ಗಂಡಸಿ: ಅಭಿವೃದ್ಧಿ ಮರೀಚಿಕೆ

7

ಗಂಡಸಿ: ಅಭಿವೃದ್ಧಿ ಮರೀಚಿಕೆ

Published:
Updated:

ಅರಸೀಕೆರೆ: ನೂರಾರು ಯೋಜನೆಗಳು ಜಾರಿಗೆ ಬಂದಿದ್ದರೂ ನಮ್ಮ ಆನೇಕ ಹಳ್ಳಿಗಳು ಇಂದಿಗೂ ಮೂಲ ಸೌಕರ್ಯಗಳಿಂದ ವಂಚಿತವಾಗಿ ಅಭಿವೃದ್ಧಿಯ ಮುಖವನ್ನೇ ಕಾಣದಂತಿವೆ.ಅರಸೀಕೆರೆ ತಾಲ್ಲೂಕಿನ ಗಂಡಸಿ ಗ್ರಾಮ ಹೋಬಳಿ ಕೇಂದ್ರವಾದರೂ ಸೌಲಭ್ಯ ವಂಚಿತ ಗ್ರಾಮಕ್ಕೆ ಉತ್ತಮ ಉದಾಹರಣೆ.

ಅರಸೀಕೆರೆ ತಾಲ್ಲೂಕು ಕೇಂದ್ರದಿಂದ ಸುಮಾರು 20ಕಿ.ಮೀ ದೂರದಲ್ಲಿ, ಅರಸೀಕೆರೆ-ಮೈಸೂರು ರಾಜ್ಯ ಹೆದ್ದಾರಿ ಬದಿಯಿರುವ ಗ್ರಾಮದಲ್ಲಿ ಸುಮಾರು ಮೂರು ಸಾವಿರ ಜನಸಂಖ್ಯೆ ಇದ್ದು ಆರ್ಥಿಕವಾಗಿ ಹಿಂದುಳಿದ ವರ್ಗದ ಜನರೇ ವಾಸಿಸುತ್ತಿದ್ದಾರೆ. ಅಲ್ಲದೆ ಮಳೆಯನ್ನೇ ಆಶ್ರಯಿಸಿರುವ ಕೃಷಿ ಇವರ ಬದುಕಿಗೆ ಆಧಾರ. ಬಹಳಷ್ಟು ಮಂದಿಗೆ ವ್ಯವಸಾಯವೇ ವೃತ್ತಿಯಾದರೆ ಇನ್ನೂ ಕೆಲವರು ಕೂಲಿಯಿಂದಲೇ ಜೀವನ ಸಾಗಿಸುತ್ತಿದ್ದಾರೆ.ಈ ಗ್ರಾಮದತ್ತ ಗ್ರಾಮದ ಚರಂಡಿಗಳಲ್ಲಿ ಹೂಳು ತುಂಬಿಕೊಂಡು ತಿಂಗಳುಗಳೇ ಕಳೆದರೂ ಗ್ರಾಮ ಪಂಚಾಯಿತಿಯವರು ಇತ್ತ ಗಮನ ಹರಿಸಿಲ್ಲ. ಜನರಿಗೆ ಈಗ ಸಾಂಕ್ರಾಮಿಕ ರೋಗಗಳ ಭೀತಿ ಉಂಟಾಗಿದೆ.  ಈ ಗ್ರಾಮ ಸುವರ್ಣ ಗ್ರಾಮೋದಯ ಯೋಜನೆಗೆ ಸೇರ್ಪಡೆಗೊಂಡಿದ್ದರೂ ಕಿಂಚಿತ್ತೂ ಪ್ರಗತಿ ಕಾಣದೇ ಜನತೆ ನಿತ್ಯ ನರಕಯಾತನೆ ಅನುಭವಿಸುವಂತಾಗಿದೆ. ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದ್ದೆ. ಕೊಳವೆ ಬಾವಿಗಳಿಂದ ದೊರೆಯುವ ಅಲ್ಪ ಸ್ವಲ್ಪ ನೀರಿನಲ್ಲೂ ಪ್ಲೋರೈಡ್ ಅಂಶ ಹೆಚ್ಚಾಗಿ ಸೇವನೆಗೆ ಭಯವಾಗುತ್ತಿದೆ. ಗ್ರಾಮದಲ್ಲಿ ಎಲ್ಲಿ ನೋಡಿದರೂ ಕಸ-ಕಡ್ಡಿ ತುಂಬಿ ಅನೈರ್ಮಲ್ಯ ಕಾಡುತ್ತಿದೆ. ಗ್ರಾಮದ ರಸ್ತೆಗಳ ಸ್ಥಿತಿಯಂತೂ ಹೇಳಬೇಕಾಗಿಯೇ ಇಲ್ಲ.ಗ್ರಾಮ ಪಂಚಾಯಿತಿಯವರು ಗ್ರಾಮಸ್ಥರಿಗೆ ಯಾವ ಸುಳಿವನ್ನೂ ನೀಡದೆ ನೀರಿನ ಕಂದಾಯವನ್ನು ಏರಿಸಿದ್ದಾರೆ. ಆದರೆ ನೀರೊದಗಿಸುವ ಬಗ್ಗೆ ಚಕಾರವಿಲ್ಲ.ವರ್ಷಕ್ಕೊಮ್ಮೆ ಗ್ರಾಮದಲ್ಲಿ ದೇವರ ಜಾತ್ರೆ ನಡೆಯುವ ಸಂದರ್ಭದಲ್ಲಿ ಗ್ರಾಮ ಸ್ವಲ್ಪ ಸ್ವಚ್ಛವಾಗುತ್ತದೆ. ಉಳಿದ ದಿನಗಳಲ್ಲಿ ದುರ್ನಾತ ಬೀರುವ ಚರಂಡಿಗಳು ಜಾತ್ರೆ ಸಂದರ್ಭದಲ್ಲಿ ಒಮ್ಮೆ ಸ್ವಚ್ಛವಾಗುತ್ತವೆ. ಉಳಿದಂತೆ ರಸ್ತೆ ಬದಿ ಗಿಡ ಗಂಟಿ, ಪೊದೆಗಳು ಆಳೆತ್ತರಕ್ಕೆ ಬೆಳೆದರೂ ಗ್ರಾಮ ಪಂಚಾಯಿತಿಯವರು ಅದನ್ನು ತೆಗೆಸುವುದಿಲ್ಲ ಎಂದು ಗ್ರಾಮಸ್ಥರು ದೂರುತ್ತಾರೆ.ಗ್ರಾಮ ಪಂಚಾಯಿತಿಯವರು ಉಳಿದ ವಿಚಾರಗಳನ್ನು ಬದಿಗಿಟ್ಟು ಮೊದಲು ಶುಚಿತ್ವದ ಕಡೆಗೆ ಗಮನ ಹರಿಸಬೇಕಾಗಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry