ಬುಧವಾರ, ಏಪ್ರಿಲ್ 14, 2021
24 °C

ಖಾಸಗಿ ಶಾಲೆ ಕ್ರಮಕ್ಕೆ ಪೋಷಕರ ವಿರೋಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾಸನ: ಫಲಿತಾಂಶ ಕಡಿಮೆಯಾಗುತ್ತದೆ ಎಂಬ ಕಾರಣಕ್ಕೆ ನಗರದ ಖಾಸಗಿ ಶಾಲೆಯೊಂದು ಕಲಿಕೆಯಲ್ಲಿ ಹಿಂದೆ ಇರುವ ವಿದ್ಯಾರ್ಥಿಗಳಿಗೆ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡಿ, ಟಿ.ಸಿ. ಕೊಟ್ಟು ಬೇರೆ ಶಾಲೆಗೆ ಕಳುಹಿಸಿರುವ ಬಗ್ಗೆ ಕೆಲವು ಪಾಲಕರು ಶಿಕ್ಷಣ ಸಚಿವರಿಗೆ ದೂರು ನೀಡಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.`ಶಾಲೆಯ ಶಿಕ್ಷಕರು ನಮ್ಮ ಮಗನಿಗೆ ಹಿಂಸೆ ನೀಡುತ್ತಿರುವುದನ್ನು ತಾಳದೆ ಅವನನ್ನು ಬೇರೆ ಶಾಲೆಗೆ ಸೇರಿಸಿದ್ದೇವೆ, ನಮಗೆ ಅನ್ಯಾಯವಾಗಿದ್ದು ನ್ಯಾಯ ಒದಗಿಸಬೇಕು ಎಂದು ಬಾಲಕ ಲಿಖಿತ್ ಎಂಬುವವರ ತಂದೆ ಕೆ.ಎಂ. ಪ್ರಕಾಶ್ ಎಂಬುವವರು ಕ್ಷೇತ್ರ ಶಿಕ್ಷಣಾಧಿಕಾರಿಯಿಂದ ಆರಂಭಿಸಿ ಶಿಕ್ಷಣ ಸಚಿವ ಕಾಗೇರಿ ಅವರೆಗೆ ದೂರು ಸಲ್ಲಿಸಿದ್ದಾರೆ.ಹಾಸನದ ತೆಲುಗರ ಬೀದಿಯ ನಿವಾಸಿ ಕೆ.ಎಂ. ಪ್ರಕಾಶ್ ನೀಡಿರುವ ದೂರಿನ ಪ್ರಕಾರ `ಅವರು ತಮ್ಮ ಮಗ ಲಿಖಿತ್‌ನನ್ನು ಎಲ್.ಕೆ.ಜಿಯಿಂದಲೇ ಯುನೈಟೆಡ್ ಅಕಾಡೆಮಿ ಶಾಲೆಗೆ ದಾಖಲಿಸಿದ್ದರು. ಮಗ 9ನೇ ತರಗತಿಗೆ ಬಂದಾಗ ಆತನಿಗೆ ಶಾಲೆಯಲ್ಲಿ ಮಾನಸಿಕ, ದೈಹಿಕ ಹಿಂಸೆ ನೀಡಲು ಆರಂಭಿಸಿದರು. ಪಾಲಕರು ಕೇಳಿದರೆ `ನಿಮ್ಮ ಮಗ ಚೆನ್ನಾಗಿ ಕಲಿಯು ತ್ತಿಲ್ಲ ಬೇರೆ ಶಾಲೆಗೆ ಸೇರಿಸಿ~ ಎಂದು ಒತ್ತಡ ಹೇರಿ ದರು. ಟಿ.ಸಿ. ಪಡೆಯಲು ನಿರಾಕರಿಸಿದ್ದಕ್ಕೆ ಇತರ ಮಕ್ಕಳ ಮುಂದೆ ಮಗನನ್ನು ಅವಮಾನ ಮಾಡಿದ್ದಾರೆ.ತಮಗೂ ಇಂಥದ್ದೇ ಅನುಭವ ಆಗಿದೆ ಎಂದು ಸರ್ಕಾರಿ ಶಾಲೆಯ ಶಿಕ್ಷಕಿ ನಸ್ರೀನಾ ದೂರಿದ್ದಾರೆ. ಅವರ ಪುತ್ರ ಶಹಬಾಜ್‌ನಿಗೆ ಶಾಲೆಯಲ್ಲಿ ಹಿಂಸೆ ನೀಡಿದ ಪರಿಣಾಮ ಮಾನಸಿಕ ಕಾಯಿಲೆಗೆ ಒಳಗಾಗಿ ಎರಡುಬಾರಿ ಆತ್ಮಹತ್ಯೆಗೆ ಪ್ರಯತ್ನ ಮಾಡಿದ್ದ.  ಕೊನೆಗೆ ಮನಃಶಾಸ್ತ್ರಜ್ಞರಿಂದ ಚಿಕಿತ್ಸೆ ಕೊಡಿಸಿ ಮಗನನ್ನು ಬೇರೆ ಶಾಲೆಗೆ ಸೇರಿಸಿದ್ದೇವೆ ಎಂದು ಅವರು ದೂರಿದ್ದಾರೆ.ಎರಡೆರಡು ಶುಲ್ಕ: ಮಕ್ಕಳನ್ನು ಬೇರೆ ಶಾಲೆಗೆ ಸೇರಿಸಲು ನಿರಾಕರಿಸಿದ ಪಾಲಕರಿಗೆ ಶಾಲೆಯವರೇ ಪರ್ಯಾಯ ಮಾರ್ಗ ಸೂಚಿಸಿದ್ದರು. ಇಂಥ ಮಕ್ಕಳನ್ನು ಯುನೈಟೆಡ್ ಅಕಾಡೆಮಿಯಿಂದ ಟಿ.ಸಿ. ತೆಗೆಸಿ ಶಾಸ್ತಾ ಪಬ್ಲಿಕ್ ಸ್ಕೂಲ್‌ಗೆ ಸೇರಿಸಲಾಗಿದೆ. ದಾಖಲೆಗಳೆಲ್ಲ ಹೊಸ ಶಾಲೆಯಲ್ಲಿದ್ದರೂ ಪಾಠ-ಪ್ರವಚನಗಳು ಯುನೈಟೆಡ್ ಶಾಲೆಯಲ್ಲೇ ನಡೆಯುತ್ತಿವೆ. ಈ ವ್ಯವಸ್ಥೆಯಲ್ಲಿ ಪಾಲಕರು ಯುನೈಟೆಡ್ ಶಾಲೆಯಲ್ಲಿ ಮಾಸಿಕ ಶುಲ್ಕ ಕಟ್ಟಬೇಕು ಜತೆಗೆ ಶಾಸ್ತಾಸ್‌ಗೆ ವರ್ಷಕ್ಕೊಮ್ಮೆ ಐದು ಸಾವಿರ ರೂಪಾಯಿ ಡೊನೇಶನ್ ನೀಡಬೇಕಾಗುತ್ತದೆ ಎಂದು ಅವರು ದೂರಿದ್ದಾರೆ.ಮಾಹಿತಿ ನೀಡಲು ನಿರಾಕರಣೆ: ಎರಡೆರಡು ಕಡೆ ಶುಲ್ಕ ಪಾವತಿಸುವವರ ಮಾಹಿತಿ ಪಡೆಯುವ ಸಲುವಾಗಿ ಪ್ರಕಾಶ್ ಅವರು ಕ್ಷೇತ್ರ ಶಿಕ್ಷಣಾಧಿಕಾರಿಗೆ ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಿದರು. ಅರ್ಜಿದಾರರಿಗೆ ಮಾಹಿತಿ ಒದಗಿಸುವಂತೆ ಎರಡೂ ಶಾಲೆಗಳಿಗೆ ಬಿಇಓ ಸೂಚನೆ ನೀಡಿದ್ದರೂ, ಯುನೈಟೆಡ್ ಅಕಾಡೆಮಿಯವರು ಮಾಹಿತಿ ನೀಡಲಿಲ್ಲ. ಆದರೆ ಶಾಸ್ತಾಸ್‌ನವರು `ನಮ್ಮ ಸಂಸ್ಥೆ ಮಾಹಿತಿ ಹಕ್ಕು ಕಾಯ್ದೆಯಡಿ ಬರುವುದಿಲ್ಲ, ಯಾವ ನಿಯಮದಡಿ ಮಾಹಿತಿ ನೀಡಬೇಕಾಗುತ್ತದೆ ಎಂದು ತಿಳಿಸಿದರೆ ಪರಿಶೀಲನೆ ಮಾಡುತ್ತೇವೆ~ ಎಂಬ ಉತ್ತರ ನೀಡಿದ್ದಾರೆ.ತಮ್ಮಂಥ ಅನೇಕ ಪಾಲಕರಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸಬೇಕು ಎಂದು ಆಗ್ರಹಿಸಿ ಪ್ರಕಾಶ್ ಕ್ಷೇತ್ರ ಶಿಕ್ಷಣಾಧಿಕಾರಿ, ಜಿಲ್ಲಾಧಿಕಾರಿ, ಡಿಡಿಪಿಐ, ಮಾನವ ಹಕ್ಕುಗಳ ಆಯೋಗ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಶಿಕ್ಷಣ ಸಚಿವ ಕಾಗೇರಿ, ಸರ್ಕಾರದ ಮುಖ್ಯ ಕಾರ್ಯದರ್ಶಿ, ಶಿಕ್ಷಣ ಇಲಾಖೆ ಆಯುಕ್ತರು, ಇಲಾಖೆಯ ಜಂಟಿ ನಿರ್ದೇಶಕರು - ಮೈಸೂರು ಹಾಗೂ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ ಪತ್ರ ರವಾನಿಸಿದ್ದರು.ದೂರಿನ ಹಿನ್ನೆಲೆಯಲ್ಲಿ ವಿಭಾಗೀಯ ಕಾರ್ಯ ದರ್ಶಿ ಪ್ರಕರಣವನ್ನು ಪರಿಶೀಲಿಸಿ ವರದಿ ನೀಡುವಂತೆ ವಿದ್ಯಾಧಿಕಾರಿ ಲತಾ ಅವರಿಗೆ ಸೂಚನೆ ನೀಡಿತ್ತು. ಆದರೆ ಅವರು ನಮ್ಮನ್ನು ಸಂಪರ್ಕಿಸಿಲ್ಲ ಎಂದು ಪ್ರಕಾಶ್ ದೂರಿದ್ದಾರೆ. ಈಗ ಶಿಕ್ಷಣ ಇಲಾಖೆ ಕಾರ್ಯದರ್ಶಿ ಹಾಗೂ ಹಾಸನ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಕುಮಾರ ನಾಯಕ್ ಅವರಿಗೂ ಪತ್ರ ರವಾನಿಸಿದ್ದಾರೆ.ವರ್ತನೆ ಕಾರಣ: `ಶಾಲೆಯ ಆಡಳಿತ ಮಂಡಳಿಯವರ ಮೇಲಿನ ವೈಯಕ್ತಿಕ ದ್ವೇಶದಿಂದ ಕೆಲವರು ಈ ರೀತಿ ಆರೋಪ ಮಾಡಿದ್ದಾರೆ. ಮಕ್ಕಳ ವರ್ತನೆ ಸರಿ ಇಲ್ಲದ ಕಾರಣ ನಾವು ಟಿ.ಸಿ. ನೀಡಿದ್ದೇವೆಯೇ ವಿನಾ ಕಲಿಕೆಯಲ್ಲಿ ಹಿಂದುಳಿದ ಕಾರಣಕ್ಕೆ ಅಲ್ಲ~ ಎಂದು ಪ್ರಾಚಾರ್ಯೆ ಆರ್.ಕೆ. ವಂದನಾ ಸ್ಪಷ್ಟಪಡಿಸಿದ್ದಾರೆ.ಈ ಐದು ವಿದ್ಯಾರ್ಥಿಗಳ ವರ್ತನೆ ಸರಿ ಇರಲಿಲ್ಲ. ಎಲ್ಲವನ್ನೂ ನಾವು ಸಹಿಸಿಕೊಂಡಿದ್ದೆವು. ಆದರೆ ಶಾಲೆಯಿಂದ ಪಿಕ್‌ನಿಕ್‌ಗೆ ಹೋಗಿದ್ದಾಗ ವಿದ್ಯಾರ್ಥಿನಿಯರ ಜತೆಗೆ ಅಶ್ಲೀಲವಾಗಿ ವರ್ತಿಸಿದ್ದರು. ಆ ಬಗ್ಗೆ ದೂರುಗಳು ಬಂದಿದ್ದವು. ಅದೂ ಅಲ್ಲದೆ ಈ ವಿದ್ಯಾರ್ಥಿಗಳು ಪೆನ್‌ಡ್ರೈವ್, ಮೆಮೊರಿ ಕಾರ್ಡ್‌ಗಳನ್ನು ವಿನಿಮಯ ಮಾಡಿಕೊಳ್ಳುತ್ತಿದ್ದರು. ಈ ಎಲ್ಲ ವಿಚಾರವನ್ನು ಪಾಲಕರ ಗಮನಕ್ಕೆ ತಂದಿದ್ದರೂ ಅವರು ಮಕ್ಕಳನ್ನು ಸರಿದಾರಿಗೆ ತರುವ ಬದಲು ನಮ್ಮ ಮೇಲೆಯೇ ಗೂಬೆ ಕೂರಿಸಿದ್ದಾರೆ. ಶಾಸ್ತಾಸ್‌ಗೆ ಮಕ್ಕಳನ್ನು ಕಳುಹಿಸುತ್ತಾರೆ ಎಂಬ ಆರೋಪದ ಬಗ್ಗೆ ಇಲಾಖೆಯಿಂದಲೇ  ತನಿಖೆನಡೆದಿದ್ದು, ಅದು ನಿರಾಧಾರ ಎಂದು ಸಾಬೀತಾಗಿದೆ. ನಮ್ಮ ಶಾಲೆಯಲ್ಲಿ ಈಗಲೂಕಲಿಕೆಯಲ್ಲಿ ಹಿಂದುಳಿದ ಮಕ್ಕಳಿದ್ದಾರೆ. ಅವರಿಗೆ ವಿಶೇಷ ಕೋಚಿಂಗ್  ನೀಡುತ್ತಿದ್ದೇವೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

`ತನಿಖೆ ಆಗಿದೆ~

ದೂರಿನ ಹಿನ್ನೆಲೆಯಲ್ಲಿ ತನಿಖೆ ನಡೆಸಲಾಗಿದೆ. ವರದಿ ಇಲಾಖೆಗೆ ಬಂದಿದ್ದು, ಶೀಘ್ರದಲ್ಲೇ ಕ್ರಮ ಕೈಗೊಳ್ಳಲಾಗುವುದು ಎಂದು ಡಿಡಿಪಿಐ ಎ.ಟಿ. ಚಾಮರಾಜ್ ತಿಳಿಸಿದ್ದಾರೆ.ಯುನೈಟೆಡ್ ಶಾಲೆಯಿಂದ 2010-11ರಲ್ಲಿ 11 ವಿದ್ಯಾರ್ಥಿಗಳಿಗೆ ಹಾಗೂ 11-12ನೇ ಸಾಲಿನಲ್ಲಿ 10 ವಿದ್ಯಾರ್ಥಿಗಳಿಗೆ ಟಿ.ಸಿ. ನೀಡಲಾಗಿದೆ ಎಂಬ ಮಾಹಿತಿ ವರದಿಯಲ್ಲಿದೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.