ಖುದ್ದು ಹಾಜರಿ ಕಡ್ಡಾಯ

7

ಖುದ್ದು ಹಾಜರಿ ಕಡ್ಡಾಯ

Published:
Updated:
ಖುದ್ದು ಹಾಜರಿ ಕಡ್ಡಾಯ

ಬೆಂಗಳೂರು: ಕಾನೂನುಬಾಹಿರವಾಗಿ ಜಂತಕಲ್ ಮೈನಿಂಗ್ ಕಂಪೆನಿಯ ಗಣಿ ಗುತ್ತಿಗೆ ನವೀಕರಣಕ್ಕೆ ಶಿಫಾರಸು ಮಾಡಿರುವ ಮತ್ತು ವಿಶ್ವಭಾರತಿ ಗೃಹ ನಿರ್ಮಾಣ ಸಹಕಾರ ಸಂಘಕ್ಕೆ ಅನುಕೂಲ ಮಾಡಿಕೊಟ್ಟಿರುವ ಪ್ರಕರಣದ ಆರೋಪಿಗಳಾಗಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಅವರ ಪತ್ನಿ ಅನಿತಾ ಕುಮಾರಸ್ವಾಮಿ ಮತ್ತು ಕಂಪೆನಿ ಮುಖ್ಯಸ್ಥ ವಿನೋದ್ ಗೋಯಲ್ ಅವರ ಖುದ್ದು ಹಾಜರಿಗೆ ಮಂಗಳವಾರಕ್ಕೆ ಸೀಮಿತವಾಗಿ ವಿನಾಯಿತಿ ನೀಡಿರುವ ಲೋಕಾಯುಕ್ತ ವಿಶೇಷ ನ್ಯಾಯಾಲಯ, ಸೆಪ್ಟೆಂಬರ್ 5ರಂದು ಕಡ್ಡಾಯವಾಗಿ ಹಾಜರಾಗುವಂತೆ ಆದೇಶಿಸಿದೆ.ವಕೀಲ ವಿನೋದ್‌ಕುಮಾರ್ ಸಲ್ಲಿಸಿರುವ ಖಾಸಗಿ ದೂರಿಗೆ ಸಂಬಂಧಿಸಿದಂತೆ ಲೋಕಾಯುಕ್ತ ವಿಶೇಷ ನ್ಯಾಯಾಲಯ ಸಮನ್ಸ್ ಜಾರಿ ಮಾಡಿದ್ದ ಹಿನ್ನೆಲೆಯಲ್ಲಿ ಮಂಗಳವಾರ ನ್ಯಾಯಾಲಯದ ಮುಂದೆ ವಿಚಾರಣೆಗೆ ಹಾಜರಾಗಬೇಕಿತ್ತು. ಆದರೆ ಅನಾರೋಗ್ಯದ ಕಾರಣ ವಿನಾಯಿತಿ ಕೋರಿ ಕುಮಾರಸ್ವಾಮಿ ದಂಪತಿ ಮತ್ತು ಗೋಯಲ್ ಪರ ವಕೀಲರು ಸಲ್ಲಿಸಿದ ಅರ್ಜಿಯನ್ನು ನ್ಯಾಯಾಧೀಶ ಎನ್.ಕೆ.ಸುಧೀಂದ್ರ ರಾವ್ ಮಾನ್ಯ ಮಾಡಿದರು.ಅಲ್ಲದೆ, ಒಂದೆಡೆ ನಿರೀಕ್ಷಣಾ ಜಾಮೀನು ಕೋರಿ ಕುಮಾರಸ್ವಾಮಿ ದಂಪತಿ ಸಲ್ಲಿಸಿದ್ದ ಅರ್ಜಿಯನ್ನು ಲೋಕಾಯುಕ್ತ ವಿಶೇಷ ನ್ಯಾಯಾಲಯ ವಜಾ ಮಾಡಿದರೆ, ಮತ್ತೊಂದೆಡೆ ಸಮನ್ಸ್ ಜಾರಿ ಮಾಡಿ ಹೊರಡಿಸಿರುವ ಆದೇಶವನ್ನು ರದ್ದುಪಡಿಸುವಂತೆ ಕೋರಿ ಇವರಿಬ್ಬರು ಸಲ್ಲಿಸಿದ್ದ ಅರ್ಜಿ ಹೈಕೋರ್ಟ್‌ನಲ್ಲೂ ವಜಾ ಆಗಿದೆ. ಹೀಗಾಗಿ ಆಯ್ಕೆಯ ಅವಕಾಶಗಳು ಕ್ಷೀಣಿಸಿದ್ದು, ಸೆ.5ರಂದು ಹಾಜರಾಗುವುದು ಅನಿವಾರ್ಯ ಆಗಲಿದೆ.

ವಜಾ ಮಾಡಿಬಿಡಿ!
ಬೆಳಿಗ್ಗೆ ನಡೆದ ವಿಚಾರಣೆ ಸಂದರ್ಭದಲ್ಲಿ ಕುಮಾರಸ್ವಾಮಿ ದಂಪತಿ ಪರ ವಕೀಲ ಹಸ್ಮತ್ ಪಾಷಾ ಅವರು 15 ದಿನಗಳ ಕಾಲಾವಕಾಶ ನೀಡಬೇಕು ಎಂದು ಕೋರಿದರು. ಆಗ ನ್ಯಾಯಾಧೀಶರು ಅರ್ಜಿದಾರರಾದ ವಿನೋದ್‌ಕುಮಾರ್ ಕಡೆಯವರ ಅಭಿಪ್ರಾಯ ಕೇಳಿದರು. ಆದರೆ ಅವರ ವಕೀಲರಾದ ಆರ್.ಎನ್.ಪಾಟೀಲ ಹಾಜರಿರಲಿಲ್ಲ.

ಇದನ್ನೇ ನೆಪವಾಗಿ ಬಳಸಿಕೊಂಡ ಹಸ್ಮತ್ ಪಾಷಾ, ಅರ್ಜಿದಾರರ ಪರ ವಕೀಲರು ಹಾಜರಿಲ್ಲದೆ ಇರುವುದರಿಂದ ಅರ್ಜಿಯನ್ನು ವಜಾ ಮಾಡಬೇಕು ಎಂದು ಕೋರಿದರು. ಆಗ ನ್ಯಾಯಾಧೀಶರು ಸೇರಿದಂತೆ ಕೋರ್ಟ್ ಹಾಲ್‌ನಲ್ಲಿದ್ದ ವಕೀಲರು ಒಂದು ಕ್ಷಣ ನಕ್ಕರು. `ಅರ್ಜಿದಾರರು ಹಾಜರಿಲ್ಲ ಎಂಬ ಕಾರಣಕ್ಕೆ ಪ್ರಕರಣವನ್ನು ವಜಾ ಮಾಡಲು ಸಾಧ್ಯವಿಲ್ಲ ಎಂಬುದು ನಿಮಗೂ (ಹಸ್ಮತ್ ಪಾಷಾ) ಗೊತ್ತಿದೆ, ನನಗೂ ಗೊತ್ತಿದೆ~ ಎಂದು ನ್ಯಾಯಾಧೀಶರು ಚಟಾಕಿ ಹಾರಿಸಿದರು.

ಮಂಗಳವಾರ ಬೆಳಿಗ್ಗೆ 11 ಗಂಟೆಗೆ ಕಲಾಪ ಆರಂಭವಾಗುತ್ತಿದ್ದಂತೆಯೇ ನ್ಯಾಯಾಧೀಶ ಎನ್.ಕೆ.ಸುಧೀಂದ್ರ ರಾವ್ ಅವರು ಜಾಮೀನು ಅರ್ಜಿಯನ್ನು ವಜಾ ಮಾಡಿದರು. ಅಲ್ಲದೆ ತಕ್ಷಣವೇ ವಿನೋದ್‌ಕುಮಾರ್ ಸಲ್ಲಿಸಿರುವ ದೂರಿನ ವಿಚಾರಣೆ ಕೈಗೆತ್ತಿಕೊಳ್ಳುತ್ತಿದ್ದಂತೆಯೇ `ಇದೇ ವಿಷಯಕ್ಕೆ ಸಂಬಂಧಿಸಿದಂತೆ ಹೈಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದೆ. ಆದ್ದರಿಂದ ಸ್ವಲ್ಪ ಹೊತ್ತು ಮುಂದಕ್ಕೆ ಹಾಕಿ~ ಎಂದು ಕುಮಾರಸ್ವಾಮಿ ದಂಪತಿ ಪರ ವಕೀಲರು ಮನವಿ ಮಾಡಿದರು. ಇದಕ್ಕೆ ನ್ಯಾಯಾಧೀಶರೂ ಸಮ್ಮತಿಸಿದರು.ಮತ್ತೆ ಮಧ್ಯಾಹ್ನ 12.20ಕ್ಕೆ ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಳ್ಳುತ್ತಿದ್ದಂತೆಯೇ `ಕೆಲವೇ ನಿಮಿಷಗಳಲ್ಲಿ ಆರೋಪಿಗಳ ಪರ ವಕೀಲರು ಹಾಜರಾಗಲಿದ್ದಾರೆ. ಸ್ವಲ್ಪ ಸಮಯಾವಕಾಶ ನೀಡಿ~ ಎಂದು ಕಿರಿಯ ವಕೀಲರೊಬ್ಬರು ಮನವಿ ಮಾಡಿದರು. ಇದಕ್ಕೂ ಸಮ್ಮತಿ ದೊರೆಯಿತು. ಇದಾದ ಅರ್ಧ ಗಂಟೆಗೆ ಮತ್ತೆ ವಿಚಾರಣೆಯನ್ನು ಆರಂಭಿಸಿದಾಗ ಹಾಜರಾದ ಕುಮಾರಸ್ವಾಮಿ ದಂಪತಿ ಪರ ವಕೀಲ ಹಸ್ಮತ್ ಪಾಷಾ, ಖುದ್ದು ಹಾಜರಿಗೆ ವಿನಾಯಿತಿ ನೀಡುವುದರ ಜೊತೆಗೆ 15 ದಿನಗಳ ಕಾಲಾವಕಾಶ ನೀಡಬೇಕು ಎಂದು ಮನವಿ ಮಾಡಿದರು.

 

ಆದೇಶ ರದ್ದು ಮಾಡಲು ನಿರಾಕರಣೆ
ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಅವರ ಪತ್ನಿ, ಶಾಸಕಿ ಅನಿತಾ ಕುಮಾರಸ್ವಾಮಿ ಅವರು ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಲೋಕಾಯುಕ್ತ ವಿಶೇಷ ಕೋರ್ಟ್ ವಜಾಗೊಳಿಸಿದರೆ, ಇತ್ತ ವಿಶೇಷ ಕೋರ್ಟ್ ಸಮನ್ಸ್ ಜಾರಿ ಮಾಡಿ ಹೊರಡಿಸಿದ್ದ ಆದೇಶವನ್ನು ರದ್ದು ಮಾಡಲು ಹೈಕೋರ್ಟ್ ನಿರಾಕರಿಸಿತು.ಜಂತಕಲ್ ಮೈನಿಂಗ್ ಕಂಪೆನಿ ಮತ್ತು ವಿಶ್ವಭಾರತಿ ಗೃಹ ನಿರ್ಮಾಣ ಸಹಕಾರ ಸಂಘಕ್ಕೆ ಕಾನೂನು ವ್ಯಾಪ್ತಿ ಮೀರಿ ಅನುಕೂಲ ಮಾಡಿಕೊಟ್ಟಿರುವ ವಿವಾದಕ್ಕೆ ಸಂಬಂಧಿಸಿದಂತೆ ಕೋರ್ಟ್ ಸಮನ್ಸ್ ಜಾರಿಗೆ ಆದೇಶಿಸಿತ್ತು.`ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯ 19(3)(ಸಿ) ಕಲಮಿನ ಅಡಿ ದಾಖಲು ಮಾಡಲಾದ ಪ್ರಕರಣಗಳಲ್ಲಿ ಕೋರ್ಟ್‌ಗಳು ಸಮನ್ಸ್ ಜಾರಿಗೆ ಆದೇಶಿಸಿದರೆ ಅದನ್ನು ರದ್ದು ಮಾಡಬಾರದು ಎಂದು ಕಾಯ್ದೆಯೇ ಹೇಳುತ್ತದೆ. ಈ ಕುರಿತು ಸುಪ್ರೀಂಕೋರ್ಟ್ ಕೂಡ ತಿಳಿಸಿದೆ. ಈ ಹಿನ್ನೆಲೆಯಲ್ಲಿ ಅರ್ಜಿಯನ್ನು ಮಾನ್ಯ ಮಾಡಲಾಗದು~ ಎಂದು ನ್ಯಾಯಮೂರ್ತಿ ಕೆ.ಎನ್.ಕೇಶವನಾರಾಯಣ ಅವರು ತೀರ್ಪಿನಲ್ಲಿ ಉಲ್ಲೇಖಿಸಿದ್ದಾರೆ. ಆದರೆ, ಇವರ ವಿರುದ್ಧ ವಕೀಲ ವಿನೋದ್‌ಕುಮಾರ್ ಅವರು ವಿಶೇಷ ಕೋರ್ಟ್‌ನಲ್ಲಿ ಸಲ್ಲಿಸಿರುವ ದೂರಿನ ಅನ್ವಯ ಅಲ್ಲಿ ನಡೆಯುತ್ತಿರುವ ವಿಚಾರಣೆಗೆ ತಡೆ ಕೋರುವಂತೆ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿಗಳು ವಿಚಾರಣೆಗೆ ಅಂಗೀಕರಿಸಿದರು.`ಬೆಳಿಗ್ಗೆ ಅಷ್ಟೇ ತಾವು ನಿರೀಕ್ಷಣಾ ಜಾಮೀನು ಅರ್ಜಿಯನ್ನು ವಜಾ ಮಾಡಿದ್ದೀರಿ, ಅಲ್ಲದೆ ವಿಚಾರಣೆಗೆ ತಡೆ ಕೋರಿ ಸಲ್ಲಿಸಿರುವ ಅರ್ಜಿಯ ವಿಚಾರಣೆ ಹೈಕೋರ್ಟ್‌ನಲ್ಲಿ ಬಾಕಿ ಇದ್ದು, ಜಾಮೀನು ಅರ್ಜಿ ಸಲ್ಲಿಸಬೇಕಾಗಿದೆ. ಆದ್ದರಿಂದ ಕಾಲಾವಕಾಶದ ಅಗತ್ಯವಿದೆ~ ಎಂಬುದನ್ನು ನ್ಯಾಯಾಧೀಶರ ಗಮನಕ್ಕೆ ತಂದರು.`ನನ್ನ ಮುಂದೆ ಇರುವುದು ಎರಡು ಆಯ್ಕೆಗಳು ಮಾತ್ರ. ಒಂದು ಸಮನ್ಸ್ ಮತ್ತೊಂದು ವಾರೆಂಟ್. ಈಗಾಗಲೇ ಸಮನ್ಸ್ ಜಾರಿ ಮಾಡಲಾಗಿದೆ. ಆರೋಪಿಗಳು ಹಾಜರಾಗದೆ ಕಾಲಾವಕಾಶ ಕೇಳಿದರೆ ಹೇಗೆ? ಅಪರಾಧ ದಂಡ ಪ್ರಕ್ರಿಯಾ ಸಂಹಿತೆಯ 205ನೇ ಕಲಮಿನ ಅಡಿ ವಿನಾಯಿತಿ ನೀಡಲು ಆಗುವುದಿಲ್ಲ. 88ನೇ ಕಲಮಿನ ಅಡಿ ಬಾಂಡ್ ಮೇಲೆ ಜಾಮೀನಿಗೆ ಅರ್ಜಿ ಸಲ್ಲಿಸಲು ಅವಕಾಶ ಇದೆ. ಅದರ ಬಳಕೆ ಮಾಡಿಕೊಳ್ಳಬಹುದು ಎಂದು ನ್ಯಾಯಾಧೀಶರು ತಿಳಿಸಿದರು. ವಾದ- ಪ್ರತಿವಾದ ಆಲಿಸಿದ ನಂತರ `ಮೊದಲು ಅರ್ಜಿ ಸಲ್ಲಿಸಿ, ಆ ನಂತರ ತೀರ್ಪು ನೀಡುತ್ತೇನೆ~ ಎಂದು ಹೇಳಿ ವಿಚಾರಣೆಯನ್ನು ಮಧ್ಯಾಹ್ನ 3 ಗಂಟೆಗೆ ಮುಂದೂಡಿದರು.ಅನಾರೋಗ್ಯ: ಮಧ್ಯಾಹ್ನ ವಿಚಾರಣೆ ಆರಂಭವಾಗುತ್ತಿದ್ದಂತೆಯೇ ಕುಮಾರಸ್ವಾಮಿ ದಂಪತಿ ಪರ ವಕೀಲರು ಅನಾರೋಗ್ಯದ ಪ್ರಮಾಣ ಪತ್ರ ಸಲ್ಲಿಸಿ, ಖುದ್ದು ಹಾಜರಿಗೆ ವಿನಾಯಿತಿ ನೀಡುವಂತೆ ಕೋರಿದರು.`ಕುಮಾರಸ್ವಾಮಿ ಅವರು ಮಧುಮೇಹ, ರಕ್ತದೊತ್ತಡ, ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದಾರೆ. ಅವರ ಪತ್ನಿ ಅನಿತಾ ಅವರಿಗೆ ಸಂಧಿವಾತ, ಮೊಣಕಾಲು ನೋವು ಇದೆ. ಧ್ಯಾನ, ಯೋಗ ಇತ್ಯಾದಿಗಳ ಅಗತ್ಯವಿದೆ. ಹೀಗಾಗಿ ಖುದ್ದು ಹಾಜರಾಗಲು ಸಾಧ್ಯವಾಗುತ್ತಿಲ್ಲ~ ಎಂದು ನ್ಯಾಯಾಲಯದ ಗಮನಕ್ಕೆ ತಂದರು.ಅಲ್ಲದೆ ಹೈಕೋರ್ಟ್‌ನಲ್ಲಿ ಜಾಮೀನಿಗೆ ಅರ್ಜಿ ಸಲ್ಲಿಸಬೇಕಾಗಿದೆ. ಬುಧವಾರದಿಂದ ಭಾನುವಾರದವರೆಗೂ ರಜೆ ಇರುತ್ತದೆ. ಹೀಗಾಗಿ 15 ದಿನಗಳ ಕಾಲಾವಕಾಶ ಬೇಕು ಎಂದು ಪುನಃ ಮನವಿ ಮಾಡಿದರು. ಆದರೆ ವಕೀಲರ ಮನವಿಯನ್ನು ಮಾನ್ಯ ಮಾಡದ ನ್ಯಾಯಾಧೀಶರು, ಸೋಮವಾರದವರೆಗೆ ಖುದ್ದು ಹಾಜರಿಗೆ ವಿನಾಯಿತಿ ನೀಡಲಾಗಿದೆ. ಮಂಗಳವಾರ (ಸೆ.5ರಂದು) ಕಡ್ಡಾಯವಾಗಿ ಹಾಜರಾಗಬೇಕು ಎಂದು ಆದೇಶಿಸಿದರು.ಈ ಪ್ರಕರಣದ ಮೂರನೇ ಆರೋಪಿ ವಿನೋದ್ ಗೋಯಲ್ ಸಹ ಗೈರು ಹಾಜರಾಗಿದ್ದರು. ಅವರ ವಕೀಲರು ಅನಾರೋಗ್ಯ ಮತ್ತು ಸಂಬಂಧಿಕರ ಸಾವಿನ ಕಾರಣ ನೀಡಿ ಖುದ್ದು ಹಾಜರಿಯಿಂದ ವಿನಾಯಿತಿ ಕೋರಿದರು. ಬೆನ್ನುನೋವಿನಿಂದ ಬಳಲುತ್ತಿರುವ ಗೋಯಲ್ ಮುಂಬೈನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೀಗಾಗಿ ಖುದ್ದು ಹಾಜರಾಗಲು ಸಾಧ್ಯವಾಗಿಲ್ಲ. ಅವರ ಪ್ರತಿನಿಧಿಯಾಗಿ ಮದನ್ ಮೋಹನ್ ಬಂದಿದ್ದಾರೆ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಾಧೀಶರು, ಪ್ರತಿಯೊಬ್ಬ ಆರೋಪಿಯೂ ಅನಾರೋಗ್ಯದ ನೆಪದಡಿ ವಿನಾಯಿತಿ ಕೇಳುವ ಪ್ರವೃತ್ತಿ ಸರಿಯಲ್ಲ ಎಂದರು. ಕೊನೆಗೆ ವಕೀಲರ ಮನವಿಗೆ ಸ್ಪಂದಿಸಿ ಗೋಯಲ್ ಅವರಿಗೂ ಮಂಗಳವಾರಕ್ಕೆ ಸೀಮಿತವಾಗಿ ವಿನಾಯಿತಿ ನೀಡಲಾಯಿತು.ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಅವರ ಪುತ್ರರು ಮತ್ತು ಅಳಿಯ ಸೋಮವಾರ ನ್ಯಾಯಾಲಯದ ಮುಂದೆ ಹಾಜರಾದಾಗ ಇದ್ದಷ್ಟು ಜನಜಂಗುಳಿ ಮಂಗಳವಾರ ಕೋರ್ಟ್ ಆವರಣದಲ್ಲಿ ಕಂಡುಬರಲಿಲ್ಲ. ಆದರೆ ಕುಮಾರಸ್ವಾಮಿ ದಂಪತಿ ನ್ಯಾಯಾಲಯದ ಮುಂದೆ ಹಾಜರಾಗಬಹುದು ಎಂಬ ನಿರೀಕ್ಷೆಯಿಂದ ವಕೀಲರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry