ಗುರುವಾರ , ಜೂನ್ 24, 2021
29 °C

ಖೂಬಾ ಬಿಜೆಪಿ ಅಭ್ಯರ್ಥಿ: ಗುರುಪಾದಪ್ಪ ಹಿನ್ನಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೀದರ್: ಗುರುಪಾದಪ್ಪ ನಾಗಮಾರಪಳ್ಳಿ ಮತ್ತು ಅವರ ಬೆಂಬಲಿಗರ ನಿರೀಕ್ಷೆಗಳನ್ನು ಮೀರಿ ದಿಢೀರ್ ಬೆಳವಣಿಗೆಯಲ್ಲಿ ಬಿಜೆಪಿ ಜಿಲ್ಲಾ ಘಟಕದ ಉಪಾಧ್ಯಕ್ಷ ಭಗವಂತ್‌ ಖೂಬಾ ಅವರನ್ನು ಬಿಜೆಪಿ ಅಭ್ಯರ್ಥಿಯಾಗಿ ಘೋಷಿಸಿದ್ದು ಶಾಸಕ, ಪ್ರಭಾವಿ ಮುಖಂಡ ಗುರುಪಾದಪ್ಪ ನಾಗಮಾರಪಳ್ಳಿ ಅವರಿಗೆ ತೀವ್ರ ಹಿನ್ನೆಡೆಯಾಗಿದೆ.ಖೂಬಾ ಅವರ ಹೆಸರು ಪ್ರಕಟಣೆ ಕ್ಷೇತ್ರದಿಂದ ಪಕ್ಷದ ಟಿಕೆಟ್‌ ಆಕಾಂಕ್ಷಿಯಾಗಿದ್ದ ಗುರುಪಾದಪ್ಪ ನಾಗಮಾರಪಳ್ಳಿ ಅವರ ಪುತ್ರ ಸೂರ್ಯಕಾಂತ ಬೆಂಬಲಿಗರಲ್ಲಿ ಸಹಜವಾಗಿ ಅಸಮಾಧಾನಕ್ಕೆ ಕಾರಣವಾಗಿದ್ದರೆ, ಖೂಬಾ ಬೆಂಬಲಿಗರಲ್ಲಿ ಸಂತಸ ಮನೆ ಮಾಡಿದೆ.

ಅಭ್ಯರ್ಥಿ ಹೆಸರು ಹೊರಬೀಳುತ್ತಿದ್ದಂತೆ ಶಿವನಗರದ ಖೂಬಾ ಮನೆ ಎದುರು ಸೇರಿದ ಬೆಂಬಲಿಗರು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಇನ್ನೊಂದೆಡೆ ಸೂರ್ಯಕಾಂತ ಬೆಂಬಲಿಗರಲ್ಲಿ ಬೇಸರ ಉಂಟುಮಾಡಿತ್ತು. ಗುರುಪಾದಪ್ಪ ನಾಗಮಾರಪಳ್ಳಿ ಅವರ ಮುಂದಿನ ನಡೆ ಏನಿರಬಹುದು ಎಂಬುದು ನಗರದಲ್ಲಿ ಚರ್ಚೆಗೆ ವಸ್ತುವಾಯಿತು.ನಾಗಮಾರಪಳ್ಳಿ ಅವರ ಬೆಂಬಲಿಗರಲ್ಲಿನ ಅಸಮಾಧಾನದದ ಹಿನ್ನೆಲೆಯಲ್ಲಿ ತಮ್ಮನ್ನು ಸಂಪರ್ಕಿಸಿದ ‘ಪ್ರಜಾವಾಣಿ’ ಜೊತೆಗೆ ಮಾತ­ನಾಡಿದ ಶಾಸಕ ಗುರುಪಾದಪ್ಪ ನಾಗ­ಮಾರಪಳ್ಳಿ, ‘ಈಗಲೂ ಕಾಲ ಮಿಂಚಿಲ್ಲ. ಇನ್ನೂ ಮೂರು, ನಾಲ್ಕು ದಿನಗಳ ಅವಕಾಶವಿದೆ. ನೋಡೋಣ’ ಎಂದರು. ‘ಬಿ.ಎಸ್.ಯಡಿ­ಯೂರಪ್ಪ ಅವರಿಂದ ಅನ್ಯಾಯವಾಗಿದೆ ಎಂದು ಭಾವಿಸುವುದಿಲ್ಲ. ಈಗಲೂ ಅವರ ಮೇಲೇ ನಮಗೆ ವಿಶ್ವಾಸವಿದೆ. ನಾಮಪತ್ರ ಸಲ್ಲಿಸಲು 26ರವರೆಗೂ ಅವಕಾಶವಿದೆ. ಕಾದು ನೋಡುತ್ತೇವೆ’ ಎಂದು ಪ್ರತಿಕ್ರಿಯಿಸಿದರು.