ಖಾಸಗಿ ಶಾಲೆಗೆ ಸೆಡ್ಡು: ಮಕ್ಕಳ ಸಂಖ್ಯೆ ಹೆಚ್ಚಳ

7

ಖಾಸಗಿ ಶಾಲೆಗೆ ಸೆಡ್ಡು: ಮಕ್ಕಳ ಸಂಖ್ಯೆ ಹೆಚ್ಚಳ

Published:
Updated:
ಖಾಸಗಿ ಶಾಲೆಗೆ ಸೆಡ್ಡು: ಮಕ್ಕಳ ಸಂಖ್ಯೆ ಹೆಚ್ಚಳ

ಮೈಸೂರು: ವಿದ್ಯಾರ್ಥಿಗಳ ಕೊರತೆಯ ಕಾರಣ ನೀಡಿ ಅದೆಷ್ಟೋ ಸರ್ಕಾರಿ ಶಾಲೆಗಳು ಬಾಗಿಲು ಮುಚ್ಚುತ್ತಿವೆ. ಆದರೆ ನಗರದ ಕನಕಗಿರಿಯಲ್ಲಿರುವ ಸರ್ಕಾರಿ ಶಾರದಾ ವಿಲಾಸ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಯ ವಿದ್ಯಾರ್ಥಿಗಳ ಸಂಖ್ಯೆ ಮಾತ್ರ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ!ಸೇಂಟ್ ಮೆರಿಸ್, ಸೇಂಟ್ ಥಾಮಸ್, ವಾಣಿ ವಿದ್ಯಾಮಂದಿರ ಸೇರಿದಂತೆ ನಗರದ ಪ್ರಖ್ಯಾತ ಶಾಲೆಯಲ್ಲಿ ಕಲಿಯುತ್ತಿದ್ದ ವಿದ್ಯಾರ್ಥಿಗಳೂ ಸಹ 138 ವರ್ಷ ಹಳೆಯದಾದ ಈ ಶಾಲೆಯತ್ತ ಮುಖ ಮಾಡುತ್ತಿದ್ದಾರೆ. ಒಂದು ವರ್ಷದಲ್ಲಿ ಸುಮಾರು 90ಕ್ಕೂ ಹೆಚ್ಚು ಮಕ್ಕಳು ಖಾಸಗಿ ಶಾಲೆ ತೊರೆದು ಸರ್ಕಾರಿ  ಶಾರದಾ ವಿಲಾಸ ಶಾಲೆಯಲ್ಲಿ ಪ್ರವೇಶ ಪಡೆದಿದ್ದಾರೆ.ಪ್ರಾಥಮಿಕ ಶಾಲೆಯಲ್ಲಿ 250, ಪ್ರೌಢಶಾಲೆಯಲ್ಲಿ 150 ಮಕ್ಕಳ್ದ್ದಿದು, 16 ಮಂದಿ ಶಿಕ್ಷಕರಿದ್ದಾರೆ. ಪ್ರೌಢಶಾಲೆಗೆ ಒಬ್ಬರು ಕಾಯಂ ಶಿಕ್ಷಕರಿದ್ದು, ಉಳಿದ 6 ಮಂದಿಯನ್ನು ಆರ್‌ಎಂಎ ಯೋಜನೆ ಅಡಿ ಆ್ಯಕ್ಸಿಸ್ ಸಂಸ್ಥೆಯಿಂದ ನೇಮಕ ಮಾಡಿಕೊಳ್ಳಲಾಗಿದೆ. ಕನಕಗಿರಿ, ವಿದ್ಯಾರಣ್ಯಪುರಂ, ಜೆ.ಪಿ.ನಗರ, ರಮಾಬಾಯಿ ನಗರ, ಉತ್ತನಹಳ್ಳಿ ಹಾಗೂ ಮರಸೆ ಗ್ರಾಮಗಳ ಬಹುತೇಕ ಕೂಲಿ ಕಾರ್ಮಿಕರ ಮಕ್ಕಳು ಇಲ್ಲಿ ಕಲಿಯುತ್ತಿದ್ದಾರೆ. ಜಿಲ್ಲಾ ಪಂಚಾಯಿತಿ ಈ ಶಾಲೆಯನ್ನು ಆಡಳಿತಾತ್ಮಕವಾಗಿ ದತ್ತು ಸ್ವೀಕರಿಸಿದ ಬಳಿಕ ಸಾಕಷ್ಟು ಅಭಿವೃದ್ಧಿ ಹೊಂದಿದೆ ಎನ್ನುತ್ತಾರೆ ಇಲ್ಲಿನ ನಿವಾಸಿಗಳು.138 ವರ್ಷದ ಇತಿಹಾಸ: ಪತ್ರಿಕೋದ್ಯಮಿ ತಾತಯ್ಯ 1874ರಲ್ಲಿ ಈ ಶಾಲೆಯನ್ನು ಆರಂಭಿಸಿದರು. ಸ್ವಾತಂತ್ರ್ಯಾನಂತರ ಸರ್ಕಾರದ ಅಧೀನಕ್ಕೆ ಒಳಪಟ್ಟಿತು. ಮಾಜಿ ಮುಖ್ಯಮಂತ್ರಿ ದಿವಂಗತ ಡಿ.ದೇವರಾಜ ಅರಸು ತಮ್ಮ ಪ್ರಾಥಮಿಕ ವಿದ್ಯಾಭ್ಯಾಸವನ್ನು ನಡೆಸಿದ್ದು ಇಲ್ಲಿಯೇ. 1980ರ ವರೆಗೂ ಲ್ಯಾನ್ಸ್‌ಡೌನ್ ಬಿಲ್ಡಿಂಗ್‌ನಲ್ಲೇ ಇದ್ದ ಶಾಲೆಯನ್ನು ಪಾಲಿಕೆಯ ಸದಸ್ಯರಾಗಿದ್ದ ಎ.ಸಿ.ಬಸಪ್ಪ ಕನಕಗಿರಿಗೆ ಸ್ಥಳಾಂತರಿಸಿದರು.ಈಗಲೂ ಮಹಾನಗರ ಪಾಲಿಕೆಯ ಕಟ್ಟಡದಲ್ಲೇ ನಡೆಯುತ್ತಿರುವ ಶಾಲೆ  ಹಿಂದುಳಿದ ವರ್ಗಗಳ ಮಕ್ಕಳಲ್ಲಿ ಆಶಾಕಿರಣ ಮೂಡಿಸಿದೆ.ಆಕರ್ಷಕ ಸೌಲಭ್ಯ: ಖಾಸಗಿ ಶಾಲೆಗಿಂತಲೂ ಇಲ್ಲಿ ಮೂಲಸೌಕರ್ಯಗಳು ಉತ್ತಮವಾಗಿವೆ. 350 ವಿದ್ಯಾರ್ಥಿಗಳಿಗೆ 18 ಕೊಠಡಿಗಳಿದ್ದು, ಗ್ರಂಥಾಲಯ, ಕಂಪ್ಯೂಟರ್‌ಗಳಿಗಾಗಿ ಒಂದೊಂದು ಕೋಣೆಯನ್ನು ಮೀಸಲಿಡಲಾಗಿದೆ. ಸ್ಥಳೀಯರ ಸಹಕಾರದಿಂದಾಗಿ ಪ್ರತಿ ಕೊಠಡಿಗೂ ಫ್ಯಾನ್ ಹಾಕಲಾಗಿದೆ. ಶಾಲೆಗೆ ಪ್ರತ್ಯೇಕವಾದ ಕೊಳವೆ ಬಾವಿ ಇದ್ದು, ನೀರಿಗೆ ತೊಂದರೆ ಇಲ್ಲ. ಜೂನಿಯರ್ ಚೇಂಬರ್ ಇಂಟರ್‌ನ್ಯಾಷನಲ್ ಸಂಸ್ಥೆ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಅಗತ್ಯವಾದ ವೇದಿಕೆಗೆ ಸಹಾಯಧನ ನೀಡಿದ್ದು, ಕಾಮಗಾರಿ ಪ್ರಗತಿಯಲ್ಲಿದೆ.ಶಾಲೆಯ ಮುಖ್ಯ ಆಕರ್ಷಣೆಯೇ ಗ್ರಂಥಾಲಯ. ಸುಮಾರು 4800 ಪುಸ್ತಕಗಳು ಇಲ್ಲಿವೆ. ಎಲ್ಲ ವರ್ಗದ ವಿದ್ಯಾರ್ಥಿಗಳ ಅವಶ್ಯಕತೆಗೆ ಅನುಗುಣವಾಗಿ ಪುಸ್ತಕಗಳನ್ನು ಸಂಗ್ರಹಿಸಲಾಗಿದೆ. ಸಾಹಿತ್ಯ, ವಿಜ್ಞಾನ, ತಂತ್ರಜ್ಞಾನ ಹಾಗೂ ಪಠ್ಯಕ್ರಮಕ್ಕೆ ಪೂರಕವಾದ ಪುಸ್ತಕಗಳು ವಿದ್ಯಾರ್ಥಿಗಳ ಜ್ಞಾನದಾಹವನ್ನು ತಣಿಸುತ್ತಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry