ಗಂಗೆಯ ತಟದಿಂದ ಪಶ್ಚಿಮದ ಅಂಚಿನವರೆಗೆ

7

ಗಂಗೆಯ ತಟದಿಂದ ಪಶ್ಚಿಮದ ಅಂಚಿನವರೆಗೆ

Published:
Updated:

ಸ್ಯಾಂಡಿಯಾಗೊ (ಪಿಟಿಐ): ಬದುಕಿದ್ದಾಗಲೇ ದಂತಕಥೆಯಾಗಿದ್ದ, ಜಗತ್ತಿನೆಲ್ಲೆಡೆಗೆ ಭಾರತೀಯ ರಾಗಗಳ ಕಂಪು ಪಸರಿಸಿದ ಸಿತಾರ್ ದಿಗ್ಗಜ ಪಂಡಿತ್ ರವಿಶಂಕರ್ ಅವರ ಪೂರ್ಣ ಹೆಸರು ರೊಬಿಂದ್ರ ಶಂಕರ್ ಚೌಧರಿ. ಬಂಗಾಳಿ ಬ್ರಾಹ್ಮಣ ಕುಟುಂಬದಲ್ಲಿ 1920ರಲ್ಲಿ ವಾರಣಾಸಿಯಲ್ಲಿ ಜನಿಸಿದರು. ನಾಲ್ಕು ಸಹೋದರರ ಪೈಕಿ ಕಿರಿಯರಾಗಿದ್ದ ರವಿಶಂಕರ್ ಅವರನ್ನು ತಾಯಿ ಹೇಮಾಂಗಿನಿ ದೇವಿ ಅವರೇ ಬೆಳೆಸಿದರು. ಅವರ ಜೀವನದ ಮೊದಲ ಹತ್ತು ವರ್ಷ ಕಷ್ಟಕಾರ್ಪಣ್ಯದಿಂದ ಕೂಡಿತ್ತು.ತಂದೆ ವಕೀಲ ಶ್ಯಾಮ್‌ಶಂಕರ್, ಜಲಾವರ್‌ದ ಮಹಾರಾಜರ ಬಳಿ ದಿವಾನರಾಗಿ ಕೆಲಸ ಮಾಡಿದ್ದರು. ಬರಹಗಾರರು, ತತ್ವಜ್ಞಾನಿಯೂ ಆಗಿದ್ದ ಶ್ಯಾಮ್‌ಶಂಕರ್ ಲಂಡನ್‌ನಲ್ಲಿ ವಕೀಲರಾಗಿದ್ದರು. ರವಿಶಂಕರ್ ಎಂಟು ವರ್ಷದವರಿದ್ದಾಗ ತಮ್ಮ ತಂದೆಯನ್ನು ಮೊದಲ ಬಾರಿ ಭೇಟಿಯಾದರು.ರವಿಶಂಕರ್ ಅವರಿಗಿಂತ 20 ವರ್ಷ ದೊಡ್ಡವರಾಗಿದ್ದ ಅಣ್ಣ ಉದಯ್‌ಶಂಕರ್  ರವಿಶಂಕರ್ ಅವರನ್ನು ಅಕ್ಷರಶಃ ಮಗನಂತೆ ನೋಡಿಕೊಂಡರು. ಶ್ರೇಷ್ಠ ನೃತ್ಯ ಕಲಾವಿದರಾಗಿದ್ದ ಉದಯ್‌ಶಂಕರ್, 30ರ ದಶಕದಲ್ಲಿ ಪ್ಯಾರಿಸ್‌ಗೆ ತಮ್ಮ ಕುಟುಂಬ ಸ್ಥಳಾಂತರಿಸಿ ಯೂರೋಪ್‌ನಲ್ಲಿ ನೃತ್ಯ ಕಾರ್ಯಕ್ರಮ ನೀಡಲಾರಂಭಿಸಿದ್ದರು. ಅಣ್ಣನ ನೃತ್ಯ ತಂಡದಲ್ಲಿ ಕಲಾವಿದರಾಗಿದ್ದ ರವಿಶಂಕರ್‌ಗೆ ಸಂಗೀತದ ಹುಚ್ಚು ಹತ್ತಿದ ಮೇಲೆ ಭಾರತಕ್ಕೆ ಮರಳಿ ಉಸ್ತಾದ್ ಅಲ್ಲಾವುದ್ದೀನ್ ಖಾನ್ ಅವರ ಬಳಿ ಸಿತಾರ್ ಕಲಿಯಲು ಆರಂಭಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry