ಸೋಮವಾರ, ನವೆಂಬರ್ 18, 2019
23 °C
ನೈಸ್ ಸಂಸ್ಥೆ 12 ಅಧಿಕಾರಿಗಳ ವಿರುದ್ಧ ಬಿಎಂಟಿಎಫ್‌ನಲ್ಲಿ ಮೊಕದ್ದಮೆ

ಖೇಣಿ ವಿರುದ್ಧ ದೂರು ದಾಖಲು

Published:
Updated:

ಬೆಂಗಳೂರು: ನಂದಿ ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್ ಎಂಟರ್‌ಪ್ರೈಸಿಸ್ (ನೈಸ್) ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಅಶೋಕ್ ಖೇಣಿ ಸೇರಿದಂತೆ ಅದರ 12 ಜನ ಪ್ರಮುಖರ ವಿರುದ್ಧ ಬೆಂಗಳೂರು ಮಹಾನಗರ ಕಾರ್ಯಪಡೆ (ಬಿಎಂಟಿಎಫ್) ವಂಚನೆ ಪ್ರಕರಣವನ್ನು ದಾಖಲಿಸಿಕೊಂಡಿದೆ.ಗವಿಪುರ ಗುಟ್ಟಹಳ್ಳಿಯ ಕೆಂಪೇಗೌಡ ಎಂಬುವವರು ನೀಡಿದ ದೂರಿನನ್ವಯ ಬಿಎಂಟಿಎಫ್ ಈ ಪ್ರಕರಣವನ್ನು ದಾಖಲಿಸಿಕೊಂಡಿದೆ. ಖೇಣಿ ಅವರಲ್ಲದೆ ನೈಸ್ ಸಂಸ್ಥೆ ಅಧ್ಯಕ್ಷ ಎನ್.ವಾಘುಲ್, ಉಪಾಧ್ಯಕ್ಷರಾದ ಮಂಜುನಾಥ್ ನಾಯ್ಕರ್, ರವಿಶಂಕರ್, ರುದ್ರನಗೌಡ ಮತ್ತು ಟಿ. ಮಹದೇವ್, ನಿರ್ದೇಶಕರಾದ ಬಾಬಾಸಾಹೇಬ್ ಕಲ್ಯಾಣಿ, ಸಂಜೀವಿ ಸುಂದರ್, ಶಿವಕುಮಾರ್ ಖೇಣಿ, ಜಾನ್ ಹೇವಾರ್ಡ್, ಬಿಆರ್‌ವಿ ಗೌಡ, ಸಿದ್ಧಾರ್ಥ ಖೇಣಿ,  ಅವರನ್ನೂ ಆರೋಪಿಗಳನ್ನಾಗಿ ಹೆಸರಿಸಲಾಗಿದೆ.`ಅಗತ್ಯವೇ ಇಲ್ಲದಿದ್ದರೂ ಹೆಚ್ಚುವರಿಯಾಗಿ 3,000 ಎಕರೆ ಭೂಮಿಯನ್ನು ಸ್ವಾಧೀನ ಮಾಡಿಕೊಳ್ಳಲಾಗಿದ್ದು, ಸಂಬಂಧಿಸಿದ ಪ್ರಾಧಿಕಾರಗಳಿಂದ ಅನುಮತಿ ಪಡೆಯದೆ ಕಾನೂನುಬಾಹಿರವಾಗಿ ನಿವೇಶನಗಳನ್ನು ರಚಿಸಲಾಗಿದೆ. ಅವುಗಳನ್ನು ಖಾಸಗಿ ವ್ಯಕ್ತಿಗಳಿಗೆ ಮಾರಾಟ ಮಾಡಿ, ವಸತಿ ಸಂಕೀರ್ಣಗಳನ್ನು ನಿರ್ಮಿಸಲಾಗುತ್ತಿದೆ' ಎಂದು ಕೆಂಪೇಗೌಡ ದೂರಿನಲ್ಲಿ ತಿಳಿಸಿದ್ದಾರೆ.`ಬಿಬಿಎಂಪಿ ಮತ್ತು ಬೆಂಗಳೂರು-ಮೈಸೂರು ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್ ಯೋಜನಾ ಪ್ರಾಧಿಕಾರ (ಬಿಎಂಐಸಿಪಿಎ) ವಿರುದ್ಧ ಪ್ರಕರಣ ದಾಖಲಿಸುವ ಅವಕಾಶವನ್ನು ಬಿಎಂಟಿಎಫ್ ಮುಕ್ತವಾಗಿ ಇರಿಸಿಕೊಂಡಿದೆ. ತನಿಖೆ ಸಂದರ್ಭದಲ್ಲಿ ಈ ಎರಡೂ ಸಂಸ್ಥೆಗಳ ತಪ್ಪುಗಳು ಕಂಡುಬಂದರೆ ಅವುಗಳ ವಿರುದ್ಧವೂ ಪ್ರಕರಣ ದಾಖಲು ಮಾಡಿಕೊಳ್ಳಲಾಗುವುದು' ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.`ಬೆಂಗಳೂರು-ಮೈಸೂರು ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್ ಯೋಜನೆಗೆ 1995ರ ಆಗಸ್ಟ್‌ನಲ್ಲಿ ತಯಾರಿಸಲಾದ ತಾಂತ್ರಿಕ ವರದಿ (ಐಸಿಪಿಟಿಆರ್) ಆಧರಿಸಿ ರಾಜ್ಯ ಸರ್ಕಾರ ಮಂಜೂರಾತಿ ನೀಡಿದೆ. ಆ ವರದಿಯಲ್ಲಿ ಯೋಜನೆಗೆ ಸಂಬಂಧಿಸಿದ ಎಲ್ಲ ವಿವರಗಳಿವೆ. ರಾಜ್ಯ ಸರ್ಕಾರ ಮತ್ತು ನೈಸ್ ಸಂಸ್ಥೆ ನಡುವೆ ಮಾಡಿಕೊಳ್ಳಲಾದ ಕಾಮಗಾರಿ ರೂಪು-ರೇಷೆ ಒಪ್ಪಂದದ (ಎಫ್‌ಡಬ್ಲುಎ) ಪ್ರಕಾರ ಯೋಜನೆಗೆ 20,193 ಎಕರೆ ಮಾತ್ರ ಅಗತ್ಯವಿದೆ ಎಂಬುದಾಗಿ ನಮೂದಿಸಲಾಗಿದೆ. ಆದರೆ, 1997ರ ಜುಲೈ 31ರಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ತಯಾರಿಸಿದ ಟಿಪ್ಪಣಿಯಲ್ಲಿ ಯೋಜನೆಗೆ 23,846 ಎಕರೆ ಭೂಮಿ ಅಗತ್ಯವಿದೆ ಎನ್ನುವ ವಿವರಣೆ ಇದೆ' ಎಂದು ಕೆಂಪೇಗೌಡ ದೂರಿನಲ್ಲಿ ವಿವರಿಸಿದ್ದಾರೆ.`ಯೋಜನೆಯಲ್ಲಿ ಮಾಡಲಾದ ಮಾರ್ಪಾಡುಗಳ ವಿವರವನ್ನು ಸರ್ಕಾರದ ಯಾವುದೇ ಇಲಾಖೆ ಸಿದ್ಧಪಡಿಸಿರಲಿಲ್ಲ. ನೈಸ್ ಸಂಸ್ಥೆಯಿಂದ ಬಂದಿದ್ದ ಈ ಪರಿಷ್ಕೃತ ವರದಿಯನ್ನು ಮುಖ್ಯ ಕಾರ್ಯದರ್ಶಿಗಳು ಎಲ್ಲ ಇಲಾಖೆಗಳಿಗೆ ಕಳುಹಿಸಿದ್ದು ವಿಚಿತ್ರವಾಗಿದೆ. ಈ ಬದಲಾವಣೆಯಲ್ಲಿ ಭೂಮಿ ಪಡೆಯುವ ಹುನ್ನಾರ ಇದ್ದು, ನೈಸ್ ಸಂಸ್ಥೆ ಜತೆಗೆ ಕೆಲವು ಅಧಿಕಾರಿಗಳು ಕೈಜೋಡಿಸಿದ್ದಾರೆ' ಎಂದು ದೂರಿದ್ದಾರೆ.`ಹೆಚ್ಚಿನ ಭೂಮಿ ಸ್ವಾಧೀನ ಪಡಿಸಿಕೊಳ್ಳುವ ಸಂಬಂಧ ಸರ್ವೆ ಸಂಖ್ಯೆ ಸೇರಿದಂತೆ ಯಾವುದೇ ವಿವರಗಳು ಅದರಲ್ಲಿ ಇಲ್ಲ. ಗ್ರಾಮಗಳ ಮಾಹಿತಿ ಸಹ ಇಲ್ಲ ಎಂದು ಹೇಳಿದ್ದಾರೆ. ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ)ಯಿಂದ ಕಾನೂನುಬಾಹಿರವಾಗಿ ಪಡೆದ ಬೆಂಗಳೂರು ಸುತ್ತಲಿನ ಭೂಮಿಯಲ್ಲಿ ಯಾವುದೇ ಅನುಮತಿ ಪಡೆಯದೆ ಕಟ್ಟಡ ನಿರ್ಮಿಸುತ್ತಿದೆ' ಎಂದು ತಿಳಿಸಿದ್ದಾರೆ.`ಕರ್ನಾಟಕ ನಗರ ಮತ್ತು ಗ್ರಾಮ ಯೋಜನೆ ಮತ್ತು ಬಿಡಿಎ ಕಾಯ್ದೆಗಳನ್ನು ಉಲ್ಲಂಘಿಸಲಾಗಿದೆ. ಐಸಿಪಿಟಿಆರ್‌ನಲ್ಲಿ ಹೊಸಕೆರೆಹಳ್ಳಿ ಪ್ರಸ್ತಾಪವೇ ಇರಲಿಲ್ಲ. ಆದರೆ ಹೊಸ ಯೋಜನೆಯಲ್ಲಿ ಆ ಗ್ರಾಮವೂ ಸೇರಿಕೊಂಡಿದೆ. ಕೆಂಗೇರಿ ಹೋಬಳಿಯ ಪಂಥರಪಾಳ್ಯದಲ್ಲಿ ಭೂಮಿಯ ಉಪಯೋಗದಲ್ಲಿ ಬದಲಾವಣೆ ಪ್ರಮಾಣಪತ್ರ ಪಡೆಯದೆ ನಿವೇಶನ ಮಾಡಲಾಗಿದೆ' ಎಂದು ದೂರಿದ್ದಾರೆ.

ಪ್ರತಿಕ್ರಿಯಿಸಿ (+)