ಶನಿವಾರ, ಜೂನ್ 19, 2021
22 °C

ಗಂಧರ್ವನ ಕನಸು ಕನವರಿಕೆಗಳು

ಅಮಿತ್ ಎಂ.ಎಸ್. Updated:

ಅಕ್ಷರ ಗಾತ್ರ : | |

ಚಿ  ಕ್ಕಂದಿನಿಂದಲೂ ಓದು ಎಂದರೆ ಸ್ವಲ್ಪ ದೂರವೇ. ಪಾಠ ಬಿಟ್ಟು ಉಳಿದ ಚಟುವಟಿಕೆಗಳಲ್ಲಿಯೇ ಹೆಚ್ಚು ಆಸಕ್ತಿ. ತುಂಟತನ, ತರಲೆಗಳು ಹೆಚ್ಚಾದವೆಂದೇ ಏಳನೇ ತರಗತಿ ಓದುತ್ತಿದ್ದಾಗ ಶಾಲೆಯವರು ಮನೆಗೆ ಕಳುಹಿಸಿದ್ದರು. ಬೇರೆ ಶಾಲೆ ಸೇರಿ, ಈಗ ಪದವಿ ಮುಗಿಸಿದ್ದರೂ ಆ ನೆನಪುಗಳು ಇನ್ನೂ ಹಸಿರು. ಏಕೆಂದರೆ ತುಂಟತನ, ಓದು ತಪ್ಪಿಸುವ ಗುಣದ ಹಿಂದೆ ಇದ್ದದ್ದು ಕೂಡ ಕಲಿಯುವ ಆಸಕ್ತಿ. ಆ ಕಲಿಕೆಯೇ ಬದುಕಿನ ಹಾದಿ ತೋರಿಸಿದೆ. ಆ ಹಾದಿಯಲ್ಲಿ ಹತ್ತಾರು ಕವಲುಗಳು. ಅವುಗಳೆಲ್ಲದರಲ್ಲಿಯೂ ಸಲೀಸಾಗಿ ನಡೆಯಬಲ್ಲೆ ಎನ್ನುವ ಆತ್ಮವಿಶ್ವಾಸವೂ ಬಾಲ್ಯದಲ್ಲಿಯೇ ಮೂಡಿತ್ತು.‘ದ್ಯಾವ್ರೇ’ ಚಿತ್ರದಲ್ಲಿ ಕಳ್ಳನಾಗಿ, ಪ್ರೇಮಿಯಾಗಿ ಗಮನ ಸೆಳೆದ ಚೇತನ್‌ ಗಂಧರ್ವ ಅವರದು ಸಿಕ್ಕ ಅವಕಾಶಗಳನ್ನೆಲ್ಲಾ ಬಾಚಿ ತಬ್ಬಿಕೊಳ್ಳುವ ವ್ಯಕ್ತಿತ್ವ. ಅದು ಅವರಲ್ಲಿನ ಪ್ರತಿಭೆಯ ಸಾಮರ್ಥ್ಯ ಕೂಡ. ನಟ, ಗಾಯಕ, ನೃತ್ಯಗಾರ ಹೀಗೆ ಹಲವು ವಿಶೇಷಣಗಳನ್ನು ಅಂಟಿಸಿಕೊಳ್ಳುತ್ತಲೇ ಎಲ್ಲದರಲ್ಲಿಯೂ ಸಾಧನೆ ಮಾಡಬೇಕೆಂಬ ಅದಮ್ಯ ಉತ್ಸಾಹಿ.ಕೂರ್ಗ್‌ ಮೂಲದ ಚೇತನ್‌ ಗಂಧರ್ವ ಹುಟ್ಟಿ ಬೆಳೆದಿದ್ದು ಬೆಂಗಳೂರಿನಲ್ಲಿ. ಚೇತನ್‌ ಗೌಡೆಂಡ ಅವರ ಮೂಲ ಹೆಸರು. ಚಿತ್ರರಂಗದಲ್ಲಿ ಚೇತನ್‌ ಹೆಸರಿನವರು ಹಲವು ಮಂದಿ ಇರುವುದರಿಂದ ಗಂಧರ್ವ ಎಂಬ ಹೊಸ ಹೆಸರು ಕೊಟ್ಟವರು ಯೋಗರಾಜ್‌ ಭಟ್‌. ಈ ಎರಡೂ ಹೆಸರನ್ನು ತೆಕ್ಕೆ ಹಾಕಿಕೊಂಡು ಚೇತನ್‌ ಗಂಧರ್ವ ಎಂದೇ ಅವರು ಗುರ್ತಿಸಿಕೊಳ್ಳುತ್ತಿದ್ದಾರೆ.ಓದಿನ ಮೇಲಿನ ಪ್ರೀತಿ ಕಡಿಮೆ ಇದ್ದರೂ ಚೇತನ್ ಬಿಬಿಎಂ ಪೂರೈಸಿದ್ದಾರೆ. ಚಿಕ್ಕಂದಿನಿಂದಲೂ ಅವರ ಗಮನ ಇದ್ದದ್ದು ಹಾಡು ಮತ್ತು ನೃತ್ಯದ ಮೇಲೆ. ಮಂಜುಳಾ ಗುರುರಾಜ್‌ ಅವರ ಶಾಲೆಯಲ್ಲಿ ಗಾಯನ ತರಬೇತಿ ಪಡೆಯುತ್ತಿದ್ದ ಅವರ ಒಲವು ನಾಲ್ಕನೇ ತರಗತಿಯಲ್ಲಿದ್ದಾಗ ಕರ್ನಾಟಕ ಶಾಸ್ತ್ರೀಯ ಸಂಗೀತದ ಕಲಿಕೆಯ ಕಡೆಗೆ ತಿರುಗಿತು. ಜೊತೆಗೆ ನೃತ್ಯವೂ ಒಲಿಯಿತು.‘ಅನುರಾಗ ಸಂಗಮ’, ‘ಉಲ್ಟಾಪಲ್ಟಾ’, ‘ವೀರಪ್ಪ ನಾಯಕ’ ಚಿತ್ರಗಳಲ್ಲಿ ಬಾಲಗಾಯಕನಾಗಿ ಕೆಲವು ಹಾಡುಗಳನ್ನು ಹಾಡಿದರು. ‘ಮಂಗಳಾಕ್ಷತೆ’, ‘ಅರಿಶಿಣ ಕುಂಕುಮ’, ‘ಸಾಂಗ್ಲಿಯಾನ–3’ ಚಿತ್ರಗಳಲ್ಲಿ ಬಾಲನಟನಾಗಿಯೂ ಕಾಣಿಸಿಕೊಂಡರು. ಓದಿನ ಕುರಿತು ಇಲ್ಲದ ಬದ್ಧತೆ ಅವರಿಗೆ ಹಾಡು, ನೃತ್ಯಗಳಲ್ಲಿತ್ತು. ಹಾಗೆಂದು ಶಿಕ್ಷಣವನ್ನು ಸಂಪೂರ್ಣ ನಿರ್ಲಕ್ಷಿಸುವಂತೆಯೂ ಇರಲಿಲ್ಲ.ಕಾಲೇಜು ಮೆಟ್ಟಿಲೇರಿದಾಗಲೂ ಅವರ ಆಸಕ್ತಿ, ಅಭಿರುಚಿ ಬದಲಾಗಲಿಲ್ಲ. ಫ್ರೀಲಾನ್ಸ್‌ ಡ್ಯಾನ್ಸರ್ ಆಗಿ ಹಲವು ತಂಡಗಳಲ್ಲಿ ನರ್ತಿಸುತ್ತಿದ್ದ ಚೇತನ್‌ ಮುಂದೆ ‘ಪಾದಕರ್ಮ’ ಎಂಬ ತಂಡದಲ್ಲಿ ಐದು ವರ್ಷ ತೊಡಗಿಕೊಂಡಿದ್ದರು. ಹಗಲು ನೃತ್ಯ ಪಾಠ, ಸಂಜೆ ಶಿಕ್ಷಣ ಪಾಠ– ಇದು ಪಿಯುಸಿಯಲ್ಲಿದ್ದಾಗ ಅವರ ನೀತಿ. ಈಗ ‘ಶ್ಯಾಡೋಸ್‌’ ತಂಡದ ಸದಸ್ಯರಾಗಿದ್ದರೂ ಸಿನಿಮಾ ಅವಕಾಶಗಳ ಕಾರಣ ನೃತ್ಯದಿಂದ ಸ್ವಲ್ಪ ವಿರಾಮ ತೆಗೆದುಕೊಂಡಿದ್ದಾರೆ.

ಇಷ್ಟೆಲ್ಲಾ ಚಟುವಟಿಕೆಗಳಲ್ಲಿ ಮುಳುಗಿರುವ ಚೇತನ್‌, ಸಿನಿಮಾರಂಗದ ಸಹವಾಸವೇ ಸಾಕು ಎಂದು ಬೇಸತ್ತ ದಿನಗಳೂ ಇದ್ದವು. ‘ಮಂದಹಾಸ’ ಚಿತ್ರದಲ್ಲಿ ನಾಯಕರಾಗಿದ್ದ ಅವರನ್ನು ಮೂರ್ನಾಲ್ಕು ವರ್ಷಗಳಾದರೂ ಚಿತ್ರ ಬಿಡುಗಡೆಯಾಗದಿದ್ದಾಗ ಗೆಳೆಯರು, ಬಂಧುಗಳು ಪರಿಹಾಸ್ಯ ಮಾಡತೊಡಗಿದ್ದರಂತೆ. ಇನ್ನು ಸಿನಿಮಾ ಬೇಡ ಎಂದುಕೊಂಡಿದ್ದ ಅವರನ್ನು ಮತ್ತೆ ಬಣ್ಣಹಚ್ಚುವಂತೆ ಮಾಡಿದ್ದು ‘ದ್ಯಾವ್ರೇ’ ಚಿತ್ರ. ‘ಮಂದಹಾಸ’ದಲ್ಲಿ ಸಹನಟರಾಗಿದ್ದ ರಾಕೇಶ್‌ ಅಡಿಗ ಆ ಪಾತ್ರವನ್ನು ನಿರ್ವಹಿಸಬೇಕಾಗಿತ್ತು. ದಿನ ಹೊಂದಾಣಿಕೆ ಆಗದ ಕಾರಣ ರಾಕೇಶ್‌ ತಮ್ಮ ಬದಲು ಚೇತನ್‌ ಹೆಸರನ್ನು ಸೂಚಿಸಿದರಂತೆ.ಜೀವಮಾನದಲ್ಲಿ ಮತ್ತೆ ಸಿಗಲಾರದಂಥ ಪಾತ್ರವದು ಎನ್ನುತ್ತಾರೆ ಚೇತನ್‌. ಈಗ ಮತ್ತೊಬ್ಬ ಗಾಯಕ ರಾಜೇಶ್‌ ಕೃಷ್ಣನ್‌ ಅವರ ಗೆಳೆಯನ ಪಾತ್ರದಲ್ಲಿ ‘ಮೆಲೋಡಿ’ ಚಿತ್ರದಲ್ಲಿ ಅವರು ನಟಿಸುತ್ತಿದ್ದಾರೆ. ಪೂರ್ಣಪ್ರಮಾಣದ ನಾಯಕನ ಪಾತ್ರಕ್ಕೆ ಅವಕಾಶಗಳು ಬರುತ್ತಿವೆ ಎಂಬ ಖುಷಿ ಇದ್ದರೂ, ‘ನಾಯಕನ ಪಾತ್ರವೇ ಆಗಬೇಕಿಂದಿಲ್ಲ, ಒಳ್ಳೆ ಪಾತ್ರವಾದರೆ ಸಾಕು’ ಎನ್ನುತ್ತಾರೆ. ತಮ್ಮನ್ನು ಹೀಯಾಳಿಸಿದವರಿಗೆ ಒಳ್ಳೆ ನಟನಾಗಿ ಸಾಬೀತು ಪಡಿಸುತ್ತೇನೆ ಎಂದು ಸವಾಲು ಹಾಕಿದ್ದ ಚೇತನ್‌ ಅದನ್ನು ಈಡೇರಿಸುವ ದಿನ ಹತ್ತಿರದಲ್ಲಿದೆ ಎಂಬ ನಿರೀಕ್ಷೆಯಲ್ಲಿದ್ದಾರೆ.‘ಮಂದಹಾಸ’ದೊಂದಿಗೆ ನಟನೆಯ ಜೊತೆಗೆ ಗಾಯನ ಯಾನವೂ ಶುರುವಾಗಿದೆ. ‘ನಿಂಬೆಹುಳಿ’, ‘ಅದ್ವೈತ’, ‘ಪ್ರೀತಿ ಗೀತಿ ಇತ್ಯಾದಿ’, ‘ದ್ಯಾವ್ರೇ’, ‘ಚಾರ್ಲಿ’, ‘ಜಾಕ್ಸನ್’ ಹೀಗೆ ಹದಿನೈದು ಚಿತ್ರಗಳಲ್ಲಿ ಚೇತನ್‌ ಕಂಠಸಿರಿ ದಾಖಲಾಗಿದೆ. ಅಭಿನಯ ಮತ್ತು ಗಾಯನದಲ್ಲಿ ಅವಕಾಶಗಳು ಹರಿದುಬರುತ್ತಿವೆ. ‘ಎರಡರಲ್ಲಿಯೂ ತೃಪ್ತಿ ಸಿಗುತ್ತಿದೆ, ಆದರೂ ತೃಪ್ತಿಯಿಲ್ಲ’ ಎಂದು ನಗುವ ಚೇತನ್‌ರಲ್ಲಿ ಕಲಿಕೆಯ ಉತ್ಸಾಹ ಇನ್ನೂ ಕುಂದಿಲ್ಲ.ಸಿನಿಮಾದ ತಾಂತ್ರಿಕ ವಿಭಾಗದ ಮೇಲೆ ಅವರ ಕಣ್ಣುಬಿದ್ದಿದೆ. ಅದನ್ನು ಕಲಿಯುವ ಮೊದಲೇ ಉತ್ತಮ ಗಾಯಕ ಮತ್ತು ನಟ ಎಂದು ಗುರ್ತಿಸಿಕೊಳ್ಳಬೇಕು ಎನ್ನುವ ತುಡಿತ ಅವರಲ್ಲಿದೆ. ‘ಸವಾಲು ಹಾಕಿದವರಿಗೆ ಉತ್ತರ ನೀಡಿದ್ದೇನೆ. ಆದರೂ ನನ್ನ ಸಾಮರ್ಥ್ಯವನ್ನು ಸಾಬೀತುಪಡಿಸುವ ಕೆಲಸ ಇನ್ನೂ ಬಾಕಿ ಇದೆ’ ಎನ್ನುತ್ತಾರೆ ಚೇತನ್‌.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.