ಗಂಗಾಪುರ ಶಾಲೆ ಮೇಸ್ಟರ ಯಶೋಗಾಥೆ ಕೇಳಿರಿ

7
ಆರ್.ಮುನಿವೆಂಕಟಸ್ವಾಮಿಗೆ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ

ಗಂಗಾಪುರ ಶಾಲೆ ಮೇಸ್ಟರ ಯಶೋಗಾಥೆ ಕೇಳಿರಿ

Published:
Updated:

ಶಿಡ್ಲಘಟ್ಟ: ತಾಲ್ಲೂಕಿನ ಕುಗ್ರಾಮಗಳ ಪೈಕಿ ಒಂದಾದ ಗಂಗಾಪುರದಲ್ಲಿ ಬಸ್‌ನ ಸದ್ದು ಕೇಳುವುದಿಲ್ಲ. ಸಮರ್ಪಕ ಮೂಲಸೌಕರ್ಯವೇ ಇಲ್ಲದ ಈ ಗ್ರಾಮದಲ್ಲಿ ಅನಕ್ಷರಸ್ಥರ ಸಂಖ್ಯೆಯೇ ಹೆಚ್ಚು. ಅಕ್ಷರ ಸಂಸ್ಕೃತಿಯ ಗಾಳಿ ಬೀಸುವುದಂತೂ ತುಂಬಾ ಕಷ್ಟ. ಜಿಲ್ಲಾ ಕೇಂದ್ರದಿಂದ 40 ಕಿ.ಮೀ. ಮತ್ತು ತಾಲ್ಲೂಕು ಕೇಂದ್ರದಿಂದ 20 ಕಿ.ಮೀ. ದೂರದಲ್ಲಿರುವ ಈ ಗ್ರಾಮ ಎಲ್ಲರ ಗಮನ ಸೆಳೆಯುವುದಂತೂ ಇನ್ನೂ ಕಷ್ಟ. ಆದರೆ ಇಲ್ಲಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಶಿಕ್ಷಕ ಆರ್.ಮುನಿವೆಂಕಟಸ್ವಾಮಿ ಅವರನ್ನು ಬೆಂಗಳೂರಿನಿಂದ ರಾಜ್ಯಮಟ್ಟದ ಪ್ರಶಸ್ತಿ ಹುಡುಕಿಕೊಂಡು ಬಂದಿದೆ!ಶಾಲೆ ಅಭಿವೃದ್ಧಿಪಡಿಸುವ ಮತ್ತು ಮಕ್ಕಳಿಗೆ ಅಕ್ಷರ ಕಲಿಸುವ ಕಾಯಕದಲ್ಲಿ ತೊಡಗಿಕೊಂಡಿರುವ ಆರ್.ಮುನಿವೆಂಕಟಸ್ವಾಮಿ ಅವರಿಗೆ ಈ ಬಾರಿ ರಾಜ್ಯಮಟ್ಟದ ಉತ್ತಮ ಪ್ರಶಸ್ತಿ ಒಲಿದಿದ್ದು, ಚಿಕ್ಕಬಳ್ಳಾಪುರ,  ಕೋಲಾರ ಜಿಲ್ಲೆಗಳಿಂದ ಇವರೊಬ್ಬರೇ ಆಯ್ಕೆಯಾಗಿದ್ದಾರೆ. 17 ವರ್ಷದ ಹಿಂದೆ ಇದೇ ಶಾಲೆಯಲ್ಲಿ ಶಿಕ್ಷಕ ವೃತ್ತಿ ಆರಂಭಿಸಿದ ಅವರು ಶಾಲೆಗೆ ಹೊಸ ಸ್ವರೂಪವನ್ನೇ ನೀಡಿದ್ದಾರೆ. ಮಕ್ಕಳಿಗೆ ಅಕ್ಷರ ಹೇಳಿಕೊಡುವ ಜೊತೆಗೆ ಅವರ ಪೋಷಕರಿಗೂ ಅಕ್ಷರದ ಮಹತ್ವ ತಿಳಿಸುತ್ತಿದ್ದಾರೆ. ಹೀಗಾಗಿ ಶಿಕ್ಷಕರ ಜೊತೆಗೆ ಶಾಲೆ ಕೂಡ ಮಾದರಿಯಾಗಿ ಮಾರ್ಪಟ್ಟಿದೆ.ತಾಲ್ಲೂಕಿನ ಕುಂದಲಗುರ್ಕಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಂಗಾಪುರದಲ್ಲಿ 17 ವರ್ಷಗಳ ಹಿಂದೆ ರಾಮ ಭಜನೆ ಮನೆಯಲ್ಲಿ ನಾಲ್ಕು ಮಕ್ಕಳೊಂದಿಗೆ ಶಾಲೆ ತೆರೆಯಲಾಯಿತು. ಸಹಶಿಕ್ಷಕ ನಾಗರಾಜ್ ಅವರೊಂದಿಗೆ ಶಿಕ್ಷಕ ವೃತ್ತಿಯನ್ನು ಆರಂಭಿಸಿದ ಮುನಿವೆಂಕಟಸ್ವಾಮಿ ಮೂರು ವರ್ಷಗಳ ಕಾಲ ಭಜನೆ ಮನೆಯಲ್ಲೇ ಮಕ್ಕಳಿಗೆ ಪಾಠ ಮಾಡಿದರು. ನಂತರ ಶಾಲೆಯನ್ನು ಅಭಿವೃದ್ಧಿಪಡಿಸಬೇಕು ಎಂದು ಪಣ ತೊಟ್ಟ ಅವರಿಬ್ಬರು ಎರಡು ಎಕರೆ ಜಮೀನು ಮಂಜೂರು ಮಾಡಿಸಿಕೊಂಡರು. ಕುರುಚಲು ಗಿಡ, ಮುಳ್ಳು ಗಿಡ-ಗಂಟಿ, ಕಲ್ಲು ಬಂಡೆಗಳ ಬೀಡಾಗಿದ್ದ ಶಾಲೆಯ ಜಮೀನನ್ನು ಸಮತಟ್ಟುಗೊಳಿಸಿದರು. ಗ್ರಾಮಸ್ಥರು, ಪೋಷಕರು, ಹಿರಿಯರು, ಕಿರಿಯರೆನ್ನೆಲ್ಲ ವಿಶ್ವಾಸಕ್ಕೆ ತೆಗೆದುಕೊಂಡ ಅವರು, `ಇದು ನಮ್ಮ ಶಾಲೆ' ಎಂಬ ಭಾವನೆ ಮೂಡಿಸಿದರು.ಶಾಲೆ ಆವರಣದಲ್ಲಿನ ಸುಮಾರು ಎರಡು ಎಕರೆ ಜಮೀನಿನಲ್ಲಿ ಸ್ವಂತ ಹಣ ಖರ್ಚು ಮಾಡಿ, ವಿವಿಧ ಬಗೆ ಗಿಡಗಳನ್ನು ನೆಟ್ಟಿದ್ದಾರೆ, ಮರಗಳನ್ನು ಬೆಳೆಸಿದ್ದಾರೆ. ಗಿಡ- ಮರಗಳ ಮಧ್ಯೆ ಕಪ್ಪು ಹಲಗೆ ನೆಟ್ಟು ಬೆಂಚು ಕಲ್ಲುಗಳನ್ನು ನಿರ್ಮಿಸಿದ್ದಾರೆ. ನಾಲ್ಕು ಗೋಡೆಗಳ ಮಧ್ಯೆ ಪಾಠ- ಪ್ರವಚನ ಅಲ್ಲದೆ, ಗಿಡ- ಮರಗಳ ಕುರಿತ ಪರಿಸರದ ಪಾಠ ಮಾಡುತ್ತಾರೆ. ತುಂಬ ಕಡಿಮೆಯಿದ್ದ ಮಕ್ಕಳ ಸಂಖ್ಯೆ ಈಗ ಹೆಚ್ಚಾಗಿದೆ.ಬಹುತೇಕ ಕಡೆ ಶಾಲೆಯ ಒಟ್ಟಾರೆ ಜವಾಬ್ದಾರಿ ಶಿಕ್ಷಕರದು ಎಂದು ಹೇಳಿಕೊಂಡು ಗ್ರಾಮಸ್ಥರು ದೂರ ಸರಿಯುತ್ತಾರೆ. ಆದರೆ ಇಲ್ಲಿ ಗ್ರಾಮಸ್ಥರೇ ನಾ ಮುಂದು-ತಾ ಮುಂದು ಎಂಬಂತೆ ಶಾಲಾಭಿವೃದ್ಧಿ ಕಾರ್ಯಗಳಲ್ಲಿ ತೊಡಗುತ್ತಾರೆ.ಶಾಲೆಯ ಪರಿಸರದೊಂದಿಗೆ ಅವಿನಾಭಾವ ಸಂಬಂಧ ಬೆಳೆಸಿಕೊಂಡ ಮುನಿವೆಂಕಟಸ್ವಾಮಿಯವರು ಭಾನುವಾರ ಮತ್ತು ಇತರ ರಜೆಯ ದಿನಗಳಲ್ಲೂ ಶಾಲೆಗೆ ಹಾಜರಾಗುತ್ತಾರೆ. ಬೇಸಿಗೆ ರಜೆಯಲ್ಲೂ ವಾರಕ್ಕೆ ಮೂರು ದಿನ ಶಾಲೆಗೆ ಬಂದು ಹೋಗುತ್ತಾರೆ. ನೀರು ಎರೆದು ಗಿಡ- ಮರಗಳನ್ನು ರಕ್ಷಿಸಿಕೊಂಡು ಬಂದಿದ್ದಾರೆ. ಇದಕ್ಕೆ ಗ್ರಾಮಸ್ಥರ ಸಹಕಾರವೂ ಇದೆ. ಆದ್ದರಿಂದಲೇ ಗ್ರಾಮದಲ್ಲಿರುವ ಶಾಲೆ ಕಲಿಯುವ ವಯಸ್ಸಿನ ಎಲ್ಲರೂ ಈ ಸರ್ಕಾರಿ ಶಾಲೆ ವಿದ್ಯಾರ್ಥಿಗಳು.`1996ರಲ್ಲಿ ಈ ಶಾಲೆಗೆ ಶಿಕ್ಷಕನಾಗಿ ನೇಮಕಗೊಂಡೆ. ಇದನ್ನು ಅಭಿವೃದ್ಧಿಪಡಿಸಲು ನಿಶ್ಚಿತ ಗುರಿಯಿಟ್ಟುಕೊಂಡೆ. ಕುಂದಲಗುರ್ಕಿಯಿಂದ ಮೂರು ಕಿ.ಮೀ. ದೂರದ ಗಂಗಾಪುರಕ್ಕೆ ವಾಹನ ಸೌಕರ್ಯ ಆಗ ಇರಲಿಲ್ಲ, ಈಗಲೂ ಇಲ್ಲ. ಆದರೂ ನನ್ನ ಕನಸುಗಳನ್ನು ಸಾಕಾರಗೊಳಿಸಲು ಗ್ರಾಮಸ್ಥರು ಸಹಕರಿಸಿದರು. ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲದೆ ಬೇರೆ ಬೇರೆ ಇಲಾಖೆಗಳ ಅಧಿಕಾರಿಗಳ ಪ್ರೋತ್ಸಾಹ ಮತ್ತು ನನ್ನ ಗುರು ಘಟ್ಟಪ್ಪನವರ ಸ್ಫೂರ್ತಿ ಮಾತುಗಳೇ ಈ ಸಾಧನೆಗೆ ಪ್ರೇರಣೆಯಾದವು. ನಿತ್ಯದ ಪಾಠದ ಜೊತೆಗೆ ಮಕ್ಕಳು ಔಷಧವನ, ಉದ್ಯಾನ ಗಿಡಗಳು, ಅವುಗಳ ಉಪಯುಕ್ತತೆ, ಪಕ್ಷಿಗಳು, ಕೀಟಗಳು ಮತ್ತು ಕೃಷಿ ಬಗ್ಗೆಯೂ ಅರಿತಿದ್ದಾರೆ. ಅವರ ಕಲಿಕೆಗೆ ಪೂರಕವಾದ ಪರಿಸರ ನಿರ್ಮಾಣ ಮಾಡುವುದು ನನ್ನ ಕರ್ತವ್ಯ. ಅದಕ್ಕಾಗಿ ಪ್ರಾಮಾಣಿಕವಾಗಿ ಶ್ರಮಿಸಿದ್ದೇನೆ' ಎಂದು ಆರ್. ಮುನಿವೆಂಕಟಸ್ವಾಮಿ `ಪ್ರಜಾವಾಣಿ'ಗೆ ತಿಳಿಸಿದರು.`ನಾನು ಶಾಲೆಯಲ್ಲಿನ ಶಿಕ್ಷಣ ಗುಣಮಟ್ಟ ಪರಿಶೀಲಿಸಲು ಮತ್ತು ಸ್ಥಿತಿ- ಗತಿ ಅರಿಯಲು ಸಂಯೋಜನಾಧಿಕಾರಿಯಾಗಿ ಮಿಂಚಿನ ಸಂಚಾರ ಕೈಗೊಳ್ಳುತ್ತಿದ್ದೆ. ನಾನು ಕಂಡ ಶಾಲೆಗಳಲ್ಲೇ ಗಂಗಾಪುರ ಶಾಲೆ ತೀರ ವಿಶಿಷ್ಟ ಮತ್ತು ವಿಭಿನ್ನವಾದದ್ದು' ಎಂದು ಬಾಗೇಪಲ್ಲಿ  ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶ್ ತಿಳಿಸಿದರು. ಈ ಶಾಲೆಯು ಕರ್ನಾಟಕ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಪರಿಸರ ಮಿತ್ರ ಶಾಲೆ ಪ್ರಶಸ್ತಿಯನ್ನೂ ಪಡೆದಿದೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry