ಸೋಮವಾರ, ಮೇ 10, 2021
22 °C

ಖಾಸಗಿ ಶಾಲಾ ಪ್ರತಿನಿಧಿಗಳ ಸಭೆ: ಗದ್ದಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಾಮರಾಜನಗರ: ಶಾಲಾ ಪ್ರವೇಶ ಹಾಗೂ ಶುಲ್ಕ ನಿಗದಿ ಸಂಬಂಧ ಮಂಗಳವಾರ ನಡೆದ ಖಾಸಗಿ ಶಾಲಾ ಆಡಳಿತ ಮಂಡಳಿ ಅಧ್ಯಕ್ಷರು, ಕಾರ್ಯದರ್ಶಿಗಳು ಹಾಗೂ ಮುಖ್ಯಶಿಕ್ಷಕರ ಸಭೆಯಲ್ಲಿ ಗದ್ದಲ ಏರ್ಪಟ್ಟು, ಕ್ಷೇತ್ರ ಶಿಕ್ಷಣಾಧಿಕಾರಿಯನ್ನೇ ಸಭಾಂಗಣದಿಂದ ಹೊರಹಾಕಲು ಯತ್ನಿಸಿದ ಘಟನೆ ನಡೆಯಿತು.ನಗರದ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ಬೆಳಿಗ್ಗೆ ಸಭೆ ನಿಗದಿಯಾಗಿತ್ತು. ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಆಯೋಜಿಸಿದ್ದ ಸಭೆಗೆ ಜಿಲ್ಲೆಯ ಖಾಸಗಿ ಶಾಲೆಗಳ ಆಡಳಿತ ಮಂಡಳಿಯ ಪ್ರತಿನಿಧಿಗಳು ಆಗಮಿಸಿದ್ದರು. ಸಭೆಯ ಆರಂಭದಲ್ಲೇ ಕನ್ನಡಪರ ಸಂಘಟನೆಗಳ ಮುಖಂಡರು ತಮಗೆ ಆಹ್ವಾನ ನೀಡಿಲ್ಲವೆಂದು ಘೋಷಣೆ ಕೂಗಲಾರಂಭಿಸಿದರು.ಕೇವಲ ನಾಲ್ಕು ಸಂಘಟನೆಗಳಿಗೆ ಮಾತ್ರವೇ ಆಹ್ವಾನ ನೀಡಲಾಗಿದೆ. ಕಳೆದ ವರ್ಷ ನಡೆದ ಸಭೆಯಲ್ಲಿ ಡೊನೇಶನ್ ಬಗ್ಗೆ ಮಾತನಾಡಿದ್ದ ಸಂಘಟನೆಗಳ ಮುಖಂಡರನ್ನು ಸಭೆಗೆ ಆಹ್ವಾನಿಸಿಲ್ಲ. ಸಂಘಟನೆಗಳನ್ನು ಒಡೆಯುವ ತಂತ್ರ ಅನುಸರಿಸಲಾಗುತ್ತಿದೆ ಎಂದು ಡಿಡಿಪಿಐ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ವಿರುದ್ಧ ಕಿಡಿಕಾರಿದರು.ಸಭೆ ಒಂದು ಹಂತದಲ್ಲಿ ಗೊಂದಲದ ಗೂಡಾಯಿತು. ಕಾರ್ಯಕರ್ತರು ಹಾಗೂ ಅಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆಯಿತು. ಈ ವೇಳೆ ಚಾಮರಾಜನಗರ ಶೈಕ್ಷಣಿಕ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಅಂದಾನಿ ಅವರತ್ತ ಪ್ರತಿಭಟನಾಕಾರರ ಕೋಪ ತಿರುಗಿತು. ದೂರವಾಣಿ ಕರೆ ಮಾಡಿದರೂ ಅವರು ಸ್ವೀಕರಿಸುವುದಿಲ್ಲ. ಶಾಲೆಗಳ ತಪಾಸಣೆ ನಡೆಸಿಲ್ಲ ಎಂದು ಕನ್ನಡ ಸಂಘಟನೆಗಳ ಕಾರ್ಯಕರ್ತರು ದೂರಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಂದಾನಿ, `ನಾನು ಉತ್ತಮವಾಗಿಯೇ ಕೆಲಸ ನಿರ್ವಹಿಸುತ್ತಿದ್ದೇನೆ. ಯಾರಿಂ ದಲೂ ಬೈಸಿಕೊಳ್ಳುವ ಅಗತ್ಯವಿಲ್ಲ~ ಎಂದು ತಿರುಗೇಟು ನೀಡಿದರು.ಕ್ಷೇತ್ರ ಶಿಕ್ಷಣಾಧಿಕಾರಿಯ ಈ ಮಾತಿನಿಂದ ಆಕ್ರೋಶಗೊಂಡ ಕಾರ್ಯಕರ್ತರು ಅವರೊಂದಿಗೆ ವಾಗ್ವಾದಕ್ಕೆ ಇಳಿದರು. ಕೊನೆಗೆ, ಸಭಾಂಗಣದಿಂದ ಅವರನ್ನು ಹೊರಹಾಕಲು ಮುಂದಾದರು. ಪರಿಸ್ಥಿತಿ ಕೈಮೀರುವುದನ್ನು ಅರಿತ ಪೊಲೀಸರು ಕ್ಷೇತ್ರ ಶಿಕ್ಷಣಾಧಿಕಾರಿಯನ್ನು ಸಭಾಂಗಣದಿಂದ ಹೊರಗೆ ಕರೆತಂದರು.ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಎಚ್.ಟಿ. ಚಂದ್ರಶೇಖರ್ ಹಾಗೂ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಬೆಳ್ಳಶೆಟ್ಟಿ ಪ್ರತಿಭಟನಾನಿರತನ್ನು ಸಮಾಧಾನಪಡಿಸಲು ಮುಂದಾದರು. ಕೊನೆಗೆ, ಏ. 17ಕ್ಕೆ ಸಭೆಯನ್ನು ಮುಂದೂಡಲಾಯಿತು.ಜಿಲ್ಲಾ ಕನ್ನಡಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಶಾ. ಮುರುಳಿ ಮಾತನಾಡಿ, `ಕೆಲವು ಸಂಘಟನೆಗಳಿಗೆ ಮಾತ್ರವೇ ಸಭೆಯಲ್ಲಿ ಪಾಲ್ಗೊಳ್ಳಲು ಆಮಂತ್ರಣ ನೀಡಲಾಗಿದೆ. ಈಗಾಗಲೇ, ಖಾಸಗಿ ಶಾಲೆಗಳಲ್ಲಿ ಪ್ರವೇಶಾತಿ ಮುಗಿದಿದೆ. ಈಗ ಡೊನೇಶನ್ ಹಾವಳಿ ತಡೆಗೆ ಶಿಕ್ಷಣ ಇಲಾಖೆ ಮುಂದಾಗಿರುವುದು ಹಾಸ್ಯಾಸ್ಪದ~ ಎಂದು ತರಾಟೆ ತೆಗೆದುಕೊಂಡ ಅವರು, ಮೊದಲು ಖಾಸಗಿ ಶಾಲೆಗಳಿಗೆ ಭೇಟಿ ನೀಡಿ ಪರಿಶೀಲಿಸಬೇಕು ಎಂದು ಒತ್ತಾಯಿಸಿದರು.

ಕನ್ನಡಪರ ಸಂಘಟನೆಗಳ ಮುಖಂಡರಾದ ಕೆ.ಎಂ. ನಾಗರಾಜು, ಮಾರ್ಕೇಟ್ ಗಿರೀಶ್, ಮಹೇಶ್, ಚ.ಹ. ರಾಮು, ಸಿ.ಎನ್. ಗೋವಿಂದರಾಜು, ಹರವೆ ಗುರುಸ್ವಾಮಿ, ಚಾ.ಗು. ನಾಗರಾಜ್, ಗು. ಪುರುಷೋತ್ತಮ್, ನಾಗರಾಜು ಇತರರು ಹಾಜರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.