ಖುರ್ಷಿದ್ ವಿರುದ್ಧ ಮತ್ತಷ್ಟು ಸಾಕ್ಷ್ಯ, ಅಂಗವಿಕಲರನ್ನೇ ಕರೆತಂದ ಕೇಜ್ರಿವಾಲ್

7

ಖುರ್ಷಿದ್ ವಿರುದ್ಧ ಮತ್ತಷ್ಟು ಸಾಕ್ಷ್ಯ, ಅಂಗವಿಕಲರನ್ನೇ ಕರೆತಂದ ಕೇಜ್ರಿವಾಲ್

Published:
Updated:
ಖುರ್ಷಿದ್ ವಿರುದ್ಧ ಮತ್ತಷ್ಟು ಸಾಕ್ಷ್ಯ, ಅಂಗವಿಕಲರನ್ನೇ ಕರೆತಂದ ಕೇಜ್ರಿವಾಲ್

ನವದೆಹಲಿ (ಐಎಎನ್ಎಸ್): ಕಾನೂನು ಸಚಿವ ಸಲ್ಮಾನ್ ಖುರ್ಷಿದ್ ಅವರು ನಡೆಸುವ ಟ್ರಸ್ಟ್ ನಿಂದ ಅಂಗವಿಕಲರಿಗಾಗಿ ವಿತರಿಸಲಾದ ಉಪಕರಣದ ಬಹುತೇಕ ಫಲಾನುಭವಿಗಳು ~ಖೊಟ್ಟಿ ಹೆಸರಿನವರು~ ಎಂದು ಭ್ರಷ್ಟಾಚಾರ ವಿರುದ್ಧ ಭಾರತ (ಐಎಸಿ) ಸಂಘಟನೆಯ ನಾಯಕ ಅರವಿಂದ ಕೇಜ್ರಿವಾಲ್ ಅವರು ಸೋಮವಾರ ಇಲ್ಲಿ ಆಪಾದಿಸಿದರು.ಸರ್ಕಾರೇತರ ಸಂಸ್ಥೆಯ ಮೂಲಕ ಹಣ ಗುಳುಂ ಮತ್ತು ದಾಖಲೆಗಳ ನಕಲಿ ಆರೋಪಕ್ಕೆ ಗುರಿಯಾಗಿರುವ  ಖುರ್ಷಿದ್ ವಿರುದ್ಧ ಇನ್ನಷ್ಟು ~ಸಾಕ್ಷ್ಯಾಧಾರ~ ಒದಗಿಸುವುದಾಗಿ ಭಾನುವಾರ ಹೇಳಿದ್ದ ಕೇಜ್ರಿವಾಲ್ ಐಎಸಿ ಸದಸ್ಯರು ಟ್ರಸ್ಟ್ ನಿಂದ ಗಾಲಿ ಕುರ್ಚಿ, ತ್ರಿಚಕ್ರವಾಹನ ಮತ್ತು ಶ್ರವಣ ಸಾಧನಗಳನ್ನು ಪಡೆದ ವ್ಯಕ್ತಿಗಳನ್ನು ಪತ್ತೆ ಹಚ್ಚಲು ಪ್ರಯತ್ನಿಸಿದ್ದಾರೆ, ಆದರೆ ಬಹುತೇಕ ಹೆಸರುಗಳು ಖೊಟ್ಟಿ ಎಂಬುದು ಬೆಳಕಿಗೆ ಬಂತು ಎಂದು ಹೇಳಿದರು.~ಕಾಂಗ್ರೆಸ್ ಪಕ್ಷವು ಖುರ್ಷಿದ್ ಅವರನ್ನು ಏಕೆ ಬೆಂಬಲಿಸುತ್ತಿದೆ?~ ಎಂಬುದಾಗಿ ಅಚ್ಚರಿ ವ್ಯಕ್ತ ಪಡಿಸಿದ ಐಎಸಿ ನಾಯಕ, ~ಕಾಂಗ್ರೆಸ್ ಈ ಟ್ರಸ್ಟ್ ನ್ನು ಬೆಂಬಲಿಸಲು ಏಕೆ ಯತ್ನಿಸುತ್ತಿದೆ. ಈ ಟ್ರಸ್ಟ್ ಜೊತೆಗೆ ಪಕ್ಷದ ಬಾಂಧವ್ಯ ಏನು?~ ಎಂದು ಇಲ್ಲಿನ ಜಂತರ್ ಮಂತರ್ ನಲ್ಲಿ ನಡೆದ ಪ್ರತಿಭಟನಾ ಪ್ರದರ್ಶನದಲ್ಲಿ ಪ್ರಶ್ನಿಸಿದರು.ಖುರ್ಷಿದ್ ಅವರು ನಡೆಸುವ ಝಕೀರ್ ಹುಸೇನ್ ಟ್ರಸ್ಟ್ ಅಂಗವಿಕಲರಿಗೆ ನೀಡಿದ ಸಾಧನಗಳ ಫಲಾನುಭವಿಗಳ ಪಟ್ಟಿಯಲ್ಲಿ ಇದ್ದ ಹೆಸರುಗಳ ಕೆಲವು ಅಂಗವಿಕಲರನ್ನು ಕೇಜ್ರಿವಾಲ್ ತಮ್ಮ ಜೊತೆಗೆ ಕರೆತಂದಿದ್ದರು. 2011ರಲ್ಲಿ ಟ್ರಸ್ಟ್ ನಡೆಸಿದ ಶಿಬಿರಗಳಲ್ಲಿ ತಮಗೆ ಏನನ್ನೂ ನೀಡಲಾಗಿಲ್ಲ ಎಂದು ಈ ಅಂಗವಿಕಲರು ಪ್ರತಿಪಾದಿಸಿದರು.ಉತ್ತರ ಪ್ರದೇಶದ ಆಡಳಿತಾರೂಢ ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್  ಅವರು ಸುಪ್ರೀಂಕೋರ್ಟ್ ನಲ್ಲಿ ಅಕ್ರಮ ಆಸ್ತಿಪಾಸ್ತಿ ಪ್ರಕರಣ ಎದುರಿಸುತ್ತಿರುವುದರಿಂದ ಉತ್ತರ ಪ್ರದೇಶ ಸರ್ಕಾರವು ಖುರ್ಷಿದ್ ವಿರುದ್ಧ ಕ್ರಮ ಕೈಗೊಳ್ಳಲಾರದು. ಉತ್ತರ ಪ್ರದೇಶದಲ್ಲಿ ಮುಲಾಯಂ ಸಿಂಗ್ ಪುತ್ರ ಅಖಿಲೇಶ್ ಸಿಂಗ್ ಅವರೇ ಮುಖ್ಯಮಂತ್ರಿ ಆಗಿರುವುದರಿಂದ ಸಲ್ಮಾನ್ ಖುರ್ಷಿದ್ ಮತ್ತು ಸಿಂಗ್ ಪರಸ್ಪರ ರಕ್ಷಣೆ ಮಾಡಿಕೊಳ್ಳುತ್ತಾರೆ ಎಂದು ಕೇಜ್ರಿವಾಲ್ ದೂರಿದರು.ಖುರ್ಷಿದ್ ಅವರು ಭಾನುವಾರ ತಮ್ಮ ಸರ್ಕಾರೇತರ ಸಂಸ್ಥೆ ವಿರುದ್ಧ ಮಾಡಲಾದ ಹಣಗುಳುಂ ಆರೋಪವನ್ನು ನಿರಾಕರಿಸಿ, ಉತ್ತರ ಪ್ರದೇಶದಲ್ಲಿ ಅಂಗವಿಕಲರಿಗೆ ಶ್ರವಣ ಸಾಧನ ಮತ್ತು ತ್ರಿಚಕ್ರವಾಹನಗಳನ್ನು ವಿತರಿಸಲು ನಡೆಸಲಾದ ಶಿಬಿರಗಳ ಛಾಯಾಚಿತ್ರ ಮತ್ತು ಇತರ ದಾಖಲೆಗಳನ್ನು ಪ್ರದರ್ಶಿಸಿದ್ದರು.

 

ತಮ್ಮ ಪತ್ನಿ ಲೂಯಿಸ್ ಅಧ್ಯಕ್ಷರಾಗಿರುವ ಝಕೀರ್ ಹುಸೇನ್ ಟ್ರಸ್ಟ್ ನಿಂದ ಯಾವುದೇ ಅಕ್ರಮವೂ ನಡೆದಿಲ್ಲ ಎಂದೂ ಖುರ್ಷಿದ್ ಪ್ರತಿಪಾದಿಸಿದ್ದರು. ಲೂಯಿಸ್ ಅವರೇ ಟ್ರಸ್ಟ್ ನಲ್ಲಿ ಯೋಜನಾ ನಿರ್ದೇಶಕರೂ ಆಗಿದ್ದಾರೆ.ಈ ಮಧ್ಯೆ ಖುರ್ಷಿದ್ ವಿರುದ್ಧದ ಆರೋಪಗಳ ಬಗ್ಗೆ ಸಮರ್ಪಕ ತನಿಖೆ ನಡೆಯಬೇಕು ಎಂದು ಬಿಜೆಪಿ ವಕ್ತಾರರಾದ ನಿರ್ಮಲಾ ಸೀತಾರಾಮನ್ ಆಗ್ರಹಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry