ಗಂಗ್ನಮ್ ಶೈಲಿಯ ನೃತ್ಯ, ಡಿ.ಜೆ. ಸಾಥ್

7

ಗಂಗ್ನಮ್ ಶೈಲಿಯ ನೃತ್ಯ, ಡಿ.ಜೆ. ಸಾಥ್

Published:
Updated:

ಹುಬ್ಬಳ್ಳಿ: ಗಂಗ್ನಮ್ ಶೈಲಿಯ ನೃತ್ಯ, ಡಿ.ಜೆ. ಸಂಗೀತ, ಲುಂಗಿ ಡ್ಯಾನ್ಸ್, ಕೊಲವೆರಿ ಡಿ ಹಾಡುಗಳ ಮೋಡಿ, ಪಟಾಕಿ ಸಿಡಿತ, ಗುಲಾಲ್ ಎರಚಾಟ, ಡೊಳ್ಳು, ಹಲಗೆ ಹಾಗೂ ಜಾಂಜ್ ಮೇಳದ ಸಾಂಗತ್ಯ ಮಂಗಳವಾರ ಸಂಜೆ ನಗರದಲ್ಲಿ ಒಂಬತ್ತನೇ ದಿನದ ಗಣಪತಿ ವಿಸರ್ಜನೆಗೆ ಸಾಥ್ ನೀಡಿದವು.ಗಣಪತಿ ವಿಸರ್ಜನೆ ಆರಂಭಕ್ಕೆ ಮುನ್ನ ಸುರಿದ ಮಳೆ ವಾತಾವರಣವನ್ನು ತಂಪುಗೊಳಿಸಿ, ರಸ್ತೆಗಳಲ್ಲಿನ ದೂಳು ತೊಡೆದು ಹಾಕಿದ್ದು, ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ನೂರಾರು ಮಂದಿಯ ಉತ್ಸಾಹ ಹೆಚ್ಚಿಸಿತ್ತು.ಇಲ್ಲಿನ ಇಂದಿರಾ ಗಾಜಿನ ಮನೆಯ ಪಕ್ಕದ ಬಾವಿಗೆ ಯಲ್ಲಾಪುರ ಓಣಿಯ ದೇಸಾಯಿ ಓಣಿ ಹಿರಿಯ ನಾಗರಿಕರ ಸಮಿತಿಯ ಗಣಪತಿಯನ್ನು ಮೊದಲಿಗೆ ವಿಸರ್ಜಿಸಲಾಯಿತು. ಕಳಶ–ಕುಂಭ ಹೊತ್ತ ಮಹಿಳೆಯರು ಗಣಪನ ಮೆರವಣಿಗೆಯಲ್ಲಿ ಪಾಲ್ಗೊಂಡರು.ನಂತರ ಘಂಟಿಕೇರಿ ವ್ಯಾಪ್ತಿಯ 16, ನಗರ ಹಾಗೂ ಉಪನಗರ ಪ್ರದೇಶದ ಆರು ಮತ್ತು ಬೆಂಡಿಗೇರಿಯ ಒಂದು ಗಣಪನನ್ನು ವಿಸರ್ಜಿಸಲಾಯಿತು.ಡಿ.ಜೆ. ಸಂಗೀತದ ಮೆರುಗು...: ಸಮಸ್ತ ಗಿರಣಿ ಚಾಳ ಗಜಾನನ ಉತ್ಸವ ಸಮಿತಿ ವತಿಯಿಂದ ಪ್ರತಿಷ್ಠಾಪಿಸಲಾಗಿದ್ದ ಬೃಹತ್ ಗಣಪನ ಮೂರ್ತಿಯನ್ನು ಮೆರವಣಿಗೆಯಲ್ಲಿ ಕಾರವಾರ ರಸ್ತೆಯ ಮೂಲಕ ರಾಣಿಚೆನ್ನಮ್ಮ ವೃತ್ತಕ್ಕೆ ತಂದು ಅಲ್ಲಿಂದ ಇಂದಿರಾ ಗಾಜಿನ ಮನೆಯ ಪಕ್ಕದಲ್ಲಿ ವಿಸರ್ಜಿಸಲಾಯಿತು. ಮಹಾನಗರ ಪಾಲಿಕೆ ಸದಸ್ಯ ಮೋಹನ ಹಿರೇಮನಿ, ಮುಖಂಡರಾದ ಹನುಮಂತಪ್ಪ ಮಾನಪಲ್ಲಿ, ಮಾರುತಿ ಬಾರಕೇರ ನೇತೃತ್ವ ವಹಿಸಿದ್ದರು. ಪುರುಷರು, ಮಹಿಳೆಯರು, ಮಕ್ಕಳು ಡಿ.ಜೆ. ಸಂಗೀತಕ್ಕೆ ಗಂಗ್ನಮ್ ಶೈಲಿಯ ನೃತ್ಯ ಮಾಡಿದ್ದು ವಿಶೇಷವಾಗಿತ್ತು.ಬಿಗಿ ಭದ್ರತೆ...:  ಹಳೇಹುಬ್ಬಳ್ಳಿ ದುರ್ಗದ ಬೈಲ್ ನಲ್ಲಿ ಪ್ರತಿಷ್ಠಾಪಿಸಲಾಗಿದ್ದ ಗಣಪತಿ ಮೂರ್ತಿಯ ಮೆರವಣಿಗೆಗೆ ಬಿಗಿ ಭದ್ರತೆ ಕಲ್ಪಿಸಲಾಗಿತ್ತು. ಸ್ಥಳೀಯ ಪೊಲೀಸ­ರೊಂದಿಗೆ ಬಿಎಸ್ಎಫ್ ಯೋಧರು ಮೆರವಣಿಗೆಯ ಬಂದೋಬಸ್ತ್ ನಲ್ಲಿ ಪಾಲ್ಗೊಂಡಿದ್ದರು. ಧಾರವಾಡ ತಾಲ್ಲೂಕು ಮುದಕಟ್ಟಿಯ ದುರ್ಗಮ್ಮ­ದೇವಿ ಜಾಂಜ್ ಮೇಳದ ಕಲಾವಿದರು ದುರ್ಗದಬೈಲ್ ಗಣಪನ ಮೆರವಣಿಗೆಯಲ್ಲಿ ಮುಂಚೂಣಿಯಲ್ಲಿ ಇದ್ದು, ಗಮನ ಸೆಳೆದರು.ಶ್ರೀನಗರ ಬಾವಿಯಲ್ಲಿ ಗಣೇಶ ವಿಸರ್ಜನೆ...: ಕಾರವಾರ ರಸ್ತೆಯ ಶ್ರೀನಗರ ಬಾವಿಯಲ್ಲಿ ಅರವಿಂದ ನಗರದ ಎರಡನೇ ಕ್ರಾಸ್, ಅಕ್ಕಸಾಲಿಗರ ಓಣಿ, ಹೆಗ್ಗೇರಿ ಭುವನೇಶ್ವರಿ ನಗರದ ಗಣಪತಿ, ಹಿರೇಪೇಟೆ ಗಜಾನನ ಯುವಕ ಮಂಡಳದ ಗಣಪ, ಜನ್ನತ್ ನಗರ ರೇವಣಸಿದ್ದೇಶ್ವರ ಕಾಲೊನಿ, ಹಳೇಹುಬ್ಬಳ್ಳಿ ಇಂದ್ರಪ್ರಸ್ಥ ನಗರದ ಗಣಪತಿ ಮೂರ್ತಿ ವಿಸರ್ಜನೆ ಮಾಡಲಾಯಿತು.‘ಗಣಪತಿ ಬಪ್ಪ ಮೋರೆಯ’ ಎಂಬ ಘೋಷಣೆ, ವಾದ್ಯಗಳ ಸದ್ದಿನಲ್ಲಿ ಆಯಾ ಬಡಾವಣೆಯ ಹಿರಿಯರು, ಯುವಕ ಸಂಘದವರು, ಮಕ್ಕಳು ಬಾವಿಯ ಸುತ್ತಲೂ ನೆರೆದು ಪೂಜೆ ಸಲ್ಲಿಸಿ ಗಣಪನನ್ನು ಬೀಳ್ಕೊಡುತ್ತಿದ್ದ ದೃಶ್ಯ ಕಂಡುಬಂದಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry