ಶುಕ್ರವಾರ, ಮೇ 14, 2021
31 °C
ನದಿ ನುಂಗುವ ಅಭಿವೃದ್ಧಿ ಬೇಡ: ಪೇಜಾವರ ಶ್ರೀ- ರಾಜೇಂದ್ರ ಸಿಂಗ್ ಆಗ್ರಹ

ಗಂಗೆಯ ಪಾವಿತ್ರ್ಯ ಉಳಿವಿಗೆ ಹೋರಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗಂಗೆಯ ಪಾವಿತ್ರ್ಯ ಉಳಿವಿಗೆ ಹೋರಾಟ

ಬೆಂಗಳೂರು:  `ದೇಶದ ಅಸ್ಮಿತೆ ಎನಿಸಿದ ನದಿಗಳನ್ನು ಸಮಾಧಿ ಮಾಡಿ, ಅದರ ಮೇಲೆ ಅಭಿವೃದ್ಧಿ ಸೌಧ ಕಟ್ಟಲು ಅವಕಾಶ ನೀಡುವುದಿಲ್ಲ' ಎಂದು ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಹಾಗೂ ಜಲತಜ್ಞ ರಾಜೇಂದ್ರ ಸಿಂಗ್ ಘೋಷಿಸಿದರು.ಗುರುವಾರ ಜಂಟಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, `ಗಂಗಾ ನದಿ ಮತ್ತು ಧಾರಿದೇವಿ ದೇವಸ್ಥಾನ ರಕ್ಷಣೆಗಾಗಿ ಜ್ಞಾನ ಸ್ವರೂಪ ಸಾನಂದ್ ಸ್ವಾಮೀಜಿ (ಪ್ರೊ. ಜಿ.ಡಿ. ಅಗ್ರವಾಲ್) ಹರಿದ್ವಾರದಲ್ಲಿ ಆರಂಭಿಸಿರುವ ಉಪವಾಸ ಸತ್ಯಾಗ್ರಹವನ್ನು ಸಂಪೂರ್ಣವಾಗಿ ಬೆಂಬಲಿಸುತ್ತೇವೆ' ಎಂದೂ ಹೇಳಿದರು.`ಗಂಗಾ ನದಿ ಮೂಲದಲ್ಲೇ ಅಣೆಕಟ್ಟು ನಿರ್ಮಾಣ ಮಾಡುವ ಮೂಲಕ ವಿದ್ಯುತ್ ಯೋಜನೆ ಅನುಷ್ಠಾನಕ್ಕೆ ತರಲು ಸರ್ಕಾರ ಹೊರಟಿದೆ. ಮೂಲವನ್ನೇ ಭಗ್ನಗೊಳಿಸಿದರೆ ಗಂಗೆ ಉಳಿಯುವುದಿಲ್ಲ. ರಾಷ್ಟ್ರೀಯ ನದಿ ಎಂಬ ಹಿರಿಮೆಗೆ ಪಾತ್ರವಾಗಿರುವ ಗಂಗಾ ನದಿ ರಕ್ಷಣೆಗೆ ಕೇಂದ್ರದ ಉಪೇಕ್ಷೆ ಸಲ್ಲ' ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.`ಗಂಗಾ ನದಿ ರಕ್ಷಣೆ ಹಿಂದೆ ದೇಶದ ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ ಮತ್ತು ಪ್ರಾಕೃತಿಕ ಸಂಪತ್ತಿನ ರಕ್ಷಣೆ ಉದ್ದೇಶವೂ ಅಡಗಿದೆ. ಅದು ಮೂಲದಿಂದ ಲೀನದವರೆಗೆ ನದಿ ಸತ್ವಯುತವಾಗಿ, ಶಕ್ತಿಯುತವಾಗಿ ಹರಿಯಬೇಕು. ಅದಕ್ಕಾಗಿ ಗಂಗಾ ಭಂಗ ಕ್ರಮದ ವಿರುದ್ಧ ದೊಡ್ಡ ಚಳವಳಿ ನಡೆಸಲಿದ್ದೇವೆ' ಎಂದು ಘೋಷಿಸಿದರು.`ಮಿತಿಮೀರಿದ ಕೈಗಾರಿಕೆಗಳಿಂದ ಈಗಾಗಲೇ ಗಂಗೆಯ `ಗಂಗತ್ವ' ಸತ್ತುಹೋಗಿದೆ. ಬ್ರಿಟಿಷರ ಕಾಲದಿಂದಲೇ ನದಿಗೆ ಚರಂಡಿ ನೀರು ಬಿಡಲಾಗುತ್ತಿದೆ. ನದಿ ದಂಡೆ ಮೇಲಿನ ಹಳ್ಳಿಗಳಲ್ಲಿ ಸಾವಿರ, ಸಾವಿರ ಸಂಖ್ಯೆಯಲ್ಲಿ ಕ್ಯಾನ್ಸರ್ ರೋಗಿಗಳು ಸಿಗುತ್ತಾರೆ. ಇದಕ್ಕೆಲ್ಲ ಪರಿಹಾರ ರೂಪದಲ್ಲಿ ಗಂಗೆಗೆ ಪುನರುಜ್ಜೀವನ ನೀಡಬೇಕಿದೆ' ಎಂದು ರಾಜೇಂದ್ರ ಸಿಂಗ್ ಪ್ರತಿಪಾದಿಸಿದರು.`ನದಿ ಸತ್ತರೆ ಅದನ್ನು ಮತ್ತೆ ಜೀವಗೊಳಿಸುವಂತಹ ಯಾವ ತಂತ್ರಜ್ಞಾನವೂ ವಿಜ್ಞಾನದಲ್ಲಿ ಇಲ್ಲ. ಅಭಿವೃದ್ಧಿ ಕಾರ್ಯಗಳಿಗೆ ನಮ್ಮ ವಿರೋಧ ಏನಿಲ್ಲ. ಆದರೆ, ನದಿಯನ್ನು ಬಲಿಕೊಟ್ಟು ಅಂತಹ ಕೆಲಸಗಳು ನಡೆಯುವ ಅಗತ್ಯವಿಲ್ಲ. ಇಂತಹ ಪ್ರಗತಿಯಿಂದ ಜನರಿಗೆ ಸಂಕಷ್ಟಗಳೇ  ಎಂದು ಹೇಳಿದರು.ರಾಜ್ಯದ ನದಿಗಳಿಗಾಗಿ ಹೋರಾಟ

ಬೆಂಗಳೂರು
: `ರಾಜ್ಯದ ನದಿಗಳ ಪುನರುಜ್ಜೀವನಕ್ಕಾಗಿ ಉಳಿದ ಮಠಾಧೀಶರ ಜತೆಗೂಡಿ ಹೋರಾಟ ನಡೆಸಲಾಗುವುದು' ಎಂದು ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಪ್ರಕಟಿಸಿದರು.`ರಾಜ್ಯದ ಕೆಲವು ಮಠಾಧೀಶರು ಸೇರಿಕೊಂಡು ಸಾಂಸ್ಕೃತಿಕ ಪರಿಷತ್ ರಚಿಸಿದ್ದೇವೆ. ನಾನು ಹಾಗೂ ಸುತ್ತೂರು, ಆದಿಚುಂಚನಗಿರಿ ಮಠಾಧೀಶರು ಸೇರಿದಂತೆ ಹಲವು ಸ್ವಾಮೀಜಿಗಳು ಅದರ ಸದಸ್ಯರಾಗಿದ್ದೇವೆ. ಅರ್ಕಾವತಿ ಸೇರಿದಂತೆ ಎಲ್ಲ ನದಿಗಳ ಉಳಿವಿಗಾಗಿ ಧ್ವನಿ ಎತ್ತಲಿದ್ದೇವೆ' ಎಂದು ಹೇಳಿದರು. `ಹೋರಾಟದ ರೂಪು-ರೇಷೆಗಳ ಕುರಿತು ಇತರ ಸ್ವಾಮೀಜಿಗಳ ಜತೆ ಚರ್ಚೆ ನಡೆಸಿ ನಿರ್ಧರಿಸಲಾಗುವುದು' ಎಂದು ತಿಳಿಸಿದರು.`ಗಂಗಾ ನದಿಯಲ್ಲಿ ಹೆಣಗಳನ್ನು ಎಸೆಯುವುದು ಕೂಡ ಮಾಲಿನ್ಯವೇ. ಧರ್ಮದ ಹೆಸರಿನ ಇಂತಹ ಅತ್ಯಾಚಾರಗಳು ನಿಲ್ಲಬೇಕು. ಗಂಗೆಗೆ ಹೆಣ ಎಸೆಯದಂತೆ ಸರ್ಕಾರ ಎಚ್ಚರವಹಿಸಬೇಕು' ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರವಾಗಿ ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.