ಸೋಮವಾರ, ಜೂನ್ 21, 2021
23 °C

ಖುರ್ಷಿದ್‌ಗೆ ಛೀಮಾರಿ: ಸಮರ್ಥನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಐಎಎನ್‌ಎಸ್):  ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ ಪ್ರಚಾರದ ಸಂದರ್ಭದಲ್ಲಿ ಮುಸ್ಲಿಮರ ಒಳ ಮೀಸಲಾತಿ ಕುರಿತು ಹೇಳಿಕೆ ನೀಡಿ ವಿವಾದ ಸೃಷ್ಟಿಸಿದ್ದ ಕೇಂದ್ರ ಕಾನೂನು ಸಚಿವ ಸಲ್ಮಾನ್ ಖುರ್ಷಿದ್ ಅವರಿಗೆ ಛೀಮಾರಿ ಹಾಕಿದ ಆಯೋಗದ ಕ್ರಮವನ್ನು ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತ ಎಸ್.ವೈ.ಖುರೇಷಿ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ.`ಚುನಾವಣಾ ಆಯೋಗದ ಘನತೆ, ಗೌರವ ಮತ್ತು ಸಾಂವಿಧಾನಿಕ ಸ್ಥಾನಮಾನಗಳನ್ನು ಎತ್ತಿ ಹಿಡಿಯುವ ನಿಟ್ಟಿನಲ್ಲಿ ಈ ಕ್ರಮ ಅನಿವಾರ್ಯವಾಗಿತ್ತು~ ಎಂದು ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಅವರು ಅಭಿಪ್ರಾಯಪಟ್ಟಿದ್ದಾರೆ.`ವೈಯಕ್ತಿಕವಾಗಿ ಸಲ್ಮಾನ್ ಹಾಗೂ ನಾನು ಉತ್ತಮ ಸ್ನೇಹಿತರು. ಆದರೆ, ಕೆಲಸದ ವಿಷಯಕ್ಕೆ ಬಂದಾಗ ನಾವು ಕೆಲಸ ಮಾಡುವ ಸಂಸ್ಥೆ ಮತ್ತು ಕರ್ತವ್ಯ ಮುಖ್ಯವಾಗುತ್ತದೆಯೇ ಹೊರತು ವೈಯಕ್ತಿಕ ಸಂಬಂಧ, ಗೆಳೆತನವಲ್ಲ. ಕಾನೂನು ರಕ್ಷಣೆ ಮಾಡಬೇಕಾಗಿದ್ದ ಸಚಿವರೇ ಚುನಾವಣಾ ನೀತಿ  ಸಂಹಿತೆಯನ್ನು ಉಲ್ಲಂಘಿಸಿದರು. ಚುನಾವಣೆ ಸಂದರ್ಭದಲ್ಲಿ ಮುಸ್ಲಿಮರ ಒಳ ಮೀಸಲಾತಿ ಕುರಿತು ಅನಗತ್ಯ ವಿವಾದ ಹುಟ್ಟು ಹಾಕಿದರು~ ಎಂದು ಖುರೇಷಿ ಹೇಳಿದರು.ನೀತಿ ಸಂಹಿತೆ ಉಲ್ಲಂಘಿಸಿದ ಖುರ್ಷಿದ್, ಬೇಣಿ ಪ್ರಸಾದ್ ವರ್ಮ ಮತ್ತು ಶ್ರೀಪ್ರಕಾಶ್ ಜೈಸ್ವಾಲ್ ಅವರಂಥ ರಾಜಕಾರಣಿಗಳಿಗೆ ಕೇವಲ ಎಚ್ಚರಿಕೆ ನೀಡುವ ಬದಲು, ಚುನಾವಣಾ ಪ್ರಚಾರದಲ್ಲಿ ಭಾಗವಹಿಸದಂತೆ ತಡೆಯುವ ಅಧಿಕಾರ ಆಯೋಗಕ್ಕೆ ಇಲ್ಲವೇ? ಎಂಬ ಪ್ರಶ್ನೆಗೆ ಅವರು ಲಘು ಹಾಸ್ಯಮಿಶ್ರಿತ ಧಾಟಿಯಲ್ಲಿ ಉತ್ತರಿಸಿದರು.`ಅವರಿಗೆ ಈಗ ನೀಡಿರುವ ಎಚ್ಚರಿಕೆಯೇ ಸಾಕು! ಆಜನ್ಮಪರ್ಯಂತ ನೆನಪಿನಲ್ಲಿ ಉಳಿಯುತ್ತದೆ. ಮುಂದೆಂದಿಗೂ ಅವರು ಅಪ್ಪಿತಪ್ಪಿಯೂ ಮತ್ತೊಮ್ಮೆ ಇಂತಹ ತಪ್ಪನ್ನು ಮಾಡುವ ಧೈರ್ಯ ಮಾಡಲಾರರು. ಕೋಮು ಭಾವನೆ ಕೆರಳಿಸುವ ಭಾಷಣ ಮಾಡಿದ್ದ ಪಿಲಿಭಿಟ್ ಬಿಜೆಪಿ ಸಂಸದ ವರುಣ್ ಗಾಂಧಿ ಅವರಿಗೆ ಆಯೋಗ ಛೀಮಾರಿ ಹಾಕಿದ ನಂತರ ಅವರು ಮತ್ತೆಂದೂ ಆ ತಪ್ಪನ್ನು ಮಾಡಲಿಲ್ಲ~ ಎಂಬ ನಿದರ್ಶನ ನೀಡಿದರು.`ಸಾರ್ವತ್ರಿಕ ಚುನಾವಣೆಯಲ್ಲಿ ಆಯ್ಕೆಯಾದ ಎರಡು ವರ್ಷಗಳ ನಂತರ ಜನಪ್ರತಿನಿಧಿಗಳ ಕಾರ್ಯವೈಖರಿಯನ್ನು ನಿರ್ಣಯಿಸುವ ವ್ಯವಸ್ಥೆ ಜಾರಿಗೆ ಬರಬೇಕು. ಕಾರ್ಯವೈಖರಿಯನ್ನು ನಿರ್ಣಯಿಸುವ ಹಕ್ಕನ್ನು ಜನರಿಗೆ ನೀಡಿ ಚುನಾವಣೆ ನಡೆಸಬೇಕು. ಒಂದು ವೇಳೆ ಅದರಲ್ಲಿ ಜನಪ್ರತಿನಿಧಿಗಳು ಸೋತರೆ, ಸಾರ್ವತ್ರಿಕ ಚುನಾವಣೆಯಲ್ಲಿ ಎರಡನೇ ಸ್ಥಾನ ಪಡೆದಿದ್ದ ಅಭ್ಯರ್ಥಿಗೆ ಮುಂದಿನ ಅವಕಾಶ ನೀಡಬೇಕು. ಅಂದಾಗ ಭ್ರಷ್ಟಾಚಾರ ತಡೆಯಲು ಸಾಧ್ಯ~ ಎಂದು ಅವರು ಅಭಿಪ್ರಾಯಪಟ್ಟರು.ಮತಗಟ್ಟೆ ಸಮೀಕ್ಷೆಗಳನ್ನು ಲೇವಡಿ ಮಾಡಿದ ಖುರೇಷಿ, ಇಂತಹ ಸಮೀಕ್ಷೆಗಳು ಜನರಿಗೆ ಸಮಯ ಕಳೆಯುವ ಸಾಧನ ಮತ್ತು ಮನರಂಜನೆಯ ವಸ್ತುಗಳು ಎಂದು ವ್ಯಂಗ್ಯವಾಡಿದರು. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಈ ರೀತಿಯ ಲೆಕ್ಕಾಚಾರಗಳಿಗೆ ಅವಕಾಶ ನೀಡಬಾರದು ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.