ಖಾಸಗಿ ವಿವಿ ಸ್ಥಾಪನೆಗೆ ವಿರೋಧ

7
ಎಬಿವಿಪಿ, ಎಸ್‌ಎಫ್‌ಐ ಪ್ರತಿಭಟನೆ

ಖಾಸಗಿ ವಿವಿ ಸ್ಥಾಪನೆಗೆ ವಿರೋಧ

Published:
Updated:

ಹಾವೇರಿ: ಖಾಸಗಿ ವಿಶ್ವವಿದ್ಯಾಲಯ ಸ್ಥಾಪನೆಗೆ ಮುಂದಾಗಿರುವ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್‌ನ ನಗರ ಶಾಖೆ ಕಾರ್ಯಕರ್ತರು ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು. ನಗರದ ಹೊಸಮನಿ ಸಿದ್ಧಪ್ಪ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.ಈ ಸಂದರ್ಭದಲ್ಲಿ ಮಾತನಾಡಿದ ಎಬಿವಿಪಿ ಜಿಲ್ಲಾ ಸಂಚಾಲಕ ಸಂತೋಷ ಆಲದಕಟ್ಟಿ, ಎಲ್‌ಕೆಜಿ ಮತ್ತು ಯುಕೆಜಿ ವ್ಯಾಪಾರೀಕರಣದ ಸಮಸ್ಯೆಯನ್ನು ತಡೆಗಟ್ಟಲು ಆಗದ ಸರ್ಕಾರದಿಂದ ಖಾಸಗಿ ವಿವಿಗಳ ವ್ಯಾಪಾರೀಕರಣ ತಡೆಗಟ್ಟಲು ಸಾಧ್ಯವಿಲ್ಲ. ಹೀಗಾಗಿ ಖಾಸಗಿ ವಿವಿಗಳಿಗೆ ಅನುಮತಿ ನೀಡುವ ಮುನ್ನ ಈಗಿನ ಸಿಇಟಿ ಮಾದರಿಯಂತೆ ಶುಲ್ಕ ನೀತಿ, ಪ್ರವೇಶ ನೀತಿ ಒಂದೇ ಪ್ರವೇಶ ಪರೀಕ್ಷೆ, ಕುಲಪತಿ, ಕುಲ ಸಚಿವರ ನೇಮಕಾತಿಗಳಲ್ಲಿ ಶೇ 50ರಷ್ಟು ಅಧಿಕಾರ ಸರ್ಕಾರದ ಕೈಯಲ್ಲಿ ಇರುವಂತೆ ಕಾನೂನು ರೂಪಿಸಬೇಕು ಎಂದು ಒತ್ತಾಯಿಸಿದರು. ರಾಜ್ಯ ಸರ್ಕಾರ ಕರ್ನಾಟಕದಲ್ಲಿ ಮತ್ತಷ್ಟು ಖಾಸಗಿ ವಿಶ್ವವಿದ್ಯಾಲಯಗಳ ಸ್ಥಾಪನೆಗೆ ಹಸಿರುನಿಶಾನೆ ತೋರಲು ಹೊರಟಿದೆ. ಪ್ರಸ್ತುತ ಅಸ್ತಿತ್ವದಲ್ಲಿರುವ ಖಾಸಗಿ ವಿವಿಗಳಿಗೆ ಮಾರ್ಗಸೂಚಿಗಳನ್ನು ರೂಪಿಸಿ, ಈ ವಿವಿಗಳು ಸಾಮಾಜಿಕ ನ್ಯಾಯಕ್ಕೆ ಅನುಗುಣವಾಗಿ ವಿದ್ಯಾರ್ಥಿಗಳು ಭರಿಸುವ ಶುಲ್ಕ ನೀತಿ, ಮೀಸಲಾತಿ, ರೋಸ್ಟರ್ ಪದ್ಧತಿಗಳನ್ನು ಅಳವಡಿಸುವಂತೆ ಹಾಗೂ ಸರ್ಕಾರದ ಮಾರ್ಗಸೂಚಿಗಳಿಗೆ ಅನುಗುಣವಾಗಿ ಕಾರ್ಯನಿರ್ವಹಣೆ ಮಾಡುವಂತೆ ವ್ಯವಸ್ಥೆ ರೂಪಿಸಬೇಕು ಎಂದು ಅವರು ಒತ್ತಾಯಿಸಿದರು.ಸರ್ಕಾರ ಈ ವಿಚಾರವನ್ನು ಲಘುವಾಗಿ ಪರಿಗಣಿಸಬಾರದು. ನಿಯಮಾವಳಿಗಳನ್ನು ಗಾಳಿಗೆ ತೂರಿ ಖಾಸಗಿ ವಿವಿಗಳಿಗೆ ಅನುಮತಿ ನೀಡಿದರೆ ಎಬಿವಿಪಿಯಿಂದ ರಾಜ್ಯಾದ್ಯಂತ ಉಗ್ರ ಹೋರಾಟ ಹಾಗೂ ಚಳಿಗಾಲದ ಅಧಿವೇಶನ ನಡೆಯುವ ಸುವರ್ಣಸೌಧಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.ನಗರ ಅಧ್ಯಕ್ಷ ಪ್ರಕಾಶ ಬಿಷ್ಟಂಡೇರ, ನಗರ ಕಾರ್ಯದರ್ಶಿ ಸಾಗರ ಅಂಗಡಿ, ನಗರ ಸಂಘಟನಾ ಕಾರ್ಯದರ್ಶಿ ಸಿದ್ದು ಮದರಖಂಡಿ, ಕಾರ್ಯಕರ್ತರಾದ ಮಂಜು, ಶರೀಫ್, ಹರೀಶ, ಭಿನ್ನಕಾರ,  ಸಂಜೀವ, ನಾಗರಾಜ, ನಾಗಪ್ಪ, ಮಾಲತೇಶ, ಸೇರಿದಂತೆ ಹಲವು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.ಎಸ್‌ಎಫ್‌ಐ ಪ್ರತಿಭಟನೆ

ಹಾವೇರಿ:
ರಾಜ್ಯದಲ್ಲಿ ಹೊಸದಾಗಿ 12 ಖಾಸಗಿ ವಿಶ್ವವಿದ್ಯಾಲಯಗಳ ಸ್ಥಾಪನೆಗೆ ಅನುಮೋದನೆ ನೀಡಲು ಮುಂದಾಗಿರುವ ಸರ್ಕಾರದ ಕ್ರಮ ಖಂಡಿಸಿ ಸೋಮವಾರ ನಗರದಲ್ಲಿ ಎಸ್‌ಎಫ್‌ಐ ಜಿಲ್ಲಾ ಘಟಕದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.ನಗರದ ಮಹಾತ್ಮಾಗಾಂಧಿ ರಸ್ತೆಯಲ್ಲಿನ ಮಹಾತ್ಮಾ ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ಖಾಸಗಿ ವಿವಿ ಸ್ಥಾಪಿಸದಂತೆ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.ಪ್ರತಿಭಟನೆಯ ನೇತೃತ್ವ ವಹಿಸಿದ್ದ ಸಂಘಟನೆಯ ರಾಜ್ಯ ಘಟಕದ ಉಪಾಧ್ಯಕ್ಷ ನಾರಾಯಣ ಕಾಳೆ ಮಾತನಾಡಿ, ರಾಜ್ಯದಲ್ಲಿ ಅಸ್ತಿತ್ವದಲ್ಲಿರುವ ಸರ್ಕಾರಿ ವಿವಿಗಳು ಗಂಭೀರ ಸಮಸ್ಯೆಗಳಿಂದ ನರಳುತ್ತಿವೆ. ಮೂಲಸೌಕರ್ಯಗಳ ಕೊರತೆ, ಭ್ರಷ್ಟಾಚಾರ, ಅನುದಾನದ ಕೊರತೆ, ಸಿಬ್ಬಂದಿ ಕೊರತೆ, ಜಾತಿ ರಾಜಕಾರಣ ಮತ್ತು ಹಾಸ್ಟೆಲ್ ಸೌಲಭ್ಯದ ಕೊರತೆ ಎದುರಿಸುತ್ತಿವೆ.ಇಂತಹ ಸಂದರ್ಭದಲ್ಲಿ ರಾಜ್ಯದ ಸರ್ಕಾರಿ ವಿಶ್ವ ವಿದ್ಯಾಲಯಗಳನ್ನು ಬಲಪಡಿಸಿ ಎಲ್ಲರಿಗೂ ಉನ್ನತ ಶಿಕ್ಷಣವನ್ನು ನೀಡಬೇಕಿದ್ದ ಸರ್ಕಾರ ಖಾಸಗಿಯವರಿಗೆ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಲು ಅನುಮತಿ ನೀಡಲು ಹೊರಟಿರುವುದು ಖಾಸಗಿಯವರ ಪರ ಸರ್ಕಾರ ಕೆಲಸ ಮಾಡುತ್ತಿದೆ ಎಂದು ಸಾಬೀತು ಪಡಿಸಿದೆ ಎಂದರು.ಪ್ರತಿಭಟನೆಯಲ್ಲಿ ಜಿಲ್ಲಾ ಘಟಕದ ಉಪಾಧ್ಯಕ್ಷ ಸುಭಾಸ್ ಮಾದರ, ಜಿಲ್ಲಾ ಸಹಕಾರ್ಯದರ್ಶಿ ವಿನಾಯಕ ಯಳಮಲ್ಲಿ, ಮಹೇಶ ಮುರಾರಿ, ಮನೋಜ ದೂಡ್ಮನಿ, ಚಂದ್ರು ಕೂಡಮನಿ, ಮಹಾಂತೇಶ ನಾಗನೂರ ಇನ್ನಿತರರು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry