ಬುಧವಾರ, ನವೆಂಬರ್ 20, 2019
20 °C

ಗಂಡು ಹೆಣ್ಣು ಸಮ ಇರಲಿ

Published:
Updated:

ಹೆಣ್ಣು ಹಾಗೂ ಗಂಡು ಮಕ್ಕಳ ಅನುಪಾತದಲ್ಲಿ ಆಗಿರುವ ಏರುಪೇರನ್ನು ಸರಿಪಡಿಸಲು ದೇಶವ್ಯಾಪಿ ಜನ ಜಾಗೃತಿ ಮೂಡಿಸುವುದು ಮತ್ತು ಹೆಣ್ಣು ಭ್ರೂಣ ಹತ್ಯೆಯಲ್ಲಿ ತೊಡಗಿರುವ ವೈದ್ಯರು ಹಾಗೂ ಆಸ್ಪತ್ರೆಗಳ ವಿರುದ್ಧ ಕಠಿಣ ಕ್ರಮಗಳನ್ನು ಜರುಗಿಸುವುದು ಅಗತ್ಯ ಎಂಬುದು ಕೇಂದ್ರ ಸರ್ಕಾರಕ್ಕೆ ಮನವರಿಕೆಯಾಗಿದೆ.

 

ರಾಜ್ಯ ಸರ್ಕಾರಗಳು ಹಾಗೂ ಸ್ವಯಂ ಸೇವಾ ಸಂಘಟನೆಗಳಿಗೆ ಹೆಚ್ಚಿನ ಹಣಕಾಸು ನೀಡಿ ಜನಜಾಗೃತಿ ಮೂಲಕ ಹೆಣ್ಣು ಭ್ರೂಣ ಹತ್ಯೆ ತಡೆಗಟ್ಟಿ ಹೆಣ್ಣು-ಗಂಡು ಮಕ್ಕಳ ಅನುಪಾತ ಸಮನಾಗಿ ಇರುವಂತೆ ನೋಡಿಕೊಳ್ಳಲು ಸರ್ಕಾರ ನಿರ್ಧರಿಸಿದೆ.ಈ ನಿರ್ಧಾರ ಸ್ವಾಗತಾರ್ಹ.ಇತ್ತೀಚಿನ ಜನಗಣತಿಯ ಪ್ರಕಾರ ಹೆಣ್ಣು - ಗಂಡು ಮಕ್ಕಳ ಅನುಪಾತ 914: 1000 ಇದೆ.ಮುಂದಿನ ಮೂರು ವರ್ಷಗಳಲ್ಲಿ ಈ ಅಂತರವನ್ನು ಅಳಿಸಿಹಾಕಲು ಕೇಂದ್ರ ಆರೋಗ್ಯ ಸಚಿವಾಲಯ ಅನುಸರಿಸಬೇಕಾದ ನೀತಿ, ನಿಯಮಗಳನ್ನು ಕುರಿತಂತೆ ಮಾರ್ಗದರ್ಶನ ನೀಡಲು ಮೂವತ್ತೈದು ತಜ್ಞರ ಸಲಹಾ ಸಮಿತಿಯನ್ನು ಪುನರ್‌ರಚಿಸಿದೆ.

 

ಈ ಸಮಿತಿ ಹೆಣ್ಣು- ಗಂಡು ಮಕ್ಕಳ ಅನುಪಾತದಲ್ಲಿ ಸಮನ್ವಯ ಸಾಧಿಸಲು ಕೈಗೊಳ್ಳಬೇಕಾದ ಕ್ರಮಗಳನ್ನು ಸೂಚಿಸಲಿದೆ. ಅದೇನೇ ಇರಲಿ, ಹೆಣ್ಣು ಭ್ರೂಣ ಹತ್ಯೆ ವಿರುದ್ಧ ಜನ ಜಾಗೃತಿ ಮೂಡಿಸುವ ಪ್ರಯತ್ನ ಹೊಸದಲ್ಲ. ದೇಶದ ಮಹಿಳಾ ಸಂಘಟನೆಗಳು, ಪ್ರಜ್ಞಾವಂತರು ಈ ಕುರಿತು ಜನರಲ್ಲಿ ಅರಿವು ಮೂಡಿಸುವ  ಕೆಲಸ ಮಾಡುತ್ತಲೇ ಇದ್ದಾರೆ. ಆದರೆ ಹೆಚ್ಚಿನ ಪ್ರಗತಿ ಆಗಿಲ್ಲ.ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲೂ ಪುರುಷರಿಗೆ ಸರಿಸಮನಾಗಿ ದುಡಿಯುತ್ತಿದ್ದರೂ, ಹೆಣ್ಣು ಮಗು ಕುಟುಂಬಕ್ಕೆ ಹೊರೆ ಎಂಬ ಧೋರಣೆಯಲ್ಲಿ ಹೆಚ್ಚಿನ ಬದಲಾವಣೆ ಆಗಿಲ್ಲ. ಬಹುತೇಕ ಕುಟುಂಬಗಳಿಗೆ ಹೆಣ್ಣುಮಕ್ಕಳು ಬೇಕಿಲ್ಲ. ಆದರೆ ಪ್ರತಿಯೊಬ್ಬ ವಯಸ್ಕ ಪುರುಷನಿಗೆ ಹೆಂಡತಿಯ ಅಗತ್ಯವಿದೆ.

 

ಲಿಂಗಾನುಪಾತದಲ್ಲಿ ಆಗಿರುವ ವ್ಯತ್ಯಯದಿಂದ ಅನೇಕ ಸಮುದಾಯಗಳಲ್ಲಿ ವಧುಗಳ ಕೊರತೆ ಹೆಚ್ಚಾಗಿದೆ. ಹಾಗೇ ಸಕಾಲದಲ್ಲಿ ಮದುವೆ ಆಗದ ಪುರುಷರ ಸಂಖ್ಯೆಯೂ ಹೆಚ್ಚುತ್ತಿದೆ. ಇದರ ಪರಿಣಾಮ ಏನಾದೀತು ಎಂಬುದರ ಅರಿವು ಅನೇಕರಿಗೆ ಇಲ್ಲ.ಗರ್ಭದಲ್ಲಿರುವ ಮಗುವಿನ ಬೆಳವಣಿಗೆಯನ್ನು ತಿಳಿದುಕೊಳ್ಳಲು ನೆರವಾಗುವ ಸ್ಕ್ಯಾನಿಂಗ್ ವ್ಯವಸ್ಥೆ ಒಂದು ಸೌಲಭ್ಯ. ಆದರೆ, ಅಗತ್ಯ ಇಲ್ಲದಿದ್ದರೂ ಸ್ಕ್ಯಾನಿಂಗ್ ಮಾಡಿಸಿ ಭ್ರೂಣ ಹೆಣ್ಣಾಗಿದ್ದಲ್ಲಿ ಅದನ್ನು ನಾಶಪಡಿಸುವ ದುಷ್ಟ ಕೆಲಸ ದೇಶದಲ್ಲಿ ನಡೆಯುತ್ತಿದೆ.

 

ಇಂಥ ಸ್ಕ್ಯಾನಿಂಗ್ ಕೇಂದ್ರಗಳು ಹಾಗೂ ಆಸ್ಪತ್ರೆಗಳ ಮೇಲೆ ಕಣ್ಣಿಡುವ ವ್ಯವಸ್ಥೆ ಇದ್ದರೂ ಹೆಣ್ಣು ಭ್ರೂಣ ನಾಶ ನಿಂತಿಲ್ಲ. ಭ್ರೂಣ ಪತ್ತೆ ಕೇಂದ್ರಗಳು ಹಾಗೂ ಹೆಣ್ಣು ಭ್ರೂಣಗಳನ್ನು ಗುರುತಿಸಿ ನಾಶಪಡಿಸುವ ವೈದ್ಯರನ್ನು ನಿಯಂತ್ರಿಸಲು ಭಾರತೀಯ ವೈದ್ಯಕೀಯ ಮಂಡಲಿ ಹೆಚ್ಚಿನ ಆಸಕ್ತಿ ತೋರಬೇಕು ಎಂದು ಕೇಂದ್ರ ಆರೋಗ್ಯ ಸಚಿವರು ಹೇಳಿದ್ದಾರೆ. ಇದು ಸರ್ಕಾರದ ಕೆಲಸವೇ ಆದರೂ ಪ್ರಜ್ಞಾವಂತರು ಹಾಗೂ ಮಹಿಳಾ ಸಂಘಟನೆಗಳು ಸರ್ಕಾರಕ್ಕೆ ಮಾಹಿತಿ ನೀಡುವ ಮೂಲಕ ಹೆಣ್ಣು ಭ್ರೂಣ ಹತ್ಯೆ ತಡೆಯಲು ನೆರವಾಗಬೇಕು.

ಪ್ರತಿಕ್ರಿಯಿಸಿ (+)