ಗಂಟುಬೀಳು: 45 ಕುಟುಂಬ ಹಕ್ಕುಪತ್ರ ಕಗ್ಗಂಟು

7

ಗಂಟುಬೀಳು: 45 ಕುಟುಂಬ ಹಕ್ಕುಪತ್ರ ಕಗ್ಗಂಟು

Published:
Updated:

ಸಿದ್ದಾಪುರ: ‘ನಮ್ಗೆ ರಿಕಾರ್ಡ್ ಇಲ್ಲೆ. ಎಂತಾ ಸೌಲತ್ ಇಲ್ಲೆ. ನಮ್ ಮಕ್ಳ ಶಾಲೆ ಕಲ್ತ್ ಕೆಲಸಾ ಕೆಂಬಕ್ ಹೋರೆ ಜಾಗ ರಿಕಾರ್ಡ್ ಕೇಂತರ್. ಅಂಬ್ರ ಅದ್ಕ ನಮ್ಗ ರಗಳಿ ಹಿಡದಾಂಗ್ ಇತ್ (ನಮಗೆ ಹಕ್ಕುಪತ್ರ ಇಲ್ಲ. ಏನೂ ಸವಲತ್ತು ಇಲ್ಲ. ನಮ್ಮ ಮಕ್ಕಳು ಉದ್ಯೋಗಕ್ಕೆ ಅರ್ಜಿ ಸಲ್ಲಿಸಿದರೆ ಅಧಿಕಾರಿಗಳು ಜಾಗದ ದಾಖಲೆ, ಹಕ್ಕುಪತ್ರ ಕೇಳುತ್ತಾರೆ. ನಮಗೆ ತುಂಬಾ ತೊಂದರೆಯಾಗಿದೆ)’ ಎಂದು ಗಂಟುಬೀಳಿನ ಮಹಿಳೆ ಸುಶೀಲಾ ಅಳಲು ತೋಡಿಕೊಡರು.ಕುಂದಾಪುರ ತಾಲ್ಲೂಕಿನ ಬೆಳ್ವೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಲ್ಬಾಡಿ ಗಂಟುಬೀಳಿನ 45 ಕುಟುಂಬಗಳು ಹಕ್ಕುಪತ್ರದ ಸಮಸ್ಯೆಯಿಂದ ನಲುಗುತ್ತಿವೆ. ಕುಡುಬಿಯವರ 30 ಮನೆ, ಹಿಂದುಳಿದ ವರ್ಗದವರ ಏಲು ಮನೆಗಳು ಸೇರಿ 45 ಕುಟುಂಬಗಳು ನೂರಕ್ಕೂ ಅಧಿಕ ವರ್ಷಗಳಿಂದ ಸರ್ಕಾರಿ ಜಾಗದಲ್ಲಿ ವಾಸಿಸುತ್ತಿವೆ. ಈ ಕುಟುಂಬಗಳಿಗೆ ಹಕ್ಕುಪತ್ರ ಇಲ್ಲಿಯ ವರೆಗೂ ಸಿಕ್ಕಿಲ್ಲ. ಅರಣ್ಯಭೂಮಿ (ಮೀಸಲು ಅರಣ್ಯ)ದಲ್ಲಿ ಈ ಕುಟುಂಬಗಳು ವಾಸಿಸುತ್ತಿವೆ ಎಂಬುದು ಅರಣ್ಯ ಇಲಾಖೆಯ ವಾದ. ಈ ಸಮಸ್ಯೆಯಿಂದಾಗಿ ಕುಡಿಯುವ ನೀರು, ರಸ್ತೆ, ಮನೆ ಕಟ್ಟಲು ಅರಣ್ಯ ಇಲಾಖೆ ತಕರಾರು, ಮಕ್ಕಳ ಮುಂದಿನ ವಿದ್ಯಾಭ್ಯಾಸಕ್ಕೆ ವಾಸ್ತವ್ಯ ದಾಖಲಾತಿ ಸಮಸ್ಯೆ ಎದುರಾಗಿದೆ.ಅಂಗನವಾಡಿ ಮಕ್ಕಳಿಗೆ ಕುಡಿಯಲು ನೀರಿಲ್ಲ: ಗಂಟುಬೀಳಿನಲ್ಲಿರುವ ಅಂಗನವಾಡಿ ಮಕ್ಕಳಿಗೆ ಕುಡಿಯುವ ನೀರಿಲ್ಲ. ಪರಿಸರದ ಜನರು ನೀರಿನ ಸಮಸ್ಯೆಯಿಂದಾಗಿ ಬೇಸಾಯ ಕೈಬಿಟ್ಟು ಕೂಲಿ ಕೆಲಸಕ್ಕೆ ಹೋಗುತ್ತಿದ್ದಾರೆ. ‘ನಿತ್ಯ ಉಪಯೋಗಕ್ಕಾಗಿ ನೀರು, ರಸ್ತೆ ಇಲ್ಲದಿದ್ದ ಮೇಲೆ ನಮಗೆ ಇಲ್ಲಿನ ಬದುಕು ಸಾಕಾಗಿ ಹೋಗಿದೆ. ನಮ್ಮ ತೆಂಗಿನ ಗಿಡಗಳು ಮತ್ತು ಅಡಿಕೆ ಕೃಷಿಗೆ ನೀರಿನ ಸಮಸ್ಯೆ ಎದುರಾಗಿದೆ. ನಮ್ಮ ಪ್ರತಿ ಕಾರ್ಯಕ್ಕೆ ಅರಣ್ಯ ಅಧಿಕಾರಿಗಳು ಅಡ್ಡಗಾಲು ಹಾಕಿ ಮೀಸಲು ಅರಣ್ಯ ಕೃಷಿ ಚಟುವಟಿಕೆ ಮಾಡಬೇಡಿ ಎಂಬ ಒತ್ತಡ ಹೇರುತ್ತಿದ್ದಾರೆ ಎಂದು ಇಲ್ಲಿನ ಮೂಲ ನಿವಾಸಿ ಮಲ್ಲು ನಾಯ್ಕಾ ನೋವು ತೋಡಿಕೊಂಡರು.ಈ ಭಾಗಕ್ಕೆ ಸಂಪರ್ಕಿಸುವ ರಸ್ತೆಯ ವಿಸ್ತರಣೆಗೂ ಅರಣ್ಯ ಇಲಾಖೆ ಅಧಿಕಾರಿಗಳು ಆಕ್ಷೇಪ ವ್ಯಕ್ತಪಡಿಸಿದ್ದರು. ನಂತರ ಈ ವಿಚಾರ ರಾಜಿ ತೀರ್ಮಾನದಲ್ಲಿ ಅಂತ್ಯಗೊಂಡಿದೆ. ಹಕ್ಕುಪತ್ರದ ಚಿಂತೆಯಲ್ಲಿರುವ ಇಲ್ಲಿನವರು ಜಮೀನಿನಲ್ಲಿ ಗೇರುಗಿಡಗಳನ್ನು ಮಾತ್ರ ನೆಟ್ಟು ಕೃಷಿ ಚಟುವಟಿಕೆಯಿಂದ ಬಹುತೇಕ ದೂರ ಸರಿದಿದ್ದಾರೆ.100 ವರ್ಷಕ್ಕೂ ಹಿಂದಿನಿಂದ ವಾಸ್ತವ್ಯ ಇದ್ದ ಕುಟುಂಬಗಳು ಆರಂಭದಲ್ಲಿ ಹಕ್ಕುಪತ್ರದ ಚಿಂತೆ ಮಾಡಿರಲಿಲ್ಲ. ಈ ನಡುವೆ ಅರಣ್ಯ ಇಲಾಖೆ ಈ ಪ್ರದೇಶವನ್ನು ‘ಮೀಸಲು ಅರಣ್ಯ’ ಎಂದು ವರದಿ ನೀಡಿದೆ. ಸರ್ಕಾರವು ಅರಣ್ಯ ಭೂಮಿ ವ್ಯಾಪ್ತಿಯಲ್ಲಿ ವಾಸವಿರುವ ಜನರ ಹಕ್ಕುಪತ್ರಕ್ಕಾಗಿ 75 ವರ್ಷದ ಹಿಂದಿನ ದಾಖಲಾತಿ ಕೇಳಿದೆ. ಆದರೆ ಇಲ್ಲಿನವರಿಗೆ 75 ವರ್ಷಗಳ ದಾಖಲಾತಿ ತೋರಿಸಲು ಸಾಧ್ಯವಾಗುತ್ತಿಲ್ಲ. ಕೇವಲ 25 ವರ್ಷದ ವಾಸ್ತವ್ಯ ದೃಢೀಕರಣ,ಕೋರ್ಟ್ ಅಫಿದವಿಟ್, ಮನೆ ತೆರಿಗೆ ನೀಡಿ ಹಕ್ಕುಪತ್ರಕ್ಕಾಗಿ ಸರ್ಕಾರವನ್ನು ಬೇಡಿದ್ದಾರೆ. ಒಂದು ವರ್ಷದ ಹಿಂದೆ ಕುಂದಾಪುರ ತಹಸೀಲ್ದಾರ್ ಸ್ಥಳ ಪರಿಶೀಲನೆ ಮಾಡಿ ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ.‘ಈ ಪ್ರದೇಶಕ್ಕೆ ಸರ್ಕಾರದಿಂದ 40 ಕಂಬಗಳು ಮಂಜೂರಾಗಿ ವಿದ್ಯುತ್ ಸೌಲಭ್ಯ ದೊರೆತಿದೆ. ಜಿಲ್ಲಾ ಪಂಚಾಯಿತಿ ವತಿಯಿಂದ ತೆರೆದ ಬಾವಿ ನಿರ್ಮಾಣಗೊಂಡಿದೆ. ಅದರ ನೀರು ಕುಡಿಯಲು ಉಪಯೋಗವಾಗುವುದಿಲ್ಲ. ಜನಪ್ರತಿನಿಧಿಗಳು ಈ ಭಾಗಕ್ಕೆ ಚುನಾವಣಾ ಪ್ರಚಾರಕ್ಕೆ ಬಂದು ಹೋಗುತ್ತಾರೆ. ಯಾರಿಗೂ ನಮ್ಮ ಕಷ್ಟ ಅರ್ಥವಾಗುವುದಿಲ್ಲ. ಇನ್ನು ನಾವು ಮತ ಹಾಕುವುದಿಲ್ಲ. ಗಾಳಿ ಮಳೆಗೆ ಮನೆಯ ಹಂಚು ಹಾರಿ ಹೋದಾಗ ಪಂಚಾಯಿತಿಯವರು ಪ್ರತಿ ಮನೆಗೆ ರೂ ಒಂದು ಸಾವಿರ ಕೊಟ್ಟು ಕೈ ತೊಳೆದು ಕೊಂಡಿದ್ದಾರೆ’ ಎಂದು ಗುಲಾಬಿ ನಾಯ್ಕಾ ಆಕ್ರೋಶ ವ್ಯಕ್ತಪಡಿಸಿದರು.ಕುಂದಾಪುರ ಉಪ ತಹಸೀಲ್ದಾರ್ ಸಂಕಯ್ಯ ‘ಪ್ರಜಾವಾಣಿ’ ಜತೆ ಮಾತನಾಡಿ, ‘ನಮಗೆ ಅಲ್ಲಿನ ಸಮಸ್ಯೆ ಗಮನಕ್ಕೆ ಇಲ್ಲ. ಅಲ್ಬಾಡಿ ಗ್ರಾಮದ ಕೆಲವು ಮನೆಗಳ ಹಕ್ಕುಪತ್ರ ಪ್ರಕ್ರಿಯೆ ಚಾಲನೆಯಲ್ಲಿದೆ’ ಎಂದರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry