ಶನಿವಾರ, ಫೆಬ್ರವರಿ 27, 2021
19 °C

ಖುಷ್ಕಿಯಲ್ಲಿ ಪಡೆಯಿರಿ ಉತ್ತಮ ಇಳುವರಿ

-ಡಾ. ಅಶೋಕ ಪಿ. Updated:

ಅಕ್ಷರ ಗಾತ್ರ : | |

ಖುಷ್ಕಿಯಲ್ಲಿ ಪಡೆಯಿರಿ ಉತ್ತಮ ಇಳುವರಿ

ಣ್ಣು, ನೀರು ಮತ್ತು ಸಸ್ಯ ಸಂಪತ್ತುಗಳನ್ನು ಸೂಕ್ತ ರೀತಿಯಲ್ಲಿ ಬಳಸಿಕೊಂಡಾಗ ಮಾತ್ರ ಖುಷ್ಕಿಯಲ್ಲಿ ಉತ್ತಮ ಇಳುವರಿ ಮತ್ತು ಲಾಭ ಪಡೆಯಬಹುದು. ಬಿದ್ದ ಮಳೆ ನೀರನ್ನು ಪೋಲಾಗದಂತೆ ಭೂಮಿಯಲ್ಲಿಯೇ ಇಂಗುವಿಕೆಯ ಪ್ರಮಾಣವನ್ನು ಹೆಚ್ಚಿಸಬೇಕು. ಮಳೆ ನೀರು ಇಂಗಿಸುವ ಈ ಕೆಳಗಿನ ವಿವಿಧ ಪದ್ಧತಿಗಳನ್ನು ಖುಷ್ಕಿ ಭೂಮಿಯಲ್ಲಿ ಅನುಸರಿಸಿದರೆ ನಿಶ್ಚಿತ ಬೆಳೆ ಸಾಧ್ಯ.* ಬೆಳೆ ಕಟಾವಾದ ತಕ್ಷಣ ಇಳಿಜಾರಿಗೆ ಅಡ್ಡವಾಗಿ ಮಾಗಿ ಉಳುಮೆ ಮಾಡಬೇಕು. ಇದರಿಂದ ಮಳೆಯ ನೀರು ಹೆಚ್ಚು ಆಳದವರೆಗೆ ಇಳಿಯಲು ಸಾಧ್ಯವಾಗಿ ನೀರು ಭೂಮಿಯಲ್ಲಿ ಹೆಚ್ಚೆಚ್ಚು ಇಂಗುವುದರಿಂದ ಅಧಿಕ ಇಳುವರಿ ಪಡೆಯಬಹುದು.* ಎರಡು ಬದುಗಳ ಮಧ್ಯದ ಭೂಮಿಯನ್ನು ಸಮವಾದ ಇಳಿಜಾರಿಗೆ ತರಲು ಭೂಮಿಯ ಉಬ್ಬು ತಗ್ಗುಗಳನ್ನು ಸರಿಪಡಿಸಿ.* ಬೇಸಾಯ ಪದ್ಧತಿಗಳನ್ನು ಸಮಪಾತಳಿ ರೇಖೆಗೆ ಅನುಗುಣವಾಗಿ ಅಥವಾ ಇಳಿಜಾರಿಗೆ ಅಡ್ಡಲಾಗಿ ಮಾಡಿ. ಜಮೀನಿನಿಂದ ಹೊರಗೆ ಹರಿದು ಬರುವ ನೀರಿನ ಪ್ರಮಾಣ ಕಡಿಮೆಯಾಗಿ ಬೆಳೆ ಇಳುವರಿ ಹೆಚ್ಚಿಸಬಹುದು .* ಭೂಮಿಯ ಮೇಲ್ಮಣ್ಣಿನ ಸಂರಕ್ಷಣೆ ಹಾಗೂ ನೀರಿನ ಸಮರ್ಥ ಬಳಕೆಗಾಗಿ ಮಣ್ಣಿನ ಆಳ ಮತ್ತು ಭೂಮಿಯ ಇಳಿಜಾರನ್ನು ಅವಲಂಬಿಸಿ ವಿವಿಧ ಪ್ರಕಾರದ ಬದುಗಳನ್ನು ಅನುಸರಿಸಬೇಕು.* ಭೂಮಿಯ ಇಳಿಜಾರು ಶೇಕಡಾ 2.5ವರೆಗಿರುವ ಕಪ್ಪು ಮಣ್ಣಿನ ಜಮೀನಿನಲ್ಲಿ 20 ಸೆಂ.ಮೀ. ಎತ್ತರದ, 9 ಚದರ ಮೀಟರ್‌ನಿಂದ 20 ಚದರ ಮೀಟರಗಳವರೆಗೆ ಕ್ಷೇತ್ರ ಇರುವ ಚೌಕು ಮಡಿಗಳನ್ನು ನಿರ್ಮಿಸುವುದರಿಂದ ಬಿದ್ದ ಮಳೆ ನೀರಿನ ಇಂಗುವಿಕೆಗೆ ಅನುಕೂಲವಾಗಿ ಮಣ್ಣಿನಲ್ಲಿ ತೇವಾಂಶ ಬಹಳ ದಿನಗಳವರೆಗೆ ಉಳಿಯುತ್ತದೆ. ಹೆಚ್ಚು ಇಳಿಜಾರು ಇರುವ ಜಮೀನುಗಳಲ್ಲಿ ಸಣ್ಣ ಸಣ್ಣ ಮಡಿಗಳನ್ನು ಅಂದರೆ 9 ಚದರ ಮೀಟರ (3ಮೀ /3ಮೀ) ಹಾಗೂ ಕಡಿಮೆ ಇಳಿಜಾರಿನ ಜಮೀನುಗಳಲ್ಲಿ 20 ಚದರ ಮೀಟರ್ (4.5ಮೀ/4.5ಮೀ) ಚೌಕು ಮಡಿಗಳನ್ನು ಅಳವಡಿಸಿಕೊಳ್ಳುವುದು ಸೂಕ್ತ.* ಇಳಿಜಾರಿಗೆ ಅಡ್ಡಲಾಗಿ ಸುಮಾರು 30 ರಿಂದ 40 ಸೆಂ.ಮೀ. ಎತ್ತರದ ದಿಂಡು ಸಾಲುಗಳನ್ನು 60 ರಿಂದ 70 ಸೆಂ.ಮೀ. ಅಂತರದಲ್ಲಿ ನಿರ್ಮಿಸಿ ಸಾಲುಗಳಲ್ಲಿ ಪ್ರತಿ 5 ಮೀಟರ ಅಂತರದಲ್ಲಿ 5 ರಿಂದ 6 ಸೆಂ.ಮೀ. ಎತ್ತರದ ಮಣ್ಣಿನ ಅಡೆತಡೆಗಳನ್ನು ನಿರ್ಮಿಸಬೇಕು. ದಿಂಡು ಸಾಲುಗಳನ್ನು ಮಾಗಿ ಉಳುಮೆ ಮಾಡಿದ ನಂತರ ನಿರ್ಮಿಸಬೇಕು. ಮಳೆ ನೀರು ಸಂಗ್ರಹಕ್ಕೆ ಈ ದಿಂಡು ಸಾಲುಗಳು ಅನುಕೂಲವಾಗಿ ಹೆಚ್ಚಿನ ನೀರು ಇಂಗುವಿಕೆಗೆ ಸಾಧ್ಯವಾಗುವುದು.* ಮಧ್ಯಮದಿಂದ ಹೆಚ್ಚು ಆಳವಿರುವ ಕಪ್ಪು ಮಣ್ಣಿನಲ್ಲಿ ಬಿದ್ದ ಮಳೆ ನೀರನ್ನು ಜಮೀನಿನಲ್ಲಿಯೇ ಇಂಗುವಂತೆ ಮಾಡಲು ಅಲ್ಲಲ್ಲಿ ತಟ್ಟೆಯಾಕಾರದ ಚಿಕ್ಕ ಗುಣಿಗಳನ್ನು ಎಡೆಗುಂಟೆ ಅಥವಾ ದಿಂಡು ಉಪಕರಣಗಳಿಂದ ನಿರ್ಮಿಸುವುದರಿಂದ ಬಿದ್ದ ಮಳೆ ನೀರಿನ ಸಂಗ್ರಹಣೆಗೆ ಹೆಚ್ಚು ಅವಕಾಶ ಸಿಗುವುದು.* ಜೋಳ, ಗೋವಿನಜೋಳ, ಸಜ್ಜೆ, ಬೆಳೆಗಳ ಕೋಲಿಗಳನ್ನು, ಸೂರ್ಯಕಾಂತಿ, ಹತ್ತಿ ಕಟ್ಟಿಗೆಗಳನ್ನು ಹಸಿರೆಲೆ ಗೊಬ್ಬರ ಬೆಳೆಗಳನ್ನು, ಬೀಜ ರಹಿತ ಒಣಹುಲ್ಲು ಮುಂತಾದವುಗಳನ್ನು ಭೂಮಿಯ ಮೇಲೆ ಹೊದಿಕೆಯಾಗಿ ಹರಡಬೇಕು. ಇದರಿಂದ ಮಳೆ ಹನಿಯ ರಭಸದಿಂದಾಗುವ ಮಣ್ಣಿನ ಸವಕಳಿಯನ್ನು ತಡೆಯಬಹುದು ಮತ್ತು ಬಿದ್ದ ಮಳೆ ನೀರನ್ನು ಜಮೀನಿನಲ್ಲಿಯೇ ಇಂಗುವಂತೆ ಮಾಡಬಹುದು. ಮಾಗಿ ಉಳುಮೆ ಮಾಡುವಾಗ ಈ ಸಸ್ಯಾಂಶಗಳ ಹೊದಿಕೆಯನ್ನು ಮಣ್ಣಿನಲ್ಲಿ ಸೇರುವಂತೆ ಕ್ರಮ ಕೈಗೊಳ್ಳಬೇಕು.* ಉತ್ತರ ಕರ್ನಾಟಕದಲ್ಲಿ ಸುಮಾರು 2 ಸಾವಿರ ಹೆಕ್ಟೇರ್ ಕಪ್ಪು ಮಣ್ಣಿನ ಪ್ರದೇಶವು ನೈಸರ್ಗಿಕವಾಗಿ ಬೆಣಚು ಕಲ್ಲುಗಳಿಂದ ಇದ್ದದ್ದು ಕಂಡು ಬಂದಿದೆ. ನೈಸರ್ಗಿಕವಾಗಿ ಈ ಜಮೀನಿನ ಮೇಲೆ ಕಾಣುವ ಬೆಣಚುಕಲ್ಲುಗಳನ್ನು 5 ಸೆಂ.ಮೀ. ರಷ್ಟು ಪದರದ ಹೊದಿಕೆ ಮಾಡುವುದರಿಂದ ಬಿದ್ದ ಮಳೆ ನೀರು ಹರಿದು ಹೋಗುವುದನ್ನು ತಡೆಗಟ್ಟುತ್ತದೆ. ಇದರಿಂದ ಮಳೆ ನೀರು ಜಮೀನಿನ ಮೇಲೆ ನಿಧಾನವಾಗಿ ಹರಿಯುತ್ತದೆ. ನೀರು ಇಂಗುವಿಕೆಯ ಪ್ರಮಾಣ ಹೆಚ್ಚಾಗುತ್ತದೆ. ಮಣ್ಣಿನಲ್ಲಿನ ತೇವಾಂಶದ ಆವಿಯಾಗುವಿಕೆ ಕಡಿಮೆಯಾಗಿ ಅಧಿಕ ಇಳುವರಿ ಪಡೆಯಲು ಸಾಧ್ಯ.*  ಶೇ 2 ರಿಂದ 3ರಷ್ಟು ಇಳಿಜಾರಿರುವ ಜಮೀನುಗಳಲ್ಲಿ ಇಳುಕಲಿಗೆ ಅಡ್ಡಲಾಗಿ ಪ್ರತಿ 3-4 ಮೀ. ಅಂತರದಲ್ಲಿ 30 ಸೆಂ.ಮೀ. ಆಳವಿರುವ ಮತ್ತು 15 ಸೆಂ.ಮೀ. ಅಗಲವಿರುವ ಹರಿಗಳನ್ನು ಟ್ರ್ಯಾಕ್ಟರ್ ಅಥವಾ ಎತ್ತಿನ ಕಬ್ಬಿಣ ನೇಗಿಲ ಸಹಾಯದಿಂದ ನಿರ್ಮಿಸಿ ಅದರಲ್ಲಿ ಬೆಳೆಗಳ ಕೋಲಿಗಳನ್ನು ಭೂಮಿಯ ಮೇಲ್ಗಡೆ ನಾಲ್ಕು ಅಂಗುಲ ಕಾಣುವ ರೀತಿಯಲ್ಲಿ ಜೋಡಿಸಿ ಮುಚ್ಚಿದರೆ ಮಳೆ ನೀರಿನ ಇಂಗುವ ಪ್ರಮಾಣ ಹೆಚ್ಚಾಗಿ ಬೆಳೆಗಳ ಇಳುವರಿಯನ್ನು ಹೆಚ್ಚಿಸಬಹುದು.* ಕೆಂಪು ಮಣ್ಣಿನಲ್ಲಿ ಸಾವಯವ ಇಂಗಾಲದ ಅಂಶ ಕಡಿಮೆ ಇರುವುದರಿಂದ ಮಳೆ ಬಿದ್ದ ನಂತರ ಭೂಮಿಯ ತೇವಾಂಶ ಕಡಿಮೆಯಾಗಿ ಮೇಲ್ಭಾಗ ಹೆಪ್ಪುಗಟ್ಟುವುದು. ಹೀಗಾದಾಗ ಮಳೆಯ ನೀರು ಮಣ್ಣಿನಲ್ಲಿ ಇಂಗಲಾರದೆ ಹರಿದು ಹೋಗುವುದು. ಇಂತಹ ಮಣ್ಣಿಗೆ ಹೆಚ್ಚಿನ ಪ್ರಮಾಣದಲ್ಲಿ ಕೊಟ್ಟಿಗೆ ಗೊಬ್ಬರ, ಹಸಿರೆಲೆ ಗೊಬ್ಬರಗಳನ್ನು ಮಳೆ ಬರುವುದಕ್ಕೆ ಮೊದಲು ಮಣ್ಣಿಗೆ ಸೇರಿಸಬೇಕು. ಹೀಗೆ ಮಾಡುವುದರಿಂದ ಭೂಮಿಯಲ್ಲಿ ನೀರು ಸುಲಭವಾಗಿ ಇಂಗುವುದಲ್ಲದೇ ಇಂಗಿದ ನೀರು ಸುಲಭವಾಗಿ ಆವಿಯಾಗಿ ಹಾಳಾಗುವುದಿಲ್ಲ.* ಒಂದೇ ಜಮೀನಿನಲ್ಲಿ ಏಕಕಾಲಕ್ಕೆ ಎರಡು ಅಥವಾ ಅದಕ್ಕೂ ಹೆಚ್ಚಿನ ಬೆಳೆಗಳನ್ನು ಸಾಲುಗಳಲ್ಲಿ ಬೆಳೆಯುವುದಾಗಿದೆ. ಸಸಿಗಳ ಅಧಿಕ ಸಾಂದ್ರತೆಯಿಂದಾಗಿ ಸಾಲುಗಳ ನಡುವಣ ಅಂತರ ಹಾಗೂ ಅವಧಿಗಳಿಗೆ ಹೆಚ್ಚಿನ ಗಮನ ನೀಡಬೇಕಾಗುತ್ತದೆ. ಬೆಳೆ ಮತ್ತು ಅಂತರ ಬೆಳೆಗಳಿಗೆ ಪರಸ್ಪರ ಪೈಪೋಟಿ ಇರುತ್ತದೆ. ಆಯಾ ಪ್ರದೇಶದಲ್ಲಿ ಬೀಳುವ ಮಳೆ, ಮಣ್ಣಿನ ಗುಣಧರ್ಮ, ಸೂಕ್ತ ಮಾರುಕಟ್ಟೆ ಹಾಗೂ ಕುಟುಂಬದ ಅವಶ್ಯಕತೆಗಳನ್ನು ಗಮನದಲ್ಲಿಟ್ಟುಕೊಂಡು ಬೆಳೆಯುವ ಬೆಳೆಗಳು, ತಳಿಗಳ ಆಯ್ಕೆ ಹಾಗೂ ಬೆಳೆ ಪದ್ಧತಿಯನ್ನು ಅನುಸರಿಸಿದಾಗ ಹೆಚ್ಚಿನ ಲಾಭ ಪಡೆಯಲು ಸಾಧ್ಯ.

ಮಳೆಯ ನೀರನ್ನು ಬೆಳೆಗೆ ಲಭ್ಯವಾಗುವಂತೆ ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯವು ಮಣ್ಣಿನ ಗುಣಧರ್ಮಕ್ಕನುಗುಣವಾಗಿರುತ್ತದೆ. ಒಂದು ಮೀಟರ್ ಆಳದ ಕೆಂಪು ಮಣ್ಣಿನಲ್ಲಿ ಸುಮಾರು 10-15 ಸೆಂ.ಮೀ. ಹಾಗೂ ಕಪ್ಪು ಮಣ್ಣಿನಲ್ಲಿ 20-25 ಸೆಂ.ಮೀ.ನಷ್ಟು ಬೆಳೆಗಳಿಗೆ ದೊರಕುವ ತೇವಾಂಶವಿರುತ್ತದೆ. ಕೆಂಪು ಮಣ್ಣಿನಲ್ಲಿ ತೇವಾಂಶವು ಸುಮಾರು 8-10 ದಿನಗಳು, ಕಪ್ಪು ಭೂಮಿಯಲ್ಲಿ ಸುಮಾರು 15-20 ದಿನಗಳವರೆಗೆ ಬೆಳೆಗಳ ನೀರಿನ ಬೇಡಿಕೆಯನ್ನು ಪೂರೈಸುತ್ತವೆ.

ನಂತರದ ದಿನಗಳಲ್ಲಿ ಮಳೆಯಾಗದಿದ್ದರೆ ಬೆಳೆಗಳ ಬೆಳವಣಿಗೆ ಕುಂಠಿತಗೊಳ್ಳುತ್ತದೆ. ಆದ್ದರಿಂದ ಸೂಕ್ತ ಬೆಳೆ, ತಳಿಗಳು ಹಾಗೂ ಸೂಕ್ತ ಬೆಳೆ ಪದ್ಧತಿಗಳನ್ನು ಅನುಸರಿಸುವುದರಿಂದ ಸುಸ್ಥಿರ ಇಳುವರಿಯನ್ನು ಪಡೆಯಬಹುದು. ಮಿಶ್ರ ಬೆಳೆ ಪದ್ಧತಿಯಲ್ಲಿ ಎರಡು ಅಥವಾ ಹೆಚ್ಚಿನ ಬೆಳೆಗಳನ್ನು ಜೊತೆ ಜೊತೆಯಾಗಿ ಬೆಳೆಯಲಾಗುತ್ತದೆ. ಸೂಕ್ತವಾದ ಮಿಶ್ರ ಬೆಳೆ ಪದ್ಧತಿಗಳನ್ನು ಅನುಸರಿಸುವುದರಿಂದ ಅಧಿಕ ಲಾಭ ಪಡೆಯುವುದಲ್ಲದೇ ಮಳೆಯ ಏರುಪೇರುಗಳಿಂದಾಗಿ ಆಗಬಹುದಾದ ಹಾನಿಯನ್ನು ತಡೆಯಬಹುದು.* ಅನವಶ್ಯಕವಾಗಿ ಹೊರಗೆ ಹರಿದು ಹೋಗುವ ನೀರನ್ನು ಹೊಲದಲ್ಲಿಯೇ ನಿರ್ಮಿಸಿದ ಚಿಕ್ಕ ಹೊಂಡಗಳಲ್ಲಿ ಸಂಗ್ರಹಣೆಗೆ ವ್ಯವಸ್ಥೆ ಮಾಡಿ ಬೆಳೆ ಬಾಡುವ ಸಂದರ್ಭದಲ್ಲಿ ಒಂದು ಅಥವಾ ಎರಡು ಬಾರಿ ಬೆಳೆಗೆ ನೀರು ಹಾಯಿಸಬಹುದು.ಹೀಗಿರಲಿ ಬೀಜ

ಇದು ಮುಂಗಾರು ಬಿತ್ತನೆಯ ಸಮಯ. ಬೀಜಗಳ ಆಯ್ಕೆ ಕೃಷಿಕರ ಸದ್ಯದ ಚಿಂತೆ. ಆರೋಗ್ಯವಂತ ಹಾಗೂ ರೋಗರಹಿತ ಬೀಜ ಬಿತ್ತಿದ್ದಲ್ಲಿ ಮಾತ್ರ ಹೆಚ್ಚು ಇಳುವರಿ ಸಾಧ್ಯ. ಬೀಜವನ್ನು ಬಿತ್ತನೆಗೆ ಉಪಯೋಗಿಸುವ ಮೊದಲು ವಿವಿಧ ರೋಗ/ ಕೀಟನಾಶಕಗಳಿಂದ ಅಥವಾ ಜೈವಿಕ ಅಣುಜೀವಿಗಳಿಂದ ಉಪಚರಿಸುವುದು ಸೂಕ್ತ.

ದ್ವಿದಳ ಧಾನ್ಯದ ಬೀಜವನ್ನು ವಿವಿಧ ಜೈವಿಕ ಅಣುಜೀವಿ ಗೊಬ್ಬರದಿಂದ ಉಪಚರಿಸುವುದರಿಂದ ವಾತಾವರಣದಲ್ಲಿರುವ ಸಾರಜನಕವನ್ನು ಬೆಳೆಗಳಿಗೆ ದೊರಕುವಂತೆ ಮಾಡಲು ಸಾಧ್ಯ. ಬೆಳೆಗಳಿಗನುಗುಣವಾಗಿ ಮೊಳಕೆ ಪ್ರಮಾಣ, ತಳಿ ಶುದ್ಧತೆ, ಕಳೆ ಬೀಜ, ಕಸಕಡ್ಡಿಗಳ ಮಿಶ್ರಣ ಮುಂತಾದವುಗಳ ಬಗ್ಗೆ ತಿಳಿದುಕೊಂಡು ಬೀಜಗಳನ್ನು ಆಯ್ಕೆ ಮಾಡಿಕೊಳ್ಳಬೇಕು.ಪ್ರತಿ ಬೆಳೆಗೆ ದೃಢೀಕರಿಸಿದ ಬೀಜಗಳನ್ನೇ ಬಳಸಿ. ಆಯಾ ಪ್ರದೇಶಗಳಿಗೆ ಶಿಫಾರಸ್ಸು ಮಾಡಿದ ತಳಿಗಳ ಬೀಜಗಳನ್ನು ನೋಂದಾಯಿತ ಕೇಂದ್ರಗಳಿಂದಲೇ ಖರೀದಿಸಬೇಕು. ಬೀಜದ ಚೀಲದ ಲೇಬಲ್‌ಗಳ ಮೇಲೆ ಬೀಜದ ಮೊಳಕೆ ಪ್ರಮಾಣ, ಬೀಜದ ತೇವಾಂಶದ ಪ್ರಮಾಣ, ಕಳೆ ಬೀಜ ಮತ್ತು ಬೇರೆ ಬೆಳೆಗಳ ಬೀಜದ ಮಿಶ್ರಣದ ಪ್ರಮಾಣ, ಬೀಜದ ಕಾಲಾವಧಿ ಇವುಗಳನ್ನು ಪರೀಕ್ಷಿಸಲೇಬೇಕು. ಅದೇ ರೀತಿ ಬೀಜ ಖರೀದಿಸುವಾಗ, ತಪ್ಪದೇ ಬೀಜ ಮಾರಾಟಗಾರರಿಂದ ಹಣಪಾವತಿಯ ರಸೀದಿಯನ್ನು ಅವಶ್ಯಕವಾಗಿ ಪಡೆಯಬೇಕು.ಪ್ರತಿ ವರ್ಷ ಬಿತ್ತನೆ ಮಾಡಲು ಪ್ರಮಾಣೀಕರಿಸಿದ ಬೀಜಗಳನ್ನು ರೈತರು ಖರೀದಿಸುವುದು ಸೂಕ್ತವಾದರೂ ಇದರಿಂದ ರೈತರಿಗೆ ಖರ್ಚಿನ ಹೊರೆ ಹೆಚ್ಚಾಗುತ್ತದೆ. ಆದ್ದರಿಂದ ಒಮ್ಮೆ ಖರೀದಿಸಿದ ಸುಧಾರಿತ ತಳಿಗಳ (ಹೈಬ್ರಿಡ್ ತಳಿ ಹೊರತುಪಡಿಸಿ) ಪ್ರಮಾಣೀಕೃತ ಬೀಜಗಳನ್ನು ಸಾಮಾನ್ಯವಾಗಿ 2-3 ವರ್ಷ ಅದೇ ತಳಿಯ ಬೀಜಗಳನ್ನು ಬಿತ್ತನೆಗಾಗಿ ಬಳಸಬಹುದು. ಆದ್ದರಿಂದ ಬೀಜವನ್ನು ಬಿತ್ತನೆಗೆ ಮೊದಲು ವಿವಿಧ ರೋಗ/ಕೀಟನಾಶಕಗಳಿಂದ ಉಪಚರಿಸಿ ಬಿತ್ತುವುದರಿಂದ ಕಡಿಮೆ ಖರ್ಚಿನಲ್ಲಿ ಬೆಳೆಗೆ ಬರಬಹುದಾದ ಅನೇಕ ರೋಗ ಮತ್ತು ಕೀಟದ ಹಾವಳಿಯನ್ನು ತಪ್ಪಿಸಬಹುದಾಗಿದೆ.-ಡಾ. ಅಶೋಕ ಪಿ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.