ಸೋಮವಾರ, ಏಪ್ರಿಲ್ 19, 2021
23 °C

ಖುಷಿ ನೀಡಿದ ಕವಿ ಸಮಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಕನ್ನಡ ರಾಜ್ಯೋತ್ಸವ ಅಂಗವಾಗಿ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕವು ನಗರದ ಕನ್ನಡ ಭವನದಲ್ಲಿ `ಕವಿ ಸಮಯ~ ವಿಶೇಷ ಕವಿಗೋಷ್ಠಿಯನ್ನು ಗುರುವಾರ ಹಮ್ಮಿಕೊಂಡಿತ್ತು.ಮಟ, ಮಟ ಮಧ್ಯಾಹ್ನ 12 ಗಂಟೆಗೆ ಕಾರ್ಯಕ್ರಮ ಆಯೋಜಿಸಿದ್ದರಿಂದ ಕವನ ವಾಚಿಸುವ ಕವಿಗಳು ಹಾಗೂ ಕೇಳುವ ಕಿವಿಗಳು ಸಾಕಷ್ಟು ಸಂಖ್ಯೆಯಲ್ಲಿ ಬರುವುದಿಲ್ಲ. ಕವಿತೆ ಓದಿದವರೇ ನಂತರ ಕೇಳುವ ಪರಿಸ್ಥಿತಿಯಿದೆ ಎನ್ನುವಷ್ಟರಲ್ಲೇ ತುಂತುರು ಮಳೆ ಹನಿಯ ಸಿಂಚನ ಮಾಡಿಕೊಳ್ಳುತ್ತ ಒಬ್ಬೊಬ್ಬರಾಗಿ ವೇದಿಕೆಯೆಡೆಗೆ ಧಾವಿಸಿ ಬರುತ್ತಿರುವುದು ಕಾಣಿಸಿತು. ಹೀಗಾಗಿ ಸ್ವಲ್ಲವೇ ಹೊತ್ತಿನಲ್ಲಿ ಇಡೀ ಸಭಾಂಗಣ ಕಿಕ್ಕಿರಿದು ತುಂಬಿ ಹೋಯಿತು.ವಾಣಿಜ್ಯ ಮತ್ತು ತೆರಿಗೆ ಇಲಾಖೆಯ ಉಪ ಆಯುಕ್ತ ಪದ್ಮಾಕರ ಕುಲಕರ್ಣಿ, ನಾನು ಕವಿಯಲ್ಲ ಎನ್ನುವ ಉದ್ಘಾಟನಾ ಮಾತುಗಳ ಜೊತೆಗೆ `ಹಸಿದ ಹೊಟ್ಟೆ ಹೆಣವನ್ನು ನುಂಗುವ ಸ್ಮಶಾನದಂತೆ ಬಾಯಿ ತೆರೆದಾಗ... ನಳಿಕೆಯಿಂದ ಬಂದ ಗುಂಡುಗಳು~ ಕವಿತೆ ಓದಿ `ಕವಿ ಸಮಯ~ಕ್ಕೆ ಸಾರ್ಥಕತೆ ತಂದರು. ಇದರಿಂದ ಸ್ಫೂರ್ತಿಗೊಂಡ ಸುಮಾರು 35 ಕವಿಗಳು ಸ್ವರಚಿತ ಕವನ ವಾಚಿಸುವ, ಹಾಡುವ ಮೂಲಕ ಕೇಳುಗರಿಂದ ಭೇಷ್! ಎನಿಸಿಕೊಂಡರು.ಕನ್ನಡ ನಾಡು-ನುಡಿ, ನೆಲ-ಜಲ, ಕಲೆ-ಸಾಹಿತ್ಯ, ಸಂಸ್ಕೃತಿಯನ್ನು ಬಣ್ಣಿಸುವುದರ ಜೊತೆಗೆ ಹಲವು ಸಾಂದರ್ಭಿಕ ಮತ್ತು ವಾಸ್ತವ ಅಂಶಗಳನ್ನು ಸಭಿಕರ ಗಮನಕ್ಕೆ ತರುವಲ್ಲಿ ಯಶಸ್ವಿಯಾದರು. ಬದುಕಿನ ಪ್ರೀತಿ, ಲೋಕದ ಋಣ, ಸ್ವಾತಂತ್ರ್ಯ, ಸ್ನೇಹ, ವರದಕ್ಷಿಣೆ, ಡಾಂಭಿಕತನ, ಭ್ರಷ್ಟಾಚಾರ, ಶಿಷ್ಟಾಚಾರ, ಓಟು, ನೋಟು ಮುಂತಾದ ಅಂಶಗಳ ಸುತ್ತ ಹೆಣೆದ ಇಲ್ಲಿನ ಕವಿತೆಗಳು ಇಂದಿನ ರಾಜಕೀಯ, ಸಮಾಜ, ಶಿಕ್ಷಣ, ಧಾರ್ಮಿಕ ಲೋಕವನ್ನು ಅಣಕಿಸುವಂತಿದ್ದವು.`ನನ್ನವ್ವ ಅನ್ನ, ನೀರು ಬಿಟ್ಟು ಕಣ್ಣೀರಿಟ್ಟು ಕನವರಿಸುತ್ತಿದ್ದಾಳೆ. ಹೆತ್ತ ಮಕ್ಕಳ ಮಂಗಾಟಕ್ಕೆ, ಪರ ರಾಜ್ಯಗಳ ಕುರುಕುಳಕ್ಕೆ~ ಎನ್ನುವ ಶಿವಾನಂದ ಅಣಜಿಗಿ ಕವನ ಚಿಂತನೆಗೆ ಹಚ್ಚುವಂತಿತ್ತು. ಗುಲ್ಬರ್ಗ ನಗರದಲ್ಲಿ ಈಚೆಗೆ ಆರಂಭವಾದ ನೃಪತುಂಗ ನಗರ ಸಾರಿಗೆಯ ಸುಗಮ ಸಂಚಾರ ಕುರಿತು ಶಿವಲೀಲಾ ವಿಶ್ವಕರ್ಮ ಬರೆದ ಕವಿತೆ ಗಮನ ಸೆಳೆಯುವಂತಿತ್ತು. ಕರ್ನಾಟಕದ ಜಲಿಯನ್‌ವಾಲಾಬಾಗ್ ಎಂದೇ ಗುರುತಿಸುವ ಗೋರಟಾ ದುರಂತದ ಬಗ್ಗೆ ಅಪ್ಪಟ ಜಾನಪದ ಶೈಲಿ ದಾಟಿಯ ಬಾಬು ಜಾಧವ  ಕವಿತೆ `ಕಡ್ಲಿಮಟ್ಟಿಯ ಕಾಶೀಬಾಯಿಯ ಶೀಲದ ಚಾರಿತ್ರ್ಯ ಕೇಳಿದ ಜನಮನ ಪಾವಿತ್ರ್ಯ~ ಎನ್ನುವ ಹಾಡಿನಂತೆ ಮನಕಲಕುವಲ್ಲಿ ಯಶಸ್ವಿಯಾಯಿತು. ಫರ್ವಿನ್ ಸುಲ್ತಾನಾ `ಸೋನೇಮೆ ಜಂಜಿರ್~ ಕವಿತೆ ವರದಕ್ಷಿಣೆ ಎನ್ನುವ ರೌರವ ನರಕದಲ್ಲಿ ಮುಳುಗಿದ ಹೆಣ್ಣಿನ ಗೋಳಿನ ಬಾಳನ್ನು ವಿವರಿಸುವಂತಿತ್ತು. ಮಡಿವಾಳಪ್ಪ ನಾಗರಳ್ಳಿ ಇಂದಿನ ಕರ್ನಾಟಕದ ಕುಲಗೆಟ್ಟ ರಾಜಕೀಯವನ್ನು ತಮ್ಮದೇ ದಾಟಿಯಲ್ಲಿ ವಿಡಂಬಿಸಿದರು.ಮುಖ್ಯ ಅತಿಥಿಗಳಾಗಿದ್ದ ಬಸವಲಿಂಗಪ್ಪ ಆಲ್ಹಾಳ, ಅರುಣಕುಮಾರ ಪಾಟೀಲರ ಮಾತುಗಳು ಕನ್ನಡದ ಕಾಳಜಿಯನ್ನು ವ್ಯಕ್ತಪಡಿಸುವಂತಿದ್ದವು.ಅಧ್ಯಕ್ಷತೆ ವಹಿಸಿದ್ದ ಸಾಹಿತಿ ಡಾ. ಸ್ವಾಮಿರಾವ ಕುಲಕರ್ಣಿ `ಕವಿ ಸಮಯ~ ಕುರಿತು ಮನಬಿಚ್ಚಿ ಮಾತನಾಡಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಮಹಿಪಾಲರೆಡ್ಡಿ ಮುನ್ನೂರ್ ಕಾರ್ಯಕ್ರಮದ ಲವಲವಿಕೆಗೆ ಕಾರಣರಾಗಿದ್ದರು. ಭಾರತಿ ಸಾಲಿಮಠ ಇಂಪಾದ ಹಾಡುಗಳಿಂದ ಕೇಳುಗರ ಹೃದಯ ಗೆದ್ದರು. ಸುರೇಶ ಬಡಿಗೇರ ಕಾರ್ಯಕ್ರಮ ಸಂಯೋಜಿಸಿದರು. ಬಿ.ಎಚ್. ನಿರಗುಡಿ ಸ್ವಾಗತಿಸಿದರು. ರಾಜಶೇಖರ ಯಾಳಗಿ ಪ್ರಾರ್ಥನೆ ಹಾಡಿದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.