ಗಂಗೋತ್ರಿ ಅಂಗಳದಲ್ಲಿ ಕದನ ಕುತೂಹಲ

7
ರಣಜಿ ಟ್ರೋಫಿ: ಕರ್ನಾಟಕ-ವಿದರ್ಭ ಪಂದ್ಯ ಇಂದಿನಿಂದ

ಗಂಗೋತ್ರಿ ಅಂಗಳದಲ್ಲಿ ಕದನ ಕುತೂಹಲ

Published:
Updated:

ಮೈಸೂರು: ಗಂಗೋತ್ರಿ ಗ್ಲೇಡ್ಸ್‌ನ ನಳನಳಿಸುವ ಹಸಿರು ಹುಲ್ಲಿನಂಕಣದ ಮೇಲೆ ಕಠಿಣ ಅಭ್ಯಾಸ ನಡೆಸಿದ್ದ ಕರ್ನಾಟಕ ಮತ್ತು ವಿದರ್ಭ ತಂಡಗಳ ಆಟಗಾರರಿಗೆ ಗೆಲುವಿನ `ಮೈಸೂರು ಪಾಕ್' ಸವಿಯುವ ಗುರಿ!

ಶನಿವಾರದಿಂದ ಇಲ್ಲಿ ಆರಂಭವಾಗಲಿರುವ ರಣಜಿ ಟ್ರೋಫಿ ಟೂರ್ನಿಯ `ಬಿ' ಗುಂಪಿನ ಆರನೇ ಪಂದ್ಯ ಉಭಯ ತಂಡಗಳಿಗೆ ಮಹತ್ವದ್ದು.

ಟೂರ್ನಿಯ ಐದು ಪಂದ್ಯಗಳಿಂದ 12 ಅಂಕ ಗಳಿಸಿರುವ ವಿದರ್ಭ, 11 ಅಂಕ ಗಳಿಸಿರುವ ಕರ್ನಾಟಕಕ್ಕಿಂತ ಒಂದು ಹೆಜ್ಜೆ ಮುಂದಿದೆ. ಅಂಕಗಳ ಪಟ್ಟಿಯಲ್ಲಿ ಆತಿಥೇಯ ತಂಡವು ಆರನೇ ಸ್ಥಾನದಲ್ಲಿದ್ದರೆ, ವಿದರ್ಭ ತಂಡವು ನಾಲ್ಕನೇ ಸ್ಥಾನದಲ್ಲಿದೆ.ಮೊದಲ ಮೂರು ಪಂದ್ಯಗಳನ್ನು ಸಮ ಮಾಡಿಕೊಂಡು, ಬೆಂಗಳೂರಿನಲ್ಲಿ ನಡೆದ ನಾಲ್ಕನೇ ಪಂದ್ಯದಲ್ಲಿ ಒಡಿಶಾ ವಿರುದ್ಧ ಸೋತ       ಕರ್ನಾಟಕ ತಂಡ, ನಂತರದ ಪಂದ್ಯದಲ್ಲಿ  ದೆಹಲಿಯನ್ನು ಸೋಲಿಸಿ ಆತ್ಮವಿಶ್ವಾಸದ ಹೊಳೆಯಲ್ಲಿ ತೇಲುತ್ತಿದೆ. ಶುಕ್ರವಾರ ಬೆಳಿಗ್ಗೆ ಅಭ್ಯಾಸದಲ್ಲಿ ನಿರತರಾಗಿದ್ದ ಆತಿಥೇಯ ತಂಡದ ಆಟಗಾರರ ದೇಹಭಾಷೆಯ ತುಂಬು ವಿಶ್ವಾಸ, ನವಚೈತನ್ಯ ಸ್ಪಷ್ಟವಾಗಿ ಕಂಡುಬರುತ್ತಿತ್ತು.

ಅದೇ ಮೊದಲ ಪಂದ್ಯದಲ್ಲಿ ಹರಿಯಾಣ ತಂಡವನ್ನು ಅವರದ್ದೇ ನೆಲದಲ್ಲಿ (ರೋಹತಕ್) ಸೋಲಿಸುವುದರೊಂದಿಗೆ  ಅಭಿಯಾನ ಆರಂಭಿಸಿದ್ದ ವಿದರ್ಭ ನಂತರದ ನಾಲ್ಕೂ ಪಂದ್ಯಗಳನ್ನು ಸಮ ಮಾಡಿಕೊಂಡಿದೆ. ಸುಮಾರು ಒಂದು ದಶಕದ ನಂತರ ಕರ್ನಾಟಕವನ್ನು ಎದುರಿಸುತ್ತಿದೆ.

ಹುಬ್ಬಳ್ಳಿಯಲ್ಲಿ ನಡೆಯಲಿರುವ ಮುಂದಿನ ಪಂದ್ಯದಲ್ಲಿ ಬಲಿಷ್ಠ ಹರಿಯಾಣ ತಂಡವನ್ನು ಕರ್ನಾಟಕ ಎದುರಿಸಬೇಕು. ಇಂಗ್ಲೆಂಡ್ ವಿರುದ್ಧ ಟ್ವೆಂಟಿ-20 ಟೂರ್ನಿಯಲ್ಲಿ ಭಾರತವನ್ನು ಪ್ರತಿನಿಧಿಸಲು  ತೆರಳಲಿರುವ ಆರ್. ವಿನಯಕುಮಾರ್ ಸೇವೆ ಹುಬ್ಬಳ್ಳಿ ಪಂದ್ಯಕ್ಕೆ ಲಭ್ಯವಾಗುವುದಿಲ್ಲ. ಆದ್ದರಿಂದ ಕರ್ನಾಟಕ ತಂಡವು ಈ ಪಂದ್ಯವನ್ನು ಬೋನಸ್ ಪಾಯಿಂಟ್‌ನೊಂದಿಗೆ ಜಯಿಸಲು ಹೋರಾಟ ನಡೆಸುವ ನಿರೀಕ್ಷೆಯಿದೆ.

ತುರುಸಿನ ಪೈಪೋಟಿ: ಗಂಗೋತ್ರಿ ಗ್ಲೇಡ್ಸ್‌ನ ಅಂಗಳವು ಲೈನ್ ಮತ್ತು ಲೆಂಗ್ತ್ ಕಾಪಾಡಿಕೊಂಡು ನಿಖರವಾಗಿ ಬೌಲಿಂಗ್ ಮಾಡುವ  ಮಧ್ಯಮ ವೇಗಿಗಳಿಗೆ ಒಲಿದಿದ್ದು ಈ ಇಲ್ಲಿ ನಡೆದ ಹಲವು ಪಂದ್ಯಗಳಲ್ಲಿ ಸಾಬೀತಾಗಿದೆ.

ಈ ವಿಭಾಗದಲ್ಲಿ ಎರಡೂ ತಂಡಗಳದ್ದು ಸಮಬಲ.ಇಂಗ್ಲೆಂಡ್ ಟ್ವೆಂಟಿ-20 ಕ್ರಿಕೆಟ್ ಸರಣಿಯಲ್ಲಿ ಭಾರತ ತಂಡಕ್ಕೆ ಆಯ್ಕೆಯಾಗಿರುವ ಮತ್ತು ರಣಜಿ ಟೂರ್ನಿಯ ನಾಲ್ಕು ಪಂದ್ಯಗಳಿಂದ ಒಟ್ಟು 17 ವಿಕೆಟ್ ಪಡೆದಿರುವ `ದಾವಣಗೆರೆ ಎಕ್ಸ್‌ಪ್ರೆಸ್' ವಿನಯಕುಮಾರ್ ಮತ್ತು ಕಳೆದ ಮೂರು ಪಂದ್ಯಗಳಿಂದ 14 ವಿಕೆಟ್ ಗಳಿಸಿರುವ `ಮಂಡ್ಯದ ಹುಡುಗ' ಎಚ್.ಎನ್. ಶರತ್ ಮತ್ತು `ಪೀಣ್ಯ ಎಕ್ಸ್‌ಪ್ರೆಸ್'  ಅಭಿಮನ್ಯು ಮಿಥುನ್ ಆತಿಥೇಯ ಪಾಳೆಯಕ್ಕೆ ಬೌಲಿಂಗ್ ಬಲ.

ಒಟ್ಟು 14 ವಿಕೆಟ್ ಗಳಿಸಿರುವ ಆಲ್‌ರೌಂಡರ್    ಸ್ಟುವರ್ಟ್ ಬಿನ್ನಿ ಕೂಡ ಎದುರಾಳಿ ಬ್ಯಾಟ್ಸ್‌ಮನ್‌ಗಳಿಗೆ `ಬಿಸಿ' ಮುಟ್ಟಿಸಲು ಸಿದ್ಧರಾಗಿದ್ದಾರೆ.  ಕರ್ನಾಟಕದ ಬೌಲಿಂಗ್ ಬಲ ಎದುರಿಸಲು       ಟೆಸ್ಟ್‌ನಲ್ಲಿ ಭಾರತವನ್ನು ಪ್ರತಿನಿಧಿಸಿರುವ      ಅನುಭವಿ ಆಟಗಾರರಾದ ಹೇಮಂಗ್        ಬದಾನಿ, ಶಿವಸುಂದರ್ ದಾಸ್, ಈ ಋತುವಿನಲ್ಲಿ ಈಗಾಗಲೇ 401 ರನ್ ಗಳಿಸಿರುವ         ಫಯಾಜ್ ಫಜಲ್ ಮೇಲೆ ತಂಡವು ಅವಲಂಬಿತವಾಗಿದೆ.ಆರಂಭಿಕ ಬ್ಯಾಟ್ಸ್‌ಮನ್ ರಂಜೀತ್ ಪರದಕರ್ ಗಾಯಗೊಂಡಿದ್ದು, ಅವರ ಬದಲಿಗೆ `ಹೊರನಾಡ ಕನ್ನಡಿಗ' ಅಕ್ಷಯ್ ಕೋಲಾರ್ ಆಡುವುದು ಬಹುತೇಕ ಖಚಿತವಾಗಿದೆ. ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್  ಊರ್ವೇಶ್ ಪಟೇಲ್ ಬದಲಿಗೆ ರವಿ ಠಾಕೂರ್ ಸ್ಥಾನ ಪಡೆಯಬಹುದು.

ತಲಾ 16 ವಿಕೆಟ್ ಗಳಿಸಿ ಉತ್ತಮ ಫಾರ್ಮ್‌ನಲ್ಲಿರುವ ಎಡಗೈ ಬೌಲರ್ ಶ್ರೀಕಾಂತ್ ವಾಘ್, ಸಂದೀಪ್ ಸಿಂಗ್ ಕರ್ನಾಟಕದ ಬ್ಯಾಟಿಂಗ್ ಪಡೆಯನ್ನು ಕಾಡಬಹುದು. ಆದರೆ, ದೆಹಲಿ ವಿರುದ್ಧದ ಪಂದ್ಯದಲ್ಲಿ ಮರಳಿ ಫಾರ್ಮ್ ಕಂಡುಕೊಂಡಿರುವ ರಾಬಿನ್ ಉತ್ತಪ್ಪ, ಮನೀಶ್ ಪಾಂಡೆ ಮತ್ತು ಕಳೆದ ಐದು ಪಂದ್ಯಗಳಲ್ಲಿ 296 ರನ್ ಗಳಿಸಿರುವ ಸ್ಟುವರ್ಟ್ ಬಿನ್ನಿ, ತಲಾ ಒಂದು ಶತಕ ಗಳಿಸಿರುವ ಗಣೇಶ್ ಸತೀಶ್ ಮತ್ತು  ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಸಿ.ಎಂ. ಗೌತಮ್ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಕಳೆ ಕಿತ್ತು ಹೊಸ ಹುಲ್ಲು ಬೆಳೆದಿರುವ ಗಂಗೋತ್ರಿ ಗ್ಲೇಡ್ಸ್ ಸ್ಪೋರ್ಟಿಂಗ್ ವಿಕೆಟ್ ಎಂದು ಸುನಿಲ್ ಗವಾಸ್ಕರ್, ರಾಹುಲ್ ದ್ರಾವಿಡ್ ಅವರಿಂದ ಮೆಚ್ಚುಗೆಗೆ ಪಾತ್ರವಾಗಿದೆ.  ಸಾಯಿರಾಜ್ ಮತ್ತು ವಿನಯ್ ಕೂಡ ಪಿಚ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.ಮೊದಲ ಎರಡು-ಮೂರು ತಾಸು ವೇಗದ ಬೌಲರ್‌ಗಳಿಗೆ ನೆರವು ನೀಡಬಲ್ಲ ಈ ಪಿಚ್, ನಂತರ ಬ್ಯಾಟ್ಸ್‌ಮನ್‌ಗಳಿಗೂ ಸಹಕರಿಸಬಹುದು. ಒಟ್ಟಿನಲ್ಲಿ ಪಿಚ್ ಕ್ಯೂರೇಟರ್ ನಾರಾಯಣ ರಾಜು ಮಾರ್ಗದರ್ಶನದಲ್ಲಿ ತಯಾರಾಗಿರುವ ಈ ಅಂಕಣದ ಮೇಲೆ ಮುಂದಿನ ನಾಲ್ಕು ದಿನ ರೋಚಕ ಹಣಾಹಣಿ ನಡೆಯುವ ನಿರೀಕ್ಷೆ ಇಲ್ಲಿಯ ಕ್ರಿಕೆಟ್‌ಪ್ರೇಮಿಗಳಲ್ಲಿದೆ. ಕುಕ್ಕರಹಳ್ಳಿ ಕೆರೆಯ ಮೇಲಿಂದ ತೇಲಿ ಬರುವ ತಂಗಾಳಿಯಲ್ಲೂ ಕ್ರಿಕೆಟ್ ಬಿಸಿ ಏರುತ್ತಿದೆ.ಮುಖ್ಯಾಂಶಗಳುಕರ್ನಾಟಕ: ಆರ್. ವಿನಯ್ ಕುಮಾರ್ (ನಾಯಕ), ರಾಬಿನ್ ಉತ್ತಪ್ಪ, ಮನೀಶ್ ಪಾಂಡೆ, ಕುನಾಲ್ ಕಪೂರ್, ಗಣೇಶ್ ಸತೀಶ್, ಸ್ಟುವರ್ಟ್ ಬಿನ್ನಿ,  ಮುರಳೀಧರನ್ ಗೌತಮ್ (ವಿಕೆಟ್ ಕೀಪರ್), ಅಮಿತ್ ವರ್ಮಾ, ಅಭಿಮನ್ಯು ಮಿಥುನ್, ಎಸ್. ಎಲ್. ಅಕ್ಷಯ್, ಎಚ್.ಎಸ್. ಶರತ್, ಕೆ.ಪಿ. ಅಪ್ಪಣ್ಣ, ರೋನಿತ್ ಮೋರೆ, ಕೆ.ಗೌತಮ್,ವಿದರ್ಭ: ಸಾಯಿರಾಜ್ ಬಹುತುಳೆ (ನಾಯಕ/ತರಬೇತುದಾರ), ಅಕ್ಷಯ್ ಕೋಲಾರ, ಶಲಭ್ ಶ್ರೀವಾಸ್ತವ, ಹೇಮಂಗ್ ಬದಾನಿ, ರವಿ ಠಾಕೂರ್, ಗೌರವ್ ಉಪಾಧ್ಯಾಯ, ಸುಮಿತ್ ರಾಯಕರ್, ಶ್ರೀಕಾಂತ್ ವಾಘ್, ಶಿವಸುಂದರ್ ದಾಸ್, ಫಯಾಜ್ ಫಜಲ್, ಅಮೋಲ್ ಜುಂಗದೆ, ಸಂದೀಪ್ ಸಿಂಗ್, ಅಪೂರ್ವ ವಾಂಖೆಡೆ, ಅಕ್ಷಯ್ ವಾಕ್ರೆ, ಅಮೋಲ್ ಉಬರಾಂದೆ (ವಿಕೆಟ್ ಕೀಪರ್)ಪಂದ್ಯದ ಆರಂಭ: ಬೆಳಿಗ್ಗೆ 09.30 ರಿಂದ ಮಧ್ಯಾಹ್ನ 12.00. 12.40ರಿಂದ 2.40. 3ರಿಂದ 4.30ರ ವರೆಗೆ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry