ಖುರ್ಷಿದ್ ವಿರುದ್ಧ ಕೇಜ್ರಿವಾಲ್ ಸಮರ, ಪ್ರಧಾನಿ ನಿವಾಸ ಬಳಿ ಪ್ರತಿಭಟನೆ

7

ಖುರ್ಷಿದ್ ವಿರುದ್ಧ ಕೇಜ್ರಿವಾಲ್ ಸಮರ, ಪ್ರಧಾನಿ ನಿವಾಸ ಬಳಿ ಪ್ರತಿಭಟನೆ

Published:
Updated:

ನವದೆಹಲಿ (ಐಎಎನ್ಎಸ್): ಪ್ರಧಾನ ಮಂತ್ರಿಯವರ ನಂಬರ್ 7 ರೇಸ್ ಕೋರ್ಸ್ ರಸ್ತೆ ನಿವಾಸದ ಬಳಿ ಪ್ರತಿಭಟನಾ ಪ್ರದರ್ಶನ ನಡೆಸಿ ಕಾನೂನು ಸಚಿವ ಸಲ್ಮಾನ್ ಖುರ್ಷಿದ್ ರಾಜೀನಾಮೆಗೆ ಆಗ್ರಹಿಸುವ ಮೂಲಕ ಭ್ರಷ್ಟಾಚಾರ ವಿರುದ್ಧ ಭಾರತ (ಐಎಸಿ) ಕಾರ್ಯಕರ್ತ ಅರವಿಂದ್ ಕೇಜ್ರಿವಾಲ್ ಅವರು ಆಡಳಿತಾರೂಢ ಯುಪಿಎ ಸರ್ಕಾರದ ಮೇಲೆ ಇನ್ನಷ್ಟು ಒತ್ತಡ ಹೇರಿದರು.ರಾಷ್ಟ್ರೀಯ ವಿಕಲಾಂಗ ಪಕ್ಷದ ಬಹಳಷ್ಟು ಮಂದಿ ಅಂಗವಿಕಲರೊಂದಿಗೆ ಕೇಜ್ರಿವಾಲ್ ಅವರು ಈ ಪ್ರತಿಭಟನಾ ಪ್ರದರ್ಶನ ನಡೆಸಿದರು.ಏನಿದ್ದರೂ ಪ್ರಧಾನಿ ಮನಮೋಹನ್ ಸಿಂಗ್ ಅವರು ~ತಮಗೆ ಪೂರ್ವ ನಿಗದಿತ ಕಾರ್ಯಕ್ರಮಗಳಿವೆ~ ಎಂದು ಹೇಳಿ ಕೇಜ್ರಿವಾಲ್ ಅವರೊಂದಿಗೆ ಮಾತುಕತೆ ನಡೆಸಲು ನಿರಾಕರಿಸಿದರು.ಖುರ್ಷಿದ್ ವಿರುದ್ಧದ ತಮ್ಮ ಆಪಾದನೆಗೆ ಸಂಬಂಧಿಸಿದ ವಿವರಗಳನ್ನು ಒಳಗೊಂಡ ಮನವಿ ಪತ್ರವನ್ನು ಪ್ರಧಾನಿಯವರಿಗೆ ಸಲ್ಲಿಸಲು ತಾವು ಬಯಸಿರುವುದಾಗಿ ಕೇಜ್ರಿವಾಲ್ ನುಡಿದರು.ದೈಹಿಕ ಅಂಗವಿಕಲರಿಗೆ ಮೀಸಲಾದ ಲಕ್ಷಾಂತರ ರೂಪಾಯಿ ಹಣವನ್ನು ಸಲ್ಮಾನ್ ಖುರ್ಷಿದ್ ಅವರ ಪತ್ನಿ ನೇತೃತ್ವದ ಸರ್ಕಾರೇತರ ಸಂಸ್ಥೆ (ಎನ್ ಜಿ ಒ) ಕಬಳಿಸಿದೆ ಎಂದು ಕೇಜ್ರಿವಾಲ್ ಆಪಾದಿಸಿದರು.ಸಲ್ಮಾನ್ ಖುರ್ಷಿದ್ ಮತ್ತು ಅವರ ಪತ್ನಿ ವಿರುದ್ಧ ತತ್ ಕ್ಷಣವೇ ಪೊಲೀಸರು ದೂರು ದಾಖಲಿಸಬೇಕು. ಮುಗ್ಧರೆಂದು ಸಾಬೀತಾಗುವವರೆಗೆ ಸಲ್ಮಾನ್ ಖುರ್ಷಿದ್ ಅವರನ್ನು ಸಂಪುಟದಿಂದ ಹೊರ ಹಾಕಬೇಕು. ಇವರಿಬ್ಬರೂ ಅತ್ಯಂತ ಪ್ರಭಾವಶಾಲಿಗಳಾಗಿದ್ದು ಸಾಕ್ಷ್ಯ ನಾಶ ಮಾಡುವ ಹಾಗೂ ಸಾಕ್ಷಿಗಳ ಮೇಲೆ ಒತ್ತಡ ಹೇರುವ ಸಾಧ್ಯತೆ ಇರುವುದರಿಂದ ಇಬ್ಬರನ್ನೂ ತತ್ ಕ್ಷಣವೇ ಬಂಧಿಸಬೇಕು ಎಂದು ಕೇಜ್ರಿವಾಲ್ ಆಗ್ರಹಿಸಿದರು.~ಇದನ್ನು ತಹ್ರೀರ್ ಚೌಕವನ್ನಾಗಿ (ಈಜಿಪ್ಟಿನಲ್ಲಿ ಕಳೆದ ವರ್ಷ ಆಡಳಿತ ವಿರೋಧಿ ಪ್ರತಿಭಟನೆಗಳು ನಡೆದ ಸ್ಥಳ) ಮಾಡೋಣ. ಜನರು ತಮ್ಮ ಕೆಲಸ ಕಾರ್ಯಗಳನ್ನು ಬಿಟ್ಟು ಈ ಹೋರಾಟದಲ್ಲಿ ಪಾಲ್ಗೊಳ್ಳಬೇಕು. ಇದು ಅಂತಿಮ ಹೋರಾಟ. ಪ್ರಧಾನಿ ನಮ್ಮನ್ನು ಭೇಟಿ ಮಾಡಲೇಬೇಕು ಮತ್ತು ನಮ್ಮ ಬೇಡಿಕೆಗಳನ್ನು ಈಡೇರಿಸಬೇಕು. ಖುರ್ಷಿದ್ ಅವರು ರಾಜೀನಾಮೆ ನೀಡಬೇಕು ಮತ್ತು ಅವರನ್ನು ಬಂಧಿಸಬೇಕು~ ಎಂದು ಕೇಜ್ರಿವಾಲ್ ನುಡಿದರು.ತಮ್ಮ ವಿರುದ್ಧ ಮಾಡಿದ ಆಪಾದನೆಗಳಿಗಾಗಿ ರಾಜಕಾರಣಿಯಾಗಿ ಪರಿವರ್ತನೆಗೊಂಡಿರುವ ಸಾಮಾಜಿಕ ಕಾರ್ಯಕರ್ತ ಕೇಜ್ರಿವಾಲ್ ವಿರುದ್ಧ ಮೊಕದ್ದಮೆ ಹೂಡಲು ಯೋಜಿಸಿರುವುದಾಗಿ ಖುರ್ಷಿದ್ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry