ಶುಕ್ರವಾರ, ಏಪ್ರಿಲ್ 23, 2021
22 °C

ಖಾಸಗೀಕರಣ ಚಿಂತನೆಗೆ ವಿರೋಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಡಿಬಂಡೆ: ಎಲ್ಲಾ ಕ್ಷೇತ್ರಗಳಲ್ಲಿ ಖಾಸಗೀಕರಣ ತರುವ ಪ್ರಧಾನಮಂತ್ರಿಗಳ ಆಲೋಚನೆಗೆ ರಾಜ್ಯಸರ್ಕಾರ ಪುಷ್ಟಿ ನೀಡಿರುವುದು ಖಂಡನೀಯ. ಅಂಗನವಾಡಿ ನೌಕರರನ್ನು ಐಸಿಡಿಸಿ ಮೂಲಕ ಕಾಯಂ ಮಾಡಿಕೊಳ್ಳಬೇಕು ಎಂದು ಅಂಗನವಾಡಿ ನೌಕರರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್.ವರಲಕ್ಷ್ಮಿ ಆಗ್ರಹಿಸಿದ್ದಾರೆ.ಸೇವೆ ಕಾಯಂ, ಕನಿಷ್ಠ ಕೂಲಿಗೆ ಆಗ್ರಹಿಸಿ, ಖಾಸಗೀಕರಣ ವಿರೋಧಿಸಿ ಸಿಐಟಿಯು ಮತ್ತು ಅಂಗನವಾಡಿ ನೌಕರರ ಸಂಘ ಪಟ್ಟಣದ ಮಿನಿವಿಧಾನ ಸೌಧ ಆವರಣದಲ್ಲಿ ಮಂಗಳವಾರ ನಡೆದ ಚಿಕ್ಕಬಳ್ಳಾಪುರ ಜಿಲ್ಲಾ ಅಂಗನವಾಡಿ ನೌಕರರ 4ನೇ ಸಮಾವೇಶ ಉದ್ಘಾಟಿಸಿ ಮಾತನಾಡಿದರು.11ನೇ ಪಂಚವಾರ್ಷಿಕ ಯೋಜನೆ ವರದಿಯಂತೆ ಐಸಿಡಿಸಿ ಮೂಲಕ ಅಂಗನವಾಡಿ ಕೇಂದ್ರಗಳಿಗೆ ಉತ್ತಮ ಕಟ್ಟಡ, ಆಹಾರ ಪದಾರ್ಥಗಳು, ಆಟೋಟ ಪರಿಕರ ಸೇರಿದಂತೆ ಮೂಲ ಸೌಕರ್ಯ ಕಲ್ಪಿಸಲು ಶಿಫಾರಸು ಮಾಡಲಾಗಿದೆ.ಅದೆಲ್ಲ ಕಡೆಗಣಿಸಿ ಅಂಗನವಾಡಿ ನೌಕರರನ್ನು ಹತ್ತು ಗಂಟೆಗೂ ಹೆಚ್ಚು ಸಮಯ ದುಡಿಸಿಕೊಂಡು ಕೇವಲ 4500 ಕೂಲಿ ನೀಡುತ್ತಿದ್ದಾರೆ. ಇಂತಹ ನೀತಿಯನ್ನು ರಾಜ್ಯ ಹಾಗೂ ಕೇಂದ್ರ ಸರ್ಕಾರ ಕೈ ಬಿಟ್ಟು, ಕನಿಷ್ಠ ಹತ್ತು ಸಾವಿರ ರೂಪಾಯಿ ವೇತನ ನಿಗದಿಪಡಿಸಬೇಕು, ಅಂಗನವಾಡಿ ನೌಕರರ ಸೇವೆ ಕಾಯಂ ಮಾಡಬೇಕು ಎಂದು ಆಗ್ರಹಿಸಿದರು.ಕೇಂದ್ರ ಸಚಿವ ಎಂ.ವೀರಪ್ಪಮೊಯ್ಲಿ ಸ್ಥಳೀಯ ಸಮಸ್ಯೆ ಅರಿಯುತ್ತಿಲ್ಲ. ಭ್ರಷ್ಟಾಚಾರದ ಗಣಿ ಹಗರಣ ಆರೋಪ ಹೊತ್ತ ಸಂಸ್ಥೆಗಳಲ್ಲಿ ಒಂದಾದ ವೇದಾಂತ ಫೌಂಡೇಷನ್ ಜೊತೆ 4 ಜಿಲ್ಲೆಗಳ ಅಂಗನವಾಡಿ ಕೇಂದ್ರಗಳಿಗೆ ವಸ್ತುಗಳನ್ನು ಪೂರೈಸಲು ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ಸರ್ಕಾರಗಳಿಗೆ ನೈತಿಕತೆ ಕೊರತೆ ಇದೆ. ಕೂಡಲೇ ಅಂಗನವಾಡಿ ನೌಕರರ ಬೇಡಿಕೆಗೆ ಸರ್ಕಾರಗಳು ಸ್ಪಂದಿಸದಿದ್ದರೆ ಉಗ್ರ ಹೋರಾಟ ಮಾಡುತ್ತೇವೆ ಎಂದರು.ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಸಾವಿತ್ಮಮ್ಮ ಮಾತನಾಡಿದರು. ಬಹಿರಂಗ ಸಭೆಗೂ ಮುನ್ನ ಪಟ್ಟಣದ ಮುಖ್ಯ ಬೀದಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಘೋಷಣೆಗಳನ್ನು ಕೂಗುತ್ತಾ, ಮೆರವಣಿಗೆ ನಡೆಸಿದರು.ಸಿಐಟಿಯು ಜಿಲ್ಲಾ ಘಟಕದ ಅಧ್ಯಕ್ಷ ಸಿದ್ದಲಿಂಗಪ್ಪ, ಉಪಾಧ್ಯಕ್ಷ ವೆಂಕಟೇಶ್ ಬಾಬು, ಅಂಗನವಾಡಿ ನೌಕರರ ಜಿಲ್ಲಾಧ್ಯಕ್ಷೆ ಗರುಡಾಚಾರ‌್ಲ ಭಾಗ್ಯಮ್ಮ, ಕಾರ್ಯದರ್ಶಿ ಲಕ್ಷ್ಮೀದೇವಮ್ಮ, ತಾಲ್ಲೂಕು ಘಟಕದ ಅಧ್ಯಕ್ಷೆ ಜಯಲಕ್ಷ್ಮಮ್ಮ, ತಾಲ್ಲೂಕು ಪಂಚಾಯಿತಿ ಸದಸ್ಯ ಮುನಿರೆಡ್ಡಿ, ಪಿ.ಎಲ್.ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಜಯರಾಮರೆಡ್ಡಿ, ಸಿ.ಪಿ.ಎಂ ಮುಖಂಡರಾದ ಜಯರಾಮರೆಡ್ಡಿ, ಲಕ್ಷ್ಮೀನಾರಾಯಣ, ವಿವಿಧ ತಾಲ್ಲೂಕುಗಳ ಅಂಗನವಾಡಿ ನೌಕರರ ಸಂಘದ ಪದಾಧಿಕಾರಿಗಳು ಭಾಗವಹಿಸಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.