ಗಂಧರ್ವಗಾನದ ಮೆಲುಕು

7

ಗಂಧರ್ವಗಾನದ ಮೆಲುಕು

Published:
Updated:
ಗಂಧರ್ವಗಾನದ ಮೆಲುಕು

ತಮ್ಮ ಅನನ್ಯ- ವಿಭಿನ್ನ ಶೈಲಿಯ ಗಾಯನದಿಂದ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಲೋಕದಲ್ಲಿ `ಸಂಗೀತ ಲೋಕದ ಬಂಡಾಯಗಾರ~ ಎಂದು ಚಿರಪರಿಚಿತರಾಗಿದ್ದ ಗಾಯಕ ಕುಮಾರ ಗಂಧರ್ವ.ಅವರ ಭೌತಿಕ ಹಾಡು ಮುಗಿದು ಸರಿಯಾಗಿ ಎರಡು ದಶಕಗಳು ಕಳೆದಿವೆ. ಕುಮಾರ ಗಂಧರ್ವ ಅವರ ಪತ್ನಿ ವಸುಂಧರಾ ಕೋಮಕಾಳಿ ಅವರು ಗಂಧರ್ವರ ಗಾಯನ ಶೈಲಿಯ ಸೊಬಗು-ಸೊಗಸುಗಳನ್ನು ಪರಿಚಯಿಸಿಕೊಟ್ಟ ಸಂಗೀತ ಕಛೇರಿಯು ಶನಿವಾರ ಸಂಜೆ ನಡೆಯಿತು.ಸುಡುಬಿಸಿಲಿನ ಬೇಸಗೆಯನ್ನೂ ಮರೆಸಿಬಿಡುವಂತಹ ಆಹ್ಲಾದಕರ ಸಂಜೆಯ ಹೊತ್ತಿಗೆ ಭಾರತೀಯ ವಿದ್ಯಾಭವನದ ಸಭಾಂಗಣದಲ್ಲಿ ಆರಂಭವಾದ ಗ್ವಾಲಿಯರ್ ಘರಾಣೆಯ ಗಾನಸುಧೆ ಶ್ರೋತೃಗಳನ್ನು ತಣಿಸುವಲ್ಲಿ ಯಶಸ್ವಿಯಾಯಿತು. ಅದು ಕೇವಲ ಕುಮಾರ ಗಂಧರ್ವರ ಗಾಯನ ಶೈಲಿಯ ಅನುಕರಣೆ ಮಾತ್ರ ಆಗಿರದೆ ಪರಂಪರೆಯ ಮುಂದುವರಿಕೆಯಂತೆ ಭಾಸವಾಗುತ್ತಿತ್ತು.ಅಲ್ಲಿ ಕೇವಲ ವಸುಂಧರಾ ಅವರ ಗಾಯನ ಮಾತ್ರ ಇರಲಿಲ್ಲ, ಅವರ ಜೊತೆಗೆ ಮಗಳು ಕಲಾಪಿನಿ ಸಾಥ್ ನೀಡಿದರು. ಸಂಗೀತ ಕಾರ್ಯಕ್ರಮ ಆರಂಭವಾದದ್ದೇ ಅವರ ಮೊಮ್ಮಗ ಭುವನೇಶ ಮುಕುಲ್ ಕೋಮಕಾಳಿ ಅವರ ಕಲ್ಯಾಣ ರಾಗದ ಗಾಯನದ ಮೂಲಕ. ಹೀಗೆ ಮೂರು ತಲೆಮಾರುಗಳ ಕುಮಾರ ಗಂಧರ್ವ ಗಾಯನ ಪರಂಪರೆಯ ಸೊಗಸು ಒಂದೇ ವೇದಿಕೆಯಲ್ಲಿ ಕೇಳಲು ದೊರಕಿತು. ಕುರ್ಚಿಗಳು ತುಂಬಿದ್ದರಿಂದ ಬಹಳಷ್ಟು ಕೇಳುಗರು ನಿಂತು, ನೆಲದ ಮೇಲೆಯೇ ಕುಳಿತು ಸಂಗೀತ ಆಸ್ವಾದಿಸಿದರು.ಪದ್ಮಶ್ರೀ ವಸುಂಧರಾ ಕೋಮಕಾಳಿ ಅವರು ನಾಯಕಿ ಕಾನಡ ರಾಗದ ಖ್ಯಾಲ ಪ್ರಸ್ತುತಿಯ ಮೂಲಕ ಗಾಯನ ಆರಂಭಿಸಿದರು. ಅವರ ಗಾಯನದಲ್ಲಿ ಕುಮಾರ ಗಂಧರ್ವರ ಛಾಪು ಕಾಣಿಸುತ್ತಿತ್ತು- ಕೇಳಿಸುತ್ತಿತ್ತು. ಆದರೆ, ಕೇವಲ ಅಷ್ಟೇ ಆಗಿರಲಿಲ್ಲ. ಸೃಜನಶೀಲ ಮನಸ್ಸೊಂದು ಮಹಾನ್ ಪ್ರತಿಭೆಯಿಂದ ದತ್ತವಾಗಿ ಬಂದ ಭಂಡಾರದ ಜೊತೆಗೆ ತನ್ನದನ್ನೂ ಸೇರಿಸಿ ನೀಡಿದ ಹಾಗೆ ವಸುಂಧರಾ ಅವರ ಹಾಡು ಕೇಳಿಸುತ್ತಿತ್ತು. 81ರ ಹರಯದ ವಸುಂಧರಾ ಅವರು ತಮ್ಮ ವಯಸ್ಸು-ಆಯಾಸಗಳನ್ನೂ ಮೀರಿ ಒಂದು ಗಂಟೆಗೂ ಹೆಚ್ಚು ಕಾಲ ನಾಯಕಿ ಕಾನಡಾದ ಸೊಬಗು ಉಣಬಡಿಸಿದರು.ಹಾಡು ಆರಂಭಿಸುವ ಮುನ್ನ ~ಬಹಳ ದಿನಗಳ ನಂತರ ಮತ್ತೊಮ್ಮೆ ಬಂದಿದ್ದೇನೆ. ಮೊದಲೊಮ್ಮೆ ಬೆಂಗಳೂರಿಗೆ ಬಂದಿದ್ದೆ. ಆಗ ಕಾರ್ಯಕ್ರಮ ಆಯೋಜಿಸಿದ್ದ ಹಿರಿಯರು ಈಗಲೂ ವೇದಿಕೆಯ ಮುಂಭಾಗದಲ್ಲಿ ಕುಳಿತಿರುವುದರಿಂದ ಆತಂಕ ಆಗುತ್ತದೆ~ ಎಂದು ಹೇಳಿದರು. ಆದರೆ, ಗಾಯನದ ಪ್ರಸ್ತುತಿಯಲ್ಲಿ ಮಾಗಿದ ಗಾಯನದ ಪ್ರೌಢಿಮೆ ವ್ಯಕ್ತವಾಗುತ್ತಿತ್ತು.ಉತ್ತರ ಕರ್ನಾಟಕದ ಬೆಳಗಾವಿಯ ಸೂಳೆಭಾವಿ ಎಂಬ ಚಿಕ್ಕಹಳ್ಳಿಯಲ್ಲಿ ಜನಿಸಿದ ಶಿವಪುತ್ರ ಕೋಮಕಾಳಿ ತನ್ನ ಹನ್ನೊಂದನೇ ವಯಸ್ಸಿನಲ್ಲಿಯೇ ಕೊಲ್ಕತ್ತಾ ಸೇರಿದಂತೆ ಹಲವೆಡೆ ಅಖಿಲ ಭಾರತ ಸಂಗೀತ ಸಮ್ಮೇಳನದಲ್ಲಿ ಹಾಡಿ ಸೈ ಎನ್ನಿಸಿಕೊಂಡು `ಕುಮಾರ ಗಂಧರ್ವ~ರಾದರು. ಗ್ವಾಲಿಯರ್ ಘರಾಣೆಯ ಪಂಡಿತ್ ಬಿ.ಆರ್. ದೇವಧರ್ ಅವರ ಸಂಗೀತದ ಪಾಠ ಕಲಿತ ಗಂಧರ್ವರು ತಮ್ಮ ಸೃಜನಶೀಲ ತೊಡಗಿಸಿಕೊಳ್ಳುವಿಕೆಯಿಂದ ಸಂಗೀತದ ಮೇರೆಗಳನ್ನು ವಿಸ್ತರಿಸಿದರು.ಕ್ಷಯರೋಗದ ಕಾರಣದಿಂದಾಗಿ ಒಂದು ಶ್ವಾಸಕೋಶವನ್ನು ಕತ್ತರಿಸಿ ತೆಗೆಯಬೇಕು ಎಂಬ ವೈದ್ಯರ ಹೇಳಿಕೆಗೆ `ಆಯ್ತು, ನನ್ನ ಹಾಡು ಮುಗಿದಿದೆ ಎಂದಾದರೆ ಕುಂಚವನ್ನು ಕೈಯಲ್ಲಿ ಹಿಡಿಯುತ್ತೇನೆ~ ಎಂದು ಪ್ರತಿಕ್ರಿಯಿಸಿದ್ದರು. ಆಗ ವೈದ್ಯರು ತಮ್ಮ ನಿರ್ಧಾರ ಬದಲಿಸಿ ಶ್ವಾಸಕೋಶ ತೆಗೆಯದೇ ಮತ್ತಷ್ಟು ಹಾಳಾಗದಂತೆ ಚಿಕಿತ್ಸೆ ನೀಡಿದರು. ಅದು ಗಂಧರ್ವರು ತಮ್ಮ ಗಾಯನ ಶೈಲಿಯನ್ನೇ ಬದಲಿಸಿಕೊಳ್ಳುವುದಕ್ಕೆ ಸಾಧ್ಯವಾಯಿತು.ಉಸಿರಾಡುವುದೇ ಕಷ್ಟವಾಗಿದ್ದ ದಿನಗಳಲ್ಲಿ ಪತ್ನಿ ಭಾನುಮತಿ ಕಂಸ ಅವರಿಂದ ಹಾಡಿಸಿ ಅದನ್ನು ಕೇಳುತ್ತಲೇ ಸಂಗೀತಕ್ಕೆ ಹತ್ತಿರವಾಗಿ ಉಳಿದಿದ್ದರು. ಎರಡನೇ ಹೆರಿಗೆಯಲ್ಲಿ ಪತ್ನಿಯ ಅಕಾಲಿಕ ಅಗಲುವಿಕೆಯ ನಂತರ ಶಿಷ್ಯೆಯಾಗಿದ್ದ ವಸುಂಧರಾ ಶ್ರೀಖಂಡೆ ಅವರ ಕೈ ಹಿಡಿದಿದ್ದರು.ವಸುಂಧರಾ ಅವರು ಜೊತೆಯಾದ ಮೇಲೆ ಕುಮಾರ ಗಂಧರ್ವರು ಅವರ ಸಹಕಾರದಿಂದಲೇ `ಗೀತವರ್ಷ~, `ಗೀತ ಹೇಮಂತ~, ~ಗೀತ ವಸಂತ~, `ಗಂಧರ್ವ ಗಾಯನ~, `ಠುಮರಿ-ಠಪ್ಪಾ- ತರಾನಾ~ ಹೀಗೆ ಹೊಸ ಬಗೆಯ ಕಾರ್ಯಕ್ರಮಗಳನ್ನು ರೂಪಿಸಿ ಪ್ರಸ್ತುತಪಡಿಸಿದರು. ಈ ಎಲ್ಲ ಕಛೇರಿಗಳಲ್ಲಿಯೂ ವಸುಂಧರಾ ಅವರು ಹಾಡುಗಾರ್ತಿಯಾಗಿ ಗಾಯನದ ಒತ್ತಾಸೆ ನೀಡುತ್ತಿದ್ದರು.ಗಂಧರ್ವರು `ಕಣ್ಮರೆ~ಯಾದ ಅವರ ಗಾಯನ ಶೈಲಿಯ ಸೊಗಸುಗಳನ್ನು ಕೇಳಿಸುವಂತೆ ಮಾಡುತ್ತಿದ್ದಾರೆ. ವಸುಂಧರಾ ಅವರು ನಾಯಕಿ ಕಾನಡಾದ ನಂತರ ಐದು ರಾಗಗಳು ಸಮ್ಮಿಳಿತಗೊಂಡ ಪಟಮಂಜರಿ ರಾಗ ಪ್ರಸ್ತುತ ಪಡಿಸಿದರು. ನಂತರ ತರಾನಾ ಹಾಗೂ ಭೈರವಿ ಭಜನ್ ಹಾಡಿದರು. ಅವರಿಗೆ ಪುತ್ರಿ ಕಲಾಪಿನಿ ಕೋಮಕಾಳಿ ಗಾಯನದ ಬೆಂಬಲ ನೀಡಿದರು. ಜೊತೆಗೆ ಭುವನೇಶ ಕೂಡ ಧ್ವನಿ ಸೇರಿಸಿದರು.

 

ಮೂರು ತಲೆಮಾರುಗಳ ಗಂಧರ್ವ ಗಾನ ಕೇಳಿಬಂತು. ವ್ಯಾಸಮೂರ್ತಿ ಕಟ್ಟಿಯವರ ಎಂದಿನ ಶಾಂತ ಮನಮುದ್ರೆಯ ಹಾರ್ಮೋನಿಯಂ ಸಾಥ್ ಹಾಗೂ ರವೀಂದ್ರ ಯಾವಗಲ್ ಅವರ ಸೊಗಸಾದ ತಬಲಾ ಸಾಥ್  ಜೊತೆಗಿತ್ತು. ವಿಜಯಕುಮಾರ್ ದೇಸಾಯಿ, ಜಗನ್ನಾಥ ತಂಬೂರಿ ಸಾಥ್ ನೀಡಿದರು. ಸುರ್‌ಸಾಗರ್ ಸಂಸ್ಥೆಯು ಈ ಕಾರ್ಯಕ್ರಮ ಏರ್ಪಡಿಸಿತ್ತು.ಆರಂಭದಲ್ಲಿ ಕುಮಾರ ಗಂಧರ್ವ ಅವರ ಮೊಮ್ಮಗ ಭುವನೇಶ ಮುಕುಲ್ ಕಲ್ಯಾಣ ರಾಗದಲ್ಲಿ ಎರಡು ಬಂದೀಶ್‌ಗಳನ್ನು ಪ್ರಸ್ತುತಪಡಿಸಿದರು. `ದೇವೋ ದಾನ ದೇದೋ~ ಎಂದು ಹಾಡಿದ ಭುವನೇಶ ನಂತರ ಗೌರಿಬಸಂತ್‌ದ ಮೂಲಕ ಗಮನ ಸೆಳೆದರು. ಗಂಧರ್ವರ ಗಾಯನ ಕೇಳಿ ಅದರ ಹೆಜ್ಜೆ ಜಾಡಿನಲ್ಲಿ ನಡೆಯುತ್ತಲೇ ತನ್ನ ದಾರಿ ರೂಪಿಸಿಕೊಳ್ಳುತ್ತಿರುವ ಭುವನೇಶರ ಹಾಡು ಮುದ ನೀಡುವಂತಿತ್ತು.

 

ಗಂಧರ್ವರ ಆಡಿಯೋ-ವಿಡಿಯೋ ಧ್ವನಿ ಸಂಗ್ರಹಿಸುವುದರ ಜೊತೆಗೆ ಅವುಗಳನ್ನು ಮುಂದಿನ ತಲೆಮಾರಿಗೆ ತಲುಪಿಸುವುದಕ್ಕಾಗಿ ಡಿಜಿಟಲ್ ತಂತ್ರಜ್ಞಾನದಲ್ಲಿ ಅಳವಡಿಸುವುದರಲ್ಲಿ ತೊಡಗಿಸಿಕೊಂಡಿರುವ ಭುವನೇಶ್ ಅವರು ಮಧ್ಯಪ್ರದೇಶದ ಇಂದೋರ್-ಭೂಪಾಲ್ ಸಮೀಪದ ದೇವಾಸ್‌ದಲ್ಲಿ ಕುಮಾರ ಗಂಧರ್ವರಿಗೆ ಸಂಬಂಧಿಸಿದ ಎಲ್ಲ ಮಾಹಿತಿ-ಆಕರಗಳನ್ನು ಸಂಗ್ರಹಿಸಿಡುತ್ತಿದ್ದಾರೆ. ಕುಮಾರ ಗಂಧರ್ವರು ಬಾಳಿ ಬದುಕಿದ ಮನೆಯನ್ನು ಅದೇ ಸ್ವರೂಪದಲ್ಲಿ ಉಳಿಸಿ `ಸಂಗ್ರಹಾಲಯ~ ಮಾಡುವ ಕೆಲಸದಲ್ಲಿದ್ದಾರೆ. 800 ಗಂಟೆಗೂ ಹೆಚ್ಚಿನ ಅವಧಿಯ ಆಡಿಯೋ ಮತ್ತು ಸರಿಸುಮಾರು 150 ಗಂಟೆಯ ವಿಡಿಯೋ ಸಂಗ್ರಹವನ್ನು ದೇವಾಸ್‌ದಲ್ಲಿ ಸಂಗ್ರಹಿಸಿದ್ದಾರೆ.ಶಾಸ್ತ್ರೀಯ ಸಂಗೀತದ ಗಾಂಭೀರ್ಯ-ಮಾಧುರ್ಯದ ಜೊತೆಗೆ ಲೋಕಸಂಗೀತದ ತಾಜಾತನ- ಸಡಗರ-ಸಂಭ್ರಮಗಳನ್ನು ಬೆರೆಸಿ ಹೊಸದೊಂದು ಲೋಕ ಸೃಷ್ಟಿಸುತ್ತಿದ್ದ ಗಂಧರ್ವ ಗಾಯನ ಪರಂಪರೆಯನ್ನು ಮಧುಪ್ ಮುದಗಲ್ ಮತ್ತು ಮುಕುಲ್ ಶಿವಪುತ್ರ ಮುಂದುವರೆಸಿದ್ದಾರೆ. ವಿಭಿನ್ನ- ವಿಶಿಷ್ಟ ಗಾನಸುಧೆ ಹರಿಸಿ ಕೆಲ ಕಾಲ ಸಂಗೀತ ಜಗತ್ತಿನಲ್ಲಿ ವಿಹರಿಸುವಂತೆ ಮಾಡಿದ ಗಂಧರ್ವರ ಕುಟುಂಬ ಮೆಚ್ಚುಗೆಗೆ ಪಾತ್ರವಾಯಿತು.ಚಿತ್ರ: ಸವಿತಾ ಬಿ.ಆರ್.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry