದ್ಯಾಲಯಗಳು ಪ್ರಯತ್ನಿಸುತ್ತಿವೆ. ಈ ವಿಶ್ವವಿದ್ಯಾಲಯಗಳು ಶಿಕ್ಷಣವನ್ನು ವ್ಯಾಪಾರೀಕರಣ ಮಾಡುವ ಸಾಧ್ಯತೆ ಇದೆ ಎಂದು ಪ್ರತಿಭಟನಾಕಾರರು ಆತಂಕ ವ್ಯಕ್ತ ಪಡಿಸಿದರು.ಸರ್ಕಾರ ಬೆಳಗಾವಿ ಅಧಿವೇಶನದಲ್ಲಿ ಹಲವು ಖಾಸಗಿ ವಿಶ್ವವಿದ್ಯಾಲಯಗಳ ಸ್ಥಾಪನೆಗೆ ವಿಧೇಯಕ ಮಂಡಿಸಲು ಚಿಂತಿಸುತ್ತಿದ್ದು, ಯಾವುದೇ ಪೂರ್ವ ತಯಾರಿ ಇಲ್ಲದೇ ಖಾಸಗಿ ವಿಶ್ವವಿದ್ಯಾಲಯಗಳ ಸ್ಥಾಪನೆಗೆ ಮುಂದಾಗಿರುವ ಸರ್ಕಾರದ ನಿಲುವು ಅನುಮಾನಗಳಿಗೆ ಕಾರಣವಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತ ಪಡಿಸಿದರು.ಸರ್ಕಾರ ಖಾಸಗಿ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಲು ಅನುಮತಿ ನೀಡುವ ಮೊದಲು, ಅವುಗಳ ಸ್ಥಾಪನೆ ಹಾಗೂ ನಿಯಮಾವಳಿ ರೂಪಿಸುವ ಬಗ್ಗೆ ವ್ಯಾಪಕ ಚರ್ಚೆ ನಡೆಸಿ ನಿಯಮಾವಳಿ ರೂಪಿಸಲಿ ಎಂದು ಆಗ್ರಹಿಸಿದರು.ಖಾಸಗಿ ವಿಶ್ವವಿದ್ಯಾಲಯಗಳಿಗೂ ಈಗ ರಾಜ್ಯದಲ್ಲಿ ಜಾರಿಯಲ್ಲಿರುವ ಸಿಇಟಿ ಮಾದರಿಯಂತೆ ಶುಲ್ಕ ನೀತಿ, ಪ್ರವೇಶ ನೀತಿ ಮತ್ತು ಒಂದೇ ಪ್ರವೇಶ ಪರೀಕ್ಷಾ ವ್ಯವಸ್ಥೆಗಳನ್ನು ಜಾರಿ ಮಾಡಬೇಕು ಎಂದು ಆಗ್ರಹಿಸಿದರು.ಖಾಸಗಿ ವಿಶ್ವವಿದ್ಯಾಲಯಗಳಲ್ಲಿ ಶೇಕಡ 50ರಷ್ಟು ಸೀಟುಗಳನ್ನು ಕರ್ನಾಟಕ ರಾಜ್ಯದವರಿಗೆ ಮತ್ತು ಪ್ರತಿಭಾನ್ವಿತ ಬಡ ಹಾಗೂ ದಲಿತ ವಿದ್ಯಾರ್ಥಿಗಳಿಗೆ ಮೀಸಲಿಡಬೇಕು. ಹಾಗೂ ಈ ಶೇಕಡ 50 ವಿದ್ಯಾರ್ಥಿಗಳ ಶುಲ್ಕವನ್ನು ಸರ್ಕಾರ ನಿಗದಿಪಡಿಸಬೇಕು. ಅಲ್ಲದೇ, ಸಾಮಾಜಿಕ ನ್ಯಾಯಕ್ಕಾಗಿ ವಿದ್ಯಾರ್ಥಿಗಳ ದಾಖಲಾತಿ ಮತ್ತು ಸಿಬ್ಬಂದಿ ನೇಮಕಾತಿಯಲ್ಲಿ ಮೀಸಲಾತಿ ಅಳವಡಿಸಬೇಕು ಎಂದು ಆಗ್ರಹಿಸಿದರು.ಇತರೆ ವಿಶ್ವವಿದ್ಯಾಲಯಗಳಲ್ಲಿ ಇರುವಂತೆ ಖಾಸಗಿ ವಿಶ್ವವಿದ್ಯಾಲಯಗಳಲ್ಲೂ ಯುಜಿಸಿ ನಿಯಮಾವಳಿಗಳು ಇರಬೇಕು ಎಂದು ಒತ್ತಾಯಿಸಿದರು. ರಮೇಶ್, ಸುರ್ಜಿತ್, ದರ್ಶನ್, ಸುಚೇತನ್, ರೇಷ್ಮಾ, ಅನಿತಾ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry