ಗಂಗಾ ಮೃತ್ತಿಕೆಯ ಗಣಪ

7

ಗಂಗಾ ಮೃತ್ತಿಕೆಯ ಗಣಪ

Published:
Updated:

‘ಗಂಗಾ ನದಿಯ ಮಣ್ಣಿನಿಂದ, ಕೋಲ್ಕತ್ತಾದ ನುರಿತ ಕಲಾವಿದರು ತಯಾರಿಸಿದ ಗಣೇಶನ ವಿಗ್ರಹಗಳು ಇಲ್ಲಿ ಮಾರಾಟಕ್ಕಿವೆ’ ಎಂಬ ಆ ಬ್ಯಾನರ್, ಯಲಚೇನಹಳ್ಳಿ ಬಳಿಯ ಗಣಪತಿಪುರ ಮುಖ್ಯರಸ್ತೆಯಲ್ಲಿ ಸಾಗುವ ವಾಹನಗಳಿಗೆ ಒಂದು ಸಣ್ಣ ಬ್ರೇಕ್ ಕೊಡುತ್ತದೆ. ಪುರುಸೊತ್ತಿದ್ದವರು ಕಳೆದೆರಡು ತಿಂಗಳಿನಿಂದಲೂ ಆ ಟೆಂಟ್‌ನೊಳಗೆ ಹೋಗಿ ಮೂರ್ತಿ ತಯಾರಕನನ್ನು ಮಾತನಾಡಿಸಿ ಬರುತ್ತಾರೆ.ಎಲ್ಲರ ಪ್ರಶ್ನೆ ಒಂದೇ ‘ಇಡೀ ಮೂರ್ತಿಯನ್ನು ಗಂಗಾ ನದಿಯ ಮಣ್ಣಿನಿಂದಲೇ ತಯಾರಿಸುತ್ತೀರೋ? ಅಥವಾ ಲೇಪನಕ್ಕೆ ಮಾತ್ರ ಆ ಮಣ್ಣೋ?’ ಎಂದು. ಟೆಂಟ್‌ನ ಮೂಲೆಯಿಂದ ಗಂಗಾ ನದಿಯ ಮಣ್ಣಿನ ಚೀಲಗಳನ್ನು ತೋರಿಸಿ ‘ಇಧರ್ ದೇಖಿಯೇ ಜೀ, ಗಂಗಾ ರಿವರ್ ಕಾ ಮಿಟ್ಟಿ ದೇಖಿಯೇ...’ ಎಂದು ತೋರಿಸುತ್ತಾರೆ ಮೂರ್ತಿ ತಯಾರಕ ಬಸುದೇವ್ ಪಾಲ್.‘ಇಲ್ಲೇ ಲೋಕಲ್ ಮಣ್ಣು ತಂದು ಮೂಟೆ ಕಟ್ಟಿ ಇಟ್ಟಿರಾ್ತರೆ. ಗಂಗಾ ನದಿಯ ಮಣ್ಣು ತಂದು ಇಲ್ಲಿ ಮೂರ್ತಿ ಮಾಡೋದುಂಟಾ?’ ಎಂಬ ಕುಹಕಕ್ಕೆ ಬಸುದೇವ್, ಕೆ.ಆರ್. ಮಾರುಕಟ್ಟೆಯಲ್ಲಿರುವ ತಮ್ಮ ಸ್ನೇಹಿತನ ಅಂಗಡಿಗೆ ಕೋಲ್ಕತ್ತಾದಿಂದ ಬಂದ ಪಾರ್ಸೆಲ್‌ನ ಚೀಟಿ ತೋರಿಸುತ್ತಾರೆ. ‘ಸುಳ್ಳು ಹೇಳಿ ದೇವರ ಕೆಲಸ ಮಾಡಲು ಕೋಲ್ಕತ್ತಾದಿಂದ ಇಲ್ಲಿಗೆ ಬರಬೇಕೇ?’ ಎಂದು ಪ್ರಶ್ನಿಸುವ ಬಸುದೇವ್, ಕಳೆದ ಏಳು ವರ್ಷಗಳಿಂದಲೂ ಅದೇ ಜಾಗದಲ್ಲಿ ಟೆಂಟ್ ಹಾಕಿಕೊಂಡು ಗಂಗೆಯ ಮೃತ್ತಿಕೆಯಿಂದ ಮೂರ್ತಿಗಳನ್ನು ತಯಾರಿಸುತ್ತಾರಂತೆ.ಮೃತ್ತಿಕೆಯೇ ಇವರ ‘ಬ್ರಾಂಡ್’

ಗಣಪತಿಪುರ, ಚುಂಚಘಟ್ಟದಂತಹ ಒಳಪ್ರದೇಶಕ್ಕೆ ಅಲ್ಲಿಂದ ಮಣ್ಣು ತಂದು ಮೂರ್ತಿ ತಯಾರಿಸಿ ಮಾರುಕಟ್ಟೆ ಗಿಟ್ಟಿಸಿಕೊಳ್ಳಬಹುದು ಎಂಬ ಯೋಚನೆ ಹೇಗೆ ಬಂತು ಎಂದು ಕೇಳಿದರೆ ನಗುತ್ತಾರೆ ಅವರು. ‘ಕಲಾಸಿಪಾಳ್ಯದಲ್ಲಿ ಗೆಳೆಯನ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದೆ. ಶ್ರಾವಣ ಬಂತೆಂದರೆ ಹಬ್ಬಗಳ ತಯಾರಿ, ಬಗೆ ಬಗೆಯ ವಿಗ್ರಹಗಳಿಗೆ ಬೇಡಿಕೆ ಹೆಚ್ಚುತ್ತಿರುವುದನ್ನು ಗಮನಿಸುತ್ತಿದ್ದೆ.

ಹೇಗೂ ನನಗೆ ಮೂರ್ತಿ ತಯಾರಿಸುವ ಕಲೆ ಗೊತ್ತಿತ್ತು. ಲೋಕಲ್ ಮಣ್ಣಿನಿಂದ ಮೂರ್ತಿ ತಯಾರಿಸುವ ಬದಲು ನನ್ನದೇ ವಿಶೇಷತೆಯನ್ನು ತೋರಿಸಬೇಕು ಎಂದುಕೊಂಡು ಗಂಗೆಯ ಮಣ್ಣನ್ನು ತರಿಸಿಕೊಂಡು ಕೆಲಸ ಶುರು ಮಾಡಿದೆ. ಬೇರೆ ಕಡೆ ಖಾಲಿ ಜಾಗಕ್ಕೂ ಹೆಚ್ಚು ಬಾಡಿಗೆ ಕೇಳುತ್ತಾರೆ. ಈ ಪ್ರದೇಶದಲ್ಲಿ ಪರಿಚಯದವರಿದ್ದರು. ಹಾಗಾಗಿ ಇಲ್ಲಿಗೆ ಬಂದೆ.

ಗೌರಿ ಗಣೇಶ ಹಬ್ಬಕ್ಕೆ ಎರಡು ತಿಂಗಳಿರುವಾಗ ಬಂದವನು ಪ್ರತಿ ವರ್ಷ ನಾಲ್ಕು ತಿಂಗಳು ಇದ್ದು ಹೋಗುತ್ತೇನೆ. ಈ ವರ್ಷ ಈ ಜಾಗಕ್ಕೆ 12ಸಾವಿರ ರೂಪಾಯಿ ಬಾಡಿಗೆ. ಕಳೆದ ಬಾರಿ 57 ಮೂರ್ತಿಗಳು ಮಾರಾಟವಾಗಿವೆ. ಈ ಬಾರಿ 47 ಮೂರ್ತಿಗಳು ಮುಗಿದಿವೆ. ಸ್ಥಳೀಯರಷ್ಟೇ ಅಲ್ಲ ಬೇರೆ ಕಡೆಯಿಂದಲೂ ಜನ ಬಂದು ಬುಕಿಂಗ್ ಮಾಡುತ್ತಿದ್ದಾರೆ’ ಎಂಬುದು ಬಸುದೇವ್ ನೀಡುವ ಮಾಹಿತಿ.ಜರಿ ವಸ್ತ್ರವನ್ನು ಬೇಕಾದ ಆಕಾರಕ್ಕೆ ಕತ್ತರಿಸಿ ಮೂರ್ತಿಗಳಿಗೆ ಒಡವೆ, ಅಲಂಕಾರ ಮಾಡುತ್ತಾರೆ. ರಾಸಾಯನಿಕ ಬಣ್ಣಗಳನ್ನು ಬಳಸುವುದಿಲ್ಲ ಎಂದೂ ಹೇಳುತ್ತಾರೆ. ಬಸುದೇವ್ ಅವರ ಟೆಂಟ್‌ನಲ್ಲಿ ಗೌರಿ, ಗಣೇಶ, ಮೂಷಿಕ ಮೂರ್ತಿಗಳು ಅಂತಿಮಸ್ಪರ್ಶ ಪಡೆಯುತ್ತಿದ್ದರೆ ನವರಾತ್ರಿಯ ಸಿದ್ಧತೆಯೂ ಆಗಲೇ ಶುರುವಾಗಿದೆ.

ದುರ್ಗೆಯ ನಾನಾ ಅವತಾರ, ಭಂಗಿ, ಆಧುನಿಕ ಪರಿಕಲ್ಪನೆಯವುಗಳೂ ರೂಪ ತಳೆಯುತ್ತಿವೆ. ಬೆಂಗಳೂರಿನ ದಸರಾ ಮಾರುಕಟ್ಟೆಯನ್ನೂ ಗಂಗಾ ನದಿಯ ಮಣ್ಣು ಎಂಬ ಬ್ಯಾನರ್ ಮೂಲಕವೇ ಸೆಳೆಯುವ ತಂತ್ರ ಬಸುದೇವ್ ಅವರದು.ಮಣ್ಣಿನ ಪಾವಿತ್ರ್ಯಕ್ಕಾಗಿ...

‘ಗಂಗಾ ನದಿಯ ನೀರು ಪವಿತ್ರ ಎಂದು ನಂಬುವ ನಮಗೆ ಗಂಗಾ ಜಲವನ್ನೇ ಆವಾಹಿಸಿಕೊಂಡ ಮೃತ್ತಿಕೆಯೂ ಅಷ್ಟೇ ಪವಿತ್ರ ಅಲ್ವೇ? ಅದಕ್ಕೆ ನಮ್ಮ ವಠಾರಕ್ಕೆ ನಾಲ್ಕು ಮೂರ್ತಿಗಳನ್ನು ಕಳೆದ ವಾರವೇ ಇಲ್ಲಿ ಬುಕ್ ಮಾಡಿದ್ದೇವೆ’ ಎಂದು ಗಣಪತಿಪುರ ಬಳಿಯ ಬೀರೇಶ್ವರನಗರದ ಹನುಮಂತಪ್ಪ-–ರಾಜಮ್ಮ ದಂಪತಿ ಹೇಳಿದರು.ಕನಕಪುರ ರಸ್ತೆಯ ಸಂಚಾರ ದಟ್ಟಣೆಯಿಂದ ಬಚಾವಾಗಲು ಗಣಪತಿಪುರ–ಚುಂಚಘಟ್ಟದ ಮೂಲಕ ಪುಟ್ಟೇನಹಳ್ಳಿಗೆ ಶಾರ್ಟ್‌ಕಟ್ ದಾರಿ ಬಳಸುವ ವಾಹನ ಚಾಲಕರು, ಅತ್ತ ಪುಟ್ಟೇನಹಳ್ಳಿ ಕಡೆಯಿಂದ ಆರ್‌ಬಿಐ ಬಡಾವಣೆ-–ಚುಂಚಘಟ್ಟದ ಮೂಲಕ ಕನಕಪುರ ರಸ್ತೆಗೆ ಸಂಪರ್ಕ ಪಡೆಯುವವರೂ ಬಸುದೇವ್ ಅವರ ಟೆಂಟ್ ಬಳಿ ಒಮ್ಮೆ ಇಣುಕಿ ಹೋಗುವುದು ಸಾಮಾನ್ಯ.ಶಿವಪುರಾಣದಲ್ಲಿ, ಪಾರ್ವತಿ ತನ್ನ ಜಳಕದ ವೇಳೆ ಕಾವಲುಗಾರನಾಗಿ, ಅರಸಿನದಿಂದ ತಯಾರಿಸಿದ ಒಂದು ಆಕಾರವನ್ನು ಗಂಗೆಯಲ್ಲಿ ಅದ್ದಿ ತೆಗೆದಾಗ ಜೀವ ಪಡೆದವನು ಗಣೇಶ. ಇದೇ ಹಿನ್ನೆಲೆಯಲ್ಲಿ ಗಣೇಶನನ್ನು ದ್ವೈಮಾತುರ ಅಂದರೆ ಇಬ್ಬರು ತಾಯಂದಿರನ್ನು ಹೊಂದಿದವನೆಂದು ವ್ಯಾಖ್ಯಾನಿಸಲಾಗುತ್ತದೆ. ಗಂಗೆ ಅವನ ಸಾಕುತಾಯಿ ಎಂಬ ಉಲ್ಲೇಖವೂ ಇದೆ.ಮತ್ತೊಂದೆಡೆ ಪದ್ಮ ಪುರಾಣದಲ್ಲಿ ಗಣೇಶನ ಹುಟ್ಟಿನಲ್ಲಿ ಗಂಗೆಯ ಮಹತ್ವವನ್ನು ಬೇರೆಯೇ ರೀತಿಯಲ್ಲಿ ಹೇಳಲಾಗುತ್ತದೆ. ಅದೆಂದರೆ- ಪಾರ್ವತಿ ಸ್ನಾನಕ್ಕೂ ಮುನ್ನ ತನ್ನ ಶರೀರಕ್ಕೆ ಬಳಿದುಕೊಂಡಿದ್ದ ಸುಗಂಧದ್ರವ್ಯವನ್ನೆಲ್ಲ ಒಟ್ಟುಮಾಡಿ ಅದಕ್ಕೆ ಆನೆಯ ತಲೆಯುಳ್ಳ ಬಾಲಕನ ರೂಪವನ್ನು ನೀಡುತ್ತಾಳೆ. ಅದನ್ನು ಶಿವ- ಪಾರ್ವತಿಯರು ಗಂಗೆಯಲ್ಲಿ ಮುಳುಗಿಸಿ ತೆಗೆದಾಗ ಅದಕ್ಕೆ ಜೀವ ಬರುತ್ತದೆ. ಮುಂದೆ ಅದನ್ನೇ ಗಜಾನನನ್ನಾಗಿ ಅವರು ಪೂಜಿಸಲಾರಂಭಿಸುತ್ತಾರಂತೆ.ಹೀಗೆ, ಪೌರಾಣಿಕ ಕಥೆಗಳನ್ನು ನೋಡಿದರೂ ಗಂಗೆಗೂ ಗಣಪತಿಗೂ ಅವಿನಾಭಾವ ನಂಟು. ಅಂತಹ ಗಂಗೆಯ ಮಣ್ಣಿನ ಮೂರ್ತಿಗೂ ವರ್ತಮಾನದ ಮಾರುಕಟ್ಟೆಗೂ ನಂಟು ಉಂಟು.

(ಬಸುದೇವ್ ಪಾಲ್ 90606 70831).

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry