ಭಾನುವಾರ, ನವೆಂಬರ್ 17, 2019
29 °C

ಖೊಟ್ಟಿ ಚೆಕ್ ವಿತರಣೆ;ರೈತರಿಂದ ಕಚೇರಿ ಧ್ವಂಸ

Published:
Updated:

ಕೆರೂರ: ಸಮರ್ಪಕವಾಗಿ ಕಬ್ಬಿನ ಬಿಲ್ ನೀಡದೇ ಬೋಗಸ್ ಚೆಕ್ ನೀಡಿದ್ದಕ್ಕೆ ಆಕ್ರೋಶಗೊಂಡ ರೈತರು ಸಕ್ಕರೆ ಕಾರ್ಖಾನೆಗೆ ನುಗ್ಗಿ ದಾಂದಲೆ ನಡೆಸಿದ ಇಲ್ಲಿಗೆ ಸಮೀಪದ ಕೆರಕಲಮಟ್ಟಿ ಗ್ರಾಮದ ಹೊರವಲಯದ ಕೇದಾರನಾಥ ಶುಗರ್ಸ್‌ನಲ್ಲಿ ಸೋಮವಾರ ನಡೆದಿದೆ.ನಾಲ್ಕೈದು ತಾಲ್ಲೂಕುಗಳ ಸಾವಿರಾರು ರೈತರು, ಧುರೀಣರು ಕಾರ್ಖಾನೆ ಕಚೇರಿಗೆ ನುಗ್ಗಿ ಕಿಟಕಿ ಗಾಜು ಒಡೆದು ಕುರ್ಚಿಗಳನ್ನು ಹೊರಗೆಳೆದು ಜಖಂಗೊಳಿಸಿದರು. ಬಿಲ್ ನೀಡದೇ ಶೋಷಿಸುತ್ತಿರುವ ಕೇದಾರನಾಥ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ ವಿರುದ್ಧ ಧಿಕ್ಕಾರ ಹಾಕಿದರು. ನಂತರ ಕಾರ್ಖಾನೆಯ ಆಡಳಿತ ಬೋಗಸ್ ಚೆಕ್‌ಗಳನ್ನು ಪ್ರದರ್ಶಿಸಿದರು. ಜೊತೆಗೆ ಕಾರ್ಖಾನೆ ಆವರಣದಲ್ಲಿ ಬೆಂಕಿ ಹಚ್ಚಿ ತಮ್ಮ ಆವೇಶ ತೋಡಿಕೊಂಡರು.ಪ್ರತಿಭಟನೆ ನಡೆಸುತ್ತಿದ್ದರೂ ಕಾರ್ಖಾನೆ ಆಡಳಿತ ಮಂಡಳಿ ಸದಸ್ಯರು ಇಲ್ಲವೇ ಸಿಬ್ಬಂದಿಯಾಗಲಿ ಸ್ಥಳದಲ್ಲಿ ಹಾಜರಿರದೇ ತಮ್ಮ ಹೊಣೆಗೇಡಿತನ ತೋರಿದ್ದಾರೆ ಎಂದು ರೈತರು ದೂರಿದರು.ಕಾರ್ಖಾನೆಯಲ್ಲಿ ಕೇವಲ ಭದ್ರತಾ ಸಿಬ್ಬಂದಿ ಮಾತ್ರ ಇದ್ದುದು ವಿವಿಧೆಡೆಯಿಂದ ಬಂದಿದ್ದ ರೈತರನ್ನು ಮತ್ತಷ್ಟು ರೊಚ್ಚಿಗೇಳುವಂತೆ ಮಾಡಿತು. ಈ ವೇಳೆಗೆ ಹತೋಟಿ ತಪ್ಪುವಂತೆ ಕಂಡು ಬಂದಿತಾದರೂ ಅದೇ ಸಮಯಕ್ಕೆ ಪೊಲೀಸರು ಆಗಮಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು.ಬಾದಾಮಿ ಸಿಪಿಐ ಆರ್.ಎಸ್. ಪಾಟೀಲ ಹಾಗೂ ಕೆರೂರ ಪಿಎಸ್‌ಐ ಡಿ.ಬಿ. ಪಾಟೀಲ ರೈತ ಧುರೀಣರೊಂದಿಗೆ ಮಾತನಾಡಿದರು.ಕೊನೆಗೆ ಕಾರ್ಖಾನೆ ಆಡಳಿತ ಮಂಡಳಿಯನ್ನು ಸಂಪರ್ಕಿಸಿ, ಒಂದು ವಾರದೊಳಗಾಗಿ ಸಮಸ್ಯೆ ಇತ್ಯರ್ಥಪಡಿಸಲು ಸಂಬಂಧಿಸಿದ ಹಿರಿಯ ಅಧಿಕಾರಿಗಳಿಗೆ ಕೋರಿದರು. ಅಲ್ಲಿಯವರೆಗೆ ಕಾಲಾವಕಾಶ ನೀಡುವಂತೆ ಸಿಪಿಐ ಪಾಟೀಲರು ರೈತರನ್ನು ಕೋರಿದರು. ನಂತರ ರೈತರು ಧರಣಿಯನ್ನು ಹಿಂದಕ್ಕೆ ಪಡೆದರು.

ಪ್ರತಿಕ್ರಿಯಿಸಿ (+)