ಕೆಜೆಪಿಯಿಂದ ಬಿಜೆಪಿಗೆ ಸೇರ್ಪಡೆ ಸಂದರ್ಭದಲ್ಲಿ ಬೀದರ್‌ ಲೋಕಸಭಾ ಕ್ಷೇತ್ರಕ್ಕೆ ಪುತ್ರ ಸೂರ್ಯಕಾಂತ ಅವರಿಗೇ ಟಿಕೆಟ್‌ ನೀಡಬೇಕು ಎಂದು ಗುರುಪಾದಪ್ಪ ಪಟ್ಟು ಹಿಡಿದಿದ್ದರು ಎನ್ನಲಾಗಿದೆ. ಯಡಿಯೂರಪ್ಪ ಅವರು ಕೂಡಾ ಕ್ಷೇತ್ರದ ಟಿಕೆಟ್‌ ಅನ್ನು ಬೆಂಬಲಿಗರಿಗೆ ನೀಡಬೇಕು ಎಂದು ಪಟ್ಟು ಹಿಡಿದಿದ್ದರು.ಬಿಜೆಪಿಯ ಕೇಂದ್ರ ಮತ್ತು ರಾಜ್ಯ ಮುಖಂಡರು ಸ್ವತಃ ಗುರುಪಾದಪ್ಪ ಅವರೇ ಕಣಕ್ಕಿಳಿಯಬೇಕು ಎಂದು ಪಟ್ಟು ಹಿಡಿದಿದ್ದರು. ಆದರೆ ಗುರುಪಾದಪ್ಪ ಇದನ್ನು ನಿರಾಕರಿಸಿದ್ದು, ಪುತ್ರನಿಗೆ ಟಿಕೆಟ್ ಕೊಡಬೇಕು ಎಂದು ಪಟ್ಟು ಹಿಡಿದಿದ್ದರು ಎನ್ನಲಾಗಿದೆ. ಇದೇ ಕಾರಣದಿಂದ ಹೆಸರು ಪ್ರಕಟಣೆಯೂ ವಿಳಂಬವಾಗಿತ್ತು.ಸ್ಪರ್ಧೆಗೆ ಗುರುಪಾದಪ್ಪ ಅವರ ಸಾರಾಸಗಟು ನಿರಾಕರಿಸಿದ ಹಿನ್ನೆಲೆಯಲ್ಲಿ ಬಿಜೆಪಿ ಮುಖಂಡರು ಅಂತಿಮವಾಗಿ ಅಭ್ಯರ್ಥಿಯಾಗಿ ಖೂಬಾ ಅವರ ಹೆಸರು ಪ್ರಕಟಿಸಿದ್ದರು. ಆದರೆ ಇದು ಸಹಜವಾಗಿಯೇ ಗುರುಪಾದಪ್ಪ ಮತ್ತು ಬೆಂಬಲಿಗರಲ್ಲಿ ಅಸಮಾಧಾನ ಮೂಡಿಸಿದೆ.ಬಂಡೆಪ್ಪಾ 25ರಂದು ನಾಮಪತ್ರ: ಬೀದರ್‌ ಲೋಕಸಭಾ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿಯಾಗಿ ಘೋಷಣೆಯಾಗಿರುವ ಮಾಜಿ ಸಚಿವ ಬಂಡೆಪ್ಪಾ ಕಾಶೆಂಪುರ ಅವರು ಇದೇ 25ರಂದು ನಾಮಪತ್ರವನ್ನು ಸಲ್ಲಿಸಲಿದ್ದಾರೆ.‘ಮುಖಂಡರ ತೀರ್ಮಾನದಂತೆ ಕಣಕ್ಕಿಳಿ­ಯುತ್ತಿದ್ದೇನೆ. 25ರಂದು ನಾಮಪತ್ರ ಸಲ್ಲಿ­ಸುತ್ತಿದ್ದು, ಕ್ಷೇತ್ರದ ಜನರ ಆಶೀರ್ವಾದ ದೊರೆಯುವ ವಿಶ್ವಾಸವಿದೆ’ ಎಂದು ಬಂಡೆಪ್ಪ ಪ್ರತಿಕ್ರಿಯಿಸಿದರು. 25ರಂದು ಬೆಳಿಗ್ಗೆ 11ಕ್ಕೆ ನಾಮಪತ್ರ ಸಲ್ಲಿಸುವರು ಎಂದು ಪಕ್ಷದ ಜಿಲ್ಲಾ ಅಧ್ಯಕ್ಷ ನಸೀಮೊದ್ದೀನ್‌ ಪಟೇಲ್ ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.