ಖಾಸಗೀಕರಣದ ವಿರುದ್ಧ ಹೋರಾಡಲು ಕರೆ

7

ಖಾಸಗೀಕರಣದ ವಿರುದ್ಧ ಹೋರಾಡಲು ಕರೆ

Published:
Updated:
ಖಾಸಗೀಕರಣದ ವಿರುದ್ಧ ಹೋರಾಡಲು ಕರೆ

ಉಡುಪಿ: `ಸಾಮಾಜಿಕ ಬ್ಯಾಂಕಿಂಗ್ ಮೇಲೆ ಆಕ್ರಮಣ ಮತ್ತು ಬ್ಯಾಂಕಿಂಗ್ ವಲಯ ಖಾಸಗೀಕರಣದ ವಿರುದ್ಧ ಸಂಘಟಿತರಾಗಿ ಹೋರಾಟ ಮಾಡಬೇಕಿದೆ' ಎಂದು ಅಖಿಲ ಭಾರತ ಬ್ಯಾಂಕ್ ನೌಕರರ ಸಂಘ ಪ್ರಧಾನ ಕಾರ್ಯದರ್ಶಿ ಸಿ.ಎಚ್.ವೆಂಕಟಾಚಲಂ ಹೇಳಿದರು.ಉಡುಪಿಯ ಅಂಬಲಪಾಡಿ ಶ್ಯಾಮಿಲಿ ಸಭಾಂಗಣದಲ್ಲಿ ಭಾನುವಾರ ನಡೆದ ಕಾರ್ಪೋರೇಶನ್ ಬ್ಯಾಂಕ್ ನೌಕರರ ಒಕ್ಕೂಟದ 23ನೇ ತ್ರೈಮಾಸಿಕ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಆರ್‌ಬಿಐಯ ಹೊಸ ನೀತಿಯಂತೆ 200 ಕೋಟಿ ರೂಪಾಯಿ ಠೇವಣಿ ಇರಿಸಿದರೆ ಬ್ಯಾಂಕಿಂಗ್ ಉದ್ಯಮ ಆರಂಭಿಸಬಹುದು. ಬ್ಯಾಂಕ್‌ಗಳಲ್ಲಿ ಹೊರಗುತ್ತಿಗೆ ನೌಕರಿ ಭದ್ರತೆಗೆ ತೊಡಕಾಗಿದೆ. ಯೂರೋಪ್ ದೇಶಗಳಲ್ಲಿ ಈಗಾಗಲೇ ಹೊರಗುತ್ತಿಗೆಯಿಂದ ಬ್ಯಾಂಕ್ ನೌಕರರು ಕಷ್ಟಕ್ಕೆ ಒಳಗಾಗಿದ್ದಾರೆ. ಕೇಂದ್ರ ಸರ್ಕಾರ ಬ್ಯಾಂಕಿಂಗ್ ವಲಯವನ್ನು ಖಾಸಗೀಕರಣ ಮಾಡಲು ಯತ್ನಿಸುತ್ತಿದೆ ಇದನ್ನು ಸಂಘ ವಿರೋಧಿಸುತ್ತದೆ. ಆರು ತಿಂಗಳೊಳಗೆ ಬ್ಯಾಂಕ್ ನೌಕರರ ಬೇಡಿಕೆಗಳನ್ನು ಈಡೇರಿಸಬೇಕು ಎಂದರು.ದೇಶದ ಅಭಿವೃದ್ಧಿಗೆ ಬ್ಯಾಂಕಿಂಗ್ ಹೆಚ್ಚಿನ ಕೊಡುಗೆ ನೀಡಿದರೂ, ಸ್ವಾತಂತ್ರ್ಯ ದೊರೆತು ಆರು ದಶಕಗಳು ಕಳೆದರೂ ಸಮಸ್ಯೆ ಬಗೆಹರಿದಿಲ್ಲ. ಯಾವುದೇ ದೇಶ ಅಭಿವೃದ್ಧಿ ಹೊಂದಲು ಬ್ಯಾಂಕಿಂಗ್ ಅಗತ್ಯ. ಭಾರತದ ಆರ್ಥಿಕತೆಗೆ ಬ್ಯಾಂಕಿಂಗ್ ಬೆನ್ನೆಲುಬು. ದೇಶ ಇನ್ನೂ ಕೂಡ ನಮ್ಮ ಕನಸಿನಂತೆ ಅಭಿವೃದ್ಧಿ ಹೊಂದಿಲ್ಲ.  ಕೈಗಾರಿಕಾ ಅಭಿವೃದ್ಧಿ ಕುಸಿದಿದೆ. ಉತ್ಪಾದನಾ ವಲಯದಲ್ಲಿ ಬಿಕ್ಕಟ್ಟು ಹೆಚ್ಚಾಗಿದೆ. ಉದ್ಯೋಗ ಸೃಷ್ಟಿಗೆ ತೊಂದರೆ ಉಂಟಾಗಿದೆ ಎಂದು ಅವರು ತಿಳಿಸಿದರು.ಕೃಷಿ ದೇಶದ ಬೆನ್ನೆಲುಬು. ಶೇಕಡಾ 70 ಜನರು ಕೃಷಿ ಅವಲಂಬಿತರಾಗಿದ್ದಾರೆ. ಕೃಷಿ ವಲಯದಲ್ಲೂ ಸಮಸ್ಯೆ ಹೆಚ್ಚಾಗಿದೆ ಇದು ದೇಶದ ಆರ್ಥಿಕತೆಗೆ ಕೊಡುಗೆ ಸಲ್ಲಿಸುವಲ್ಲಿ ವಿಫಲವಾಗಿದೆ ಎಂದರು.ನೂರು ಜನರು 250 ಬಿಲಿಯನ್ ಡಾಲರ್ ಹಣ ಹೊಂದಿದ್ದಾರೆ. ದೇಶದಲ್ಲಿ ಶೇಕಡಾ 70 ಜನ ಬಡವರಾಗಿದ್ದಾರೆ. ಅವರ ದಿನದ ಆದಾಯ 20 ರೂಪಾಯಿ ಆಗಿದೆ. ಪ್ರಜಾಪ್ರಭುತ್ವ, ಜಾತ್ಯಾತೀತತೆ, ಗಣರಾಜ್ಯ, ಸಾಮಾಜಿಕ ಮಾರ್ಗ ಕಾನೂನಿನ ನಾಲ್ಕು ಕಂಬಗಳು.ಆರ್ಥಿಕ ನ್ಯಾಯ ಅತೀ ಮುಖ್ಯ. ಸರ್ಕಾರದ ಆರ್ಥಿಕ ನೀತಿಯಿಂದ ಬೆಲೆ ಏರಿಕೆಯಾಗುತ್ತಿದೆ. ಹಣದುಬ್ಬರ ನಿಯಂತ್ರಿಸಲು ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ ಇದು ಸವಾಲಾಗಿ ಪರಿಣಮಿಸಿದೆ. ಕೆಟ್ಟ ಆರ್ಥಿಕ ನೀತಿ  ಹಣದುಬ್ಬರಕ್ಕೆ ಕಾರಣ ಇದರಿಂದ ಜನರು ಕಷ್ಟ ಅನುಭವಿಸುವಂತಾಗಿದೆ.  ಸೇವಾ ಸೋರಿಕೆಯ ಕಾರಣ ರಾಷ್ಟ್ರೀಯ ಉಳಿತಾಯ ಕುಸಿಯುತ್ತಿದೆ ಎಂದರು.ಜಾಗತಿಕ ಆರ್ಥಿಕ ಕುಸಿತ ಭಾರತಕ್ಕೆ ಪರಿಣಾಮ ಬೀರದಿದ್ದರೂ ಅಮೇರಿಕಾದ ಆರ್ಥಿಕ ಸ್ಥಿತಿಯನ್ನು ಅಲುಗಾಡಿಸಿತು. ಅಮೇರಿಕದಲ್ಲಿ 400 ಬ್ಯಾಂಕ್‌ಗಳು ಮುಚ್ಚಿದವು. ಸುಮಾರು 40 ಲಕ್ಷ ಜನ ನೌಕರಿ ಕಳೆದುಕೊಂಡರು. ಆದರೆ ಭಾರತದ ಬ್ಯಾಂಕ್‌ಗಳು ಸಾರ್ವಜನಿಕ ವಲಯದಲ್ಲಿರುವುದರಿಂದ ಪರಿಣಾಮ ಉಂಟಾಗಲಿಲ್ಲ. ದೇಶದಲ್ಲಿ ಸುಮಾರು 43 ಕೋಟಿ ಅಸಂಘಟಿತ ವಲಯದಲ್ಲಿ ನೌಕರರಿದ್ದಾರೆ. ಅವರು ಸೌಲಭ್ಯಗಳಿಂದ ವಂಚಿತರಾಗಿದ್ದಾರೆ ಎಂದು ಹೇಳಿದರು.ಅಮೆರಿಕಾದಲ್ಲಿ ಭದ್ರವಾದ ಬ್ಯಾಂಕ್ ನೌಕರರ ಸಂಘವಿಲ್ಲ. ಅವರು ನಮ್ಮ ಸಂಘಗಳ ಕಾರ್ಯ ಚಟುವಟಿಕೆ ತಿಳಿದು ಸಂಘಟನೆ ಕಟ್ಟಲು ಅಖಿಲ ಭಾರತ ಬ್ಯಾಂಕ್ ನೌಕರರ ಸಂಘವನ್ನು ಅಮೆರಿಕಕ್ಕೆ ಆಹ್ವಾನಿಸಿದ್ದಾರೆ ಎಂದು  ವೆಂಕಟಾಚಲಂ ತಿಳಿಸಿದರು.ಕಳೆದ ವಾರ ನಡೆಸಿದ್ದ ಮುಷ್ಕರಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗಿದ್ದು, ಸುಮಾರು 25 ಕೋಟಿ ಜನರು ಮುಷ್ಕರದಲ್ಲಿ ಭಾಗವಹಿಸಿದ್ದರು. ಇದು ವಿಶ್ವದ ಅತಿ ದೊಡ್ಡ ಮುಷ್ಕರ ಎಂದು ತಿಳಿಸಿದರು.ನೌಕರರಿಗೆ ಆಕರ್ಷಕ ವೇತನ, ವಸತಿ ಸೌಕರ್ಯ, ಸಾರಿಗೆ ಭತ್ತೆ, ಔಷಧಿ ವೆಚ್ಚ, ಬ್ಯಾಂಕಿಂಗ್ ವಲಯಕ್ಕೆ ಇನ್ನಷ್ಟು ಮಾನವ ಶಕ್ತಿ ಮೊದಲಾದದ ಬೇಡಿಗೆ ಈಡೇರಿಸಬೇಕು ಎಂದು ಅವರು ಒತ್ತಾಯಿಸಿದರು.ಕಾರ್ಪೋರೇಷನ್ ಬ್ಯಾಂಕ್ ನೌಕರರ ಒಕ್ಕೂಟ ಅಧ್ಯಕ್ಷ ವಾಲ್ಟರ್ ಲಾಸ್ರದೊ ಅಧ್ಯಕ್ಷತೆ ವಹಿಸಿದ್ದರು. ಕಾರ್ಪೋರೇಶನ್ ಬ್ಯಾಂಕಿನ ಆಡಳಿತ ನಿರ್ದೇಶಕ ಅಜಯ್ ಕುಮಾರ್, ಕಾರ್ಯ ನಿರ್ವಾಹಕ ನಿರ್ದೇಶಕ ಅಮರ್‌ಲಾಲ್ ದೌಲ್ತಾನಿ, ಬಿ.ಪಿ. ಶ್ರೀವತ್ಸ, ಅಖಿಲ ಭಾರತ ಬ್ಯಾಂಕ್ ನೌಕರರ ಸಂಘದ ಜಂಟಿ ಕಾರ್ಯದರ್ಶಿ ಪಿ.ಆರ್. ಕಾರಂತ್, ಕರ್ನಾಟಕ ಪ್ರದೇಶ ಬ್ಯಾಂಕ್ ನೌಕರರ ಫೆಡರೇಶನ್ ಪ್ರಧಾನ ಕಾರ್ಯದರ್ಶಿ ಎಚ್.ವಸಂತ್ ರೈ, ಕಾರ್ಪೋರೇಶನ್ ಬ್ಯಾಂಕ್ ಅಧಿಕಾರಿಗಳ ಸಂಘದ ಪ್ರಧಾನ ಕಾರ್ಯದರ್ಶಿ ಎ.ಎನ್. ಸುರೇಶ್, ಪದಾಧಿಕಾರಿಗಳಾದ ಸಿ.ಎಚ್. ಹನುಮಂತರಾವ್, ರಘುವರ್ಮ, ವಿನ್ಸೆಂಟ್ ಡಿಸೋಜ, ಪ್ರಸಾದ್ ನಾಯಕ್, ರಾಜೇಂದ್ರ ಪಾಸೆ, ಯು.ಶಿವರಾಯ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry