ಖಿನ್ನತೆ ನಿವಾರಣೆಗೆ ಯೋಗ ಅಗತ್ಯ

ಸೋಮವಾರ, ಮೇ 27, 2019
27 °C

ಖಿನ್ನತೆ ನಿವಾರಣೆಗೆ ಯೋಗ ಅಗತ್ಯ

Published:
Updated:

ಹರಪನಹಳ್ಳಿ: ಜೀವನಶೈಲಿ ಹಾಗೂ ಆಹಾರ ಪದ್ಧತಿಯಲ್ಲಿನ ವ್ಯತ್ಯಾಸ ಸೇರಿದಂತೆ ದೈನಂದಿನ ಕಾರ್ಯಭಾರಗಳ ಒತ್ತಡದ ಮಧ್ಯೆ ಮನುಷ್ಯ ಮಾನಸಿಕ ಹಾಗೂ ದೈಹಿಕ ಖಿನ್ನತೆ ಒಳಗಾಗುತ್ತಿದ್ದಾನೆ. ಖಿನ್ನತೆಯಿಂದ ಹೊರಬರಲು ಯೋಗ ಒಂದೇ ಪರಿಹಾರದ ಮದ್ದು ಎಂದು ಸಚಿವ ಎಸ್.ಎ. ರವೀಂದ್ರನಾಥ್ ಅಭಿಪ್ರಾಯಪಟ್ಟರು.

ತಾಲ್ಲೂಕಿನ ಕಂಚಿಕೆರೆ ಗ್ರಾಮದ ಹೊರವಲಯದ ಕೋಡಿಸಿದ್ದೇಶ್ವರ ದೇವಸ್ಥಾನದ ಸಮುದಾಯ ಭವನದಲ್ಲಿ ಈಚೆಗೆ ಜಿಲ್ಲಾ ಆಯುಷ್ ಇಲಾಖೆ, ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯ್ತಿ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಜಿಲ್ಲೆಯಲ್ಲಿಯೇ ಮೊದಲ ಬಾರಿಗೆ ಹಮ್ಮಿಕೊಂಡಿರುವ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರ ಪ್ರಶಿಕ್ಷಣ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಖಿನ್ನತೆ ಹಾಗೂ ದೈಹಿಕ ಕಾಯಿಲೆಗಳು ಜೀವನದಲ್ಲಿ ಸದಾ ನಿರಾಸೆಯ ಮನೋಭಾವ, ಜುಗುಪ್ಸೆ, ಅಧೈರ್ಯ ಹಾಗೂ ಅಸ್ಥಿರತೆಯ ಅಪಾಯಕಾರಿ ಕಾಲಘಟ್ಟಕ್ಕೆ ಮನುಷ್ಯನನ್ನು ತಳ್ಳುತ್ತಿವೆ. ಇಂತಹ ಕಾಯಿಲೆಗೆ ತುತ್ತಾದ ತಕ್ಷಣ ನಾವು ವೈದ್ಯರ ಬಳಿ ಹೋಗುತ್ತೇವೆ. ದೇಸಿಯ ಆರ್ಯುವೇದಿಕ್ ವೈದ್ಯಪದ್ಧತಿ ಹಾಗೂ ಯೋಗ, ಪ್ರಾಣಾಯಾಮದಂತಹ ಚಿಕಿತ್ಸೆಗಳು ಕೈಗೆಟುಕುವ ಬೆಲೆಯಲ್ಲಿದ್ದರೂ ಸಹ, ಅವುಗಳ ಉಪಯೋಗಿಸುವ ವಿಧಾನದ ಕೊರತೆಯ ತೊಳಲಾಟದಲ್ಲಿ ಸಿಲುಕಿದ್ದೇವೆ. ಅನಾದಿ ಕಾಲದಿಂದಲೂ ಯೋಗವನ್ನು ಕೆಲ ವರ್ಗದ ಜನ ಪರಿಪಾಲಿಸಿಕೊಂಡು ಬಂದಿದ್ದಾರೆ. ಯೋಗ ಉತ್ತಮ ಆರೋಗ್ಯದ ರಹದಾರಿಯೂ ಹೌದು ಎಂದರು.

ಮಿತ ಹಾಗೂ ಸೂಕ್ತವಾದ ಆಹಾರ ಪದ್ಧತಿ ಉತ್ತಮ ಆರೋಗ್ಯದ ಗುಟ್ಟು ಎಂಬುದನ್ನು ಆರ್ಯುವೇದ ಹೇಳುತ್ತದೆ. ಆದರೆ, ಆರೋಗ್ಯದ ಈ ಮೂಲಮಂತ್ರವನ್ನು ವೈದ್ಯರೂ, ಯಾವ ರೋಗಿಗೂ ಮನವರಿಕೆ ಮಾಡಿಕೊಡುತ್ತಿಲ್ಲ. ಯೋಗಶಿಕ್ಷಣವನ್ನು ಬರುವ ಶೈಕ್ಷಣಿಕ ವರ್ಷದಿಂದಲೇ ಪಠ್ಯಪುಸ್ತಕದಲ್ಲಿ ಅಳವಡಿಸಲು ಸರ್ಕಾರ ಚಿಂತನೆ ನಡೆಸಿದೆ. ಶಿಕ್ಷಕರು ಆಯುಷ್ ಹಮ್ಮಿಕೊಂಡಿರುವ ತರಬೇತಿ ಕಾರ್ಯಾಗಾರದಲ್ಲಿ ಶ್ರದ್ಧೆಯಿಂದ ಸಕ್ರಿಯವಾಗಿ ತೊಡಗಿಸಿಕೊಳ್ಳುವ ಮೂಲಕ, ಉತ್ತಮ ತರಬೇತಿ ಪಡೆದು, ಮಕ್ಕಳಲ್ಲಿಯೂ ಯೋಗದ ಮಹತ್ವ ಬೋಧಿಸಬೇಕು ಎಂದು ಸಲಹೆ ನೀಡಿದರು.

ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಮೆಳ್ಳೆಕಟ್ಟೆ ಚಿದಾನಂದ ಐಗೂರು, ಸದಸ್ಯೆ ಮಂಜುಳಾ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಬಿ.ಆರ್. ಸುಮಿತ್ರಾದೇವಿ, ಜಿಲ್ಲಾ ಆಯುಷ್ ಅಧಿಕಾರಿ ಡಾ.ಯು. ಸಿದ್ದೇಶಿ, ತಾಲ್ಲೂಕು ವೈದ್ಯಾಧಿಕಾರಿ ಡಾ.ಚಂದ್ರನಾಯ್ಕ, ಕ್ಷೇತ್ರ ಶಿಕ್ಷಣಾಧಿಕಾರಿ ವೀರಣ್ಣ ಎಸ್. ಜತ್ತಿ, ತಾಲ್ಲೂಕು ಪಂಚಾಯ್ತಿ ಸದಸ್ಯೆ ಜಯಲಕ್ಷ್ಮೀ, ಕಾರ್ಯ ನಿರ್ವಹಣಾಧಿಕಾರಿ ಟಿ. ಪಾಂಡ್ಯಪ್ಪ, ಗ್ರಾಮ ಪಂಚಾಯ್ತಿ ಅಧ್ಯಕ್ಷೆ ದುರ್ಗಿಬಾಯಿ, ಡಾ.ಬಿದ್ರಿ ಕೊಟ್ರೇಶ್ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry