ಖೆಡ್ಡಾ ಸಾಮ್ರಾಜ್ಯ

7

ಖೆಡ್ಡಾ ಸಾಮ್ರಾಜ್ಯ

Published:
Updated:

ಶ್ರೀನಿವಾಸಪುರ:  ತಾಲ್ಲೂಕಿನಲ್ಲಿ ಹಲವು ಬಗೆಯ ಚಿಟ್ಟೆ, ಕೀಟ, ಹಕ್ಕಿ ಪ್ರಭೇದಗಳು ಕಂಡುಬಂದಿವೆ. ಈಗ ಅವುಗಳ ಸಾಲಿಗೆ ಖೆಡ್ಡಾ ಹುಳುಗಳು ಸೇರಿವೆ. ಈ ಹುಳುಗಳು ನೆಲವನ್ನು ಕೊರೆದು ನಯವಾದ ಗುಳಿಯನ್ನು ನಿರ್ಮಿಸುತ್ತವೆ.ಇರುವೆ ಮತ್ತಿತರ ಸಣ್ಣ ಕೀಟಗಳು ಓಡಾಡುವಾಗ ಆಕಸ್ಮಿಕವಾಗಿ ಈ ನಯವಾದ ಗುಳಿಗಳಲ್ಲಿ ಜಾರಿ ಬೀಳುತ್ತವೆ. ಆಗ ಗುಳಿಯಲ್ಲಿ ಅಡಗಿರುವ ಹುಳುಗಳು ಬಿದ್ದ ಜೀವಿಯನ್ನು ಹಿಡಿದು ತಿಂದು ಜೀವಿಸುತ್ತವೆ.ಈ ಖೆಡ್ಡಾ ಹುಳುಗಳು ಶ್ರೀನಿವಾಸಪುರ ತಾಲ್ಲೂಕಿನಲ್ಲಿ ಹೆಚ್ಚಾಗಿ ಕಂಡುಬರುತ್ತವೆ. ಅದರಲ್ಲೂ ಕಲ್ಲು ಮಿಶ್ರಿತ ಮರಳು ಇರುವ ಕಡೆ ಇವುಗಳ ಖೆಡ್ಡಾ ಗುಳಿಗಳನ್ನು ಹೆಚ್ಚಾಗಿ ನೋಡಬಹುದಾಗಿದೆ. ಇವು ಒಂಟಿಯಾಗಿ ಮತ್ತು ಸಾಮೂಹಿಕವಾಗಿ ಪಕ್ಕಪಕ್ಕದಲ್ಲಿಯೇ ಗುಳಿಗಳನ್ನು ನಿರ್ಮಿಸಿಕೊಂಡು ವಾಸಿಸುತ್ತವೆ. ಮಣ್ಣಿನ ಬಣ್ಣದ ಇವು ತಿಗಣಿ ಆಕಾರದಲ್ಲಿ ಇರುತ್ತವೆ. ವಯಸ್ಸಿಗೆ ಅನುಗುಣವಾಗಿ ವಿವಿಧ ಗಾತ್ರಗಳಲ್ಲಿ ಕಂಡುಬರುತ್ತವೆ.ಮನುಷ್ಯ ಆನೆಗಳನ್ನು ಖೆಡ್ಡಾ (ಕಂದಕ) ದಲ್ಲಿ ಕೆಡವುದು ರೂಢಿ. ಖೆಡ್ಡಾಗೆ ಬಿದ್ದ ಆನೆ ಹೇಗೆ ಹತ್ತಿಬರಲಾರದೋ ಹಾಗೆ ಈ ಖೆಡ್ಡಾ ಹುಳುವಿನ ನಯವಾದ ಖೆಡ್ಡಾ ಗುಳಿಯಲ್ಲಿ ಬಿದ್ದ ಇರುವೆ ಮತ್ತೆ ಜೀವಸಹಿತ ಉಳಿಯಲು ಸಾಧ್ಯವಿಲ್ಲ.ಗುಳಿಯ ಕೆಳಭಾಗದ ಮಣ್ಣಿನ ಒಳಗೆ ಅಡಗಿರುವ ಈ ಹುಳುಗಳು ಬೇಟೆ ಬಿದ್ದ ತಕ್ಷಣ ತಲೆಯನ್ನು ಹೊರಗೆ ಚಾಚಿ ಬಾಯಿಯ ಪಕ್ಕದಲ್ಲಿನ ಕೊಂಡಿಗಳಿಂದ ಬಲವಾಗಿ ಹಿಡಿದು ಬಾಯಿಗಿಟ್ಟುಕೊಳ್ಳುತ್ತವೆ. ಇದು ಖೆಡ್ಡಾ ಹುಳುಗಳು ಬೇಟೆಯಾಡುವ ಕ್ರಮ.ಆದರೆ ಈ ಹುಳುಗಳು ತಮ್ಮ ಬೇಟೆಯನ್ನು ಬಿಟ್ಟರೆ ಬೇರೆ ಏನನ್ನೂ ಕಚ್ಚುವುದಿಲ್ಲ. ಮನುಷ್ಯ ಅವುಗಳನ್ನು ಹಿಡಿದುಕೊಂಡರೂ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಸ್ವಲ್ಪಕಾಲ ಸತ್ತಂತೆ ನಟಿಸುತ್ತವೆ. ನೆಲದ ಮೇಲೆ ಬಿಟ್ಟರೂ, ಸ್ವಲ್ಪಕಾಲ ಕದಲುವುದಿಲ್ಲ. ನಿಧಾನವಾಗಿ ಚಲಿಸಿ, ನೆಲ ಮರಳು ಮಿಶ್ರಿತವಾಗಿದ್ದಲ್ಲಿ ತಮ್ಮ ಹಿಂಭಾಗ ಮತ್ತು ಕಾಲುಗಳ ನೆರವಿನಿಂದ ನೆಲವನ್ನು ಕೊರೆದು ಮಣ್ಣಲ್ಲಿ ಬಚ್ಚಿಟ್ಟುಕೊಳ್ಳುತ್ತವೆ.ಹಿಂದೆ ದನಗಾಹಿ ಹುಡುಗರು ತಮ್ಮ ದನಗಳು ತಪ್ಪಿಸಿಕೊಂಡಾಗ ಖೆಡ್ಡಾಹುಳುವೊಂದನ್ನು ಹಿಡಿದು ಕಾದ ಮಡಕೆ ಚೂರಿನ ಮೇಲೆ ಬಿಟ್ಟು ನನ್ನ ದನ ಯಾವ ದಿಕ್ಕಿಗೆ ಹೋಗಿದೆ ಹೇಳು ಎಂದು ಕೇಳುತ್ತಿದ್ದರು. ಮೊದಲೇ ನಿಧಾನವಾಗಿ ಚಲಿಸುವ ಅದು ಮಡಕೆ ಚೂರಿನ ಶಾಖವನ್ನು ತಡೆಯಲಾಗದೆ ಯಾವುದೋ ಒಂದು ದಿಕ್ಕಿಗೆ ಚಲಿಸಿದರೆ, ಅದು ಚಲಿಸಿದ ದಿಕ್ಕಿನಲ್ಲಿ ತಮ್ಮ ದನಗಳಿವೆ ಎಂದು ನಂಬಿ ಹುಡುಕಿಕೊಂಡು ಹೋಗುತ್ತಿದ್ದರು. ಅವು ಸಿಗುತ್ತಿದ್ದವೋ ಇಲ್ಲವೋ ಆ ಮಾತು ಬೇರೆ. ಹುಡುಗರು ಮಾತ್ರ ಹಾಗೆ ಮಾಡುತ್ತಿದ್ದರು.ಇಷ್ಟು ಮಾತ್ರವಲ್ಲದೆ ಒಂದು ಪೊರಕೆ ಕಡ್ಡಿಯನ್ನು ಮುರಿದುಕೊಂಡು ಅಂಗೈಮೇಲೆ ಚುಚ್ಚಿ ಬಿಡುತ್ತಿದ್ದರು. ಅದು ಯಾವ ದಿಕ್ಕಿಗೆ ಬಿದ್ದರೆ ಆ ದಿಕ್ಕಿನಲ್ಲಿ ತಪ್ಪಿಸಿಕೊಂಡ ದನಗಳಿವೆ ಎಂದು ತಿಳಿದು ಹುಡುಕಲು ಹೊಗುತ್ತಿದ್ದರು. ಅದರ ಸತ್ಯಾಸತ್ಯತೆ ಏನೇ ಇದ್ದರೂ, ದನಗಾಹಿಗಳು ಇಂತಹ ಕೆಲವು ಅರ್ಥಹೀನ ಆಚರಣೆಗಳನ್ನು ಇಟ್ಟುಕೊಂಡಿದ್ದರು. ಒಟ್ಟಿನಲ್ಲಿ ಖೆಡ್ಡಾ ನಿರ್ಮಿಸಿ ಬೇಟೆಯಾಡುವ ಈ ಹುಳುಗಳ ಛಾತಿಗೆ ಮನುಷ್ಯ ತಲೆದೂಗಲೇಬೇಕು.

- ಆರ್.ಚೌಡರೆಡ್ಡಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry