ಗಂಗೋತ್ರಿಯಲ್ಲಿ ನೂತನ ಒಳಾಂಗಣ: ಓವೆಲ್ ಮೈದಾನಕ್ಕೆ ಹೊಸ `ಹೊದಿಕೆ'

7

ಗಂಗೋತ್ರಿಯಲ್ಲಿ ನೂತನ ಒಳಾಂಗಣ: ಓವೆಲ್ ಮೈದಾನಕ್ಕೆ ಹೊಸ `ಹೊದಿಕೆ'

Published:
Updated:

ಮೈಸೂರು: ನಗರದ ಹೃದಯಭಾಗದಲ್ಲಿರುವ ಓವೆಲ್ ಮೈದಾನದ ಅಥ್ಲೆಟಿಕ್ಸ್ ಟ್ರ್ಯಾಕ್‌ಗೆ ಹೊಚ್ಚಹೊಸ ಸಿಂಡರ್ ಹೊದಿಕೆಯ ಭಾಗ್ಯ ಸಿಗಲಿದೆ!ಅಂತರರಾಷ್ಟ್ರೀಯ ಮಟ್ಟದಲ್ಲಿ ಹಲವು ಪ್ರತಿಭಾವಂತ ಅಥ್ಲೀಟ್‌ಗಳನ್ನು ನೀಡಿದ ಕೀರ್ತಿಯಿರುವ ಓವೆಲ್ ಮೈದಾನಕ್ಕೆ ಮುಂದಿನ ಶೈಕ್ಷಣಿಕ ವರ್ಷದಲ್ಲಿ ಹೊಸ ಸಿಂಡರ್ ಟ್ರ್ಯಾಕ್ ಹಾಕಲು ಮೈಸೂರು ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ವಿಭಾಗ ಯೋಜನೆ ರೂಪಿಸಿದೆ.1980ರ ಮುನ್ನ ಯುವರಾಜ ಕಾಲೇಜಿನ ಕ್ರಿಕೆಟ್ ಮೈದಾನವಾಗಿದ್ದ ಓವೆಲ್ ಮೈದಾನ ನಂತರ ಮೈಸೂರು ವಿವಿಯ ಅಥ್ಲೆಟಿಕ್ಸ್ ಟ್ರ್ಯಾಕ್ ಆಗಿ ಬದಲಾಯಿತು. 1982ರಲ್ಲಿ ಎಂಟು ಲೇನ್‌ಗಳ ಸಿಂಡರ್ ಟ್ರ್ಯಾಕ್ ಸಿದ್ಧವಾಗಿತ್ತು. ಅದೇ ವರ್ಷ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಅಥ್ಲೆಟಿಕ್ ಕೂಟವೂ ಯಶಸ್ವಿಯಾಗಿ ನಡೆದಿತ್ತು.ಇದೀಗ ಮೂವತ್ತು ವರ್ಷಗಳ ನಂತರ ಹೊಸ ಮಾದರಿಯ ಸಿಂಡರ್ ಟ್ರ್ಯಾಕ್ ಜೊತೆಗೆ ಎಷ್ಟೇ ದೊಡ್ಡ ಮಳೆ ಸುರಿದರೂ ಒಂದೇ ತಾಸಿನಲ್ಲಿ ಮಳೆನೀರು ಹರಿದು ಹೋಗಿ ಆಟಕ್ಕೆ ಮೈದಾನ ಸಿದ್ಧವಾಗುವಂತಹ ವ್ಯವಸ್ಥೆ ರೂಪಿಸಲಾಗುತ್ತಿದೆ.`ಈ ಕಾಮಗಾರಿಗೆ ಅಂದಾಜು ಒಂದು ಕೋಟಿ ರೂಪಾಯಿ ವೆಚ್ಚವಾಗುವ ನಿರೀಕ್ಷೆಯಿದೆ. ಇನ್ನೂ ಅಂದಾಜುಪತ್ರ ತಯಾರಿಸಲಾ ಗುತ್ತಿದ್ದು, ಶೀಘ್ರವೇ ಪ್ರಸ್ತಾವ ಸಲ್ಲಿಸಲಾಗುವುದು. ಎಷ್ಟೇ ಜೋರಾದ ಮಳೆ ಬಂದರೂ ಒಂದು ಗಂಟೆಯಲ್ಲಿ ನೀರು ಹರಿದುಹೋಗುವಂತೆ ಮೈದಾನ ಸುತ್ತ ಡ್ರೈನೇಜ್‌ಗಳನ್ನು ಹಾಕಲಾಗುವುದು. ಅಲ್ಲದೇ ಹೊಸ ಸಿಂಡರ್ ಟ್ರ್ಯಾಕ್ ಕೇವಲ ಅಥ್ಲೀಟ್‌ಗಳಿಗೆ ಉಪಯೋಗ ವಾಗುವಂತೆ ಸುತ್ತಲೂ ಬೇಲಿ ಹಾಕಲಾಗುವುದು.ವಾಯುವಿಹಾರ, ಜಾಗಿಂಗ್‌ಗೆ ಬರುವ ಸಾರ್ವಜನಿಕರಿಗೆ ಪ್ರತ್ಯೇಕ ವ್ಯವಸ್ಥೆ ರೂಪಿಸಲಾಗುವುದು. ಇದರಿಂದ ಅಭ್ಯಾಸನಿರತ ಅಥ್ಲೀಟ್‌ಗಳಿಗೂ ತೊಂದರೆಯಾಗುವುದಿಲ್ಲ. ಸಾರ್ವಜನಿಕರೂ ಮುಕ್ತವಾಗಿ ವಾಯು ವಿಹಾರ ನಡೆಸಬಹುದು. ಬಿಡಾಡಿ ಪ್ರಾಣಿಗಳೂ ಬರದಂತೆ ತಡೆಗೋಡೆ ವ್ಯವಸ್ಥೆ ಮಾಡಲಾಗುತ್ತದೆ' ಎಂದು ಹೇಳುವ  ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ. ಸಿ. ಕೃಷ್ಣ. `ಸಿಂಥೆಟಿಕ್ ಟ್ರ್ಯಾಕ್ ಅಳವಡಿಸುವುದಿಲ್ಲ. ಅದರಿಂದ ಕೇಲವೇ ಕೆಲವು ಅಥ್ಲೀಟ್‌ಗಳಿಗೆ ಮಾತ್ರ ಮೈದಾನ ಬಳಕೆಗೆ ಯೋಗ್ಯವಾಗುತ್ತದೆ. ಶಾಲೆ, ಪ್ರೌಢಶಾಲೆ ಗಳ ಮಕ್ಕಳಿಗೆ ಕ್ರೀಡಾಕೂಟ, ತರಬೇತಿ ನಡೆಸಲು ಸಾಧ್ಯ ವಾಗುವುದಿಲ್ಲ. ಆದ್ದರಿಂದ ಸಿಂಡರ್ ಟ್ರ್ಯಾಕ್ ಸಾಕು' ಎಂದು ಸ್ಪಷ್ಟಪಡಿಸುತ್ತಾರೆ.ಇದೇ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಾಗಿದ್ದ ಲಂಡನ್ ಪ್ಯಾರಾಲಿಂಪಿಕ್ಸ್‌ನ ಬೆಳ್ಳಿ ಪದಕ ವಿಜೇತ ಎಚ್.ಎನ್. ಗಿರೀಶ್, ಒಲಿಂಪಿಯನ್ ಶೋಭಾ ಜಾವೂರ್, ಅಂತರರಾಷ್ಟ್ರೀಯ ಅಥ್ಲೀಟ್ ಎಸ್. ಸೋಮಶೇಖರ್,  ಶಿವೇಗೌಡ  ( ಒಲಿಂಪಿಯನ್ ವಿಕಾಸಗೌಡ ತಂದೆ), ರೀತ್ ಅಬ್ರಹಾಂ ಮತ್ತು ಅಂತರರಾಷ್ಟ್ರೀಯ ಮಾಸ್ಟರ್ಸ್ ಅಥ್ಲೆಟಿಕ್ಸ್‌ನಲ್ಲಿ ಪದಕಗಳ ಸಾಧನೆ ಮಾಡುತ್ತಿರುವ ಎನ್.ಆರ್. ಶಂಕರರಾವ್, ಎಚ್.ಆರ್. ರಾಮಸ್ವಾಮಿ, ಪೂವಯ್ಯ, ವಿಜಯಲಕ್ಷ್ಮೀಸಿಂಗ್, ಎಂ.ಪಿ. ಚಂದ್ರಶೇಖರ್, ಪಾರ್ವತಿ, ವಿಜಯಾ ರಮೇಶ್, ಎಂ. ಯೋಗೇಂದ್ರ ಅವರ ಅಭ್ಯಾಸಕ್ಕೆ ವೇದಿಕೆ ಇದೇ ಓವೆಲ್ ಮೈದಾನ. ಇದಲ್ಲದೇ ಪ್ರತಿದಿನ ನೂರಕ್ಕೂಹೆಚ್ಚು ಜನರು ಇಲ್ಲಿ ವಾಯುವಿಹಾರಕ್ಕೆ ಬರುತ್ತಾರೆ. ಮೈದಾನಗಳು ಇಲ್ಲದ ಶಾಲೆಗಳ ಕ್ರೀಡಾಕೂಟಗಳಿಗೂ ಈ ಮೈದಾನ ಬಳಕೆಯಾಗುತ್ತಿದೆ. ಗಂಗೋತ್ರಿಯಲ್ಲಿ ಹೊಸ ಒಳಾಂಗಣ: ಮಾನಸಗಂಗೋತ್ರಿಯ ಆವರಣದಲ್ಲಿ ಒಟ್ಟು 1.25 ಕೋಟಿ ರೂಪಾಯಿ ಅಂದಾಜು ವೆಚ್ಚದಲ್ಲಿ ಈ ಸುಸಜ್ಜಿತ ಒಳಾಂಗಣ ಕ್ರೀಡಾಂಗಣ ನಿರ್ಮಾಣ ವಾಗಲಿದೆ. ಅದಕ್ಕಾಗಿ ಆವರಣದಲ್ಲಿ ಸೂಕ್ತ ಜಾಗವನ್ನು ಗುರುತಿಸುವ ಕಾರ್ಯವೂ ಪ್ರಗತಿಯಲ್ಲಿದೆ.`ಉತ್ಕೃಷ್ಟ ವಿದ್ಯಾಸಂಸ್ಥೆ' ಯೋಜನೆಯಡಿಯಲ್ಲಿ ಅನುದಾನ ಲಭ್ಯವಾಗಿದ್ದು, ಮುಂದಿನ ಶೈಕ್ಷಣಿಕ ಸಾಲಿನಲ್ಲಿ ನಿವೇಶನ ಗುರುತಿಸುವಿಕೆ, ಟೆಂಡರ್, ಕಾಮಗಾರಿಗಳು ನಡೆಯಲಿವೆ.ದೈಹಿಕ ಶಿಕ್ಷಣ ವಿಭಾಗದ ಪೆವಿಲಿಯನ್‌ನಲ್ಲಿರುವ ಒಳಾಂಗಣ ದಲ್ಲಿಯೇ ಬ್ಯಾಡ್ಮಿಂಟನ್, ಟೇಬಲ್ ಟೆನಿಸ್, ಜಿಮ್ನಾಸ್ಟಿಕ್ಸ್ ಕ್ರೀಡೆಗಳನ್ನು ನಡೆಸಲಾಗುತ್ತಿದೆ. ನೂತನ ಒಳಾಂಗಣ ಕ್ರೀಡಾಂಗಣವು 150್ಡ100 ಅಡಿ  ನಿವೇಶನದಲ್ಲಿ ನಿರ್ಮಾಣವಾಗಲಿದ್ದು, ಪ್ರಮುಖ ವಾಗಿ ಶಟಲ್ ಬ್ಯಾಡ್ಮಿಂಟನ್ ಆಟಕ್ಕೆ ಮೂರರಿಂದ ನಾಲ್ಕು     ಕೋರ್ಟ್‌ಗಳು, ವಾಲಿಬಾಲ್, ಬ್ಯಾಸ್ಕೆಟ್‌ಬಾಲ್ ಮತ್ತು ಕುಸ್ತಿ ತರಬೇತಿಗಾಗಿ ಸೌಲಭ್ಯಗಳು ಸಿದ್ಧವಾಗಲಿವೆ.ಸದ್ಯ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಸಹಯೋಗದೊಂದಿಗೆ ಕ್ರಿಕೆಟ್‌ಗಾಗಿ ಗಂಗೋತ್ರಿ ಗ್ಲೇಡ್ಸ್ ಇದ್ದು, ಅದರಲ್ಲಿ ಹೊಸ ಪೆವಿಲಿಯನ್ ಕಟ್ಟಡವೂ ಉದ್ಘಾಟನೆಗೆ ಸಿದ್ಧವಾಗಿ ನಿಂತಿದೆ. ಕೆಎಸ್‌ಸಿಎ ತರಬೇತಿ ಅಕಾಡೆಮಿ ಕೂಡ ಕಾರ್ಯನಿರ್ವಹಿಸುತ್ತಿದೆ.ಮೂರು ವಸತಿ ನಿಲಯಗಳಲ್ಲಿ ಮಲ್ಟಿಜಿಮ್ ಸೌಲಭ್ಯವನ್ನೂ ಈಗಾಗಲೇ ನೀಡಲಾಗಿದೆ. ಇದಲ್ಲದೇ ಯುವರಾಜ ಕಾಲೇಜು ಮತ್ತು ಮಹಾರಾಜ ಕಾಲೇಜುಗಳಲ್ಲಿ ವಿಶ್ವವಿದ್ಯಾಲಯ ಅನುದಾನ ಆಯೋಗದ ಯೋಜನೆಯಲ್ಲಿ ತಲಾ ಒಂದು ಒಳಾಂಗಣ ಕ್ರೀಡಾಂಗಣ ನಿರ್ಮಾಣವಾಗಲಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry