ಬುಧವಾರ, ಅಕ್ಟೋಬರ್ 23, 2019
23 °C

ಗಂಭೀರವದನೆಯ ಹುಡುಕಾಟ

Published:
Updated:

`ಇವಳು; ಅವಳೇನಾ...?~ ಹೀಗೆಂದು ರಾಗ ಎಳೆದಿದ್ದ ಜರ್ಮನಿಯ ಛಾಯಾಗ್ರಾಹಕ ಕಾಂಡೂಟರ್ ಹ್ಯಾಂಬರ್ಗ್. `ಯುನಿನಾರ್~ ಜಾಹೀರಾತಿನಲ್ಲಿ ಮೇಕಪ್ ಹಂಗಿಲ್ಲದೇ ಕಾಣಿಸಿಕೊಂಡಿದ್ದ ಬೆಡಗಿಯ ಚಿತ್ರ ಅವನ ಮುಂದಿತ್ತು.ಕಣ್ಣರಳಿಸಿ ನೋಡಿದ. ಸಮಾಧಾನದ ನಿಟ್ಟುಸಿರೂಬಿಟ್ಟ. ಅದಕ್ಕೆ ಕಾರಣ ದೇಶಿ ಹುಡುಗಿಯಂತೆ ಕಾಣಿಸುವ ರೂಪದರ್ಶಿಗಾಗಿ ನಡೆಸಿದ್ದ ಆ ವಿದೇಶಿ ಕ್ಯಾಮೆರಾ ಕಲಾವಿದನ ಹುಡುಕಾಟ ಕೊನೆಗೊಂಡಿತ್ತು. ಹಳ್ಳಿ ಹೆಂಗಳೆಯ ಪೋಷಾಕು ತೊಡಿಸಿ, ಗದ್ದೆ ತೋಟಗಳಲ್ಲಿ ನಿಲ್ಲಿಸಿ ಕ್ಯಾಮೆರಾ ಕ್ಲಿಕ್ಕಿಸಿದ...! ಭಾರತದ ಆ ದೇಶಿ ಲುಕ್ ಜರ್ಮನಿಯ ಮ್ಯಾಗಜೀನ್ ಮುಖಪುಟವನ್ನೂ ಅಲಂಕರಿಸಿದ್ದಾಯಿತು.ಅಂಥ ಸಹಜ ಹಾಗೂ ಗಂಭೀರವಾದ ಮುಖಭಾವದ ಬಿಯಾ ಬೋರ್ಕರ್ ಈಗ ಫ್ಯಾಷನ್ ಲೋಕದಲ್ಲಿ ತನ್ನದೇ ಆದ ಛಾಪು ಮೂಡಿಸುತ್ತಿರುವ ಯುವತಿ. ಮ್ಯಾನೇಜ್‌ಮೆಂಟ್ ವಿದ್ಯಾರ್ಥಿಯಾಗಿದ್ದರೂ ಮಾಡೆಲಿಂಗ್ ಇವರಿಗೆ ಹವ್ಯಾಸ. ವೃತ್ತಿಯಾಗಿ ಸ್ವೀಕರಿಸುವ ಉತ್ಸಾಹವೂ ಅಪಾರ. ಆದರೆ ಅದೆಲ್ಲಾ ಓದಿನ ನಂತರ. ಆದರೂ ಬಿಡುವು ಸಿಕ್ಕರೆ ಸಾಕು, ತನಗಾಗಿ ಕಾಯ್ದು ಕುಳಿತ ಛಾಯಾಗ್ರಾಹಕರ ಮುಂದೆ ಫೋಟೊ ಶೂಟ್‌ಗೆ ಹಾಜರಾಗದೇ ಇರುವುದಿಲ್ಲ.ಐದಡಿ ಆರು ಅಂಗುಲ ಎತ್ತರದ ಉತ್ತರ ಭಾರತದ ಈ ಚೆಲುವೆಯ ನಿಜನಾಮ `ಬೀನಾ~. ಆದರೆ ಬಣ್ಣದಲೋಕಕ್ಕೆ ಕಾಲಿಟ್ಟ ನಂತರ ಅದು ಹೇಗೋ ಒಮ್ಮೆ `ಬಿಯಾ~ ಎಂದು ಯಾರೋ ಕರೆದರು. ಅದೇ ಹೆಸರೇ ಈಗ ಎಲ್ಲರಿಗೂ ಪರಿಚಿತ. ಬೀನಾ ಎನ್ನುವುದು ಮರೆತು ಹೋಗಿದೆ. `ಸಮ್ಯಕ್~ ಸೇರಿದಂತೆ ಅನೇಕ ವಸ್ತ್ರವಿನ್ಯಾಸ ಸಂಸ್ಥೆಗಳಿಗೆ ರೂಪದರ್ಶಿಯಾಗಿ ಕೆಲಸ ಮಾಡಿರುವ ಜಿಂಕೆ ಕಂಗಳ ಹುಡುಗಿಯು ಮೇಕಪ್ ಇಲ್ಲದೆಯೂ ಜಾಹೀರಾತುಗಳಲ್ಲಿ ಕಾಣಿಸಿಕೊಂಡ ಧೈರ್ಯವಂತೆ.ಸಾಮಾನ್ಯವಾಗಿ ಮೇಕಪ್ ಇಲ್ಲವೆಂದರೆ ಮಹಿಳಾಮಣಿಗಳು ಕ್ಯಾಮೆರಾ ಮುಂದೆ ನಿಲ್ಲುವುದಕ್ಕೆ ಭಯಪಡುತ್ತಾರೆ. ಆದರೆ ಬಿಯಾ ಹಾಗಲ್ಲ. `ಯುನಿನಾರ್~ ಮುದ್ರಣ ಜಾಹೀರಾತಿನಲ್ಲಿ ಬಣ್ಣ ಮೆತ್ತದ ಮುಖದಿಂದಲೇ ನೋಡುಗರ ಮನಗೆದ್ದರು. ಲಿಯನಾರ್ಡೊ ಆ್ಯರೊನ್ಸ್, ಕೃಷ್ಣ ಸ್ವಾಮಿ, ಕಾಂಡೂಟರ್ ಹ್ಯಾಂಬರ್ಗ್ ಹಾಗೂ ರಾಯ್ಲ್‌ಫ್ ಪಂಟ್ಜೇಸ್ ಅವರಂಥ ಸ್ವದೇಶಿ ಹಾಗೂ ವಿದೇಶಿ ಛಾಯಾಗ್ರಾಹಕರ ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿ, ಅಂದದ ರೂಪಸಿಯಾಗಿ ಚೆಂದದ ನಿಯತಕಾಲಿಕಗಳ ಅಲಂಕಾರವಾಗಿದ್ದಾರೆ ಬಿಯಾ.ಉದ್ಯಾನನಗರಿಯಲ್ಲಿಯೇ ನೆಲೆ ನಿಂತಿದ್ದರೂ ಕನ್ನಡವನ್ನು ಕಷ್ಟಪಟ್ಟು ಮಾತನಾಡುವ ಚೆಂದುಳ್ಳಿಗೆ ಕರ್ನಾಟಕದ ರಾಜಧಾನಿಯಲ್ಲಿಯೇ ವೃತ್ತಿ ಹಾಗೂ ಪ್ರವೃತ್ತಿ ಎರಡನ್ನೂ ಸರಿದೂಗಿಸಿಕೊಂಡು ಕೊನೆಯವರೆಗೆ ಇರುವ ಆಸೆ. ಫ್ಯಾಷನ್ ಭೂಪಟದಲ್ಲಿ ತನ್ನದೇ ಆದ ಗುರುತು ಮೂಡಿಸುತ್ತಿರುವ ಈ ಮಹಾನಗರಿಯಲ್ಲಿ ಅವಕಾಶಗಳಿಗೆ ಕೊರತೆ ಇಲ್ಲವೆನ್ನುವುದು ಇವರ ಅನುಭವ. ವಿದೇಶಿಯರು ಕೂಡ ಇಲ್ಲಿನ ಫ್ಯಾಷನ್ ವಿನ್ಯಾಸಕರು ಹಾಗೂ ರೂಪದರ್ಶಿಗಳ ಕಡೆಗೆ ಮುಖಮಾಡಿದ್ದಾರೆಂದು ಕೂಡ ವಿಶ್ವಾಸದಿಂದ ಹೇಳುತ್ತಾರೆ.`ಸಿನಿಮಾ ಕ್ಷೇತ್ರಕ್ಕೆ ಹೋಗುವುದಿಲ್ಲ~ ಎನ್ನುವ ಸ್ಪಷ್ಟ ನಿರ್ಧಾರ ಮಾಡಿದ್ದರೂ ಮರಾಠಿ ನಿರ್ದೇಶಕರಿಂದ ಬಿಯಾಗೆ ಅನೇಕ ಬಾರಿ ಕರೆಗಳು ಬಂದಿವೆ. ಆದರೂ ಇನ್ನೂ ಹೆಜ್ಜೆ ಮುಂದಿಟ್ಟಿಲ್ಲ. `ಆರ್ಟ್ ಫಿಲ್ಮ್ ಆದರೆ ಮಾಡಬಹುದು. ಕಮರ್ಷಿಯಲ್ ಸಿನಿಮಾ ಇಷ್ಟವಾಗಲ್ಲ. ಸಮಾಜಕ್ಕೆ ಒಳಿತಾಗುವಂಥ ಕಥೆ ಇದ್ದರೆ ಸಿನಿಮಾದಲ್ಲಿ ಅಭಿನಯಿಸಲು ಯೋಚಿಸಬಹುದು~ ಎನ್ನುವ ಬಿಯಾಗೆ ಕನ್ನಡದ ಕೆಲವು ಕಲಾತ್ಮಕ ಚಿತ್ರ ನಿರ್ದೇಶಕರೆಂದರಂತೂ ಭಾರಿ ಇಷ್ಟ. ಅಂಥ ಡೈರೆಕ್ಟರ್‌ಗಳ ಕೆಲವು ಸಿನಿಮಾಗಳ ಹೆಸರುಗಳನ್ನು ಪಟಪಟ ಹೇಳಿಯೂಬಿಡುತ್ತಾರೆ.ಸದಾ ಗಂಭೀರವದನೆಯಾಗಿದ್ದರೂ ಬಾಯಿ ಬಿಟ್ಟರೆ ಎದುರಿಗೆ ಇರುವವರಿಗೆ ಅವಕಾಶವೇ ಸಿಗದಂತೆ ಮಾತನಾಡುವ ಬಿಯಾಗೆ ಸ್ಟೇಜ್ ಮೇಲೆ ನಿಂತು ಭಾಷಣ ಮಾಡುವುದೆಂದರೆ ಆಗದು. ಕ್ಯಾಮೆರಾ ಎದುರು ನಿಲ್ಲುವುದು ಓಕೆ...!

 

 

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರತಿಕ್ರಿಯಿಸಿ (+)