ಸೋಮವಾರ, ಜೂನ್ 21, 2021
27 °C

ಖ್ಯಾತ ಲೇಖಕ, ಪತ್ರಕರ್ತ ಖುಷ್ವಂತ್‌ ಸಿಂಗ್‌ ಇನ್ನಿಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಖ್ಯಾತ ಲೇಖಕ, ಪತ್ರಕರ್ತ ಖುಷ್ವಂತ್‌ ಸಿಂಗ್‌ (99) ಗುರುವಾರ ಇಲ್ಲಿನ ತಮ್ಮ ಸ್ವಗೃಹದಲ್ಲಿ  ನಿಧನ ಹೊಂದಿದರು.

ಸಂಜೆ ದಯಾನಂದ ಮುಕ್ತಿಧಾಮ ವಿದ್ಯುತ್‌ ಚಿತಾಗಾರದಲ್ಲಿ  ಕುಟುಂಬ ವರ್ಗ, ಅಭಿಮಾನಿ­ಗಳು, ಸ್ನೇಹಿತರ ಸಮ್ಮುಖದಲ್ಲಿ ಅಂತ್ಯಕ್ರಿಯೆ ನಡೆಯಿತು.1939ರಲ್ಲಿ ಕವಾಲ್‌ ಮಲಿಕ್‌ ಅವರನ್ನು ಮದುವೆಯಾಗಿದ್ದ ಸಿಂಗ್‌ ಅವರಿಗೆ ಪತ್ರಕರ್ತ ಪುತ್ರ ರಾಹುಲ್‌ ಮತ್ತು ಪುತ್ರಿ ಮಾಲಾ ಇದ್ದಾರೆ. 2001ರಲ್ಲಿ ಪತ್ನಿ ಕವಾಲ್‌ ನಿಧನ ಹೊಂದಿದ್ದಾರೆ.ಖುಷ್ವಂತ್‌ ಅವರು ಕಳೆದ ಕೆಲವು ದಿನಗಳಿಂದ ವೃದ್ಧಾಪ್ಯ ಸಹಜ ಕಾಯಿಲೆ­ಯಿಂದ ಬಳಲುತ್ತಿದ್ದರು. ಯಾವುದೇ ಯಾತನೆ ಪಡದೆ ಶಾಂತಚಿತ್ತರಾಗಿ ಚಿರನಿದ್ರೆಗೆ ಜಾರಿದರು ಎಂದು ರಾಹುಲ್‌ ತಿಳಿಸಿದರು.ಕಟ್ಟಡಗಳ ಗುತ್ತಿಗೆದಾರ ಸರ್‌ ಸೋಭಾ ಸಿಂಗ್‌ ಅವರ ಪುತ್ರರಾಗಿದ್ದ ಖುಷ್ವಂತ್‌ ಸಿಂಗ್‌ ಬಾಲ್ಯದ ಹೆಸರು ಖುಷಾಲ್‌ ಸಿಂಗ್‌. ದೆಹಲಿಯ ಸುಜನ್‌ ಸಿಂಗ್‌ ಪಾರ್ಕ್‌ನಲ್ಲಿ ತಂದೆ ಕಟ್ಟಿದ್ದ ಮನೆಯಲ್ಲೇ ವಾಸವಾಗಿದ್ದರು.ಅವರಿಗೆ ಆಗಾಗ ಉಸಿರಾಟದ ತೊಂದರೆ ಕಾಡುತ್ತಿತ್ತು. ಆದರೆ ಕೊನೆಯ­ವರೆಗೂ ಮಾನಸಿಕವಾಗಿ ಸ್ಥಿರವಾಗಿದ್ದ ಸಿಂಗ್‌ ಪತ್ರಿಕೆಗಳನ್ನು ತಪ್ಪದೆ ಓದುತ್ತಿದ್ದರು, ಜೀವನಪ್ರೀತಿ ಉಳಿಸಿ­ಕೊಂಡಿದ್ದರು.1979ರಿಂದ 1980ರ ವರೆಗೆ ‘ಇಲಸ್ಟ್ರೇಟೆಡ್‌ ವೀಕ್ಲಿ’ ನಿಯತಕಾಲಿಕೆ­ಯ ಸಂಪಾದಕರಾಗಿದ್ದ ಸಿಂಗ್‌ ಮೊದಲ ಬಾರಿ ಅದರಲ್ಲಿ ಲೈಂಗಿಕತೆ ಮತ್ತು ಕಾಮಕ್ಕೆ ಸಂಬಂಧಿಸಿದ ಚಿತ್ರ, ವರದಿ­ಗಳನ್ನು ಪ್ರಕಟಿಸಿ ಓದುಗರೆಲ್ಲ ಹುಬ್ಬೇರಿ­ಸುವಂತೆ ಮಾಡಿದ್ದರು. ಈ ಅವಧಿ­ಯ­ಲ್ಲಿಯೇ ಪ್ರಸಾರ ಏಳು ಪಟ್ಟು ವೃದ್ಧಿ­ಸಿತ್ತು.  ‘ಹಿಂದೂಸ್ತಾನ್‌ ಟೈಮ್‌್ಸ’ ಪತ್ರಿಕೆಯ ಸಂಪಾದಕರಾಗಿಯೂ ಕಾರ್ಯ ನಿರ್ವಹಿಸಿದ್ದರು.ಅವರ ವಾರದ ಅಂಕಣ ‘ವಿತ್‌ ಮಲೈಸ್‌ ಟುವರ್ಡ್ಸ್ ಒನ್‌ ಆ್ಯಂಡ್‌ ಆಲ್‌’ ಬಹಳ ಪ್ರಸಿದ್ಧಿ ಪಡೆದಿತ್ತು ಹಾಗೂ ಅನೇಕ ಪತ್ರಿಕೆಗಳಲ್ಲಿ ಪ್ರಕಟ­ವಾಗುತ್ತಿತ್ತು.

ಕೇಂದ್ರ ಸರ್ಕಾರದ ‘ಯೋಜನಾ’ ನಿಯತಕಾಲಿಕೆಯ ಸ್ಥಾಪಕ ಸಂಪಾದಕ­ರಾಗಿಯೂ (1951ರಿಂದ 1953) ಅವರು ಕಾರ್ಯ ನಿರ್ವಹಿಸಿದ್ದರು. ನ್ಯಾಷನಲ್‌ ಹೆರಾಲ್ಡ್‌ನಲ್ಲಿಯೂ ಕೆಲ ಕಾಲ ಕೆಲಸ ಮಾಡಿದ್ದರು.ಖ್ಯಾತ ಕಾದಂಬರಿಕಾರರು ಹಾಗೂ ದಿಟ್ಟ ರಾಜಕೀಯ ವಿಶ್ಲೇಷಕರೂ ಆಗಿದ್ದ ಸಿಂಗ್‌ ಅವರನ್ನು ಇಂದಿರಾ ಗಾಂಧಿ ಪ್ರಧಾನಿ ಆಗಿದ್ದಾಗ 1980ರಲ್ಲಿ ರಾಜ್ಯಸಭೆಗೆ ನಾಮಕರಣ ಮಾಡಲಾಗಿತ್ತು.ಅವರಿಗೆ 1974ರಲ್ಲಿ ಪದ್ಮಭೂಷಣ  ನೀಡಲಾಗಿತ್ತು. ಆದರೆ 1984ರಲ್ಲಿ ಅಮೃತಸರದ ಸ್ವರ್ಣ ಮಂದಿರದ ಮೇಲೆ ಸೇನೆ ನಡೆಸಿದ ಬ್ಲೂಸ್ಟಾರ್‌ ಕಾರ್ಯಾಚರಣೆ ಪ್ರತಿಭಟಿಸಿ ಪ್ರಶಸ್ತಿಯನ್ನು ವಾಪಸ್‌ ಮಾಡಿದ್ದರು. ಮುಂದೆ 2007ರಲ್ಲಿ ದೇಶದ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮವಿಭೂಷಣ ನೀಡಿ ಗೌರವಿಸ­ಲಾ­ಗಿತ್ತು. ಕಚಗುಳಿ ನೀಡುವ ಹಾಸಕ್ಕೆ ಖ್ಯಾತರಾಗಿದ್ದ ಖುಷ್ವಂತ್‌, ರಾಜಕೀಯ ವಿಶ್ಲೇಷಣೆ, ವಿಡಂಬನಾತ್ಮಕ ಬರಹಗಳ ಜತೆಗೆ  ಸಿಖ್‌ ಧಾರ್ಮಿಕ ಗ್ರಂಥಗಳು ಮತ್ತು ಉರ್ದು ಕವಿತೆಗಳನ್ನು ಹಾಗೂ ಅನೇಕ ಕಾದಂಬರಿಗಳನ್ನು ಭಾಷಾಂತ­ರಿಸಿದ್ದಾರೆ. ಈಗ ಪಾಕಿಸ್ತಾನದಲ್ಲಿರುವ ಹಡಲಿಯಲ್ಲಿ 1915ರಲ್ಲಿ ಜನಿಸಿದ ಖುಷ್ವಂತ್‌ ಆರಂಭಿಕ ಶಿಕ್ಷಣವನ್ನು ದೆಹ­ಲಿಯ ಮಾಡರ್ನ್ ಶಾಲೆಯಲ್ಲಿ ಪಡೆ­ದರು. ಸೇಂಟ್‌ ಜೋಸೆಫ್‌ ಕಾಲೇಜಿ­ನಲ್ಲಿ, ನಂತರ ಲಾಹೋರ್‌ನ ಸರ್ಕಾರಿ ಕಾಲೇಜಿನಲ್ಲಿ ವ್ಯಾಸಂಗ ಮುಂದುವರಿಸಿದರು.ಕೇಂಬ್ರಿಜ್ ವಿಶ್ವವಿದ್ಯಾಲಯದ ಕಿಂಗ್‌್ಸ ಕಾಲೇಜಿನಲ್ಲಿಯೂ ಅವರು ವ್ಯಾಸಂಗ ಮಾಡಿದ್ದರು. 1947ರಲ್ಲಿ ವಿದೇಶಾಂಗ ಸೇವೆಗೆ ಸೇರುವ ಮೊದಲು ಅವರು ಲಾಹೋರ್‌ ಹೈಕೋರ್ಟ್‌ನಲ್ಲಿ ವಕೀಲಿ ವೃತ್ತಿ ನಡೆಸುತ್ತಿದ್ದರು.ವಿದೇಶಾಂಗ ಇಲಾಖೆಯಲ್ಲಿ ವಾರ್ತಾ ಅಧಿಕಾರಿಯಾಗಿ ಸೇವೆ ಸಲ್ಲಿಸಿ­ದ್ದರು. ‘ಟ್ರೈನ್‌ ಟು ಪಾಕಿಸ್ತಾನ’, ‘ಐ ಷಲ್‌ ನಾಟ್ ಹಿಯರ್ ದಿ ನೈಟಿಂಗೆಲ್‌’ ಮತ್ತು ‘ಡೆಲ್ಲಿ’ ಕಾದಂಬರಿಗಳು ಅವರಿಗೆ ಭಾರಿ ಜನಪ್ರಿಯತೆ ತಂದುಕೊಟ್ಟಿದ್ದವು. ತಮ್ಮ 95ನೇ ವಯಸ್ಸಿನಲ್ಲಿ ಅವರು ‘ದಿ ಸನ್‌ಸೆಟ್ ಕ್ಲಬ್‌’ ಎಂಬ ಕಾದಂಬರಿ ಬರೆದಿದ್ದರು. ಎಲ್ಲ ವಯೋಮಾನದ ಓದುಗರನ್ನೂ ಸಂಪಾದಿಸಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.