ಗಂಧರ್ವರಿಗೆ `ತಾನ್‌ಸೇನ್ ಸಮ್ಮಾನ್'

7

ಗಂಧರ್ವರಿಗೆ `ತಾನ್‌ಸೇನ್ ಸಮ್ಮಾನ್'

Published:
Updated:
ಗಂಧರ್ವರಿಗೆ `ತಾನ್‌ಸೇನ್ ಸಮ್ಮಾನ್'

ಭಾರತೀಯ ಶಾಸ್ತ್ರೀಯ ಸಂಗೀತದಲ್ಲಿ ಬಹು ದೊಡ್ಡ ವಿದ್ವಾಂಸರು ತಾನ್‌ಸೇನ್. ಮೊಘಲ್ ದೊರೆ ಅಕ್ಬರ್ ಆಸ್ಥಾನದಲ್ಲಿ `ನವರತ್ನ'ಗಳಲ್ಲಿ ಒಬ್ಬರಾಗಿದ್ದ ತಾನ್‌ಸೇನ್ ಹಿಂದೂಸ್ತಾನಿ ರಾಗ ಸಂಯೋಜಕ ಮತ್ತು ಅತ್ಯುತ್ತಮ ಗಾಯಕರಾಗಿದ್ದವರು. 15ನೇ ಶತಮಾನದ ಈ ಅಪ್ರತಿಮ ಗಾಯಕನ ಹೆಸರಿನಲ್ಲಿ ಪ್ರತೀವರ್ಷ `ತಾನ್‌ಸೇನ್ ರಾಷ್ಟ್ರೀಯ ಸಮ್ಮಾನ್' ನೀಡಲಾಗುತ್ತಿದ್ದು, ಇದು ಸಂಗೀತ ಪ್ರಶಸ್ತಿಗಳಲ್ಲೇ ಅತ್ಯಂತ ಮಹತ್ವದ್ದು ಎನಿಸಿದೆ. ಈ ಬಾರಿ (2011-12) ಈ ಪ್ರತಿಷ್ಠಿತ ಪ್ರಶಸ್ತಿಗೆ ಭಾಜನರಾದದ್ದು ಬನಾರಸ್ ಘರಾಣೆಯ ವಿಶ್ವವಿಖ್ಯಾತ ಕಲಾವಿದರಾದ ಪಂ.ರಾಜನ್-ಸಾಜನ್ ಮಿಶ್ರಾ.ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ಇತ್ತೀಚೆಗೆ ನಡೆದ ತಾನ್‌ಸೇನ್ ರಾಷ್ಟ್ರೀಯ ಸಂಗೀತ ಸಮ್ಮೇಳನದಲ್ಲಿ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಕಳೆದ ಆಗಸ್ಟ್‌ನಲ್ಲಿ ಧಾರವಾಡದಲ್ಲಿ ನಡೆದ ಪಂ. ರಾಜಗುರು ಟ್ರಸ್ಟ್ ಕೊಡುವ `ಪಂ. ಬಸವರಾಜ್ ರಾಜಗುರು ರಾಷ್ಟ್ರೀಯ ಪುರಸ್ಕಾರ'ವನ್ನೂ ಇದೇ ಕಲಾವಿದರು ಪಡೆದರು.ಮೊನ್ನೆಯಷ್ಟೇ ಬೆಂಗಳೂರಿನ ಚೌಡಯ್ಯ ಹಾಲ್‌ನಲ್ಲಿ ಪಂ. ಗುರುರಾವ್ ದೇಶಪಾಂಡೆ ಸಂಗೀತ ಸಭಾದಿಂದ `ಗುರು ಗಂಧರ್ವ' ರಾಷ್ಟ್ರೀಯ ಪ್ರಶಸ್ತಿಯೂ ಈ ಮೇರು ಕಲಾವಿದರಿಗೆ ಸಂದಿದೆ.ಹೀಗೆ ಪ್ರಶಸ್ತಿಗಳ ಮೇಲೆ ಪ್ರಶಸ್ತಿ, ಬಿರುದು ಸಮ್ಮಾನಗಳನ್ನು ಮುಡಿಗೇರಿಸಿಕೊಳ್ಳುವ ಈ ಅಪ್ರತಿಮ ಜುಗಲ್‌ಬಂದಿ ಸಹೋದರರು ಮೊನ್ನೆ ಮೊನ್ನೆ (ಡಿಸೆಂಬರ್ 24) ಬೆಂಗಳೂರಿಗೆ ಬಂದಿದ್ದರು. ಖ್ಯಾತ ಗಾಯಕ ಪಂ. ವಿನಾಯಕ ತೊರವಿ ಅವರು ಆಯೋಜಿಸಿದ್ದ ಅಹೋರಾತ್ರಿ ಸಂಗೀತೋತ್ಸವದಲ್ಲಿ ರಾತ್ರಿ ಗುರು ಗಂಧರ್ವ ಪ್ರಶಸ್ತಿ ಸ್ವೀಕರಿಸಿ ಮುಂಜಾನೆ 4.30 ಗಂಟೆಗೆ ಗಾಯನವೂ ಏರ್ಪಾಡಾಗಿತ್ತು. ತುಂಬಿ ಹೋಗಿದ್ದ ಸಭಾಂಗಣದ ವೇದಿಕೆಗೆ ಈ ಸಂಗೀತದ್ವಯರು ಆಗಮಿಸಿದಾಗ ಅಭಿಮಾನಿಗಳ ಕರತಾಡನ, ಚಪ್ಪಾಳೆ ಮುಗಿಲು ಮುಟ್ಟಿತ್ತು. `ವಿ ವರ್ಶಿಪ್ ಮ್ಯೂಸಿಕ್' ಎಂದು ಹೇಳುತ್ತಲೇ ರಾಗ್ `ಭಟಿಯಾರ್' ಆಲಾಪ ಶುರು ಮಾಡಿದರು. ಸುಮಾರು ಒಂದೂವರೆ ಗಂಟೆ ಕಾಲ ಬಂದೀಶ್, ತರಾನ, ತಾನ್‌ಗಳ ಮೂಲಕ ರಾಗಗಳನ್ನು ದಳದಳವಾಗಿ ಅರಳಿಸಿ ಕೇಳುಗರನ್ನು ರೋಮಾಂಚನಗೊಳಿಸಿದರು.ಇದು ಈ ಪಂ. ಮಿಶ್ರಾ ಸಹೋದರರ ಗಾನ ಮಾಧುರ್ಯದ ವೈಶಿಷ್ಟ್ಯ. ವರ್ಷದ ಬಹುತೇಕ ದಿನಗಳಲ್ಲಿ ವಿಶ್ವದಾದ್ಯಂತ ಕಛೇರಿಗಳಲ್ಲಿಯೇ ಕಳೆಯುವ ಪಂ. ರಾಜನ್-ಸಾಜನ್ ಮಿಶ್ರಾ ಅವರಿಗೆ ಪ್ರಶಸ್ತಿ, ಸಮ್ಮಾನ, ಪುರಸ್ಕಾರ, ಬಿರುದುಗಳು ಲೆಕ್ಕವಿಲ್ಲದಷ್ಟು ಬಂದಿದ್ದರೂ, `ಸಂಗೀತ ಕಛೇರಿಗಳಲ್ಲಿ ಸಿಗುವ ಕೇಳುಗರ ಕರತಾಡನವೇ ನಮಗೆ ಅತ್ಯಂತ ದೊಡ್ಡ ಪ್ರಶಸ್ತಿ' ಎಂದು ವಿನಮ್ರವಾಗಿ ನುಡಿದರು.ಉದ್ಯಾನ ನಗರಿ ಬೆಂಗಳೂರು ಬಗ್ಗೆ ಅಭಿಮಾನ ಹೊಂದಿರುವ ಇವರು, `ಬೆಂಗಳೂರು ಒಂದು ಸುಂದರ ನಗರ. ನಾವು ಕಳೆದ ಹಲವಾರು ವರ್ಷಗಳಿಂದ ಬೆಂಗಳೂರು ಸೇರಿದಂತೆ ಕರ್ನಾಟಕದ ನಾನಾ ಭಾಗಗಳಲ್ಲಿ ಸಂಗೀತ ಕಛೇರಿ ನೀಡುತ್ತಾ ಬಂದಿದ್ದೇವೆ. ನಮ್ಮ ಸಂಗೀತ ಕಛೇರಿಗೆ ಕೇಳುಗರು ಸ್ಪಂದಿಸುವ ರೀತಿಯೂ ಅಭೂತಪೂರ್ವವಾದದ್ದು. ಇಲ್ಲಿಗೆ ಬಂದಾಗ ನಮ್ಮನ್ನು ಉಪಚರಿಸುವ ರೀತಿ, ಆತ್ಮೀಯತೆಯಿಂದ ಮಾತನಾಡಿಸುವ ಪರಿ ಕೂಡ ನಮಗೆ ಅತ್ಯಂತ ಖುಷಿಯ ವಿಚಾರ. ಇದೇ ಕಾರಣಕ್ಕೆ ಬೆಂಗಳೂರಿಗೆ ವರ್ಷಕ್ಕೆ ಮೂರು ಬಾರಿಯಾದರೂ ಬಂದು ಹೋಗುತ್ತೇವೆ' ಎನ್ನುತ್ತಾರೆ ಈ ಅಪ್ರತಿಮ ಗಾಯಕರು.ವಿಶಿಷ್ಟ ಗಾಯನ ಶೈಲಿ

ಬನಾರಸ್ ಘರಾಣೆ ಶೈಲಿಯಲ್ಲಿ ಹಾಡುವ ಈ ಸಂಗೀತ ದಿಗ್ಗಜರ ರಾಗಾಲಾಪದಿಂದ ಹಿಡಿದು ಗಾಯನದ ಪ್ರತಿಯೊಂದು ಹಂತವೂ ಅತ್ಯಂತ ವೈಶಿಷ್ಟ್ಯಪೂರ್ಣ. ಒಮ್ಮೆ ಮಂದ್ರ ಸಪ್ತಕದ ಷಡ್ಜ-ರಿಷಭಕ್ಕೆ ಹೋಗಿ ಮತ್ತೆ ಅದನ್ನೇ ತಾರ ಸಪ್ತಕದ ಷಡ್ಜ-ರಿಷಭಕ್ಕೆ ಹೋಗಿ ಹಾಡುವುದು ನಿಜಕ್ಕೂ ಅದ್ಭುತ ಅನುಭವ. ಬಹಳ ತ್ರಾಸದಾಯಕವಾದ ಈ ಹಾಡುಗಾರಿಕೆ ಶೈಲಿ ರೂಢಿಸಿಕೊಳ್ಳಲು ವರ್ಷ ವರ್ಷಗಳ ಸತತ ಪರಿಶ್ರಮ ಬೇಕೇ ಬೇಕು. ಈ ಗಾನ ಸಹೋದರರು ಒಬ್ಬರನ್ನೊಬ್ಬರು ಅನುಸರಿಸಿಕೊಂಡು ಹಾಡುವುದು ಕೂಡ ವರ್ಣನಾತೀತ. ಗಾಯನದುದ್ದಕ್ಕೂ ಒಬ್ಬರು ಸ್ವರದಲ್ಲಿ ಹಾಡಿದರೆ ಇನ್ನೊಬ್ಬರು ಅದನ್ನೇ `ಆಕಾರ್'ದಲ್ಲಿ ಹಾಡುವುದು ಕೂಡ ಕೇಳುಗರಿಗೆ ವಿಶಿಷ್ಟ ಅನುಭವ ನೀಡುತ್ತದೆ. ಇದು ಇವರ ಕಛೇರಿಗೆ ಸಮಯವನ್ನೂ ಲೆಕ್ಕಿಸದೆ ಸಾವಿರಾರು ಜನ ಕೇಳುಗರು ಸೇರಲು ಕಾರಣ. ಮಂದ್ರ ಸಪ್ತಕದಿಂದ ಅತಿತಾರ ಸಪ್ತಕದವರೆಗೆ ಪ್ರಸ್ತುತಪಡಿಸುವ ಸ್ವರ ತಾನ್, ಆಕಾರ್ ತಾನ್, ಬೋಲ್ ತಾನ್‌ಗಳು ಈ ಗಾಯಕರ ಉತ್ತಮ ಶಾರೀರಕ್ಕೆ ಸಾಕ್ಷಿ.ಸಂಗೀತ ಕಛೇರಿ, ಸನ್ಮಾನ, ಪ್ರಶಸ್ತಿಗಳ ಖುಷಿಯಲ್ಲಿದ್ದ ಪಂ. ರಾಜನ್-ಸಾಜನ್ ಮಿಶ್ರಾ ಮೊನ್ನೆ ಬೆಂಗಳೂರಿಗೆ ಬಂದಾಗ `ಪ್ರಜಾವಾಣಿ' ಜತೆಗೆ ಆತ್ಮೀಯವಾಗಿ ಮಾತನಾಡಿದರು. ಸಂಗೀತ ಸಾಧನೆ, ರಿಯಾಜ್, ಗುರು-ಶಿಷ್ಯ ಪರಂಪರೆ, ಕಛೇರಿ, ಮುಂದಿನ ಯೋಜನೆ ಮುಂತಾದ ವಿಷಯಗಳನ್ನು ಮುಕ್ತವಾಗಿ ಹಂಚಿಕೊಂಡರು.ಸಂಗೀತದಲ್ಲಿ ಸಾಧನೆಯ ಬಗ್ಗೆ ಕೇಳಿದಾಗ `ಮ್ಯೂಸಿಕ್ ಇಸ್ ವರ್ಶಿಪ್ ಫಾರ್ ಅಸ್.. (ನಮಗೆ ಸಂಗೀತವೇ ಪೂಜೆ). ಸತತ ಸಾಧನೆ, ಪರಿಶ್ರಮ ಇದ್ದರೆ ಮಾತ್ರ ಸಂಗೀತದಲ್ಲಿ ಯಶಸ್ಸಿನ ಮೆಟ್ಟಿಲೇರಲು ಸಾಧ್ಯ' ಎಂದರು ಪಂ. ರಾಜನ್ ಮಿಶ್ರಾ.`ದಿನಕ್ಕೆ ಕನಿಷ್ಠ ಐದು ಗಂಟೆಯಾದರೂ ರಿಯಾಜ್ ಮಾಡಲೇ ಬೇಕು. ನಾವು ನಿರಂತರವಾಗಿ ಕಛೇರಿ ಕೊಡುತ್ತಲೇ ಇರುವುದರಿಂದ ದೇಶ ವಿದೇಶಗಳಿಗೆ ಸುತ್ತಾಡಬೇಕಾಗುತ್ತದೆ. ಹೀಗಾಗಿ ರಿಯಾಜ್ ಮಾಡಲು ಸಮಯವೂ ಸಿಗುತ್ತಿಲ್ಲ, ಆದರೆ ಕಛೇರಿ ಕೊಡುವುದೇ ಒಂದು ರೀತಿಯ ರಿಯಾಜ್ ಅನುಭವವನ್ನು ಕೊಡುತ್ತದೆ. ಸಂಗೀತದಲ್ಲಿ ಗುರು-ಶಿಷ್ಯ ಪರಂಪರೆಗೆ ಒತ್ತು ನೀಡುವ ಸಲುವಾಗಿ, ಸಂಗೀತದಲ್ಲಿ ಆಸಕ್ತಿ ಇರುವವರಿಗೆ ಕಲಿಯಲು ಸೂಕ್ತ ಅವಕಾಶ ಸಿಗುವ ಸಲುವಾಗಿ ದೆಹಲಿ ಮತ್ತು ಡೆಹ್ರಾಡೂನ್‌ಗಳಲ್ಲಿ ಗುರುಕುಲ ಸ್ಥಾಪಿಸಿದ್ದೇವೆ. ದೇಶ ವಿದೇಶದ ನೂರಾರು ಶಿಷ್ಯರು ಇಲ್ಲಿ ಬಂದು ಸಂಗೀತ ಕಲಿಯುತ್ತಿದ್ದಾರೆ' ಎಂದು ವಿವರ ನೀಡಿದರು ಈ ಹಿರಿಯ ಕಲಾಚೇತನ. `ವಿದೇಶದಲ್ಲಿ ಹಿಂದೂಸ್ತಾನಿ ಸಂಗೀತದ ಕೇಳುಗರು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಅಲ್ಲಿ ಉತ್ತಮ ತಬಲಾ ಮತ್ತು ಹಾರ್ಮೋನಿಯಂ ವಾದಕರೂ ಇದ್ದಾರೆ. ಕೆಲವೊಮ್ಮ ನಮ್ಮ ಕಛೇರಿಗಳಿಗೆ ಇಲ್ಲಿಂದಲೇ ಸಾಥಿದಾರರನ್ನು ಕರೆದುಕೊಂಡು ಬರುವಂತೆ ಸಂಘಟಕರು ವಿನಂತಿಸುತ್ತಾರೆ. ಆಗ ಇಲ್ಲಿನ ಕಲಾವಿದರಿಗೆ ವಿದೇಶಗಳಲ್ಲಿ ಕಛೇರಿ ನೀಡುವ ಅವಕಾಶ ಸಿಗುತ್ತದೆ' ಎಂದು ಹೇಳಿದರು ಪಂ. ರಾಜನ್ ಮಿಶ್ರಾ.ಕೌಟುಂಬಿಕ ಹಿನ್ನೆಲೆ

ರಾಜನ್ ಮಿಶ್ರಾ ಹುಟ್ಟಿದ್ದು 1951 ಮತ್ತು ತಮ್ಮ ಸಾಜನ್ ಮಿಶ್ರಾ 1956ರಲ್ಲಿ ವಾರಣಾಸಿಯಲ್ಲಿ. ತಮ್ಮ ತಾತ ಬಡೆ ರಾಮ್ ದಾಸ್‌ಜಿ ಮಿಶ್ರಾ ಅವರಿಂದ ಸಂಗೀತ ಕಲಿಕೆ ಆರಂಭ. ತಂದೆ ಹನುಮಾನ್ ಪ್ರಸಾದ್ ಮಿಶ್ರಾ ಮತ್ತು ಮಾವ ಸಾರಂಗಿ ವಾದಕ ಗೋಪಾಲ್ ಪ್ರಸಾದ್ ಮಿಶ್ರಾ ಅವರಲ್ಲಿ ಸಂಗೀತ ಭದ್ರ ಬುನಾದಿ ಹಾಕಿಸಿಕೊಂಡರು.ಹದಿವಯಸ್ಸಿಗೇ ಸಂಗೀತ ಕಛೇರಿ ನೀಡಲಾರಂಭಿಸಿದರು. ನಂತರ1977ರಲ್ಲಿ ದೆಹಲಿಯ ರಮೇಶ್ ನಗರಕ್ಕೆ ತೆರಳಿ ಅಲ್ಲಿ ನೆಲೆ ನಿಂತರು.ಮನೆಯಲ್ಲಿಯೇ ಸಂಗೀತದ ವಾತಾವರಣವಿದ್ದು, ಪುಟ್ಟ ಮಕ್ಕಳಿರುವಾಗಲೇ ಸಂಗೀತ ಕಲಿಯಲಾರಂಭಿಸಿದರೂ ಈ ಇಬ್ಬರೂ ಅಂಗಡಿಯೊಂದರಲ್ಲಿ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ದರು. ಒಮ್ಮೆ ರಾಜಸ್ತಾನ ಮೂಲದ ವಿಶ್ವವಿಖ್ಯಾತ ಗಜಲ್ ಮಾಂತ್ರಿಕ ದಿ.ಜಗಜೀತ್ ಸಿಂಗ್ ಅವರ ಮುಂದೆ ಸಂಗೀತ ಹಾಡಿದರು. ಇವರ ಗಾನ ಮಾಧುರ್ಯಕ್ಕೆ ಮರುಳಾದ ಜಗಜೀತ್ ಸಿಂಗ್ ಈ ಸಹೋದರರಿಗೆ ಸಂಗೀತದಲ್ಲಿಯೇ ಭವಿಷ್ಯವಿದೆ. ಅದನ್ನೇ ಮುಂದುವರಿಸಿ ಎಂದು ಒಂದೆರಡು ಸಂಗೀತ ಕಛೇರಿಗೂ ವ್ಯವಸ್ಥೆ ಮಾಡಿದರು. ಅಲ್ಲಿಂದ ಮತ್ತೆ ಸಂಗೀತ ಕ್ಷೇತ್ರದಲ್ಲೇ ಭದ್ರವಾಗಿ ನೆಲೆ ನಿಲ್ಲುವಂತಾಯಿತು. ಸುಮಾರು 300 ವರ್ಷಗಳ ಸಂಗೀತ ಪರಂಪರೆ ಇವರ ಮನೆತನದ್ದು. ಇವರು ಹಾಡಿರುವ ಖಯಾಲ್ ಶೈಲಿ, ಟಪ್ಪ, ತರಾನ ಮತ್ತು ಭಜನ್ಸ್‌ಗಳ ಹಲವು ಸೀಡಿಗಳು ಹೊರ ಬಂದಿದ್ದು ಇಂದು ಮಹತ್ವದ ದಾಖಲೆಗಳಾಗಿವೆ. ಶ್ರೀಲಂಕಾದಲ್ಲಿ 1978ರಲ್ಲಿ ಮೊದಲ ವಿದೇಶಿ ಕಛೇರಿ ನೀಡುವ ಮೂಲಕ ಹೊರದೇಶಕ್ಕೆ ಸಂಗೀತ ಸವಿ ಹಂಚಲು ಆರಂಭಿಸಿದ ಇವರು, ಅಲ್ಲಿಂದ ಮತ್ತೆ ಜರ್ಮನಿ, ಫ್ರಾನ್ಸ್, ಸ್ವಿಟ್ಜರ್‌ಲೆಂಡ್, ಆಸ್ಟ್ರಿಯಾ, ಅಮೆರಿಕ, ಇಂಗ್ಲೆಂಡ್, ನೆದರ್‌ಲೆಂಡ್, ರಷ್ಯಾ, ಸಿಂಗಪುರ, ಕತಾರ್, ಮಸ್ಕತ್, ದುಬೈಗಳಲ್ಲಿ ಲೆಕ್ಕವಿಲ್ಲದಷ್ಟು ಕಛೇರಿ ನೀಡಿದ್ದಾರೆ. ಇಂದಿನ ಜುಗಲ್‌ಬಂದಿ ಗಾಯಕರಲ್ಲಿ ವಿಶ್ವಮಟ್ಟದಲ್ಲಿ ಮುಂಚೂಣಿಯಲ್ಲಿರುವ ಕೆಲವೇ ಕೆಲವು ಗಾಯಕರಲ್ಲಿ  ಪಂ.ರಾಜನ್-ಸಾಜನ್ ಮಿಶ್ರಾ ಪ್ರಮುಖರು.ಮೂರು ಶತಮಾನಗಳ ಇತಿಹಾಸವಿರುವ ಸಂಗೀತ ಕುಟುಂಬದಲ್ಲಿ ಇವರ ಮುಂದಿನ ಪೀಳಿಗೆಗೆ ಸಂಗೀತ ಮುನ್ನಡೆಸಲು ಪಂ. ರಾಜನ್ ಮಿಶ್ರಾ ಅವರ ಮಕ್ಕಳಾದ ರಜನೀಶ್ ಮತ್ತು ರಿತೇಶ್ ತಂದೆಯಂತೆಯೇ ಜುಗಲ್‌ಬಂದಿಯಲ್ಲಿ ಭರವಸೆ ಮೂಡಿಸುತ್ತಿರುವ ಕಲಾವಿದರಾಗಿ ರೂಪುಗೊಂಡಿದ್ದಾರೆ. ಈಗಾಗಲೇ ಹಿಮಾಚಲ ಪ್ರದೇಶ, ಪಂಜಾಬ್‌ಗಳಲ್ಲಿ ಸಾಕಷ್ಟು ಸಂಗೀತ ಕಛೇರಿಗಳನ್ನೂ ನೀಡಿದ್ದಾರೆ.ಸಂಗೀತ ನಿಂತ ನೀರಾಗಬಾರದು. ವಂಶಪಾರಂಪರ್ಯವಾಗಿ ಉಳಿಸಿ ಬೆಳೆಸಿಕೊಂಡು ಬಂದ ಈ ಕಲೆಯನ್ನು ಮುಂದಿನ ಪೀಳಿಗೆಗೂ ಉಳಿಸುವ ನಿಟ್ಟಿನಲ್ಲಿ ರಜನೀಶ್-ರಿತೇಶ್ ಕೂಡ ನಮ್ಮಂತೆಯೇ ಸತತ ಅಭ್ಯಾಸ, ಪರಿಶ್ರಮ ಪಡುತ್ತಿದ್ದಾರೆ. ಹೀಗಾಗಿ ಬನಾರಸ್ ಘರಾಣೆಯ ಈ ವಿಶಿಷ್ಟ ಶೈಲಿಯ ಸಂಗೀತ ಎಂದೆಂದೂ ಉಳಿಸುವ ಪ್ರಯತ್ನ ಮಾಡಿದ್ದೇವೆ ಎನ್ನುತ್ತಾರೆ.ಬದಲಾಗುತ್ತಿರುವ ಸಮಾಜದಲ್ಲಿ ಪರಂಪರಾಗತ ಕಲೆಯನ್ನು ಗಟ್ಟಿಗೊಳಿಸುತ್ತಿರುವ ರಾಜನ್-ಸಾಜನ್ ಮಿಶ್ರಾ, ಈ ನೆಲದ ಸಂಸ್ಕೃತಿ, ಕಲೆಯನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವ ಕೊಂಡಿ. ಅವರ ಬನಾರಸ್ ಘರಾಣೆಯ ಘಮಲು ಒಮ್ಮೆ ಆಲಿಸಿದರೆ, ಅದು ಸದಾ ಅನುರಣನಗೊಳ್ಳದೆ ಬಿಡದು. ಅಷ್ಟೊಂದು ಮಾಂತ್ರಿಕ ಶಕ್ತಿ ಅದಕ್ಕೆ.


ಮಹತ್ವದ ಪ್ರಶಸ್ತಿಗಳು

* ಗಂಧರ್ವ ರಾಷ್ಟ್ರೀಯ ಪ್ರಶಸ್ತಿ 1994

* ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ 1998

* ಪದ್ಮಭೂಷಣ 2007

* ಕಲಾಶೃಂಗ 2008

* ಪಂ. ಬಸವರಾಜ್ ರಾಜಗುರು ರಾಷ್ಟ್ರೀಯ ಸಮ್ಮಾನ್ 2012

* ತಾನ್‌ಸೇನ್ ಸಮ್ಮಾನ್ 2012

* ಗುರು ಗಂಧರ್ವ ರಾಷ್ಟ್ರೀಯ ಪುರಸ್ಕಾರ 2012  

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry