ಗಂಟಿಗಾನಹಳ್ಳಿ ಕಾಕಡ ಖದರ್

7

ಗಂಟಿಗಾನಹಳ್ಳಿ ಕಾಕಡ ಖದರ್

Published:
Updated:

ದೊಡ್ಡಬಳ್ಳಾಪುರ: ಗ್ರಾಮದ ಬಸ್ ನಿಲ್ದಾಣಕ್ಕೆ ಮಧ್ಯಾಹ್ನ 12ಕ್ಕೆ ಬರುವ ಬಸ್ ಚಾಲಕನ ಕೈಗೆ  ಕ್ಷಣಾರ್ಧದಲ್ಲಿ  ಹತ್ತಾರು ಜನ ಬಂದು 2 ರಿಂದ 10 ಕೆ.ಜಿ.ತೂಕದ ಹೂವಿನ ಚೀಲಗಳೊಂದಿಗೆ 3 ರೂಪಾಯಿ ನೀಡುತ್ತಿದ್ದರು. ಚೀಲದಲ್ಲಿ ಯಾವ ತರಹದ ಹೂವುಗಳಿವೆ, ಇವೆಲ್ಲವು ಎಲ್ಲಿಗೆ ಹೋಗುತ್ತವೆ ಎಂದು ವಿಚಾರಿಸಿದರೆ ಗಂಟಿಗಾನಹಳ್ಳಿ ಗ್ರಾಮದ ಕಾಕಡ ಹೂವಿನ 20 ವರ್ಷಗಳ ಇತಿಹಾಸ ತೆರೆದುಕೊಂಡಿತು.ದೊಡ್ಡಬಳ್ಳಾಪುರ ತಾಲ್ಲೂಕಿನ ಗಂಟಿಗಾನಹಳ್ಳಿ ಗ್ರಾಮದಲ್ಲಿ 20 ವರ್ಷಗಳ ಹಿಂದೆ ನಾಟಿ ಮಾಡಿರುವ ಕಾಕಡ ಹೂ ಸಸಿಗಳಿಂದ ಈ ವರ್ಷ ನಾಟಿ ಮಾಡಿದ ಸಸಿಗಳನ್ನು ನಾವು ಕಾಣಬಹುದು. ನೀರಾವರಿ ಸೌಲಭ್ಯ ಹೊಂದಿರುವ ರೈತರಿಗಿಂತ ಮಳೆ ಆಶ್ರಯದಲ್ಲೇ ಹೆಚ್ಚು ಕಾಕಡ ಹೂವು ಬೆಳೆ ಬೆಳೆಯಲಾಗುತ್ತದೆ. ಗ್ರಾಮದ ಬಹುತೇಕ ಜನ ರೈತರು ಕಾಕಡ ಹೂವು ಬೆಳೆಯೊಂದಿಗೆ ಬದುಕು ರೂಪಿಸಿಕೊಂಡಿದ್ದಾರೆ.ಡಿಸೆಂಬರ್, ಜನವರಿಯಲ್ಲಿ ಚಳಿಗೆ ಹೂ ಇಳುವರಿ ಕಡಿಮೆ. ಹಾಗೆ ಮಳೆ ಇಲ್ಲದ ಏಪ್ರಿಲ್ ನಿಂದ ಮೇ ಅಂತ್ಯದ ವರೆಗೂ ಹೂ ಕಡಿಮೆ. ಉಳಿದಂತೆ  ಪ್ರತಿ ದಿನ ಒಂದು ಎಕರೆಗೆ 11 ರಿಂದ 15 ಕೆ.ಜಿ. ವರೆಗೆ ಹೂ ಕೊಯ್ಲಾಗುತ್ತದೆ ಎನ್ನುತ್ತಾರೆ ಗಂಟಿಗಾನಹಳ್ಳಿ ಗ್ರಾಮದ ಕಾಕಡ ಹೂ ಬೆಳೆಗಾರ ಮುನಿಯಪ್ಪ. ಇವರು  20 ವರ್ಷಗಳ ಹಿಂದೆ ನಾಟಿ ಮಾಡಿರುವ ಸಸಿಗಳಿಂದ ಇಂದಿಗೂ ಹೂವು ಕೊಯ್ಲು ಮಾಡುತಿದ್ದಾರೆ. ಜೂನ್ ತಿಂಗಳಲ್ಲಿ ಮುಂಗಾರು ಮಳೆ ಆರಂಭವಾದಾಗ ಹೂ ಗುಣಿಗಳಲ್ಲಿ ಅನವಶ್ಯಕವಾಗಿ ಬೆಳೆದಿರುವ ಸಸಿಗಳನ್ನು ಕಿತ್ತು, ಕೊಟ್ಟಿಗೆ ಗೊಬ್ಬರ, ಕೆರೆ ಮಣ್ಣು ಹಾಕಿ ಗುಣಿಗಳನ್ನು ಕೆದಕಿ ಸಿದ್ದಗೊಳಿಸಲಾಗುತ್ತದೆ. ಮಳೆ ಆರಂಭವಾದ ಮೇಲೆ ಒಂದಿಷ್ಟು ರಸಗೊಬ್ಬರವನ್ನು ಹಾಕಲಾಗುತ್ತದೆ.ಒಂದು ಎಕರೆ ಪ್ರದೇಶಕ್ಕೆ 8 ಅಡಿಗೆ ಒಂದರಂತೆ 900 ಕಾಕಡ ಸಸಿಗಳನ್ನು ನಾಟಿ ಮಾಡಿದರೆ ಹೂವು ಬಿಡಿಸಲು ಹಾಗೂ ಬೇಸಯ ಮಾಡಲು ಅನುಕೂಲವಾಗಲಿದೆ. ಸಸಿಗಳನ್ನು ನಾಟಿ ಮಾಡಿದ ಆರು ತಿಂಗಳ ನಂತರ ಹೂ ಬಿಡಲು ಆರಂಭವಾಗುತ್ತವೆ.ಬೆಳಿಗ್ಗೆ 6 ರಿಂದ 10 ಗಂಟೆ ವೇಳೆಗೆ ಒಬ್ಬರು 3 ಕೆ.ಜಿ. ಹೂ ಬಿಡಿಸುತ್ತಾರೆ. ಒಂದು ಕೆ.ಜಿ.ಹೂ ಬಿಡಿಸಲು 20 ರೂ ಕೂಲಿ ನೀಡಲಾಗುತ್ತದೆ. ಹಬ್ಬದ ಸಾಲಿನಲ್ಲಿ ಒಂದು ಕೆ.ಜಿ. ಹೂ 350 ರೂಗಳವರೆಗೂ ಬೆಲೆ ಇರುತ್ತದೆ. ಸಾಮಾನ್ಯ ದಿನಗಳಲ್ಲಿ 30 ರೂಪಾಯಿ. 120 ಗುಣಿ ಕಾಕಡ ಹೂ ಗಿಡಗಳನ್ನು ಹೊಂದಿರುವ ಮುನಿಯಪ್ಪ ತಿಂಗಳಿಗೆ ಎಂಟರಿಂದ ಒಬತ್ತು ಸಾವಿರ ರೂಗಳವರೆಗೆ ಬಟವಾಡೆ ಪಡೆಯುತ್ತಾರೆ. ಮಾರುಕಟ್ಟೆಗೆ ಹೂ ಕೊಂಡೊಯ್ಯುವ ತೊಂದರೆ ಇಲ್ಲ. ನಾವೇ ತೂಕ ಮಾಡಿ ಗ್ರಾಮದ ಮೂಲಕ ಚಿಕ್ಕಬಳ್ಳಾಪುರಕ್ಕೆ ಹೋಗುವ ಬಸ್ ಚಾಲಕನ ಕೈಗೆ ಚೀಲ ನೀಡುತ್ತೇವೆ.ಚಿಕ್ಕಬಳ್ಳಾಪುರ ಬಸ್ ನಿಲ್ದಾಣದಲ್ಲಿ  ಹೂ ಮಂಡಿಯವರೆ ಬಂದು ಚೀಲಗಳನ್ನು ತೆಗೆದುಕೊಂಡು ಹೋಗುತ್ತಾರೆ. ತಿಂಗಳಿಗೆ ಒಂದು ಒಮ್ಮೆ  ಹೋಗಿ ಹಣ ಪಡೆದು ಬರುತ್ತೇವೆ. ಪ್ರತಿ ನಿತ್ಯದ ಬೆಲೆ, ತೂಕ ಎಲ್ಲವು  ನಂಬಿಕೆಯ ಮೇಲೆ ನಮ್ಮ  ವ್ಯವಹಾರ ನಡೆಯುತ್ತದೆ~ ಎಂದು ಕಾಕಡ ಹೂ ಬೆಳೆಯೊಂದಿಗಿನ ತಮ್ಮ 20 ವರ್ಷಗಳ ಇತಿಹಾಸ ಬಿಡಿಸಿಟ್ಟರು ಮುನಿಯಪ್ಪ.

-

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry